ರಾಜ್ಯದ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸಾಮಾನ್ಯ ವರ್ಗದ ಕೋಟಾದಡಿ ಆಯ್ಕೆಯಾಗಿರುವ ಸಾವಿರಾರು ಪದವೀಧರ ಶಿಕ್ಷಕರಿಗೀಗ ಸಿಂಧುತ್ವ ಪ್ರಮಾಣ ಪತ್ರದ ಸಂಕಟ ಎದುರಾಗಿದೆ.
ಶಿವಕುಮಾರ ಉಪ್ಪಿನ
ವಿಜಯಪುರ (ನ.11): ರಾಜ್ಯದ ಹಿರಿಯ ಪ್ರಾಥಮಿಕ ಶಾಲೆಗಳಿಗೆ ಸಾಮಾನ್ಯ ವರ್ಗದ ಕೋಟಾದಡಿ ಆಯ್ಕೆಯಾಗಿರುವ ಸಾವಿರಾರು ಪದವೀಧರ ಶಿಕ್ಷಕರಿಗೀಗ ಸಿಂಧುತ್ವ ಪ್ರಮಾಣ ಪತ್ರದ ಸಂಕಟ ಎದುರಾಗಿದೆ.
undefined
ಮೇರಿಟ್ ಆಧಾರದ ಮೇಲೆ ಆಯ್ಕೆಯಾಗಿದ್ದರೂ ನಮಗೆ ಆದೇಶ ನೀಡದಿರುವುದರಿಂದ ನಮ್ಮ ಸೇವಾ ಹಿರಿತನ ಕುಂಠಿತವಾಗುತ್ತದೆ ಎಂದು ಅವರು ಗಾಬರಿಗೊಂಡಿದ್ದಾರೆ. ಇದು ಮುಂಚೆಯೇ ತಿಳಿಸಬೇಕಿತ್ತು. ಸದ್ಯ ಹುದ್ದೆ ನಿಯುಕ್ತಿ, ಸಂದರ್ಶನ ಸಮಯದಲ್ಲಿ ಹೇಳುತ್ತಿರುವುದು ಯಾಕೆ ಎಂದು ಅಭ್ಯರ್ಥಿಗಳು ಪ್ರಶ್ನಿಸುತ್ತಿದ್ದಾರೆ. ರಾಜ್ಯದ ಐದಾರು ಜಿಲ್ಲೆಗಳು ಹೊರತುಪಡಿಸಿ ಬಹುತೇಕ ಕಡೆ ಈ ಸಮಸ್ಯೆ ಸೃಷ್ಟಿಯಾಗಿದೆ.
ನ.26ರಂದು ನಡೆಯಬೇಕಿದ್ದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಮುಂದೂಡಿಕೆ
ಏನಿದು ಸಮಸ್ಯೆ?:
ಒಟ್ಟು ಖಾಲಿ ಇದ್ದ ಹುದ್ದೆಗಳ ಪೈಕಿ 13 ಸಾವಿರದಷ್ಟು ಹುದ್ದೆಗಳನ್ನು 2022ರ ಮೇನಲ್ಲಿ ಪರೀಕ್ಷೆ ನಡೆಸಿ ನೇಮಕ ಮಾಡಿಕೊಂಡಿದ್ದು, ಇದರಲ್ಲಿ ಸುಮಾರು ಐದು ಸಾವಿರ ಅಭ್ಯರ್ಥಿಗಳು ಸಾಮಾನ್ಯ ಕೋಟಾದಡಿ ಆಯ್ಕೆಯಾಗಿದ್ದಾರೆ. ಇವರಿಗೆಲ್ಲ ಸಿಂಧುತ್ವ ಪ್ರಮಾಣಪತ್ರ ನೀಡಿ ನಿಮ್ಮ ಆದೇಶ ಪತ್ರ ಪಡೆಯಿರಿ ಎಂದಿದ್ದರಿಂದ ಗೊಂದಲ ಸೃಷ್ಟಿಯಾಗಿದೆ. ಹಿಂದುಳಿದ ವರ್ಗದ ಅಭ್ಯರ್ಥಿಗಳು ಮೀಸಲಾತಿ ಪಡೆಯದೇ ಸಾಮಾನ್ಯ ಕೋಟಾದಡಿ ನೌಕರಿಗೆ ಆಯ್ಕೆಯಾದರೆ ಅವರಿಗೆ ಸಿಂಧುತ್ವ ಪ್ರಮಾಣದ ಅಗತ್ಯವಿಲ್ಲದಿದ್ದರೂ ತಮಗೀಗ ಕೇಳುತ್ತಿರುವುದು ತೊಂದರೆಗೀಡು ಮಾಡಿದೆ ಎನ್ನುವುದು ಆಯ್ಕೆಯಾದವರ ವಾದ.
