ಕೊಡಗು: ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಲು ಡಾ. ಜೆ.ಸೋಮಣ್ಣ ಕರೆ

By Girish Goudar  |  First Published Feb 25, 2024, 8:30 PM IST

ಮಕ್ಕಳಲ್ಲಿ ಪ್ರಾಥಮಿಕ ಶಾಲೆಯಿಂದಲೇ ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯದ ಅಭಿರುಚಿ ಬೆಳೆಸುವ ಮೂಲಕ ಅವರನ್ನು ಭವಿಷ್ಯದಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿಸಲು ಶಿಕ್ಷಕರು ಪ್ರೇರೇಪಿಸಬೇಕು ಎಂದ ಸಾಹಿತಿ ಡಾ.ಜೆ.ಸೋಮಣ್ಣ 


ವರದಿ: ರವಿ.ಎಸ್. ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಫೆ.25):  ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ಇವುಗಳ ಸಂಯುಕ್ತಾಶ್ರಯದಲ್ಲಿ ಮಡಿಕೇರಿ ನಗರದ ಕೊಡಗು ಪತ್ರಿಕಾ ಭವನ ಟ್ರಸ್ಟ್ ಸಭಾಂಗಣದಲ್ಲಿ ಇಂದು(ಭಾನುವಾರ) ಸುವರ್ಣ ಕರ್ನಾಟಕ- 50 ರ ಸಂಭ್ರಮದ ಅಂಗವಾಗಿ ಪ್ರಾಥಮಿಕ ಶಾಲಾ ಕನ್ನಡ ಮಾಧ್ಯಮ ಶಿಕ್ಷಕರಿಗೆ ಭಾಷಣ ಸ್ಪರ್ಧೆ ಏರ್ಪಡಿಸಲಾಗಿತ್ತು.  ಇದೇ ವೇಳೆಯಲ್ಲಿ ಲೇಖಕರ ಮತ್ತು ಕಲಾವಿದರ ಬಳಗದ ವತಿಯಿಂದ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ 2022-23 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಐಗೂರು ಸರ್ಕಾರಿ ಪ್ರೌಢಶಾಲೆಯ ಸಿ.ಬಿ.ಬೆಸಿಲ್ ಗೆ ಟಿ.ಪಿ.ರಮೇಶ್ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು. 

Tap to resize

Latest Videos

undefined

ಸಮಾರಂಭದಲ್ಲಿ ಕಲೆ ಮತ್ತು ಸಾಹಿತ್ಯ ಬೆಳವಣಿಗೆ ಕುರಿತು ಮುಖ್ಯ ಭಾಷಣ ಮಾಡಿದ ಸಾಹಿತಿ ಡಾ.ಜೆ.ಸೋಮಣ್ಣ ಅವರು, ಜಿಲ್ಲೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಸಾಹಿತಿ ಭಾರತೀಸುತ ಅವರು ತಮ್ಮ ಕಥೆ, ಕವನ, ಕಾದಂಬರಿ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಮಕ್ಕಳಲ್ಲಿ ಪ್ರಾಥಮಿಕ ಶಾಲೆಯಿಂದಲೇ ಕಲೆ, ಸಂಸ್ಕೃತಿ ಹಾಗೂ ಸಾಹಿತ್ಯದ ಅಭಿರುಚಿ ಬೆಳೆಸುವ ಮೂಲಕ ಅವರನ್ನು ಭವಿಷ್ಯದಲ್ಲಿ ಸಾಹಿತ್ಯ ರಚನೆಯಲ್ಲಿ ತೊಡಗಿಸಲು ಶಿಕ್ಷಕರು ಪ್ರೇರೇಪಿಸಬೇಕು ಎಂದರು. 

