ಕನ್ನಡ ಸಿನಿಮಾಗಳಿಗೆ 'ಎ' ಸರ್ಟಿಫಿಕೇಟ್, ಏನಂತಾರೆ ಸಿನಿಮಾ ಮಂದಿ?

By Kannadaprabha NewsFirst Published Jun 20, 2018, 11:56 AM IST
Highlights

ಕನ್ನಡ ಚಿತ್ರಗಳು ವಯಸ್ಕರಿಗೆ ಮಾತ್ರ ಅಂತ ಸೆನ್ಸಾರ್ ಮಂಡಳಿ ತೀರ್ಮಾನಿಸಿದೆಯಾ ಎಂಬ ಪ್ರಶ್ನೆಗೆ ಸಮರ್ಥನೆಯಾಗಿ ಈ ವರ್ಷ ಸೆನ್ಸಾರ್ ಆದ 133 ಚಿತ್ರಗಳ ಪೈಕಿ 41 ಚಿತ್ರಕ್ಕೆ ಎ ಸರ್ಟಿಫಿಕೇಟ್ ಸಿಕ್ಕ ಬಗ್ಗೆ ಸೋಮವಾರ ಮಲ್ಟಿಪ್ಲೆಕ್ಸ್ ವರದಿ ನೀಡಿತ್ತು. ಅದಕ್ಕೆ ಚಿತ್ರರಂಗ ಪ್ರತಿಕ್ರಿಯಿಸಿದ ಪರಿ ಇದು.

ಚಿತ್ರೋದ್ಯಮದ ಕಾಳಜಿ ಎಲ್ಲರಿಗೂ ಇರಬೇಕು
ಪ್ರೇಕ್ಷಕರನ್ನು ರಂಜಿಸಬೇಕು ಅಂತ ಕೆಲವು ನಿರ್ಮಾಪಕರು ತಮ್ಮ ಸಿನಿಮಾಗಳಲ್ಲಿ ಅಶ್ಲೀಲ ಎನಿಸುವ ಡಬಲ್ ಮೀನಿಂಗ್ ಡೈಲಾಗ್ ಇರಬೇಕೆನ್ನುವುದು ಸರಿಯಲ್ಲ. ಅಂತಹ  ಡೈಲಾಗ್‌ಗಳಿಗೆ ಸೆನ್ಸಾರ್ ಕಟ್ ಕೊಟ್ರೆ ತಪ್ಪಿಲ್ಲ. ಹಾಗೆಯೇ, ಸೆನ್ಸಾರ್ ಧೋರಣೆ ಕೂಡ ಬದಲಾಗಬೇಕಿದೆ.

ಸಾಹಸ ಸನ್ನಿವೇಶಗಳಲ್ಲಿ ಎಲ್ಲೋ ಒಂದು ಹನಿ ರಕ್ತ ಕಂಡರೆ, ಹಾರರ್ ಸಿನಿಮಾಗಳಲ್ಲಿ ಸೌಂಡ್ ಎಫೆಕ್ಟ್ ಜಾಸ್ತಿ ಇದ್ದರೆ, ಅದಕ್ಕೆಲ್ಲ 'ಎ' ಸರ್ಟಿಫಿಕೇಟ್ ನೀಡುವುದನ್ನು ಒಪ್ಪಲಾಗದು. ಪರಭಾಷೆಯ ಸಿನಿಮಾಗಳಿಗೆ ಹೋಲಿಸಿದ್ರೆ, ನಮ್ಮಲ್ಲಿ ಬರುವ ಸಿನಿಮಾಗಳಲ್ಲಿ ಕ್ರೌರ್ಯ ಅಥವಾ ಬ್ಲಡ್‌ಶೆಡ್ ತೀರಾ ಕಮ್ಮಿ. ಹಾಗಂತ ಅದೆಲ್ಲಾ ಜಾಸ್ತಿ ಆಗಬೇಕು ಅಂತ ನಾನು ಹೇಳುತ್ತಿಲ್ಲ. ಸೆನ್ಸಾರ್ ಇತಿಮಿತಿಯಲ್ಲೇ ಬರುತ್ತಿರುವ ಅಂತಹ ಸಿನಿಮಾಗಳಿಗೆ ಇನ್ನಿಲ್ಲದ ಕಾರಣವೊಡ್ಡಿ 'ಎ' ಸರ್ಟಿಫಿಕೇಟ್ ನೀಡುವುದು ಸರಿಯಲ್ಲ. 
- ಸಾ.ರಾ.ಗೋವಿಂದು, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ

ಕನ್ನಡ ಚಿತ್ರಗಳಿಗೆ ಎ ಸರ್ಟಿಫಿಕೇಟ್

ಚಿತ್ರೋದ್ಯಮದ ಕಾಳಜಿ ಇಬ್ಬರಿಗೂ ಬೇಕಿದೆ.