ಈ ಸಂಬಂಧ ಹಿಂದೆ ಹೈಕೋರ್ಟಿಗೂ ಹೋಗಲಾಗಿತ್ತು. ಅಲ್ಲಿ ಮತ್ತು ಕೆಇಟಿಯಲ್ಲೂ ಈ ವಿಷಯವನ್ನು ಎತ್ತಿ ಹಿಡಿಯಲಾಗಿದೆ. ಸ್ವತಃ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಕಳೆದ ತಿಂಗಳು 30ರಂದು ಆದೇಶ ಹೊರಡಿಸಿದ್ದು, ಹಿಂದುಳಿದ ವರ್ಗದ ಅಭ್ಯರ್ಥಿಗಳು ಸಾಮಾನ್ಯ ಕೋಟಾದಲ್ಲಿ ಆಯ್ಕೆಯಾಗಿದ್ದರೆ ಅಂತಹವರಿಗೆ ಸಿಂಧುತ್ವಪ್ರಮಾಣ ಪತ್ರ ಕೇಳಬೇಡಿ ಎಂದಿದ್ದಾರೆ. ಮೀಸಲಾತಿ ಕೋರಿ ಸರಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಂತಿಮ ಆಯ್ಕೆ ಪಟ್ಟಿಯಲ್ಲಿ ಮೆರಿಟ್ ಆಧಾರದ ಮೇಲೆ ಆಯ್ಕೆಯಾದರೆ ಅಂವರಿಗೆ ಸಿಂಧುತ್ವ ಪ್ರಮಾಣ ಪತ್ರ ಕೇಳಿ ತೊಂದರೆ ನೀಡಬಾರದು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದಾರೆ. 1992ರ ಮೀಸಲಾತಿ, ನೇಮಕ ನಿಯಮಗಳನ್ನು ಸಿಎಂ ಉಲ್ಲೇಖಿಸಿದ್ದಾರೆ. ಆದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರಿಂದ ನಮಗೆ ಯಾವುದೇ ಸಂದೇಶ ಬಂದಿಲ್ಲ ಎಂದು ಜಿಲ್ಲೆಗಳ ಉಪ ನಿರ್ದೇಶಕರುಗಳು ಹೇಳಿ ಕೈತೊಳೆದುಕೊಳ್ಳುತ್ತಿದ್ದಾರೆ. ಇಲಾಖೆ ಕೂಡ ಆಯಾ ಡಿಡಿಪಿಐಗಳ ಮೇಲೆ ಈ ಜವಾಬ್ದಾರಿ ಹೊರಿಸಿದ್ದು ಕೂಡ ಗೊಂದಲಕ್ಕೆ ಕಾರಣವಾಗಿದೆ.
10 ನೇ ತರಗತಿಯಾದವರಿಗೆ ಸಂತಸದ ಸುದ್ದಿ, ಕೇಂದ್ರ ಗುಪ್ತಚರ ಇಲಾಖೆಯಲ್ಲಿ ನೇಮಕಾತಿ
ಸಿಂಧುತ್ವ ಕೊಟ್ಟರೆ ಮಾತ್ರ ಆದೇಶ:
ನಿಯಮಗಳ ಪ್ರಕಾರ ನಾವು ನಡೆದಿದ್ದೇವೆ. ಇಲಾಖೆ ಹೇಳಿದಂತೆ ಕೇಳಬೇಕಾಗುತ್ತದೆ. ಹಿಂದುಳಿದ ವರ್ಗದಡಿ ಅರ್ಜಿ ಸಲ್ಲಿಸಿದವರಿಗೆ ನಾವು ಸಿಂಧುತ್ವ ಪ್ರಮಾಣಪತ್ರ ನೀಡಲು ಹೇಳಿದ್ದೇವೆ. ಅದು ಕೊಟ್ಟರೆ ಆದೇಶ ಸಿಗುತ್ತದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು. ಆದರೆ, ಅಭ್ಯರ್ಥಿಗಳು ಈಗ ಏಕಾಏಕಿ ಹೇಳಿದರೆ ಪ್ರಮಾಣಪತ್ರ ತೆಗೆಸಲು ಎರಡು ತಿಂಗಳಾದರೂ ಬೇಕು. ಅಲ್ಲಿಯ ತನಕ ನಾವು ಕಾಯೋದು ಹೇಗೆ ಎನ್ನುವ ಧಾವಂತದಲ್ಲಿದ್ದಾರೆ.
