ಸಂವೇದನಾಶೀಲ ನಿರ್ದೇಶಕ ಗಿರಿರಾಜ್ ಸಿನಿಮಾದೊಂದಿಗೆ ಬೆಳ್ಳಿತೆರೆಗೆ ಬಂದ ಚೆಲುವೆ ಪಾವನಾ. ‘ಅದ್ವೆತ’ ಮೊದಲ ಸಿನಿಮಾ. ಆದರೆ, ಪಾವನಾ ನಟಿಯಾಗಿ ಬೆಳಕಿಗೆ ಬಂದಿದ್ದು 'ಗೊಂಬೆಗಳ ಲವ್' ಚಿತ್ರದ ಮೂಲಕ. ಅಲ್ಲಿಂದ ಕ್ರಮೇಣ ಒಂದೊಂದು ಅವಕಾಶಗಳ ಮೂಲಕ ನಟಿಯಾಗಿ ನೆಲೆ ನಿಂತಿರುವ ಹುಡುಗಿ. ಸದ್ಯಕ್ಕೀಗ ಪಾವನಾ ನಾಯಕಿ ಆಗಿ ಅಭಿನಯಿಸಿರುವ 'ಮೈಸೂರು ಡೈರೀಸ್', 'ರುದ್ರಿ' ಚಿತ್ರಗಳೆರೆಡು ಶೂಟಿಂಗ್ ಮುಗಿಸಿ, ರಿಲೀಸ್ಗೆ ರೆಡಿ ಆಗಿವೆ. 'ಪ್ರಭುತ್ವ'ದ ಜತೆಗೆ ಇನ್ನು ಹೆಸರಿಡದ ಮತ್ತೊಂದು ಚಿತ್ರ ಚಿತ್ರೀಕರಣದ ಹಂತದಲ್ಲಿವೆ. ಸದ್ದಿಲ್ಲದೆ ಸುದ್ದಿಯಲ್ಲಿರುವ ನಟಿಯರ ಪೈಕಿ ಪಾವನಾ ಕೂಡ ಒಬ್ಬರು.
1. ನಾನು ಹಾಸನ ಹುಡುಗಿ. ಆದಿಚುಂಚನಗಿರಿ ಮಠದ ಸಮೀಪವೇ ನಮ್ಮೂರು. ಓದಿದ್ದೆಲ್ಲವೂ ಮೈಸೂರು. ಮಾಸ್ ಕಮ್ಯುನೀಕೇಷನ್ ಮುಗಿದಿದೆ.
2. ಓದುವ ದಿನಗಳಲ್ಲಿ ಸಿನಿಮಾಕ್ಕೆ ಬರುವ ಅಂದಾಜೇ ಇರಲಿಲ್ಲ. ಆದ್ರೂ ಯಾಕೆ ಬಂದೆ, ಹೇಗೆ ನಟಿಯಾದೆ ಅಂತ ನನ್ನೊಳಗೆ ನಾನು ಕಾರಣ ಹುಡುಕುತ್ತಾ ಹೊರಟರೆ ಆಸಕ್ತಿಯೇ ಕಾರಣ ಎನ್ನುವುದು ನಿಜ. ಪದವಿ ಮುಗಿಸಿ, ಹೊರ ಬರುವ ಹೊತ್ತಿಗೆ ನಟಿಯಾಗಬೇಕೆಂದುಕೊಂಡೆ. ಸಿನಿಮಾ, ನಾಟಕ ಇತ್ಯಾದಿ ವರ್ಕ್‌ಶಾಪ್‌ಗಳಲ್ಲಿ ಭಾಗವಹಿಸುತ್ತಾ ಬಂದೆ. ಒನ್ ಡೇ ಫೈನಲಿ, ಸಿನಿಮಾ ಅವಕಾಶವೂ ಬಂತು. ‘ಅದ್ವೆ‘ತ ’ಕ್ಕೆ ನಾಯಕಿ ಆದೆ.
undefined
3. ಗಿರಿರಾಜ್ ಸರ್ ನನ್ನ ಮೊದಲ ಸಿನಿಮಾದ ನಿರ್ದೇಶಕರು ಎನ್ನುವುದು ಹೆಮ್ಮೆ. ನಟಿ ಆಗ್ಬೇಕು ಅಂದುಕೊಂಡಿದ್ದವಳು ನಿಜಕ್ಕೂ ನಟಿ ಆಗಿದ್ದು ಅವರು ಗುರುತಿಸಿದ ಕಾರಣಕ್ಕಾಗಿಯೇ. ಒಂದ್ರೀತಿ ಅವರು ಗುರು ಸ್ಥಾನದಲ್ಲೇ ನಿಂತು ನನ್ನನ್ನು ನಟಿಯಾಗಿ ರೂಪಿಸಿದರು. ಸಿನಿಮಾದ ಅಕ್ಷರಾಭ್ಯಾಸ ಶುರುವಾಗಿದ್ದೇ ಅಲ್ಲಿ. ಅವರಿಂದ ಒಂದಷ್ಟು ಕಲಿತೆ, ಎನ್ನುವುದಕ್ಕಿಂತ ಮೊದಲ ಸಿನಿಮಾದಲ್ಲಿ ಅವರು ನನ್ನನ್ನು ರೂಪಿಸಿದರು.
4. ನಟಿಯಾಗಿ ಎಲ್ಲಾ ರೀತಿಯ ಪಾತ್ರಗಳಲ್ಲಿ ಅಭಿನಯಿಸಬೇಕು, ಕಲಾವಿದೆಯಾಗಿ ಸೈ ಎನಿಸಿಕೊಳ್ಳಬೇಕು ಎನ್ನುವ ಆಸೆ. ಹಾಗಾಗಿ ಇಂಥದ್ದೇ ಪಾತ್ರ ಬೇಕು ಅಂತ ಡಿಮ್ಯಾಂಡ್ ಮಾಡುವಷ್ಟು ನಾನಿನ್ನು ಬೆಳೆದಿಲ್ಲ. ಹಾಗೆ ಡಿಮ್ಯಾಂಡ್ ಮಾಡ್ಬೇಕಾದ್ರೆ ದೊಡ್ಡ ಸ್ಟಾರ್ ಆಗ್ಬೇಕು. ಆದ್ರೆ ನಾವಿನ್ನು ಈಗಷ್ಟೇ ಉದ್ಯಮಕ್ಕೆ ಬಂದ ಕೂಸು.
5. ತುಂಬಾ ನಟಿಯರಿಂದಲೂ ನಾನು ಪ್ರಭಾವಿತಳಾಗಿದ್ದೇನೆ. ಅವರಿಂದ ಮತ್ತಷ್ಟು ಕಲಿತುಕೊಳ್ಳಬೇಕೆಂದು ನಾನು ಬಯಸುತ್ತೇನೆಯೇ ಹೊರತು, ಅವರಂತೆಯೇ ಆಗ್ಬೇಕು ಅಂತ ಕನಸು ಕಂಡಿಲ್ಲ. ಸಾಧ್ಯಯವಾದ್ರೆ ನನ್ನಂತೆ ನಾನು ಇರೋಣ ಅನ್ನೋದು ನನ್ನ ಸಿದ್ಧಾಂತ.
-ದೇಶಾದ್ರಿ ಹೊಸ್ಮನೆ