ಇದು ಇವತ್ತಿನ ಸಮಸ್ಯೆ ಅಲ್ಲ. ಸಿನಿಮಾ ಹುಟ್ಟಿದ ದಿನಗಳಿಂದ, ಸೆನ್ಸಾರ್ ಅನ್ನೋ ಪ್ರಕ್ರಿಯೆ ಶುರುವಾದಾಗಿನಿಂದಲೂ ಇದೆ. ಕೆಲವೊಮ್ಮೆ ದೊಡ್ಡ ಮಟ್ಟದಲ್ಲಿ 'ಎ' ಸರ್ಟಿಫಿಕೇಟ್ ಸಿನಿಮಾಗಳ ಸಂಖ್ಯೆ ಕಂಡಾಗ ಈ ಪ್ರಶ್ನೆ ಉದ್ಭವಿಸುತ್ತೆ. ಸರಿ-ತಪ್ಪು ಎನ್ನುವ ವಾದಗಳು ಶುರುವಾಗುತ್ತವೆ. ಆ ಬಗ್ಗೆ ನಾವೆಲ್ಲ ತಲೆಕೆಡಿಸಿಕೊಳ್ಳಬೇಕಿಲ್ಲ. ಸಮಾಜದ ಹಿತ ದೃಷ್ಟಿಯಿಂದ ಸಿನಿಮಾ ಮಾಡುವವರಿಗೂ ಒಂದಷ್ಟು ಜವಾಬ್ದಾರಿಗಳಿವೆ. ಅವುಗಳನ್ನು ಅರಿತುಕೊಂಡು ಸಿನಿಮಾ ಮಾಡುತ್ತಾ ಬಂದ್ರೆ, ಈ ಸಮಸ್ಯೆ ತಾನಾಗಿಯೇ ತೆರೆಗೆ ಸರಿಯುತ್ತದೆ.
- ಯೋಗರಾಜ್ ಭಟ್, ನಿರ್ದೇಶಕ

ಎ ಸರ್ಟಿಫಿಕೇಟ್ ಪಡೆದವರ ಬೇಸರ ಕೇಳಿದ್ದೇನೆ
ಯಾವ ಆಧಾರದಲ್ಲಿ ಸೆನ್ಸಾರ್ ಕೆಲವು ಸಿನಿಮಾಗಳಿಗೆ 'ಎ' ಸರ್ಟಿಫಿಕೇಟ್ ಕೊಟ್ಟಿದೆ, ಅದಕ್ಕೆ ಸೆನ್ಸಾರ್ ಕೊಟ್ಟ ಕಾರಣ ಏನು ಅನ್ನೋದು ನನಗೆ ಗೊತ್ತಿಲ್ಲ. ಹಾಗಾಗಿ ನಾನಿಲ್ಲಿ ಏನೇನೋ ಹೇಳೋದು ಸರಿಯಲ್ಲ. ಆದ್ರೆ, 'ಎ' ಸರ್ಟಿಫಿಕೇಟ್ ಸಿಕ್ಕ ಸಿನಿಮಾದವರು ಹೇಳುವ ಮಾತು ಕೇಳಿದ್ದೇನೆ. 'ಎ' ಸರ್ಟಿಫಿಕೇಟ್ ಕೊಟ್ಟ ಕಾರಣಕ್ಕೆ ತಮ್ಮ ಸಿನಿಮಾಗಳಿಗೆ ಫ್ಯಾಮಿಲಿ ಆಡಿಯನ್ಸ್ ಬಂದಿಲ್ಲ, ಮಲ್ಟಿಪ್ಲೆಕ್ಸ್‌ನಲ್ಲಿ ಕಲೆಕ್ಷನ್‌ಗೆ ತೊಂದರೆ ಆಗಿದೆ ಅನ್ನೋದು ಅವರ ವಾದ. ಹೀಗಾಗಿ ಎಲ್ಲರೂ ಸೇರಿಕೊಂಡೆ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ನನ್ನ ಅಭಿಪ್ರಾಯ.
- ಕಾರ್ತಿಕ್ ಗೌಡ, ನಿರ್ಮಾಪಕ