ಕೊಡಗು ಜುಮ್ಮಾ ಮಸೀದಿಯಲ್ಲಿ ನಮಾಜ್ ಮಾಡಿದ ಮಹಿಳೆಗೆ 25 ವರ್ಷ ಬಹಿಷ್ಕಾರ; ಗಂಡನ ಅಂತ್ಯಕ್ರಿಯೆಗೂ ಅವಕಾಶವಿಲ್ಲ

ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮೂಲಕ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಉತ್ತಮ ಕೊಡುಗೆ ನೀಡುತ್ತಾ ಬಂದಿರುವ ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್, ಉದಯೋನ್ಮುಖ ಬರಹಗಾರರು, ಕವಿಗಳು ಹಾಗೂ ಸಾಹಿತಿಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಹಾಗಾಗಿ ಜಿಲ್ಲೆಯಲ್ಲಿ ಇಂದು ಸಾಹಿತ್ಯ ಚಟುವಟಿಕೆಗಳು ಹಾಗೂ ಬರಹಗಾರರ ಸಂಖ್ಯೆ ಕೂಡ ವೃದ್ಧಿಸಿದೆ ಎಂದರು. 

ಕನ್ನಡ ಮಾಧ್ಯಮದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ತಮ್ಮ ಹೆಸರಿನಲ್ಲಿ ದತ್ತಿನಿಧಿ ಸ್ಥಾಪಿಸಿರುವ ಟಿ.ಪಿ.ರಮೇಶ್, ಕಲೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ನೀಡುತ್ತಿರುವ ಕೊಡುಗೆ ಶ್ಲಾಘನೀಯವಾದುದು ಎಂದು ಡಾ ಸೋಮಣ್ಣ ಹೇಳಿದರು. 2022-23 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಐಗೂರು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಸಿ.ಬಿ.ಬೆಸಿಲ್ ಗೆ ದತ್ತಿ ದಾನಿ ಜಿಲ್ಲಾ ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ತಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ಪ್ರಶಸ್ತಿ ಪ್ರದಾನ ಮಾಡಿದರು. 

ಬಳಿಕ ಮಾತನಾಡಿದ ಅವರು ಇಂದಿನ ಜಾಗತಿಕ ಯುಗದಲ್ಲಿ ಆಂಗ್ಲ ಮಾಧ್ಯಮದ ಪೈಪೋಟಿ ನಡುವೆ ಕನ್ನಡ ಶಾಲೆಯ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ದಿಸೆಯಲ್ಲಿ ಈ ದತ್ತಿ ಸ್ಥಾಪಿಸಲಾಗಿದೆ. ವಿದ್ಯಾರ್ಥಿ ಬೆಸಿಲ್ ನಂತಹ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಮೂಲಕ ಇಂತಹ ಮಕ್ಕಳು ಕೂಡ ಭವಿಷ್ಯತ್ತಿನಲ್ಲಿ ಉತ್ತಮ ಸಾಧನೆ ಮಾಡಲು ಅವಕಾಶ ಕಲ್ಪಿಸಲು ಸಾಧ್ಯ ಎಂದು ರಮೇಶ್ ಹೇಳಿದರು. 

ಲೇಖಕರ ಬಳಗದ ವತಿಯಿಂದ ಮುಂದಿನ ದಿನಗಳಲ್ಲಿ ಯುವ ಬರಹಗಾರರಿಗೆ ಲೇಖನ ಬರೆಯುವ ಕಮ್ಮಟ ಸಂಘಟಿಸುವ ಮೂಲಕ ಉದಯೋನ್ಮುಖ ಬರಹಗಾರರನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು. 

ಭಾಗಮಂಡಲದಲ್ಲಿ ಕುಡಿಯುವ ನೀರಿಗೆ ಅಡ್ಡಿಪಡಿಸಿದ ಅರಣ್ಯ ಇಲಾಖೆ ವಿರುದ್ಧ, ಸಿಡಿದೆದ್ದ ಗ್ರಾಮ ಪಂಚಾಯಿತಿಗಳು!

