ಮಾರಕ ಕ್ಯಾನ್ಸರ್ ನಿಂದ ಬಳಲುತ್ತಿರುವ ನಟ ಇರ್ಫಾನ್
ಹೋರಾಟದ ಕಿಚ್ಚು ಮಾತ್ರ ಆರಿಲ್ಲ ಎಂದ ನಟ
ಇಂಗ್ಲೆಂಡ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇರ್ಫಾನ್
ಇರ್ಫಾನ್‌ಗೆ ಬಾಲಿವುಡ್ ನೈತಿಕ ಬೆಂಬಲ
ಮುಂಬೈ(ಜೂ.19): ಬಾಲಿವುಡ್ ಖ್ಯಾತ ನಟ ಇರ್ಫಾನ್ ಖಾನ್ ಕ್ಯಾನ್ಸರ್ ರೋಗದಿಂದ ಬಳಲುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ತಮ್ಮ ಅಭಿನಯದಿಂದಲೇ ಅಭಿಮಾನಿಗಳ ಮನಗೆದ್ದಿದ್ದ ಇರ್ಫಾನ್, ಇದೀಗ ಜೀವನ ಗೆಲ್ಲಲು ಹೋರಾಡುತ್ತಿರುವುದು ವಿಧಿಯ ಘೋರ ಅಪಹಾಸ್ಯವೇ ಸರಿ.
ಆದರೆ ಈ ಮಾರಕ ಕ್ಯಾನ್ಸರ್ ರೋಗ ಇರ್ಫಾನ್ ಅವರನ್ನು ಖಂಡಿತ ಹೈರಾಣಿಗಿಸಿಲ್ಲ. ಬದಲಿಗೆ ಹೋರಾಟದ ಕಿಚ್ಚನ್ನು ಮತ್ತಷ್ಟು ಹೆಚ್ಚಿಸಿದೆ. ಈ ಕುರಿತು ಖಾಸಗಿ ಮಾಧ್ಯಮದೊಂದಿಗೆ ಇದೇ ಮೊದಲ ಬಾರಿಗೆ ಮನಸ್ಸು ಬಿಚ್ಚಿ ಮಾತನಾಡಿರುವ ಅವರು, ತಾವು ನ್ಯೂರೋಎಂಡ್ರೋಸಿನ್ ಎಂಬ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಚಿಕಿತ್ಸೆ ಮುಂದುವರೆಯುತ್ತಿದೆ ಎಂದು ಹೇಳಿದ್ದಾರೆ. ಕ್ಯಾನ್ಸರ್ ಕುರಿತು ಮಾಹಿತಿ ಗೊತ್ತಾದಾಗ ಅದರಿಂದಾದ ಆಘಾತ ಅಷ್ಟಿಷ್ಟಲ್ಲ ಎಂದು ಇರ್ಫಾನ್ ನೋವಿನಿಂದ ಹೇಳಿದ್ದಾರೆ.
