ಆಗಸ್ಟ್ 9ಕ್ಕೆ ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾ ಅದ್ದೂರಿಯಾಗಿ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತೆರೆ ಕಾಣುತ್ತಿದೆ. ಕನ್ನಡಕ್ಕೆ ಮಾತ್ರವಲ್ಲ, ಭಾರತದ ಮಟ್ಟಿಗೆ ಇದೊಂದು ಹೆಮ್ಮೆಯ ಸಿನಿಮಾ ಎಂಬುದು ನಿರ್ಮಾಪಕರ ಮಾತು. ಇಂಥ ಸಿನಿಮಾ ನೋಡಲು ನಿರ್ಮಾಪಕ ಮುನಿರತ್ನ ಅವರು ಕೊಡುವ 10 ಕಾರಣಗಳು.
1. ಭಾರತೀಯ ಚಿತ್ರರಂಗಕ್ಕೆ ಕನ್ನಡಿಗರು ಕೊಡುತ್ತಿರುವ ಹೆಮ್ಮೆಯ ಸಿನಿಮಾ ಇದು. ಕನ್ನಡದವರ ಸಿನಿಮಾಗಳ ಬಜೆಟ್ ಕಡಿಮೆ. ಸೀಮಿತ ಮಾರುಕಟ್ಟೆಎಂದು ಹೇಳಿಕೊಳ್ಳುತ್ತಿರುವ ಹೊತ್ತಿನಲ್ಲಿ ಬಹು ಭಾಷಾ ಕಲಾವಿದರನ್ನು ಜತೆ ಮಾಡಿಕೊಂಡು ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿರುವ ಸಿನಿಮಾ ಇದು. ಹೀಗಾಗಿ ಇದು ಕನ್ನಡಿಗರ ಹೆಮ್ಮೆಯ ಚಿತ್ರ.
2. ನಿರ್ಮಾಣ, ತಾರಾಗಣ, ಮೇಕಿಂಗ್ ಹೀಗೆ ಯಾವುದರಲ್ಲೂ ರಾಜಿ ಆಗಿಲ್ಲ. ಈ ಕಾರಣಕ್ಕೆ ಕನ್ನಡ ಚಿತ್ರಗಳನ್ನು ಪರಭಾಷೆಗಳಿಗೆ ಕಂಪೇರ್ ಮಾಡುತ್ತಿರುವವರು ಒಮ್ಮೆ ಈ ಚಿತ್ರವನ್ನು ಬಂದು ನೋಡಬೇಕು. ಪೌರಾಣಿಕ ಚಿತ್ರವನ್ನು 3ಡಿ ತಂತ್ರಜ್ಞಾನದಲ್ಲಿ ಯಾರೂ ಮಾಡಿಲ್ಲ. ಆ ಮಟ್ಟಿಗೆ ಇದೊಂದು ಸಾಧನೆ ಎನ್ನಬಹುದು.
ಕುರುಕ್ಷೇತ್ರ ,ಕೆಂಪೇಗೌಡ-2 ಎರಡು ನಮ್ದೇ: ದರ್ಶನ್ ಅಭಿಮಾನಿಗಳು ಸಾಥ್!
3. ವಿಭಿನ್ನ ರೀತಿಯ ಕಲಾವಿದರು. ಹಿರಿಯ ನಟ ಅಂಬರೀಶ್, ರವಿಚಂದ್ರನ್, ದರ್ಶನ್, ಅರ್ಜುನ್ ಸರ್ಜಾ, ನಿಖಿಲ್, ಶಶಿಕುಮಾರ್, ರವಿಶಂಕರ್, ಭಾರತಿ ವಿಷ್ಣುವರ್ಧನ್, ಹರಿಪ್ರಿಯಾ, ಮೇಘನಾ ರಾಜ್, ಸ್ನೇಹ, ಸೋನು ಸೋದ್... ಹೀಗೆ ಒಬ್ಬರಿಗಿಂತ ಒಬ್ಬರು ಘಟಾನುಘಟಿ ನಟ- ನಟಿಯರು ಈ ಚಿತ್ರಕ್ಕಾಗಿ ಜತೆಯಾಗಿದ್ದಾರೆ. ಇಷ್ಟುದೊಡ್ಡ ತಾರಾಗಣ ಇರುವ, ಜತೆಗೆ ಬಹು ಬೇಡಿಕೆಯ ಸ್ಟಾರ್ ಕಲಾವಿದರೇ ಸೇರಿ ಮಾಡಿರುವ ಇಂಥ ಸಿನಿಮಾ ಇದುವರೆಗೂ ಬಂದಿಲ್ಲ. ಎಲ್ಲ ರೀತಿಯ ಪ್ರೇಕ್ಷಕರಿಗೂ ಇದೊಂದು ಹಬ್ಬ ಅಂತಲೇ ಹೇಳಬೇಕು.
