ಪಿಯು ಕಾಲೇಜುಗಳಲ್ಲಿ ಡಿಸೆಂಬರ್‌ ಬಳಿಕ NEP ಪಠ್ಯಕ್ರಮ: BC Nagesh

By Suvarna NewsFirst Published Jul 3, 2022, 12:14 PM IST
Highlights

ಮಂಗಳೂರಲ್ಲಿ ಪಿಯು ಕಾಲೇಜು ಪ್ರಾಂಶುಪಾಲರ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಕಾರ್ಯಾಗಾರ ಸಮಾರೋಪದಲ್ಲಿ ಭಾಗವಹಿಸಿದ ಸಚಿವ ಬಿಸಿ ನಾಗೇಶ್  ಪಿಯು ಕಾಲೇಜುಗಳಲ್ಲಿ ಡಿಸೆಂಬರ್‌ ಬಳಿಕ ಇನ್‌ಇಪಿ ಪಠ್ಯಕ್ರಮ ಎಂದು ಮಾಹಿತಿ ನೀಡಿದ್ದಾರೆ.

ಮಂಗಳೂರು (ಜು.3): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯಡಿ ರಾಜ್ಯದಲ್ಲಿ ಪದವಿ ಪೂರ್ವ ತರಗತಿಗಳಿಗೆ ಪಠ್ಯ ಕ್ರಮವನ್ನು ಡಿಸೆಂಬರ್‌ ಅಂತ್ಯದ ವೇಳೆಗೆ ಅಂತಿಮಗೊಳಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್‌ ಹೇಳಿದ್ದಾರೆ.

ಮಂಗಳೂರು ನಗರದ ಶಕ್ತಿ ಪಿಯು ಕಾಲೇಜಿನಲ್ಲಿ ದ.ಕ. ಪ್ರಾಂಶುಪಾಲರ ಸಂಘ, ಚಾಣಕ್ಯ ವಿವಿ ಹಾಗೂ ವಿದ್ಯಾಭಾರತಿ ಆಶ್ರಯದಲ್ಲಿ ಶನಿವಾರ ಜಿಲ್ಲಾ ಪಿಯು ಕಾಲೇಜುಗಳ ಪ್ರಾಂಶುಪಾಲರಿಗೆ ಏರ್ಪಡಿಸಿದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಕುರಿತ ಕಾರ್ಯಾಗಾರ ಸಮಾರೋಪದಲ್ಲಿ ಅವರು ಮಾತನಾಡಿದರು.

ಈಗಾಗಲೇ 1ರಿಂದ 12ನೇ ತರಗತಿ ವರೆಗಿನ ಪಠ್ಯಕ್ರಮವನ್ನು ಬೇರೆ ರಾಜ್ಯಗಳಲ್ಲಿ ಅಳವಡಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಹಂತ ಹಂತವಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಪಿಯು ತರಗತಿಗಳಿಗೆ ಹೊಸ ಶಿಕ್ಷಣ ನೀತಿಯಡಿ ಪಠ್ಯಕ್ರಮ ಅಳವಡಿಸಿ ಡಿಸೆಂಬರ್‌ ವೇಳೆಗೆ ಅಂತಿಮಗೊಳಿಸಿ ನಂತರ ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನ: ಚಿತ್ರದುರ್ಗಕ್ಕೆ ಈ ಸ್ಥಿತಿ ಬರಲು ಅಧಿಕಾರಿಗಳೇ ಕಾರಣ..!

ಸಲಹೆಗೆ ಮತ್ತೆ ಅವಕಾಶ: ಹೊಸ ಶಿಕ್ಷಣ ನೀತಿ ಜಾರಿಗೆ ತರಬೇಕಾದರೆ ಪಿಯು ಉಪನ್ಯಾಸಕರಿಂದಲೂ ಅಮೂಲ್ಯ ಸಲಹೆ ಕೇಳಲಾಗಿತ್ತು. ಆದರೆ ಅದು ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಹಾಗಾಗಿ ಶಿಕ್ಷಣ ಇಲಾಖೆಯ ಪೋರ್ಟಲ್‌ನಲ್ಲಿ ಇನ್ನೂ ಸಲಹೆ ನೀಡಲು ಅವಕಾಶ ಇದೆ. ಉಪನ್ಯಾಸಕರು ನೀಡುವ ಸಲಹೆಗಳನ್ನು ಪರಿಶೀಲಿಸಿ ಉತ್ತಮವಾಗಿದ್ದರೆ, ಅದನ್ನು ಕಾಲಕಾಲಕ್ಕೆ ಅಳವಡಿಸಿಕೊಳ್ಳಲಾಗುವುದು ಎಂದರು.