ಆದರೆ ಸದ್ಯ ತಮ್ಮ ಮನಸ್ಸನ್ನು ಸ್ಥೀಮಿತಗೊಳಿಸಿಕೊಂಡಿದ್ದು, ಕುಟುಂಬದ ಎದುರು ತಾವು ಅಧೈರ್ಯವಾಗಿರಲು ಸಾಧ್ಯವಿಲ್ಲ ಎಂದು ಇರ್ಫಾನ್ ಹೇಳಿದ್ದಾರೆ. ಸದ್ಯ ಚಿಕಿತ್ಸೆಗಾಗಿ ಲಂಡನ್ ನಲ್ಲಿರುವ ಇರ್ಫಾನ್, ತಮ್ಮ ಆಸ್ಪತ್ರೆ ಅನುಭವವನ್ನು ಹಂಚಿಕೊಂಡಿದ್ದಾರೆ. ಬಹಳ ನೋವಿನ ಚಿಕಿತ್ಸೆಯನ್ನು ತಾವು ಎದುರಿಸುತ್ತಿದ್ದು, ಮಕ್ಕಳಿಗಾಗಿ ಈ ನೋವನ್ನು ಸಹಿಸಿಕೊಂಡು ಚಿಕಿತ್ಸೆಗೆ ಸ್ಪಂದಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ತಮ್ಮ ಆಸ್ಪತ್ರೆ ಎದುರುಗೇ ಕ್ರಿಕೆಟ್ ನ ಮೆಕ್ಕಾ ಎಂದೇ ಜನಜನಿತವಾಗಿರುವ ಲಾರ್ಡ್ಸ್ ಮೈದಾನವಿದ್ದು, ಇದನ್ನು ನೋಡಿದಾಗಲೆಲ್ಲಾ ತಮ್ಮ ಬಾಲ್ಯದ ದಿನಗಳು ನೆನಪಿಗೆ ಬರುತ್ತವೆ ಎಂದು ಇರ್ಫಾನ್ ಹೇಳಿದ್ದಾರೆ. ನೋವಿನಲ್ಲೂ ಸ್ಟೇಡಿಯಂ ಬಳಿ ಇರುವ ವಿವಿನ್ ರಿಚರ್ಡ್ಸನ್ ಪೋಸ್ಟರ್ ನೋಡಿದಾಗ ಜೀವನವನ್ನು ಆಸ್ವಾದಿಸುವ ಇಚ್ಛೆಯಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸದ್ಯ ಇರ್ಫಾನ್ ಖಾನ್ ಅವರಿಗೆ ಬಾಲಿವುಡ್ ನ ಅನೇಕ ನಟ, ನಟಿಯರು ನೈತಿಕ ಬೆಂಬಲ ನೀಡಿದ್ದು, ಇರ್ಫಾನ್ ಕ್ಯಾನ್ಸರ್ ಗೆದ್ದು ಬರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕ್ಯಾನ್ಸರ್‌ನಿಂದ ಬಳಲಿ ಇದೀಗ ಸಂಪೂರ್ಣ ಗುಣಮುಖವಾಗಿರುವ ಬಾಲಿವುಡ್ ನಟಿ ಮನೀಷಾ ಕೊಯಿರಾಲಾ ಕೂಡ ಇರ್ಫಾನ್ ಖಾನ್‌ಗೆ ಬೆಂಬಲ ಸೂಚಿಸಿದ್ದಾರೆ. ಈ ಹೋರಾಟದಲ್ಲಿ ನೀವು ಜಯ ಸಾಧಿಸುತ್ತೀರಿ ಎಂಬ ವಿಶ್ವಾಸವಿದೆ ಎಂದು ಅವರು ತಿಳಿಸಿದ್ದಾರೆ.
ಇನ್ನುಳಿದಂತೆ ನಟರಾದ ರಾಜಕುಮಾರ್ ರಾವ್, ಸೋನು ಸೂದ್ ಸೇರಿದಂತೆ ಇನ್ನೂ ಅನೇಕ ಪ್ರಮುಖರು ಇರ್ಫಾನ್‌ಗೆ ನೈತಿಕ ಬೆಂಬಲ ನೀಡಿ ಟ್ವಿಟ್ ಮಾಡಿದ್ದಾರೆ.
ಒಟ್ಟಿನಲ್ಲಿ ತಮ್ಮ ವಿಶಿಷ್ಟ ಅಭಿನಯ, ಹಾವಭಾವ ಮತ್ತು ನಟನಾ ಕೌಶಲ್ಯದಿಂದ ಭಾರತೀಯರ ಮನ ಗೆದ್ದಿರುವ ಇರ್ಫಾನ್ ಖಾನ್, ಆದಷ್ಟು ಶೀಘ್ರದಲ್ಲಿ ಗುಣಮುಖರಾಗಿ ವಾಪಸ್ಸು ಬರಲಿ ಎಂಬುದೇ ಎಲ್ಲರ ಆಶಯವಾಗಿದೆ.