ಹೊಸ ಟ್ರೆಂಡ್‌ ಶುರು; #10 ಇಯರ್ಸ್‌ ಚಾಲೆಂಜ್‌

By Kannadaprabha NewsFirst Published Jan 17, 2019, 10:42 AM IST
Highlights

ಒಂದೊಂದು ಫೋಟೋಗಳೂ ಒಂದೊಂದು ಕತೆ ಹೇಳುತ್ತವೆ. ಈಗ ಹಾಲಿವುಡ್‌, ಬಾಲಿವುಡ್‌, ಸ್ಯಾಂಡಲ್‌ವುಡ್‌ನಲ್ಲಿ ‘10 ಇಯರ್ಸ್‌ ಚಾಲೆಂಜ್‌’ ಎನ್ನುವ ಟ್ರೆಂಡ್‌ ಶುರುವಾಗಿದೆ. ಈ ಟ್ರೆಂಡ್‌ನಲ್ಲಿ ಸಾಕಷ್ಟುಮಂದಿ ಸೆಲೆಬ್ರಿಟಿಗಳು ಭಾಗಿಯಾಗಿ ತಮ್ಮ ಹತ್ತು ವರ್ಷಗಳ ಕತೆಯನ್ನು ಹೇಳಿದ್ದಾರೆ. ಇಲ್ಲಿ ಎರಡು ಫೋಟೋಗಳಿದ್ದರೂ ಅದರ ನಡುವಿನ ಕತೆ ಬೇರೆಯದ್ದೇ ಇರುತ್ತದೆ. ಈ ಚಾಲೆಂಜ್‌ ಇದೀಗ ಸೆಲೆಬ್ರಿಟಿಗಳಿಗಾಗಿಯಷ್ಟೇ ಉಳಿದಿಲ್ಲ. ಎಲ್ಲರೂ ತಮ್ಮ ತಮ್ಮ ಸೋಷಲ್‌ ಮೀಡಿಯಾ ಖಾತೆಗಳಲ್ಲಿ ತಮ್ಮ ಫೋಟೋಗಳನ್ನು.

ನಮ್ಮ ಯಾವುದೇ ಹಳೆಯ ಫೋಟೋವನ್ನು ಅನಿರೀಕ್ಷಿತವಾಗಿ ಕಂಡಾಗ ಆಗುವ ಖುಷಿಯೇ ಬೇರೆ. ನೆನಪುಗಳೆಲ್ಲಾ ಆ ಫೋಟೋ ತೆಗೆದ ದಿನ ಮಾನಕ್ಕೆ ಜಾರುತ್ತವೆ. ಅಚ್ಚರಿ, ಖುಷಿಗಳ ನಡುವಲ್ಲಿ ನಾನು ಹೀಗಿದ್ನಾ? ಈಗ ಹೀಗಾಗಿದ್ದೀನಾ ಎಂದು ಕನ್ನಡಿಯ ಮುಂದೆ ನಿಂತು ನಮ್ಮನ್ನು ನಾವೇ ನೋಡಿಕೊಳ್ಳುತ್ತೇವೆ. ಸಾಧ್ಯವಾದರೆ ಇತ್ತೀಚಿನ ಫೋಟೋ ತೆಗೆದುಕೊಂಡು ಎರಡನ್ನೂ ಹೋಲಿಕೆ ಮಾಡಿಕೊಂಡು ನೋಡುತ್ತೇವೆ. ಆಗ ಸಿಕ್ಕುವ ಕಿಕ್ಕೇ ಬೇರೆ. ಇದನ್ನೆಲ್ಲಾ ಈಗ ಹೇಳಲು ಕಾರಣ ಇಂತಹುದೊಂದು ಖುಷಿ ಹೆಚ್ಚಿಸುವ ‘10ಯಿಯರ್ಸ್‌ ಚಾಲೆಂಜ್‌’ ಎನ್ನುವ ಸೋಷಲ್‌ ಮೀಡಿಯಾ ಟ್ರೆಂಡ್‌ ಜೋರಾಗಿ ಶುರುವಾಗಿದೆ. ಮೊದಲಿಗೆ ಹಾಲಿವುಡ್‌ ಅಂಗಳದಲ್ಲಿ ಶುರುವಾದ ಈ ಟ್ರೆಂಡ್‌ ಈಗ ಬಾಲಿವುಡ್‌, ಸ್ಯಾಂಡಲ್‌ವುಡ್‌ಗೆಲ್ಲಾ ಲಗ್ಗೆ ಇಟ್ಟಿದೆ.

