ನೂರಾರು ಆರ್‌ಟಿಇ ಸೀಟ್‌ಗಳು ಖಾಲಿ ಖಾಲಿ..!

By Kannadaprabha NewsFirst Published Jun 11, 2022, 12:31 PM IST
Highlights

*  ಕಾಯ್ದೆ ತಿದ್ದುಪಡಿ ಬಳಿಕ ಆರ್‌ಟಿಇ ದಾಖಲಾತಿ ಗಣನೀಯ ಕುಸಿತ
*  ದಕ್ಷಿಣ ಕನ್ನಡದಲ್ಲಿ 479ರಲ್ಲಿ ಭರ್ತಿಯಾದದ್ದು 45
*  ಗ್ರಾಮಾಂತರದಲ್ಲಿ ಶೂನ್ಯ 
 

ಸಂದೀಪ್‌ ವಾಗ್ಲೆ

ಮಂಗಳೂರು(ಜೂ.11): ಹದಿನಾಲ್ಕು ವರ್ಷದೊಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಒದಗಿಸುವ ಉದ್ದೇಶದಿಂದ ಜಾರಿಗೊಳಿಸಲಾದ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)ಯ ತಿದ್ದುಪಡಿಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ಹಂಚಿಕೆಯಾದ 400ಕ್ಕೂ ಅಧಿಕ ಆರ್‌ಟಿಇ ಸೀಟ್‌ಗಳು ಭರ್ತಿಯಾಗದೆ ಖಾಲಿ ಬೀಳುವಂತಾಗಿದೆ.

2010ರಲ್ಲಿ ಆರ್‌ಟಿಇ ಕಾಯ್ದೆ ಜಾರಿಯಾದ ಬಳಿಕ ಖಾಸಗಿ ಶಾಲೆಗಳಲ್ಲಿ ಶೇ.25 ಸೀಟುಗಳನ್ನು ಮೀಸಲಿಡಲಾಗುತ್ತಿತ್ತು. ದ.ಕ. ಜಿಲ್ಲೆಯಲ್ಲೇ 2 ಸಾವಿರಕ್ಕೂ ಅಧಿಕ ಸೀಟು ಹಂಚಿಕೆಯಾಗುತ್ತಿದ್ದು, ಸಾವಿರಾರು ಅರ್ಜಿಗಳು ಬರುತ್ತಿದ್ದವು. ಆರ್‌ಟಿಇ ಸೀಟು ಪಡೆಯಲು ತೀವ್ರ ಪೈಪೋಟಿ ನಡೆಯುತ್ತಿತ್ತು. ಆದರೆ 2019ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದ ಬಳಿಕ ಹಂಚಿಕೆಯಾಗುವ ಸೀಟ್‌ಗಳ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಅರ್ಜಿಗಳು ಕೂಡ ಬೆರಳೆಣಿಕೆಗೆ ಇಳಿದಿದೆ. ಹೀಗಾಗಿ ಪ್ರತಿ ಜಿಲ್ಲೆಯಲ್ಲೂ ನೂರಾರು ಸೀಟ್‌ಗಳು ಖಾಲಿ ಉಳಿಯುತ್ತಿವೆ.

Uttara Kannada; ರಾಜ್ಯಕ್ಕೆ ಮಾದರಿ ಈ ಕೃಷಿ ಪಾಠದ ಶಾಲೆ!

45 ಮಾತ್ರ ದಾಖಲು!: 

ದಕ್ಷಿಣ ಕನ್ನಡ ಜಿಲ್ಲೆಗೆ ಆರ್‌ಟಿಇ ಕಾಯ್ದೆಯಡಿ 479 ಸೀಟುಗಳನ್ನು ಈ ಶೈಕ್ಷಣಿಕ ವರ್ಷಕ್ಕೆ ಕಾಯ್ದಿರಿಸಲಾಗಿದೆ. ಅದಕ್ಕಾಗಿ 94 ಶಾಲೆಗಳನ್ನು ಆಯ್ಕೆ ಮಾಡಲಾಗಿತ್ತು. ಅರ್ಜಿ ಸಲ್ಲಿಕೆಗೆ ಮಾ.15ಕ್ಕೆ ಕೊನೆ ದಿನಾಂಕ ನಿಗದಿಗೊಳಿಸಲಾಗಿತ್ತು. ಶಾಲೆ ದಾಖಲಾತಿಗಾಗಿ ಇದುವರೆಗೆ ನಡೆದ 2 ಆಯ್ಕೆ ಸುತ್ತುಗಳಲ್ಲಿ ಕೇವಲ 45 ವಿದ್ಯಾರ್ಥಿಗಳು ಮಾತ್ರ ಶಾಲೆಗಳಲ್ಲಿ ಪ್ರವೇಶ ಪಡೆದಿದ್ದಾರೆ. ಬರೋಬ್ಬರಿ 434 ಸೀಟುಗಳು ಖಾಲಿಯೇ ಉಳಿದಿವೆ.

ಮೊದಲ ಆಯ್ಕೆ ಸುತ್ತಿನಲ್ಲಿ ಹಂಚಿಕೆಯಾದ 59 ಸೀಟುಗಳಲ್ಲಿ 38 ವಿದ್ಯಾರ್ಥಿಗಳು ಶಾಲೆಗಳಿಗೆ ಪ್ರವೇಶ ಪಡೆದಿದ್ದರೆ, ಎರಡನೇ ಹಂತದಲ್ಲಿ ಒಂಬತ್ತು ಸೀಟುಗಳನ್ನು ಹಂಚಿಕೆ ಮಾಡಲಾಗಿದ್ದು, ಏಳು ವಿದ್ಯಾರ್ಥಿಗಳಷ್ಟೇ ಪ್ರವೇಶ ಪಡೆದಿದ್ದಾರೆ. ಮೂರನೇ ಸುತ್ತಿನ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಆದರೆ ಶಾಲೆಗಳು ಆರಂಭವಾಗಿ ಕೆಲವು ವಾರಗಳೇ ಕಳೆದಿರುವುದರಿಂದ ಇನ್ನು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಆರ್‌ಟಿಇ ಅಡಿ ಪ್ರವೇಶ ಪಡೆಯುವ ಸಾಧ್ಯತೆ ಕ್ಷೀಣಿಸಿದೆ.

