* ಆತಂಕಕ್ಕೆ ಒಳಗಾದ ವಿದ್ಯಾರ್ಥಿಗಳು
* ತಂತ್ರಾಂಶ ಬೇಗನೆ ಸರಿಪಡಿಸಬೇಕು
* ಕೋವಿಡ್ ಕಾರಣದಿಂದ ಈಗಾಗಲೇ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಖಾಸಗಿ ಶಾಲೆಗಳು
ಸಿ.ಎ.ಇಟ್ನಾಳಮಠ
ಅಥಣಿ(ಜು.03): ಕೋವಿಡ್ ಕಾರಣದಿಂದ ಈಗಾಗಲೇ ಖಾಸಗಿ ಶಾಲೆಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಒಂದು ಅಂದಾಜಿನ ಪ್ರಕಾರ ಸಾವಿರಾರು ಖಾಸಗಿ ಶಾಲೆಗಳು ಬಾಗಿಲು ಮುಚ್ಚಿವೆ ಎಂದೂ ಹೇಳಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಖಾಸಗಿ ಶಾಲೆಗಳ ನೋಂದಣಿ ನವೀಕರಣ, ಹೊಸ ಶಾಲೆಗಳ ಅನುಮತಿ, ವರ್ಗಗಳ ಮಾನ್ಯತೆ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, ಇದರಿಂದ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಹಾಗೂ ಅಲ್ಲಿಯ ಶಾಲೆಗಳ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಖಾಸಗಿ ಹೊಸ ಶಾಲೆಗಳನ್ನು ತೆರೆಯಲು ಹಾಗೂ ಈಗಿದ್ದ ಶಾಲೆಗಳನ್ನು ಉನ್ನತೀಕರಿಸುವ ಸಂಘ ಸಂಸ್ಥೆಗಳು ನೋಂದಣಿ ಮಾಡಿಕೊಳ್ಳಲು ಸರ್ಕಾರ ಈ ಹಿಂದೆ ಆದೇಶ ಹೊರಡಿಸಿತ್ತು. ಜನವರಿ-ಏಪ್ರಿಲ್‌ವರೆಗೆ ಅವಕಾಶ ನೀಡಿದ್ದರು. ಆಗ ಅರ್ಜಿ ಸಲ್ಲಿಸಿದವರಿಗೆ ಶಿಕ್ಷಣ ಇಲಾಖೆ ವಿವಿಧ ಹಂತದ ಅಧಿಕಾರಿಗಳು ಬಂದು ಅರ್ಜಿ ಮತ್ತು ಸ್ಥಳ ಪರಿಶೀಲನೆ ಮಾಡಿದರು. ಆ ಸಮಯದಲ್ಲಿ ಕೆಲವರಿಗೆ ಸರಿಯಾದ ಮಾಹಿತಿ ನೀಡಲಿಲ್ಲ. ಒಮ್ಮಿಂದೊಮ್ಮೆಲೆ ಕೆಲವು ದಾಖಲೆಗಳು ನೀಡಲು ಲಿಖಿತ ಆದೇಶ ನೀಡಿದರು. ಆಗ ಆನ್‌ಲೈನ್ ಅರ್ಜಿ ಸಲ್ಲಿಸುವ ಅವಕಾಶ ಮುಗಿದು ಹೋಗಿತ್ತು.
ಕಳೆದ ವರ್ಷ ರಾಜ್ಯದಲ್ಲಿ ಶಾಲಾ ಪ್ರವೇಶ ಕುಸಿತ
ಪುನಃ ಜೂನ್ 22ರಂದು ಹೊಸ ಆದೇಶ ಹೊರಡಿಸಿ ಜೂನ್ 29ರವರೆಗೂ ದಿನಾಂಕ ವಿಸ್ತರಣೆ ಮಾಡಿ ಯಾವ ಸಂಘ ಸಂಸ್ಥೆಗಳು ಅಪೂರ್ಣ ಮಾಹಿತಿ ಸಲ್ಲಿಸಿವೆಯೋ ಅವರು ಜೂನ್ 29ರ ಒಳಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ (ಆಡಳಿತ) ಮತ್ತೊಮ್ಮೆ ತಂತ್ರಾಂಶದ ಮೂಲಕ ಮಾಹಿತಿ ನೀಡಿ ಸರಿಪಡಿಸಲು ಅವಕಾಶ ನೀಡಿತ್ತು. ಆದರೆ, ಈ ಅವಧಿಯಲ್ಲಿ ಶಿಕ್ಷಣ ಇಲಾಖೆಯ ತಂತ್ರಾಂಶ ಸರಿಹೋಗದೆ ನಿರ್ಲಿಪ್ತವಾಗಿ ಇರುವುದರಿಂದ ಯಾವುದೇ ಖಾಸಗಿ ಶಾಲೆಗಳಿಗೆ ಈ ಆದೇಶದಿಂದ ಅನುಕೂಲವಾಗಿಲ್ಲ. ಇದರಿಂದಾಗಿ ಅವಕಾಶ ನೀಡಿದಂತೆ ಮಾಡಿ ಅವಕಾಶ ವಂಚಿತರನ್ನಾಗಿ ಮಾಡಿತು ಎಂಬ ಆರೋಪ ಅರ್ಜಿದಾರರಿಂದ ಕೇಳಿಬಂತು. ಇದುವರೆಗೆ ಈ ತಂತ್ರಾಂಶ ಸರಿಯಾಗಿಲ್ಲ.