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ.ಮುನಿರ್ ಅಹ್ಮದ್ ಮಾತನಾಡಿ, ಲೇಖಕರ ಬಳಗ ಮತ್ತು ಕ.ಸಾ.ಪ.ವತಿಯಿಂದ ಸಾಹಿತ್ಯ ಚಟುವಟಿಕೆಗಳಿಗೆ ಪೂರಕ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತಿದೆ. ಶಿಕ್ಷಕರ ಭಾಷಣ ಸ್ಪರ್ಧೆಯು ಒಬ್ಬ ಸೃಜನಾತ್ಮಕ ಶಿಕ್ಷಕನಿಂದ  ಸೃಜನಶೀಲ ವಿದ್ಯಾರ್ಥಿಯನ್ನು ಬೆಳೆಸಲು ಸಾಧ್ಯ. ಹಾಗಾಗಿ, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿ ಬೆಳೆಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಬಳಗದ ಅಧ್ಯಕ್ಷ ಲೋಕನಾಥ್ ಅಮೆಚೂರ್ ಮಾತನಾಡಿ, ಲೇಖಕರ ಬಳಗದ ವತಿಯಿಂದ ಯುವ ಸಮುದಾಯದಲ್ಲಿ ಕಲೆ ಮತ್ತು ಸಾಹಿತ್ಯ ಅಭಿರುಚಿ ಬೆಳೆಸುವ ದಿಸೆಯಲ್ಲಿ ಮುಂದಿನ ದಿನಗಳಲ್ಲಿ ಕೂಡ ನಿರಂತರವಾಗಿ ಸಾಹಿತ್ಯ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.

2022-23 ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ  ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಐಗೂರು ಸರ್ಕಾರಿ ಪ್ರೌಢಶಾಲೆಯ ಸಿ.ಬಿ.ಬೆಸಿಲ್ ಗೆ ದತ್ತಿ ದಾನಿ ಟಿ.ಪಿ.ರಮೇಶ್ ತಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿ ಪ್ರಶಸ್ತಿ ಪ್ರದಾನ ಮಾಡಿದರು. ಲೇಖಕರ ಬಳಗದ ಉಪಾಧ್ಯಕ್ಷರಾದ ಎಂ.ಇ.ಮೊಹಿದ್ದೀನ್, ರೇವತಿ ರಮೇಶ್,  ಪ್ರಧಾನ ಕೋಶಾಧಿಕಾರಿ ಭಾರತಿ ರಮೇಶ್, ಕೋಶಾಧಿಕಾರಿ ಕಡ್ಲೇರ ತುಳಸಿ, ಸಹ ಕಾರ್ಯದರ್ಶಿ ಜಯಪ್ಪ ಹಾನಗಲ್, ಪದಾಧಿಕಾರಿ ಶ್ವೇತ ರವೀಂದ್ರ , ವಿದ್ಯಾರ್ಥಿ ಬೆಸಿಲ್ ನ ತಾಯಿ ಸಿ.ಬಿ. ಪ್ರೇಮ, ಜಿಲ್ಲಾ ಸ್ಕೌಟ್ಸ್, ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ, ಮದೆನಾಡು ಕಾಲೇಜು ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಇತರರು ಕಾರ್ಯಕ್ರಮದ ಅಂಗವಾಗಿ " ಕಲೆ ಮತ್ತು ಸಾಹಿತ್ಯ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ " ಕುರಿತು ಪ್ರಾಥಮಿಕ ಶಾಲಾ ಕನ್ನಡ ಮಾಧ್ಯಮದ ಶಾಲಾ ಶಿಕ್ಷಕರಿಗೆ ಏರ್ಪಡಿಸಿದ್ದ ಕನ್ನಡ ಭಾಷಣ ಸ್ಪರ್ಧೆಯಲ್ಲಿ ಕೊಡ್ಲಿಪೇಟೆಯ ಕೂಡ್ಲೂರು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಸ್ನೇಹ ಬಸಮ್ಮ,  ಪೊನ್ನಂಪೇಟೆ ಬಳಿಯ ನಡಿಕೇರಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ಕೊಪುಡ ಸೌಮ್ಯ ಚಿಣ್ಣಪ್ಪ, ನಾಪೋಕ್ಲು ಬಳಿಯ ಚರಿಯಪರಂಬು ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಟಿ.ಎಚ್.ಸುಕುಮಾರ್ ತೊರೆನೂರು ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿ ಬಹುಮಾನ ಪಡೆದರು.  ಉಪನ್ಯಾಸಕಿ ಕೆ.ಜಯಲಕ್ಷ್ಮಿ, ಶ್ವೇತ ರವೀಂದ್ರ, ಸಾಹಿತಿ ಈರವಂಡ ಹರಿಣಿ ವಿಜಯ್ ತೀರ್ಪುಗಾರರಾಗಿ ಭಾಗವಹಿಸಿದ್ದರು.

click me!