ಟಗರು ಎ ಸರ್ಟಿಫಿಕೇಟ್ ನೀಡಿದ್ದಕ್ಕೆ ತಕರಾರಿಲ್ಲ
ಸಿನಿಮಾ ಅನ್ನೋದು ದೊಡ್ಡ ಮಾಧ್ಯಮ. ನಾವೆಲ್ಲ ಬಹುಬೇಗ ಅದರ ಪ್ರಭಾವಕ್ಕೆ ಸಿಲುಕುತ್ತೇವೆ. ಮಕ್ಕಳು ಕೂಡ ಅಷ್ಟೆ. ಅದೇ ಕಾರಣಕ್ಕೆ ಸೆನ್ಸಾರ್ ಎನ್ನುವುದು, ಕ್ರೌರ್ಯ, ಅಶ್ಲೀಲತೆ ಮತ್ತಿತರ ಆಧಾರದಲ್ಲಿ ಸರ್ಟಿಫಿಕೇಟ್ ನಿಗದಿ ಆಗಿದೆ. ಅದರ ಒಟ್ಟು ಉದ್ದೇಶ ಮನಸ್ಸಿನ ಮೇಲೆ ಕೆಟ್ಟ ಪ್ರಭಾವ ಬೀರುವ ಸಿನಿಮಾಗಳನ್ನು ಮಕ್ಕಳು ನೋಡಬಾರದು ಎನ್ನುವ ಕಾರಣ. 

ನನ್ನ ದೃಷ್ಟಿಯಲ್ಲಿ ಇದು ತಪ್ಪಲ್ಲ. ನಿರ್ದೇಶಕರಿಗೂ ಒಂದಷ್ಟು ಜವಾಬ್ದಾರಿ ಇದೆ. ಅದನ್ನು ಅರಿತುಕೊಂಡ್ರೆ ಎಲ್ಲರಿಗೂ ಅನ್ವಯವಾಗುವ ಮಾತು. ಹಾಗಾಗಿಯೇ 'ಟಗರು' ಚಿತ್ರಕ್ಕೆ ಸೆನ್ಸಾರ್ 'ಎ' ಸರ್ಟಿಫಿಕೇಟ್ ಕೊಟ್ಟಾಗ ನಾನು ಅದನ್ನು ತಿರಸ್ಕರಿಸಲಿಲ್ಲ. ಯಾಕಂದ್ರೆ, ಅಲ್ಲಿ ಒಂದಷ್ಟು ಸನ್ನಿವೇಶಗಳು ಮಕ್ಕಳಿಗೆ ನಿಷೇಧ. ಕ್ರೌರ್ಯ, ಮಾಫಿಯಾ ಅಂತ ತೋರಿಸುವಾಗ ಅದನ್ನು ಮಕ್ಕಳು ನೋಡಬಾರದು ಎನ್ನುವುದು ನನ್ನ ವಾದ ಆಗಿತ್ತು. ಅದರಾಚೆ ಇನ್ನೇನೋ ಕಾರಣಕ್ಕೆ 'ಎ' ಸರ್ಟಿಫಿಕೇಟ್ ಕೊಟ್ಟರೆ ಸರಿಯಲ್ಲ. 
- ಸೂರಿ, ನಿರ್ದೇಶಕ

ಸೆನ್ಸಾರ್ ಮಂದಿ ಧೋರಣೆ ಸಡಿಲಿಸಬೇಕು 
ಪಕ್ಕದ ತೆಲುಗು ಮತ್ತು ತಮಿಳಿಗೆ ಹೋಲಿಕೆ ಮಾಡಿಕೊಂಡರೆ, ನಮ್ಮಲ್ಲೇ ಕ್ರೌರ್ಯದ ವೈಭವೀಕರಣ ಕಮ್ಮಿ. ಆದರೂ ಅಲ್ಲಿ ಅಂತಹ ಸಿನಿಮಾಗಳಿಗೆ 'ಯು/ಎ' ಸರ್ಟಿಫಿಕೇಟ್ ಸಿಗುತ್ತದೆ. ನಮ್ಮಲ್ಲಿ 'ಎ' ಸರ್ಟಿಫಿಕೇಟ್ ಖಾಯಂ ಆಗುತ್ತಿದೆ. ಹಾಗಂತ, ಸೆನ್ಸಾರ್ ಬೇಡ ಅನ್ನೋದು ನನ್ನ ವಾದವಲ್ಲ, ಸೆನ್ಸಾರ್ ಬೇಕು. ಆದ್ರೆ ಅದರ ಧೋರಣೆ ಸಡಿಲವಾಗಬೇಕು. 

