
ಶಶಿಕಾಂತ ಮೆಂಡೆಗಾರ
ವಿಜಯಪುರ(ಫೆ.24): ಏನಿಲ್ಲಾ... ಏನಿಲ್ಲಾ.. ಬೆಂಚ್ ಇಲ್ಲಾ, ಡೆಸ್ಕ್ ಇಲ್ಲಾ, ಕೊನೆಗೆ ಕುಳಿತುಕೊಳ್ಳಲು ಕೊಠಡಿಗಳು ಸಹ ಇಲ್ಲ, ಈ ಶಾಲೆಯಲ್ಲಿ ಏನೇನೂ ಇಲ್ಲ. ಹೌದು ಇಂತಹದ್ದೊಂದು ದಯನೀಯ ಸ್ಥಿತಿ ಬಂದಿರೋದು ನಗರದ ಹೃದಯ ಭಾಗದ ಹಮೀದ ನಗರದಲ್ಲಿನ ಸರ್ಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ನಂ.17ರ ಮಕ್ಕಳಿಗೆ.
ಇಲ್ಲಿನ ಶಾಲೆಯಲ್ಲಿ 1 ರಿಂದ 5ನೇ ತರಗತಿವರೆಗೆ ಒಟ್ಟು 75 ಮಕ್ಕಳು ಓದುತ್ತಿದ್ದಾರೆ. ಆದರೆ, ಇಲ್ಲಿರುವ 3 ಕೊಠಡಿಗಳ ಪೈಕಿ ಮೂರು ಕೊಠಡಿಯಲ್ಲಿ ಮಕ್ಕಳು ಕುಳಿತು ಕೊಳ್ಳಲು ಆಗದಂತಹ ಪರಿಸ್ಥಿತಿಯಲ್ಲಿ ಕೊಠಡಿಗಳಿವೆ. ಸುಮಾರು 30 ವರ್ಷಗಳ ಹಿಂದೆ ನಿರ್ಮಾಣವಾಗಿರುವ 3 ಕೊಠಡಿಗಳು ಸಂಪೂರ್ಣವಾಗಿ ಶಿಥಿಲಾವಸ್ಥೆ ತಲುಪಿದ್ದು, ಯಾವ ಸಂದರ್ಭದಲ್ಲಿ ಕೊಠಡಿಗಳು ಕುಸಿದು ಬೀಳುತ್ತದೆಯೋ ಎಂದು ಶಿಕ್ಷಕರು ಮಕ್ಕಳನ್ನು ಶಾಲೆಯ ಹೊರಗಡೆ ಆಟದ ಮೈದಾನದಲ್ಲಿ ಕೂರಿಸಿ ಪಾಠ ಮಾಡುತ್ತಿದ್ದಾರೆ. ಐವರು ಶಿಕ್ಷಕರಿದ್ದು, ಪಾಠ ಚೆನ್ನಾಗಿಯೇ ನಡೆಯುತ್ತಿದ್ದು, ಮಕ್ಕಳಿಗೆ ಕೊಠಡಿಗಳೇ ಇಲ್ಲವಾಗಿವೆ. ಈ ವಿಚಾರವಾಗಿ ಹಲವು ಬಾರಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಅದಕ್ಕೂ ತಮಗೂ ಸಂಬಂಧ ಇಲ್ಲ ಎಂಬಂತೆ ಕುಳಿತಿದ್ದಾರೆ ಅಧಿಕಾರಿಗಳು.
