ಒಂದೇ ದಿನ ಕುವೆಂವು ವಿವಿ 2 ಘಟಿಕೋತ್ಸವ: ಇತಿಹಾಸದಲ್ಲೇ ಇದೇ ಮೊದಲು..!

By Kannadaprabha News  |  First Published Jun 11, 2022, 2:50 PM IST

*  ರಾಜ್ಯಪಾಲರ ಅನುಮತಿ
*  2019-20, 2020-21ನೇ ಸಾಲಿನ ಘಟಿಕೋತ್ಸವಕ್ಕೆ ಸಕಲ ಸಿದ್ಧತೆ
*  ನಿಟ್ಟುಸಿರು ಬಿಟ್ಟ ವಿದ್ಯಾರ್ಥಿಗಳು 


ಶಿವಮೊಗ್ಗ(ಜೂ.11): ಕೊರೋನಾ ಹಾವಳಿ ಹಾಗೂ ಅತಿಥಿಗಳ ಸಮಯ ಹೊಂದಾಣಿಕೆ ಸಾಧ್ಯವಾಗದ ಕಾರಣ ನನೆಗುದಿಗೆ ಬಿದ್ದಿದ್ದ ಎರಡು ಶೈಕ್ಷಣಿಕ ಘಟಿಕೋತ್ಸವಗಳನ್ನು ಈಗ ಒಂದೇ ದಿನ ನಡೆಸಲು ಕುವೆಂಪು ವಿಶ್ವವಿದ್ಯಾಲಯ ಮುಂದಾಗಿದೆ!

2019-20, 2020-21ನೇ ಸಾಲಿನ ಘಟಿಕೋತ್ಸವವನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. ಅತಿಥಿಯಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಆಹ್ವಾನಿಸಲಾಗಿತ್ತು. ಆದರೆ, ಅವರು ದಿನಾಂಕವನ್ನು ಮುಂದೂಡಿದ್ದ ಕಾರಣ ಘಟಿಕೋತ್ಸವವನ್ನು ರದ್ದುಪಡಿಸಲಾಗಿತ್ತು. ಅನಂತರ ದಿನಾಂಕ ಹೊಂದಾಣಿಕೆ ಆಗದೇ ಘಟಿಕೋತ್ಸವ ಮುಂದೂಡುತ್ತಲೇ ಬಂದಿದ್ದರು.

Tap to resize

Latest Videos

ಜೈಲಲ್ಲಿ ಶಿಕ್ಷೆಯೊಂದಿಗೆ ಶಿಕ್ಷಣ ಮುಂದುವರಿಕೆ: ಐವರು ಕೈದಿಗಳಿಗೆ ಕುವೆಂಪು ವಿವಿ ಪದವಿ ಕಿರೀಟ..!

ಈಗ ಕುವೆಂಪು ವಿವಿ ಘಟಿಕೋತ್ಸವ ಕೊನೆಗೂ ಜೂನ್‌ 16ರಂದು ನಡೆಸಲು ದಿನಾಂಕ ನಿಗದಿಯಾಗಿದೆ. ಎರಡೂ ಶೈಕ್ಷಣಿಕ ವರ್ಷಗಳ ಘಟಿಕೋತ್ಸವನ್ನು ಒಂದೇ ದಿನ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯಪಾಲರ ಅನುಮತಿ ಮೇರೆಗೆ 31 ಮತ್ತು 32ನೇ ಘಟಿಕೋತ್ಸವವನ್ನು ಒಟ್ಟಿಗೆ ಆಯೋಜಿಸಲಾಗುತ್ತಿದೆ. ಕುವೆಂಪು ವಿವಿ ಇತಿಹಾಸದಲ್ಲಿ ಈ ರೀತಿ ಒಂದೇ ದಿನ ಎರಡು ಘಟಿಕೋತ್ಸವ ನಡೆಯುತ್ತಿರುವುದು ಇದೇ ಮೊದಲು.