ಇದುವರೆಗಿನ ಶಿಕ್ಷಣ ಕ್ರಮ ಕೇವಲ ಕೆಲಸಕ್ಕಾಗಿ ಓದುವಿಕೆ ಎಂಬಂತಾಗಿದೆ. ಓದಿದ ಬಳಿಕ ತರಗತಿಯಲ್ಲಿ ಕಲಿತ ವಿಚಾರ ಉದ್ಯೋಗಕ್ಕೆ ನೆರವಾಗುವುದಿಲ್ಲ. ಬದಲು ಆಯಾ ಕಂಪನಿಗಳು ನೀಡುವ ತರಬೇತಿಯೇ ಉದ್ಯೋಗಕ್ಕೆ ನೆರವಾಗುತ್ತದೆ. ಹಾಗಾಗಿ ಕಳೆದ 75 ವರ್ಷಗಳಿಂದ ದೇಶದ ಶಿಕ್ಷಣ ವ್ಯವಸ್ಥೆ ಸ್ವತಂತ್ರ ಉದ್ಯೋಗಕ್ಕೆ ನೆರವಾಗುತ್ತಿಲ್ಲ. ಪರಾವಲಂಬಿ ಬದುಕು ಸೃಷ್ಟಿಸುವ ರೀತಿಯ ಶಿಕ್ಷಣ ನೀಡಲಾಗುತ್ತಿದೆ. ದೇಶದಲ್ಲಿ ಐಐಟಿ ಸೇರ್ಪಡೆಗೆ ಸಂಶೋಧನಾ ಆಸಕ್ತ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ. ಇದು ಯುವ ಸಮುದಾಯವನ್ನು ಸ್ವಉದ್ಯೋಗ ಹಾಗೂ ದೇಶದ ಬಗೆಗಿನ ಚಿಂತನೆಯಿಂದ ದೂರ ಮಾಡುತ್ತಿದೆ. ಇಂತಹ ಶಿಕ್ಷಣದಿಂದ ಸಮಾಜ ಹಾಗೂ ದೇಶಕ್ಕೆ ಪ್ರಯೋಜನ ಇಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಹೊಸ ಶಿಕ್ಷಣ ನೀತಿ ಜಾರಿಗೆ ತಂದಿದೆ ಎಂದರು.

ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್‌ನ್ಯೂಸ್, ಶಾಲಾ ಬಸ್ ಖರೀದಿಗೆ ಸರಕಾರ ಒಪ್ಪಿಗೆ

ನೇಮಕಾತಿ ನಿಯಮ ಬದಲಾವಣೆ ಸಂಭವ: ಹೊಸ ಶಿಕ್ಷಣ ನೀತಿಯಡಿ ಶಿಕ್ಷಣ ನೀಡುವಾಗ ಶಿಕ್ಷಕರ ನೇಮಕಾತಿಯಲ್ಲೂ ಭವಿಷ್ಯದಲ್ಲಿ ಬದಲಾವಣೆ ತರಬೇಕಾದ ಅಗತ್ಯ ಬರಬಹುದು ಎಂದು ಸಚಿವ ನಾಗೇಶ್‌ ಹೇಳಿದರು.

ತಕ್ಷಣಕ್ಕೆ ವೃಂದ ಮತ್ತು ನೇಮಕಾತಿಗೆ ಬದಲಾವಣೆ ತರುವುದಿಲ್ಲ. ಪ್ರಸಕ್ತ ಶಿಕ್ಷಕರನ್ನು ತರಬೇತಿ ನೀಡಿ ಹೊಸ ಶಿಕ್ಷಣ ನೀತಿಗೆ ಹೊಂದಿಕೊಳ್ಳುವಂತೆ ಮಾಡಲಾಗುವುದು. ಈ ಬಗ್ಗೆಯೂ ಚರ್ಚೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಅವಶ್ಯವಾದರೆ ನೇಮಕಾತಿ ನಿಯಮಕ್ಕೆ ತಿದ್ದುಪಡಿ ತಂದು ಜಾರಿಗೊಳಿಸಲಾಗುವುದು ಎಂದರು.

ಕಲಿಕೆ ಜತೆಗೆ ಕೌಶಲ್ಯಕ್ಕೂ ಆದ್ಯತೆ: ಹೊಸ ಶಿಕ್ಷಣ ನೀತಿಯನ್ವಯ ಕಲಿಕೆ ಜತೆಗೆ ಕೌಶಲ್ಯಕ್ಕೂ ಉತ್ತೇಜನ ನೀಡಲಾಗುತ್ತದೆ. ಕಲಿಕಾ ಅವಧಿಯನ್ನೂ ಪರಿಷ್ಕರಿಸಲಾಗಿದೆ. ಕೇವಲ ಉದ್ಯೋಗಕ್ಕೆ ಸೀಮಿತವಾಗುವ ಓದುವಿಕೆ ಆಗದೆ ಸ್ವಂತ ಉದ್ಯೋಗ, ಸಮಾಜಸೇವೆಗೆ ಪೂರಕವಾಗುವ ಶಿಕ್ಷಣದ ಅಗತ್ಯವಿದೆ. ಇದನ್ನು ಪರಿಷ್ಕೃತ ಪಠ್ಯಕ್ರಮದಲ್ಲಿ ಕಾಣಬಹುದಾಗಿದೆ ಎಂದು ಸಚಿವ ನಾಗೇಶ್‌ ಹೇಳಿದರು.