ಏನು ಈ ಹೊಸ ಟ್ರೆಂಡ್‌

ಮೊದಲು 2007ರಿಂದ 2009 ರವರೆಗಿನ ಹಳೆಯ ಫೋಟೋವನ್ನು ತೆಗೆದುಕೊಂಡು ಅದರ ಪಕ್ಕದಲ್ಲಿ 2017ರಿಂದ 2019ರ ನಡುವಿನ ಹೊಸ ಫೋಟೋವನ್ನು ಸೇರಿಸಿ, ಮೊದಲು ಹೇಗಿದ್ದೆ, ಈಗ ಹೇಗಾಗಿದ್ದೇನೆ ಎಂದು ಫೋಟೋಗಳ ಮೂಲಕ ಹೇಳಿಕೊಳ್ಳುವುದು ಈ ಚಾಲೆಂಜ್‌ನ ಉದ್ದೇಶ. ಹುಡುಕುತ್ತಾ ಹೋದರೆ ಇದನ್ನು ಶುರು ಮಾಡಿದ್ದು ಯಾರು, ಎಲ್ಲಿ ಎನ್ನುವುದಕ್ಕೆ ಖಚಿತ ಉತ್ತರ ದೊರೆಯುವುದಿಲ್ಲ. ಆದರೆ ಮೊದಲು ಶುರುವಾಗಿದ್ದು ಮಾತ್ರ ಹಾಲಿವುಡ್‌ ಅಂಗಳದಲ್ಲಿ. ಹ್ಯಾಸ್‌ ಟ್ಯಾಗ್‌ ಮೂಲಕ ಎಲ್ಲೆಡೆ ಹೊಸ ಟ್ರೆಂಡ್‌ ಹುಟ್ಟು ಹಾಕುತ್ತಿರುವ ಈ ಚಾಲೆಂಜ್‌ಗೆ ಪ್ರಪಂಚದಾದ್ಯಂತ ಈಗಾಗಲೇ 1,67,500 ಮಂದಿ ಕೈ ಜೋಡಿಸಿದ್ದಾರೆ.

ಎಲ್ಲರಿಗೂ ಮುಕ್ತ ಅವಕಾಶ

ಇಲ್ಲಿ ಯಾವುದೇ ಮಿತಿ ಇಲ್ಲ. ಸೆಲಬ್ರಿಟಿಯಿಂದ ಸಾಮಾನ್ಯನ ವರೆಗೆ ಯಾರು ಬೇಕಾದರೂ ತಮ್ಮ ಹತ್ತು ವರ್ಷಗಳ ಹಿಂದಿನ ಫೋಟೋವನ್ನು ಇಂದಿನ ಫೋಟೋ ಜೊತೆಗೆ ಸೇರಿಸಿ ಫೇಸ್‌ಬುಕ್‌, ಟ್ವಿಟ್ಟರ್‌, ಇನ್‌ಸ್ಟಾಗ್ರಾಂ ಮೊದಲಾದ ಸೋಷಲ್‌ ಮೀಡಿಯಾದಲ್ಲಿ ಹ್ಯಾಸ್‌ಟ್ಯಾಗ್‌ ಬಳಕೆ ಮಾಡಿ ಚಾಲೆಂಜ್‌ ಸ್ವೀಕರಿಸಬಹುದು.

 

ಬಾಲಿವುಡ್‌ನಲ್ಲಿ ಭರ್ಜರಿ ಚಾಲೆಂಜ್‌

ಯಾವುದೇ ಹೊಸ ಟ್ರೆಂಡ್‌ ಶುರುವಾದ ಕೂಡಲೇ ಅದಕ್ಕೆ ಮೈ ಒಡ್ಡಿ ನಿಲ್ಲುವುದು ನಮ್ಮ ಬಾಲಿವುಡ್‌ನ ಛಾತಿ. ಇದಕ್ಕೆ ತಕ್ಕಂತೆ 10 ಯಿಯರ್ಸ್‌ ಚಾಲೆಂಜ್‌ ಶುರುವಾಗುತ್ತಿದ್ದಂತೆಯೇ ತಾವು ಏನು ಕಮ್ಮಿ ಎಂದು ಹಲವಾರು ನಟ ನಟಿಯರು ತಕ್ಷಣವೇ ತಮ್ಮ ಹತ್ತು ವರ್ಷಗಳ ಹಿಂದಿನ ಫೋಟೋದ ಜೊತೆಗೆ ತಮ್ಮ ಇತ್ತೀಚಿನ ಫೋಟೋವನ್ನು ಸೇರಿಸಿ ಚಾಲೆಂಜ್‌ಗೆ ಜೈ ಎಂದಿದ್ದಾರೆ.

ಸದ್ಯ ಈ ಪಟ್ಟಿಯಲ್ಲಿ ಇಶಾ ಗುಪ್ತಾ, ಮಂದಾರ ಬೇಡಿ, ಡೈಸಿ ಶಾ, ಸೋನಂ ಕಪೂರ್‌, ಬಿಪಾಶಾ ಬಸು, ಅರ್ಮಾನ್‌ ಮಲ್ಲಿಕ್‌ ಸೇರಿ ಕೆಲವಷ್ಟುಮಂದಿ ಇದ್ದಾರೆ. ನಾಳೆ ಪಟ್ಟಿಸೇರುವವರ ಸಂಖ್ಯೆ ಇನ್ನು ಬೆಳೆದರೆ ಅಚ್ಚರಿ ಇಲ್ಲ. ಇದೇ ವೇಳೆಗೆ ಕನ್ನಡದ ಹಿತಾ ಚಂದ್ರಶೇಖರ್‌, ಶಾಲಿನಿ ಕೂಡ ತಮ್ಮ ಹಳೆಯ ಫೋಟೋಗಳ ಜೊತೆಗೆ ಹೊಸ ಫೋಟೋವನ್ನು ಸೇರಿಸಿ ಚಾಲೆಂಜ್‌ಗೆ ತೆರೆದುಕೊಂಡಿದ್ದಾರೆ. ಅವರೆಲ್ಲರ ಹತ್ತು ವರ್ಷದ ಕತೆ ಇಲ್ಲಿದೆ.

click me!