ಬೇರೆಡೆ ಆದೇಶ ವಿತರಣೆ:
ಇನ್ನೊಂದೆಡೆ ಶಿವಮೊಗ್ಗ, ದಾವಣಗೆರೆ, ಚಾಮರಾಜನಗರ, ಹಾವೇರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ನೇಮಕಾತಿ ಆದೇಶ ನೀಡಲಾಗಿದೆ. ಅಲ್ಲಿ ನಂತರ ದಾಖಲೆ ನೀಡಿ ಎಂದು ಹೇಳಲಾಗಿದೆ. ರಾಜ್ಯದೆಲ್ಲಡೆ ಒಂದೇ ನಿಯಮವಿಲ್ಲದೇ ಹೀಗೆ ಅಲ್ಲಲ್ಲಿನ ಉಪ ನಿರ್ದೇಶಕರುಗಳು ಕ್ರಮ ತೆಗೆದುಕೊಳ್ಳುತ್ತಿರುವುದು ಮತ್ತು ತಮ್ಮ ಜತೆಗೆ ಆಯ್ಕೆಯಾದವರು, ತಮಗಿಂತ ಕಡಿಮೆ ಮೆರಿಟ್ ನವರು ನೇಮಕಾತಿಗೊಳ್ಳುತ್ತಿದ್ದಾರೆಂದು ಅಭ್ಯರ್ಥಿಗಳಲ್ಲಿ ಮತ್ತಷ್ಟು ಬೇಸರ ಮೂಡಿಸಿದೆ. ವಿಜಯಪುರ ಭಾಗದಲ್ಲಿ ಮೊದಲಿಂದಲೂ ಶಿಕ್ಷಕರ ನೇಮಕಾತಿಯಲ್ಲಿ ಅತೀ ಹಚ್ಚು ಜನ ಆಯ್ಕೆಯಾಗುತ್ತಾರೆ. ಈ ಬಾರಿಯೂ ಸಾಕಷ್ಟು ಜನರಿದ್ದಾರೆ. ಸಿಂಧುತ್ವ ಸಂಬಂಧ ಕಿತ್ತೂರು, ಕಲ್ಯಾಣ ಕರ್ನಾಟಕ ಸೇರಿ ರಾಜ್ಯದ ಗ್ರಾಮೀಣ ಅಭ್ಯರ್ಥಿಗಳು ಮುಂದಿನ ಸರಕಾರದ ನಡೆಯ ನಿರೀಕ್ಷೆಯಲ್ಲಿದ್ದಾರೆ.
ಸಿಂಧುತ್ವ ತೆಗೆಸುವುದು ಕಷ್ಟ:
ಸಿಂಧುತ್ವ ಪ್ರಮಾಣಪತ್ರ ತೆಗೆಸಲು ಕನಿಷ್ಠ ಹದಿನೈದರಿಂದ ಇಪ್ಪತ್ತು ಸಾವಿರ ರು. ಹಾಗೂ ಓಬಿಸಿ ಕಚೇರಿಗಳಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಫೈಲ್ ಬಂದು ಹೋಗಲು ತಿಂಗಳುಗಟ್ಟಲೆ ಸಮಯಬೇಕು. ಸಿಂಧುತ್ವ ಅಗತ್ಯ ಎಂದು ಗೊತ್ತಾದ ಮೇಲೆ ಹಣಕ್ಕೆ ಬೇಡಿಕೆ ಇಟ್ಟು ಕೆಲಸ ಮಾಡಿಕೊಡುವ ಏಜಂಟರೂ ಹುಟ್ಟುತ್ತಾರೆ. ಅಷ್ಟೆಲ್ಲ ಹಣ ಖರ್ಚು ಮಾಡುವುದು ಬಡವರಿಗೆ ತ್ರಾಸುದಾಯಕ ಅನ್ನೋದು ಅನೇಕ ಅಭ್ಯರ್ಥಿಗಳ ಆತಂಕ.