ಬ್ರಿಟಿಷರು ಭಾರತಕ್ಕೆ ಕಾಲಿಟ್ಟಬಳಿಕ ಶಿಕ್ಷಣದಿಂದ ತೊಡಗಿ ಎಲ್ಲದರಲ್ಲೂ ಪರಾವಲಂಬಿಯಾಗುವಂತೆ ಮಾಡಿದರು. ಇದರಿಂದಾಗಿ ವ್ಯಕ್ತಿ ಸ್ವಂತ ಆಲೋಚನೆ, ಕೆಲಸದ ಧೈರ್ಯವನ್ನೇ ಕಳೆದುಕೊಳ್ಳುವಂತಾಯಿತು. ಅದನ್ನು ಈಗ ಹೊಸ ಶಿಕ್ಷಣ ಪದ್ಧತಿ ಮೂಲಕ ಸರಿಪಡಿಸುವ ಕೆಲಸ ಆರಂಭವಾಗಿದೆ ಎಂದರು.

ಸಂಪನ್ಮೂಲ ವ್ಯಕ್ತಿ ಡಾ.ಗೌರೀಶ್‌, ಪಿಯು ಉಪನಿರ್ದೇಶಕ ಜಯಣ್ಣ, ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕ ಸುಧಾಕರ್‌, ಉಪನಿರ್ದೇಶಕಿ ಅಭಿವೃದ್ಧಿ ವಿಭಾಗ ರಾಜಲಕ್ಷ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಶಾಂತ್‌, ಜಿಲ್ಲಾ ಪಿಯು ಪ್ರಾಂಶುಪಾಲರ ಸಂಘ ಅಧ್ಯಕ್ಷ ಗಂಗಾಧರ್‌, ಪದಾಧಿಕಾರಿಗಳಾದ ವಿನಾಯಕ್‌, ಯೂಸುಫ್‌, ಕವಿತಾ, ವೆಂಕಟೇಶ್‌, ಶಕ್ತಿ ಕಾಲೇಜು ಆಡಳಿತಾಧಿಕಾರಿ ರಮೇಶ್‌ ಇದ್ದರು.

ಎರಡು ದಿನಗಳ ಈ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲೆಯ 180 ಪಿಯು ಕಾಲೇಜುಗಳ ಸುಮಾರು 200 ಮಂದಿ ಪ್ರಾಂಶುಪಾಲ, ಹಿರಿಯ ಉಪನ್ಯಾಸಕರು ಇದ್ದರು.

ಕಯ್ಯಾರ, ನಾರಾಯಣಗುರು ಪಠ್ಯ ಕೈಬಿಟ್ಟಿಲ್ಲ: ರಾಜ್ಯ ಸರ್ಕಾರ ಪರಿಷ್ಕೃತ ಪಠ್ಯಕ್ರಮದಲ್ಲಿ ಗಡಿನಾಡ ಹಿರಿಯ ಕವಿ ಕಯ್ಯಾರ ಕಿಂಞಣ್ಣ ರೈ ಹಾಗೂ ದಾರ್ಶನಿಕ ನಾರಾಯಣಗುರುಗಳ ಪಾಠವನ್ನು ಕೈಬಿಟ್ಟಿಲ್ಲ. ನಾರಾಯಣಗುರುಗಳ ಬಗ್ಗೆ 5ನೇ ತರಗತಿಯಲ್ಲಿ ಹಿಂದಿಗಿಂತಲೂ ವಿಸ್ತೃತವಾಗಿ ಕಲಿಸಲಾಗುತ್ತದೆ. ಕಯ್ಯಾರರ ವಿಚಾರವನ್ನೂ ಕೈಬಿಟ್ಟಿಲ್ಲ. ಶಿಕ್ಷಣ ಇಲಾಖೆ ಪ್ರಕಟಿಸಿದ ತಜ್ಞರ ಸಮಿತಿಗಳ ಪಠ್ಯಪುಸ್ತಕಗಳ ಪಿಡಿಎಫ್‌ ಪ್ರತಿಯಲ್ಲಿ ಇದನ್ನು ಪರಿಶೀಲಿಸಬಹುದು. ಹೊಸ ಪಠ್ಯಕ್ರಮ ಅಳವಡಿಸುವಾಗ ತಪ್ಪುಗಳಾಗಿದ್ದಲ್ಲಿ ಸರಿಪಡಿಸಲಾಗುವುದು ಎಂದು ಸಚಿವ ನಾಗೇಶ್‌ ಸುದ್ದಿಗಾರರಲ್ಲಿ ಸ್ಪಷ್ಟಪಡಿಸಿದರು.

click me!