ವಾಸ್ತವ ಏನು ಅನ್ನೋದರ ಮೇಲೆ ಸರ್ಟಿಫಿಕೇಟ್ ನೀಡಬೇಕು. ಯಾಕಂದ್ರೆ, 'ಎ' ಸರ್ಟಿಫಿಕೇಟ್ ನೀಡಿದಾಕ್ಷಣ ಫ್ಯಾಮಿಲಿ ಆಡಿಯನ್ಸ್ ದೂರ ಆಗುತ್ತಾರೆ. ಮಲ್ಟಿಪ್ಲೆಕ್ಸ್‌ಗಳಂತೂ ಮಕ್ಕಳನ್ನು ಚಿತ್ರಮಂದಿರಕ್ಕೆ ಬರದಂತೆ ತಡೆಯುತ್ತಾರೆ. ಕೊನೆಗೆ ನಿರ್ಮಾಪಕರೇ ನಷ್ಟ ಅನುಭವಿಸಬೇಕಾಗಿ ಬರುತ್ತದೆ.
- ಕೆ.ಪಿ.ಶ್ರೀಕಾಂತ್, ನಿರ್ಮಾಪಕ

ಸೌಂಡ್ ಕಾರಣಕ್ಕೂ ಎ ಸರ್ಟಿಫಿಕೇಟ್ ಕೊಟ್ರು
ನಮ್ಮ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಕೊಟ್ಟಿದ್ದಕ್ಕೆ ನೀಡಿದ ಕಾರಣ ಸೌಂಡ್ ಎಫೆಕ್ಟ್ ಜಾಸ್ತಿ ಆಯ್ತು ಅನ್ನೋದು. ಆರಂಭದಲ್ಲಿ ನಮಗೆ ಅದು ತೀವ್ರ ಬೇಸರ ತಂದಿತ್ತು. ಹಾಗಾಗಿ ಒಮ್ಮೆ ನಾನು ನೇರವಾಗಿ ಸೆನ್ಸಾರ್ ಅಧಿಕಾರಿಯನ್ನು ಭೇಟಿ ಮಾಡಿ, ಅಸಮಾಧಾನ ಹೊರ ಹಾಕಿದ್ದೆ. ಆಗವರು  ನೀಡಿದ ಕಾರಣ ಸೌಂಡ್ ಎಫೆಕ್ಟ್ ಜಾಸ್ತಿ ಆಯ್ತು, ಮಕ್ಕಳು ಚಿತ್ರದ ಕ್ಲೈಮ್ಯಾಕ್ಸ್ ನೋಡಿದ್ರೆ ಬೆಚ್ಚಿ ಬೀಳುತ್ತಾರೆ. ಹಾಗಾಗಿ 'ಎ' ಸರ್ಟಿಫಿಕೇಟ್ ನೀಡಲಾಗಿದೆ. ಅದು ಬಿಟ್ಟರೆ ಇನ್ನಾವುದೇ ಕಾರಣ ಅದಕ್ಕಿಲ್ಲ ಅಂದ್ರು. ಜತೆಗೆ ಆ ಸೌಂಡ್ ಎಫೆಕ್ಟ್ ತೆಗೆದು ಹಾಕಿದ್ರೆ ಯು/ಎ ನೀಡುವುದಾಗಿ ಸಲಹೆ ಕೊಟ್ರು. ಆದ್ರೆ, ಹಾರರ್ ಚಿತ್ರದ ಕ್ಲೈಮ್ಯಾಕ್ಸ್‌ಗೆ ಆ ಸೌಂಡ್ ಎಫೆಕ್ಟ್ ತೀರಾ ಅಗತ್ಯ ಎನ್ನುವುದು ನನ್ನ ವಾದವಾಗಿತ್ತು. ಕೊನೆಗೆ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. 

ಇದರ ಪರಿಣಾಮ ಈಗ ನಮ್ಮ ಸಿನಿಮಾಗೆ ಮಕ್ಕಳ ಪ್ರವೇಶ ನಿಷೇಧ. ಮಕ್ಕಳ ಕಾರಣಕ್ಕೆ ಪೋಷಕರೂ ಅಲ್ಲಿಗೆ ಬರೋದಿಲ್ಲ. ಇದು ಚಿತ್ರದ ಕಲೆಕ್ಷನ್ ಮೇಲೆ ಕೆಟ್ಟು ಪರಿಣಾಮ ಬೀರುತ್ತೆ. 
- ರಿಷಿಕಾ ಶರ್ಮಾ, ಟ್ರಂಕ್ ಚಿತ್ರದ ನಿರ್ದೇಶಕಿ

