ಶಿಕ್ಷಣವನ್ನು ಒಳ್ಳೆಯ ರೀತಿಯಲ್ಲಿ ತೆಗೆದುಕೊಂಡು ಹೋಗುವ ದೃಷ್ಠಿಯಿಂದ ಮುಂದಿನ ವರ್ಷದಲ್ಲಿ ರಾಜ್ಯದಲ್ಲಿ 500 ರಿಂದ 600 ಕೆಪಿಎಸ್ ಶಾಲೆಗಳನ್ನು ತೆರೆಯಲು ನಿರ್ಧರಿಸಿದೆ. ಈ ಬಾರಿ 42 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. 13 ಸಾವಿರ ಕಾಯಂ ಶಿಕ್ಷಕರನ್ನು ನೇಮಕ ಮಾಡಲಾಗಿದೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ
ಶಿವಮೊಗ್ಗ(ನ.09): ಮಕ್ಕಳಿಗೆ ಪಾಠ ಹೇಳಿಕೊಡುವುದು ಒಂದು ಪುಣ್ಯದ ಕೆಲಸವಾಗಿದೆ. ಮಕ್ಕಳು ಯಾವುದೇ ಮಾಧ್ಯಮದಲ್ಲಿ ಓದುತ್ತಿದ್ದರೂ ಕಡ್ಡಾಯವಾಗಿ ಕನ್ನಡವನ್ನು ಓದಲೇಬೇಕು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಪ್ರಿಯದರ್ಶಿನಿ ಆಂಗ್ಲ ಪ್ರೌಢಶಾಲೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಬದಲಾದ ಪರೀಕ್ಷಾ ಪದ್ಧತಿ ಕುರಿತಾದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಣವನ್ನು ಒಳ್ಳೆಯ ರೀತಿಯಲ್ಲಿ ತೆಗೆದುಕೊಂಡು ಹೋಗುವ ದೃಷ್ಠಿಯಿಂದ ಮುಂದಿನ ವರ್ಷದಲ್ಲಿ ರಾಜ್ಯದಲ್ಲಿ 500 ರಿಂದ 600 ಕೆಪಿಎಸ್ ಶಾಲೆಗಳನ್ನು ತೆರೆಯಲು ನಿರ್ಧರಿಸಿದೆ. ಈ ಬಾರಿ 42 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. 13 ಸಾವಿರ ಕಾಯಂ ಶಿಕ್ಷಕರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ ತವರಿನ ಹುಡುಗನಿಗೆ ಪಿಯು ಪರೀಕ್ಷೆ ಬರೆಯಲು ಅಡ್ಡಿ!
ಫೇಲ್ ಆದ ಕಾರಣ ಶಿಕ್ಷಣದಿಂದ ಮಕ್ಕಳು ದೂರ ಉಳಿಯಬಾರದು ಎಂಬ ಕಾರಣಕ್ಕೆ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯನ್ನು ಮೂರು ಪ್ರಯತ್ನಗಳಲ್ಲಿ ನಡೆಸಲು ತೀರ್ಮಾನಿಸಿದೆ. ಒಂದೇ ಬಾರಿ ಮಾತ್ರ ಪರೀಕ್ಷಾ ಶುಲ್ಕವನ್ನು ಪಾವತಿಸಿ 3 ಅವಕಾಶಗಳೊಂದಿಗೆ ಪರೀಕ್ಷೆಗಳನ್ನು ಬರೆಯಬಹುದು. ಮೊದಲ ಪರೀಕ್ಷೆಯಲ್ಲಿಯೇ ಉತ್ತೀರ್ಣರಾದ ವಿದ್ಯಾರ್ಥಿಗಳು ಮುಂದಿನ ಎರಡು ಅವಕಾಶಗಳನ್ನು ಉಪಯೋಗಿಸಿಕೊಳ್ಳುವುದು ಅವರ ಐಚ್ಛಿಕ ವಿಷಯ. ಮೂರು ಪರೀಕ್ಷೆಗಳಲ್ಲಿ ಯಾವ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೋ, ಆ ಅಂಕವನ್ನು ಪರಿಗಣಿಸಲಾಗುತ್ತದೆ. ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಈ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದರು.
ವಿಶೇಷ ಉಪನ್ಯಾಸಕ ಹರಿಪ್ರಸಾದ್ ಮಾತನಾಡಿ, ಬದಲಾದ ಪರೀಕ್ಷಾ ಪದ್ಧತಿಯನ್ನು ತುಂಬಾ ವೈಭವೀಕರಿಸಲಾಗಿದೆ. ಅದನ್ನು ಕಡಿಮೆ ಮಾಡಬೇಕು. ಮಕ್ಕಳ ಮೇಲಿನ ಒತ್ತಡವನ್ನು ನಿವಾರಣೆ ಮಾಡಬೇಕು. ಪರೀಕ್ಷೆಯನ್ನು ಸುಲಲಿತವಾಗಿ ಮಾಡಬೇಕು. ಬದಲಾದ ಪರೀಕ್ಷಾ ಪದ್ಧತಿಯ ಆಶಯ ತಿಳಿಯಬೇಕು ಎಂದರು.
ಶಾಲಾ ಮಕ್ಕಳಿಗೆ ಮೊಟ್ಟೆಯ ಜತೆ ವಿಶೇಷ ಪೌಷ್ಠಿಕ ಆಹಾರ: ಸಚಿವ ಮಧು ಬಂಗಾರಪ್ಪ
ಯಾವುದೇ ಪರೀಕ್ಷೆ ನಡೆಯುವಾಗ ಅದಕ್ಕೆ ಸಂಬಂಧಪಟ್ಟ ಬ್ಲೂಪ್ರಿಂಟ್ ಮತ್ತು ಮಾದರಿ ಪ್ರಶ್ನೆಪತ್ರಿಕೆಯನ್ನು ಮಂಡಳಿಯು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುತ್ತದೆ. ಶಿಕ್ಷಕರು ಅದನ್ನು ಗಮನಿಸಿ, ಮಕ್ಕಳಿಗೆ ಸರಿಯಾದ ಕ್ರಮದಲ್ಲಿ ತಿಳಿಸಬೇಕು ಎಂದು ಹೇಳಿದರು.
ಡಿಡಿಪಿಐ ಸಿ.ಆರ್. ಪರಮೇಶ್ ಮಾತನಾಡಿದರು. ನಿವೃತ್ತ ಪ್ರೊಫೆಸರ್ ಚಂದ್ರಕಾಂತ್, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ಗ್ಲೋಬಲ್ ಎಜುಕೇಶನ್ ಸೊಸೈಟಿಯ ರಮೇಶ್, ಡಯಟ್ ಪ್ರಾಂಶುಪಾಲ ಬಸವರಾಜಪ್ಪ, ಕಲಗೋಡು ರತ್ನಾಕರ್ ಮತ್ತಿತರರು ಉಪಸ್ಥತರಿದ್ದರು.