ಗ್ರಾಮಾಂತರದಲ್ಲಿ ಶೂನ್ಯ!: 

ಗಮನಾರ್ಹ ಅಂಶವೆಂದರೆ, ಆರ್‌ಟಿಇ ಅಡಿಯಲ್ಲಿ ಜಿಲ್ಲೆಯ ಗ್ರಾಮಾಂತರದ ನಾಲ್ಕು ತಾಲೂಕುಗಳಲ್ಲಿ ಶೂನ್ಯ ದಾಖಲಾತಿ ಆಗಿದೆ. ಬಂಟ್ವಾಳದಲ್ಲಿ 81, ಬೆಳ್ತಂಗಡಿಯಲ್ಲಿ 44, ಪುತ್ತೂರಲ್ಲಿ 36, ಸುಳ್ಯದಲ್ಲಿ 25 ಸೀಟ್‌ಗಳನ್ನು ಹಂಚಿಕೆ ಮಾಡಲಾಗಿದ್ದರೂ ಯಾರೊಬ್ಬ ವಿದ್ಯಾರ್ಥಿಗೂ ಪ್ರವೇಶ ಪಡೆಯಲು ಸಾಧ್ಯವಾಗಿಲ್ಲ. ಮಂಗಳೂರು ಉತ್ತರದಲ್ಲಿ ಅತಿ ಹೆಚ್ಚು 30 ವಿದ್ಯಾರ್ಥಿಗಳು ದಾಖಲಾಗಿದ್ದರೆ, ಮಂಗಳೂರು ದಕ್ಷಿಣದಲ್ಲಿ 11, ಮೂಡುಬಿದಿರೆಯಲ್ಲಿ ನಾಲ್ಕು ಮಂದಿ ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದಾರೆ.

ಶಿಕ್ಷಣ ಸಚಿವರ ಮನೆಗೆ ನುಗ್ಗಿದವರು ವಿದ್ಯಾರ್ಥಿಗಳೇ ಅಲ್ಲ: Araga Jnanendra

ಕಳೆದ ವರ್ಷ ಇನ್ನೂ ಕಡಿಮೆ: 

2021ನೇ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಗೆ 421 ಆರ್‌ಟಿಇ ಸೀಟ್‌ಗಳನ್ನು 96 ಶಾಲೆಗಳಲ್ಲಿ ಹಂಚಿಕೆ ಮಾಡಲಾಗಿದ್ದರೂ, ಶಾಲೆಗೆ ದಾಖಲಾದ ವಿದ್ಯಾರ್ಥಿಗಳು ಕೇವಲ 35 ಮಾತ್ರ. ಮಂಗಳೂರು ಉತ್ತರ (26), ಮಂಗಳೂರು ದಕ್ಷಿಣ (9) ಬಿಟ್ಟರೆ ಬೇರೆ ಎಲ್ಲ ತಾಲೂಕುಗಳಲ್ಲಿ ಹಂಚಿಕೆಯಾದ ಎಲ್ಲ ಸೀಟ್‌ಗಳು ಖಾಲಿ ಉಳಿದಿದ್ದವು.

ಖಾಲಿ ಉಳಿಯೋದೇಕೆ?

ಆರ್‌ಟಿಇ ಕಾಯ್ದೆಗೆ 2019ರಲ್ಲಿ ತಿದ್ದುಪಡಿ ಮಾಡಿದ ಪ್ರಕಾರ ಮಗುವಿನ ಮನೆಯಿಂದ ಒಂದು ಕಿ.ಮೀ. ಸುತ್ತಳತೆಯಲ್ಲಿ ಯಾವುದೇ ಸರ್ಕಾರಿ ಅಥವಾ ಅನುದಾನಿತ ಶಾಲೆ ಇಲ್ಲದಿದ್ದರೆ ಮಾತ್ರ ಆರ್‌ಟಿಇ ಅಡಿಯಲ್ಲಿ ಖಾಸಗಿ ಶಾಲೆಗೆ ಉಚಿತ ಶಿಕ್ಷಣಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೀಗಾಗಿ ಬಹಳಷ್ಟುಶಾಲೆಗಳನ್ನು ಈ ಕಾಯ್ದೆಯಿಂದ ಹೊರಗಿಡಲಾಗಿದೆ. ಮಾತ್ರವಲ್ಲ, ಸೀಟು ಹಂಚಿಕೆಯನ್ನು ಕೂಡ ಗಮನಾರ್ಹವಾಗಿ ಇಳಿಲಾಗಿದೆ. ಕಾಯ್ದೆ ತಿದ್ದುಪಡಿಗಿಂತ ಮೊದಲು ಈ ನಿರ್ಬಂಧ ಇಲ್ಲದಿದ್ದುದರಿಂದ ಸೀಟ್‌ಗಳ ಸಂಖ್ಯೆಯೂ ಹೆಚ್ಚಿತ್ತು, ಸಾವಿರಾರು ಅರ್ಜಿಗಳೂ ಬರುತ್ತಿದ್ದವು. ಲಾಟರಿ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು.

click me!