ಎ ಸರ್ಟಿಫಿಕೇಟ್ ಪಡೆದವರ ಬೇಸರ ಕೇಳಿದ್ದೇನೆ
ಯಾವ ಆಧಾರದಲ್ಲಿ ಸೆನ್ಸಾರ್ ಕೆಲವು ಸಿನಿಮಾಗಳಿಗೆ 'ಎ' ಸರ್ಟಿಫಿಕೇಟ್ ಕೊಟ್ಟಿದೆ, ಅದಕ್ಕೆ ಸೆನ್ಸಾರ್ ಕೊಟ್ಟ ಕಾರಣ ಏನು ಅನ್ನೋದು ನನಗೆ ಗೊತ್ತಿಲ್ಲ. ಹಾಗಾಗಿ ನಾನಿಲ್ಲಿ ಏನೇನೋ ಹೇಳೋದು ಸರಿಯಲ್ಲ. ಆದ್ರೆ, 'ಎ' ಸರ್ಟಿಫಿಕೇಟ್ ಸಿಕ್ಕ ಸಿನಿಮಾದವರು ಹೇಳುವ ಮಾತು ಕೇಳಿದ್ದೇನೆ. 

'ಎ' ಸರ್ಟಿಫಿಕೇಟ್ ಕೊಟ್ಟ ಕಾರಣಕ್ಕೆ ತಮ್ಮ ಸಿನಿಮಾಗಳಿಗೆ ಫ್ಯಾಮಿಲಿ ಆಡಿಯನ್ಸ್ ಬಂದಿಲ್ಲ, ಮಲ್ಟಿಪ್ಲೆಕ್ಸ್‌ನಲ್ಲಿ ಕಲೆಕ್ಷನ್‌ಗೆ ತೊಂದರೆ ಆಗಿದೆ ಅನ್ನೋದು ಅವರ ವಾದ. ಹೀಗಾಗಿ ಎಲ್ಲರೂ ಸೇರಿಕೊಂಡೆ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎನ್ನುವುದು ನನ್ನ ಅಭಿಪ್ರಾಯ.

- ಕಾರ್ತಿಕ್ ಗೌಡ, ನಿರ್ಮಾಪಕ


ಸೂಕ್ತ ವೇದಿಕೆ ನಿರ್ಮಾಣವಾಗಬೇಕು
ನಾವು ಸಾಮಾನ್ಯವಾಗಿ ಕೆಲವು ಚಿತ್ರಗಳನ್ನು ನೋಡಿದಾಗ ಇದರಲ್ಲಿ ಎ ಸರ್ಟಿಫಿಕೇಟ್ ಕೊಡುವ ಯಾವ ಅಂಶಗಳೂ ಇಲ್ಲ, ಆದರೂ ಇದಕ್ಕೆ ಯಾಕೆ ಎ ಸರ್ಟಿಫಿಕೇಟ್ ಕೊಟ್ಟಿದ್ದಾರೆ ಎನ್ನುವ ಪ್ರಶ್ನೆ ಹುಟ್ಟುತ್ತದೆ. ನಾವು ಗೆಳೆಯರೆಲ್ಲರೂ ಒಟ್ಟಿಗೆ ಸೇರಿದಾಗ ಈ ಬಗ್ಗೆ ಚರ್ಚೆ ಮಾಡುತ್ತೇವೆ. 

ಸೆನ್ಸಾರ್ ಬೋರ್ಡ್‌ನವರು ಹೀಗೆ ಮಾಡುವುದರಿಂದ ನಮಗೆ ಯಾವ ರೀತಿಯ ಚಿತ್ರ ಮಾಡಬೇಕು ಎನ್ನುವ ಗೊಂದಲ ಉಂಟಾಗುತ್ತದೆ. ಹೊಸ ಕಂಟೆಂಟ್ ಇಟ್ಟುಕೊಂಡು ಸಿನಿಮಾ ಮಾಡುವಾಗಲೂ ಸಮಸ್ಯೆಯಾಗುತ್ತೆ. ನನ್ನ ಪ್ರಕಾರ ಸೆನ್ಸಾರ್ ಮಂಡಳಿ ಜೊತೆಗೆ ನಾವು ನೇರವಾಗಿ ಚರ್ಚೆ ಮಾಡುವ ವೇದಿಕೆ ಸೃಷ್ಟಿಯಾಗಬೇಕು. ಆಗ ಅವರು ಯಾವ ಆಧಾರದಲ್ಲಿ ಸರ್ಟಿಫಿಕೇಟ್ ಕೊಡುತ್ತಾರೆ ಎನ್ನುವುದು ಗೊತ್ತಾಗುತ್ತದೆ. 

- ರೋಹಿತ್ ಪದಕಿ, ನಿರ್ದೇಶಕ

click me!