31 ಮತ್ತು 32ನೇ ಘಟಿಕೋತ್ಸವ ಎರಡು ವರ್ಷಗಳಿಂದ ನಡೆಯದ ಕಾರಣ ಪದವಿ, ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪ್ರಮಾಣ ಪತ್ರ ದೊರೆಯದೇ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಒಂದೇ ದಿನ ಎರಡು ಘಟಿಕೋತ್ಸವಗಳನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಪರೀಕ್ಷೆ ಇಲ್ಲದೇ ಕುವೆಂಪು ವಿವಿ ವಿದ್ಯಾರ್ಥಿಗಳು ಪಾಸ್‌: ಹೈಕೋರ್ಟ್‌ ಅಸ್ತು

ಅಂದಾಜು 45 ಸಾವಿರ ವಿದ್ಯಾರ್ಥಿಗಳು:

ಎರಡು ವರ್ಷಗಳ ಹಿಂದೆ ಕೋವಿಡ್‌ ಮಧ್ಯೆಯೂ ವಿಶ್ವವಿದ್ಯಾಲಯ 2018- 19ನೇ ಸಾಲಿನ ವಿದ್ಯಾರ್ಥಿಗಳಿಗೆ 2020ರ ಜುಲೈ 29ರಂದು ಘಟಿಕೋತ್ಸವ ನಡೆಸಿತ್ತು. ಆದರೆ, ಇದಾದ ಬಳಿಕ 2019- 20, 2020- 21ನೇ ಸಾಲಿನ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಆಯೋಜಿಸಿಲ್ಲ. 2019- 20ನೇ ಸಾಲಿನಲ್ಲಿ 24 ಸಾವಿರ ವಿದ್ಯಾರ್ಥಿಗಳು, 20-21ನೇ ಸಾಲಿನಲ್ಲಿ 21 ಸಾವಿರ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಿದ್ದು, ಘಟಿಕೋತ್ಸವಕ್ಕಾಗಿ ಕಾಯುತ್ತಿದ್ದಾರೆ.

ನಿಟ್ಟುಸಿರು ಬಿಟ್ಟ ವಿದ್ಯಾರ್ಥಿಗಳು:

ಪದವಿ ಮುಗಿಸಿ ಎರಡು ವರ್ಷಗಳಾದರೂ ಪದವಿ ಪ್ರಮಾಣಪತ್ರ ಸಿಗದ ಕಾರಣ ವಿವಿಧ ಹುದ್ದೆಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಆರ್ಹತೆ ಇದ್ದರೂ ಅರ್ಜಿ ಸಲ್ಲಿಸಲು ಆಗದೇ ತ್ರಿಶಂಕು ಸ್ಥಿತಿ ಅನುಭವಿಸುವಂತಾಗಿದೆ. ಯಾವುದೇ ಹುದ್ದೆ, ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಪದವಿ ಪ್ರಮಾಣಪತ್ರ ಕಡ್ಡಾಯ. ಕುವೆಂಪು ವಿಶ್ವವಿದ್ಯಾಲಯ ಎರಡು ಶೈಕ್ಷಣಿಕ ವರ್ಷಗಳ ಘಟಿಕೋತ್ಸವ ಆಯೋಜಿಸದೇ ಇರುವುದರಿಂದ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಅತಿಥಿಗಳು ಬಾರದ ಕಾರಣಕ್ಕೆ ಘಟಿಕೋತ್ಸವ ಮುಂದೂಡುತ್ತಿರುವುದು ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಿದಂತಾಗಿತ್ತು. ಈಗಲಾದರೂ ಘಟಿಕೋತ್ಸವ ಆಯೋಜಿಸುತ್ತಿರುವ ವಿಚಾರ ತಿಳಿದು ವಿದ್ಯಾರ್ಥಿಗಳು ನಿಟ್ಟಿಸಿರು ಬಿಟ್ಟಿದ್ದಾರೆ.

click me!