ಸಂಸದ ಅನಂತಕುಮಾರ್ ಹೆಗ್ಡೆನ ಮೆಂಟಲ್ ಆಸ್ಪತ್ರೆಗೆ ಸೇರಿಸಬೇಕು: ಸಚಿವ ಎಂಬಿ ಪಾಟೀಲ್ ವಾಗ್ದಾಳಿ
ಚಾಪೆ ಹಾಕಿ ಕೂರಿಸಿ ಶಿಕ್ಷಕರ ಪಾಠ:
ಇನ್ನೂ ಈ ಶಾಲೆಯ ಮುಂಭಾಗದಲ್ಲೇ ಇರುವ ಮೌಲಾನ್ ಅಬ್ದುಲ್ ಕಲಾಮ್ ಆಜಾದ್ ಶಾಲೆ ಬೆಳಗ್ಗೆ 10 ಗಂಟೆಯಿಂದ ಆರಂಭವಾಗುತ್ತದೆ. ಹೀಗಾಗಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯ ಮಕ್ಕಳನ್ನು ಬೆಳಗ್ಗೆ 7.30 ರಿಂದ 10 ಗಂಟೆಯ ವರೆಗೆ ಆ ಶಾಲೆಯಲ್ಲಿ ಕೊಠಡಿಯಲ್ಲಿ ಕೂರಿಸಿ ಬಳಿಕ 10 ರಿಂದ 12 ರವರೆಗೆ ಶಾಲೆ ಕೊಠಡಿಗಳ ಮುಂಭಾಗದಲ್ಲಿರುವ ವರಾಂಡದಲ್ಲಿ ಹಾಗೂ ಆಟದ ಮೈದಾನದಲ್ಲಿ ಚಾಪೆ ಹಾಕಿ ಕೂರಿಸಿ ಶಿಕ್ಷಕರು ಪಾಠ ಮಾಡುತ್ತಿದ್ದಾರೆ.
ಶಾಲಾ ಸಮಯವೇ ಬದಲು:
ಮೊದಲು ಈ ಉರ್ದು ಪ್ರಾಥಮಿಕ ಶಾಲೆಯ ಸಮಯ ಕೂಡ ಬೆಳಗ್ಗೆ 10 ರಿಂದ 5 ಗಂಟೆಯವರೆಗೆ ಇತ್ತು ಯಾವಾಗ ಕೊಠಡಿ ಸಮಸ್ಯೆ ಆರಂಭವಾಯಿತೋ ಆಗ ಈ ಶಾಲೆಯ ಸಮಯವನ್ನೇ ಬದಲಿಸಿ ಬೆಳಗ್ಗೆ 7.30 ರಿಂದ 12 ರವರೆಗೆ ಮಾಡಿದ್ದಾರೆ. ಇನ್ನೂ 10 ಗಂಟೆಯಿಂದ 12 ಗಂಟೆವರೆಗೆ ಮಕ್ಕಳಿಗೆ ಆಟದ ಮೈದಾನವೇ ಶಾಲಾ ಕೊಠಡಿಯಾಗಿದೆ. ಈ ವಿಚಾರವಾಗಿ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಎಸ್‌ಡಿಎಂಸಿ ಆಡಳಿತ ಮಂಡಳಿ ಹಲವು ಬಾರಿ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ ಎಂಬುವುದು ಪೋಷಕರ ಆರೋಪ.
ಶಾಲೆಯ ಸ್ಥಿತಿ ಅಯೋಮಯ:
ಕೇವಲ 30 ವರ್ಷಗಳ ಹಿಂದೆ ನಿರ್ಮಿಸಿದ ಈ ಕಟ್ಟಡ ಕಳೆಪೆಯಾಗಿದೆ ಎನ್ನಲಾಗಿದ್ದು, ಮಳೆ ಬಂದರೇ ಸೋರುವ ಈ ಶಾಲೆ ಸಂಪೂರ್ಣವಾಗಿ ಶಿಥಿಲಾವಸ್ಥೆಗೆ ತಲುಪಿದೆ. ಮೇಲ್ಭಾದಲ್ಲಿ ಚಾವಣಿಯೇ ಕುಸಿದು ಬೀಳುವ ಹಂತಕ್ಕೆ ತಲುಪಿದೆ. ಸುತ್ತಲೂ ಇರುವ ಗೋಡೆಗಳು ಬಿರುಕು ಬಿಟ್ಟಿದ್ದು, ಯಾವಾಗ ಮೈಮೇಲೆ ಬೀಳುತ್ತವೆಯೋ ಗೊತ್ತಿಲ್ಲ. ನೆಲಭಾದಲ್ಲಂತೂ ನೆಲಾಸನ ಕಿತ್ತುಹೋಗಿದ್ದು, ಹೆಗ್ಗಣಗಳು ವಾಸವಾಗಿವೆ.