ಹಲವಾರು ಖಾಸಗಿ ಶಾಲೆಗಳು ತಮಗೆ ಮುಂದಿನ ವರ್ಗಗಳಿಗೆ ಅನುಮತಿ ಸಿಗುತ್ತದೆ ಎಂದು ತಮ್ಮಲ್ಲಿ ಅಭ್ಯಸಿಸಿದ ವಿದ್ಯಾರ್ಥಿಗಳನ್ನು ಅಲ್ಲಿಯೇ ಮುಂದುವರಿಸಿದ್ದಾರೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ಕೆಲವು ಶಾಲೆಗಳಿಗೆ ಅನುಮತಿ ದೊರೆಯದ ಕಾರಣ ಆ ಮಕ್ಕಳ ಪರಿಸ್ಥಿತಿ ಅತಂತ್ರವಾಗಿದೆ. ಕೋವಿಡ್ ಪರಿಣಾಮ ಖಾಸಗಿ ಶಾಲೆಗಳು ಅನುಭವಿಸಿದ ಆರ್ಥಿಕ ಪರಿಸ್ಥಿತಿ ನೋಡಿ ಹೆಚ್ಚಿನ ಸಂಖ್ಯೆಯ ಹೊಸ ಖಾಸಗಿ ಶಾಲೆಗಳ ನೋಂದಣಿಗಾಗಿ ಸಂಘ-ಸಂಸ್ಥೆಗಳು ಅರ್ಜಿ ಸಲ್ಲಿಸಲು ಮುಂದೆ ಬಂದಿಲ್ಲ. ಈ ತಂತ್ರಜ್ಞಾನದಿಂದ ಇದ್ದ ಶಾಲೆಗಳಿಗೆ ತಮ್ಮ ಮುಂದಿನ ವರ್ಗಗಳಿಗೆ ಅನುಮತಿ ಸಿಗುತಿಲ್ಲ.
ಬಡಮಕ್ಕಳಿಗೆ ಗುಡ್ ನ್ಯೂಸ್ ಬೆಂಗಳೂರಿನಲ್ಲಿ ಸಂಜೆ ಶಾಲೆ ಆರಂಭ
ಗ್ರಾಮೀಣ ಭಾಗದ ಖಾಸಗಿ ಶಿಕ್ಷಣ ಸಂಸ್ಥೆಗಳು ಅತಿ ಕಡಿಮೆ ಶುಲ್ಕ ಪಡೆದು ಸಂಸ್ಥೆಗಳನ್ನು ನಿರ್ವಹಿಸಿಕೊಂಡು ಹೋಗುತ್ತಿವೆ. ಸರ್ಕಾರ ಯಾವುದೇ ನಿಯಮ ತಂದರೂ ಅದು ಶಾಪವಾಗದಂತೆ ನೋಡಿಕೊಳ್ಳುವುದು ಅವಶ್ಯಕವಾಗಿದೆ. ಈಗಲಾದರೂ ಶಿಕ್ಷಣ ಇಲಾಖೆ ಎಚ್ಚೆತ್ತುಕೊಂಡು ಹೊಸ ಆದೇಶ ಹೊರಡಿಸಿ ತಂತ್ರಾಂಶ ಸರಿಪಡಿಸಿದರೆ ಹೊಸ ಖಾಸಗಿ ಶಾಲೆಗಳನ್ನು ತೆರೆಯುವವರೆಗೆ ಹಾಗೂ ಉನ್ನತೀಕರಿಸುವವರಿಗೆ ಪ್ರಯೋಜನವಾಗುತ್ತದೆ.
ತಂತ್ರಾಂಶದ ಲೋಪದಿಂದಾಗಿ ಅನೇಕ ಸಂಘ-ಸಂಸ್ಥೆಗಳಿಗೆ ಹೊಸ ಶಾಲೆಗಳ ನೋಂದಣಿ ಹಾಗೂ ಉನ್ನತೀಕರಿಸುವ ಕಾರ್ಯವಾಗಿಲ್ಲ. ದಿನಾಂಕ ವಿಸ್ತರಣೆ ಮಾಡಿ ಅಧಿಕಾರಿಗಳು ಹಳೆಯ ಪದ್ದತಿಯಂತೆ ಅರ್ಜಿ ಪ್ರಕ್ರಿಯೆ ಮಾಡಬೇಕು. ಇಲ್ಲವೇ ತಂತ್ರಾಂಶ ಬೇಗನೆ ಸರಿಪಡಿಸಬೇಕು. ಈ ಕುರಿತು ಶಿಕ್ಷಣ ಸಚಿವರ ಹಾಗೂ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೂ ತರಲಾಗುವುದು. ಈಗ ಹಳೆ ಶಾಲೆಯಲ್ಲಿ ಮುಂದಿನ ವರ್ಗಕ್ಕೆ ಅನುಮತಿ ಸಿಕ್ಕಲ್ಲವಾಗಿದ್ದರಿಂದ ಮಾನವೀಯತೆ ದೃಷ್ಟಿಯಿಂದ ಅವುಗಳಿಗೆ ತಕ್ಷಣ ಅನುಮತಿ ನೀಡಬೇಕು ಅಂತ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.