4. ಕುರುಕ್ಷೇತ್ರ ಒಂದು ಪೌರಾಣಿಕ ಕತೆಯಾದರೂ ಆ ಕತೆಯ ಪಾತ್ರಗಳು ಈಗಲೂ ನಮ್ಮ ನಡುವೆ ಕಾಣುತ್ತವೆ. ಆ ಕಾಲದ ಬೆಳವಣಿಗೆಗಳು, ರಾಜಕೀಯ- ಸಂಚು- ತಂತ್ರಗಳನ್ನು ನಾವು ಈಗಲೂ ನೋಡುತ್ತಿದ್ದೇವೆ. ಹೀಗಾಗಿ ಕಾಲಗಳ ಗಡಿಯನ್ನು ದಾಟಿ ನಿಂತಿರುವ ಕಥನವೇ ಕುರುಕ್ಷೇತ್ರ.
ಕುರುಕ್ಷೇತ್ರ ವಿವಾದಕ್ಕೆ ತೆರೆ; ಡಬ್ಬಿಂಗ್ ಶುರು ಮಾಡಿದ ನಿಖಿಲ್ ಕುಮಾರಸ್ವಾಮಿ
5. ಇಲ್ಲಿ ಪಾಂಡವರು ಮತ್ತು ಕೌರವರು ಕೇವಲ ಒಂದು ಕತೆಯ ಪಾತ್ರಧಾರಿಗಳು ಮಾತ್ರವಲ್ಲ. ದುರ್ಯೋಧನನ ಅಟ್ಟಹಾಸ, ಅರ್ಜುನನ ಗುರಿ, ಶ್ರೀಕೃಷ್ಣನ ಭವಿಷ್ಯ ವಾಣಿ, ಭೀಷ್ಮನ ಹಿರಿತನ, ಅಭಿಮನ್ಯುವಿನ ಹೋರಾಟ, ಸಂಬಂಧಗಳು ಹೀಗೆ ಪ್ರತಿಯೊಂದಕ್ಕೂ ಈ ಕ್ಷಣಕ್ಕೆ ನಮಗೆ ಸ್ಫೂರ್ತಿ ಮತ್ತು ಪ್ರೇರಣೆ ಆಗುವ ಕತೆ ಕುರುಕ್ಷೇತ್ರದ್ದು. ಆ ಕಾರಣಕ್ಕೆ ನಾನು ಈ ಚಿತ್ರವನ್ನು ಈ ಜನರೇಷನ್‌ಗೂ ಅಗತ್ಯ ಎಂದು ನಿರ್ಮಾಣ ಮಾಡಿದ್ದೇನೆ.
6. ಒಂದು ದೊಡ್ಡ ಮಲ್ಟಿಸ್ಟಾರ್ ಚಿತ್ರವನ್ನು ನಿಭಾಯಿಸಿದ್ದು ಒಬ್ಬ ನಿರ್ಮಾಪಕನಾಗಿ ಆ ಕಷ್ಟಗಳು ನನಗೇ ಮಾತ್ರ ಗೊತ್ತು. ಆದರೆ, ಸಿನಿಮಾ ನೋಡಿದಾಗ ಪ್ರೇಕ್ಷಕರಿಗೆ ಅದೆಲ್ಲ ಕಾಣಲ್ಲ. ಆ ಮಟ್ಟಿಗೆ ಇಡೀ ಸಿನಿಮಾ ವೈಭವದಿಂದ ಸಿಂಗಾರಗೊಂಡಿದೆ. ಸಂಗೀತ, ಕೆ ಕಲ್ಯಾಣ್ ಅವರು ಬರೆದಿರುವ ಪದ್ಯಗಳು, ಎಲ್ಲವನ್ನೂ ಸರಿ ತೂಗಿಸಿಕೊಂಡು ಹೋಗಿರುವ ನಿರ್ದೇಶಕ ನಾಗಣ್ಣ, ದುರ್ಯೋಧನನ ಪಾತ್ರವನ್ನು ಹೇಳುವ ವಿ. ನಾಗೇಂದ್ರ ಪ್ರಸಾದ್ ಅವರ ಸಾಹೋ ರೇ ಸಾಹೋ... ಹಾಡು ಹೀಗೆ ಎಲ್ಲವೂ ಮನಸ್ಸಿಗೆ ಮತ್ತು ನೋಟಕ್ಕೆ ಹತ್ತಿರವಾಗುತ್ತದೆ.