ಶಾಲೆಯಲ್ಲಿರುವ 3 ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳಲು ಆಗಲ್ಲ. ಹೀಗಾಗಿ ಮಕ್ಕಳಿಗೆ ಶಾಲೆಯ ಆಟದ ಮೈದಾನವೇ ಪಾಠ ಶಾಲೆಯಾಗಿದೆ. ಆದಷ್ಟು ಬೇಗ ಅನಾಹುತ ಸಂಭವಿಸುವ ಮುನ್ನ ಸಂಬಂಧ ಪಟ್ಟ ಅಧಿಕಾರಿಗಳು ಈ ಮಕ್ಕಳಿಗೊಂದು ಸುಸಜ್ಜಿತ ಕಟ್ಟಡದ ವ್ಯವಸ್ಥೆ ಮಾಡಬೇಕು ಎಂಬುವುದೇ ನಮ್ಮ ಒತ್ತಾಯ.
ಸಿಎಂ ವಿರುದ್ಧ ಸಂಸದ ಅನಂತಕುಮಾರ್ ಅವಾಚ್ಯ ಪದ ಬಳಕೆ: 'ದೀಪ ಆರೋ ಮುಂಚೆ ಹೆಚ್ಚು ಉರಿಯುತ್ತೆ' ಎಂದ ಶಾಸಕ ಲಕ್ಷ್ಮಣ್
ಶಾಲೆಯ ಕೊಠಡಿಗಳು ಶಿಥಿಲಾವಸ್ಥೆ ತಲುಪಿದ್ದು, ನಮ್ಮ ಮಕ್ಕಳ ಮೇಲೆ ಯಾವಾಗ ಗೋಡೆ ಕುಸಿದು ಬೀಳುತ್ತದೆಯೋ ಎಂಬ ಭಯದಲ್ಲೇ ನಾವು ಮಕ್ಕಳನ್ನು ಶಾಲೆಗೆ ಕಳುಹಿಸ್ತಿದ್ದೇವೆ. ಕಳೆದೆರಡು ವರ್ಷಗಳಿಂದ ಸಮಸ್ಯೆ ಎದುರಾಗಿದ್ದು, ಆದಷ್ಟು ಬೇಗ ಕೊಠಡಿ ದುರಸ್ತಿ ಅಥವಾ ಹೊಸ ಕೊಠಡಿ ನಿರ್ಮಿಸಿ ಮಕ್ಕಳಿಗೆ ಅನುಕೂಲ ಮಾಡಬೇಕಿದೆ ಎಂದು ಮಕ್ಕಳ ಪಾಲಕರು ಹಾಸೀಮ್ ಹಾಗೂ ಮೊಹಸೀನ್ ಹೇಳಿದ್ದಾರೆ.
ಆ ಶಾಲೆಯಲ್ಲಿ ಸಮಸ್ಯೆ ಇರುವುದು ಗೊತ್ತಾಗಿದ್ದು, ಈಗಾಗಲೇ ನಾನು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಶಾಲೆ ಸಂಪೂರ್ಣ ಹಳಾಗಿರುವುದರಿಂದ ತಾತ್ಕಾಲಿಕವಾಗಿ ಎದುರುಗಡೆ ಇರುವ ಆಜಾದ್ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡಲು ಸೂಚಿಸಲಾಗಿದೆ. ಇನ್ನೊಂದು ವಾರದಲ್ಲಿ ಶಾಲೆಯ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಬಿಇಒ ಸಿಟಿ ಬಸವರಾಜ ತಳವಾರ ತಿಳಿಸಿದ್ದಾರೆ.