ನಾವು ಸರಕಾರದ ನಿಯಮದಂತೆ ನಡೆಯಬೇಕಾಗುತ್ತದೆ. ಆಯುಕ್ತರ ಆದೇಶವಿಲ್ಲಿದೆ ಏನೂ ಮಾಡಂಗಿಲ್ಲ. ಆಯುಕ್ತರು, ಸರಕಾರ ಹೇಳಿದರೆ ಈಗಲೇ ಆದೇಶ ಪ್ರತಿ ನೀಡುತ್ತೇವೆ. ಅಭ್ಯರ್ಥಿಗಳು ವಿನಾಕಾರಣ ಗೊಂದಲ್ಲಿದ್ದು, ತಾಳ್ಮೆಯಿಂದ ಇರಲಿ. ಬೇಗ ಕೆಲಸ ಮಾಡಿ ಎಲ್ಲರಿಗೂ ಆದೇಶ ನೀಡುವ ಯತ್ನದಲ್ಲಿಯೇ ನಾವಿದ್ದೇವೆ.
-ಎ.ಎಚ್. ನಾಗೂರ್, ಡಿಡಿಪಿಐ, ವಿಜಯಪುರ
ಸರಕಾರ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ರೀತಿ ನಡೆದುಕೊಂಡು ಶಿಕ್ಷಕರಾಗಿ ಆಯ್ಕೆಯಾದವರಿಗೆ ತೊಂದರೆಯಾಗುತ್ತಿರುವುದು ಸಾಧುವಲ್ಲ. ನಾನು ಕೂಡ ಉನ್ನತ ಮಟ್ಟದ ಅಧಿಕಾರಗಳನ್ನು ಸಂಪರ್ಕಿಸಿದ್ದೇನೆ. ಕೂಡಲೇ ಲೋಪ ಸರಿಪಡಿಸುವುದಾಗಿ ಹೇಳಿದ್ದಾರೆ. ಅಭ್ಯರ್ಥಿಗಳು ಸಾವಧಾನವಾಗಿ ಇರಲಿ. ಎಲ್ಲ ಸರಿ ಹೋಗುತ್ತದೆ.
-ಅರುಣ ಶಹಾಪುರ, ಮಾಜಿ ಶಾಸಕ, ಶಿಕ್ಷಕಕರ ಮತಕ್ರೇತ್ರ
ಸಿಂಧುತ್ವಕ್ಕಾಗಿ ಈಗ ಕಚೇರಿಗಳಿಗೆ ತಿರುಗಾಡಬೇಕಾಗುತ್ತದೆ. ಚಳಿಗಾಲ ಅಧಿವೇಶನ ಆರಂಭವಾಗುವುದರಿಂದ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಸಿಗಲ್ಲ. ಹಾಗಾಗಿ ಶಿಕ್ಷಣ ಅಧಿಕಾರಿಗಳಿಗೆ ಸೂಚನೆ ನೀಡಿ ನಮಗೆ ಸುರಳಿತವಾಗಿ ನೇಮಕಾತಿ ಆದೇಶ ನೀಡುವಂತಾದರೆ ಒಳಿತು.
ಶಿಲ್ಪಾ ಸನದಿ, ನಿಯುಕ್ತಿಯಾಗಿರುವ ಅಭ್ಯರ್ಥಿ
ಮೆರಿಟ್‌ನಲ್ಲಿ ಆಯ್ಕೆಯಾಗಿ ನೌಕರಿ ಪಡೆದರೂ ಬೇಗ ಆದೇಶ ಕೊಡದಿರುವುದಕ್ಕೆ ಗಾಬರಿಯಾಗಿದೆ. ಈ ಎರಡು ವರ್ಷ ನಿರುದ್ಯೋಗಿಗಳಾಗಿ ಮನೆಯಲ್ಲಿದ್ದೇವೆ. ನಮಗಿಂತ ಮುಂಚೆ ಆದೇಶ ಪಡೆದು ಸೇರಿದವರು ಕೋರ್ಟಿಗೆ ಹೋದರೆ ಅವರಿಗೇ ಸೇವಾ ಹಿರಿತನ ಸಿಗುತ್ತದೆ ಎನ್ನುವ ಭಯ ನಮ್ಮದು.
-ಪೈಗಂಬರ್ ಹಿಮ್ಮತ್ ಗೋರಿ, ಬೀಳಗಿ