7. ಬಹು ತಾರೆಗಳ ಸಿನಿಮಾ ಆಗಿದ್ದರೂ ಇಲ್ಲಿ ಯಾವ ಹೀರೋಗೂ ಕಡಿಮೆ, ಜಾಸ್ತಿ ಅಂತ ಮಾಡಿಲ್ಲ. ಕತೆಗೆ ಪೂರಕವಾಗಿ ಯಾರ ಪಾತ್ರ ಎಷ್ಟಿರಬೇಕು ಎಂಬುದನ್ನು ತಿಳಿದುಕೊಂಡೇ ಮಾಡಿದ್ದೇವೆ. ಆಯಾ ನಟರ ಅಭಿಮಾನಿಗಳಿಗೆ ಇಲ್ಲಿ ಬೇಸರ ಆಗಲ್ಲ. ಅಭಿಮನ್ಯುವಿನ ರೋಚಕ ಸಾಹಸ, ದುರ್ಯೋಧನನ ಅಬ್ಬರ, ಶಕುನಿಯ ಆಟಗಳು ಪ್ರೇಕ್ಷಕನಿಗೆ ಅದ್ಭುತ ಎನಿಸುತ್ತವೆ. ಹಾಗೆ ದುರ್ಯೋಧನನ ಪ್ರೇಮ ಕತೆಯೂ ಇಲ್ಲಿದೆ.
8. ಐದೂ ಭಾಷೆಗಳಲ್ಲೂ 3 ಸಾವಿರ ಚಿತ್ರಮಂದಿರಗಳಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ರಾಕ್‌ಲೈನ್ ವೆಂಕಟೇಶ್ ಅವರೇ ಎಲ್ಲ ಭಾಷೆಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೇಲರ್ ಹಾಗೂ ಹಾಡುಗಳನ್ನು ಲಕ್ಷಗಳ ಸಂಖ್ಯೆಯಲ್ಲಿ ಜನ ನೋಡಿದ್ದಾರೆ. ಅದ್ದೂರಿ ಸೆಟ್‌ಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಯಾವ ದೃಶ್ಯವನ್ನೂ ಅನಗತ್ಯವಾಗಿ ಚಿತ್ರದಲ್ಲಿ ತುರುಕಿಲ್ಲ.
ತೆಲುಗಿನಲ್ಲಿ ಕುರುಕ್ಷೇತ್ರ ಪ್ರಚಾರ ಮಾಡಿದ ದರ್ಶನ್!
9. ಇದು ರೆಬೆಲ್ ಸ್ಟಾರ್ ಅಂಬರೀಶ್ ಅವರ ಕೊನೆಯ ಸಿನಿಮಾ. ಅವರ ಅಭಿಮಾನಿಗಳು ಮಾತ್ರವಲ್ಲ, ಎಲ್ಲರಿಗೂ ನೋಡುವಂತಹ ಸಿನಿಮಾ. ಆ ಮೂಲಕ ಅಂಬರೀಶ್ ಅವರನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳಬಹುದು.
10. ಬೇರೆ ಭಾಷೆಗಳ ಚಿತ್ರಗಳ ಮುಂದೆ ಎದೆ ತಟ್ಟಿಹೇಳುವ ಸಿನಿಮಾ ಇದಾಗಬೇಕು ಎನ್ನುವ ಪ್ರತಿಷ್ಠೆಯ ಜತೆಗೆ ಒಬ್ಬ ಕನ್ನಡ ನಿರ್ಮಾಪಕನಾಗಿ ಅತ್ಯಂತ ಪ್ರೀತಿಯಿಂದ ಮಾಡಿರುವ ಸಿನಿಮಾ ಇದು. ಹೀಗಾಗಿ ರಾಜ್ಯದ ಪ್ರತಿಯೊಬ್ಬ ಕನ್ನಡಿಗನೂ ಈ ಚಿತ್ರವನ್ನು ನೋಡಿ ಬೆಂಬಲಿಸಿ ಎನ್ನುವ ಮನವಿ ನನ್ನದು.