ನ.26ರಂದು ನಡೆಯಬೇಕಿದ್ದ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆಯನ್ನು ಮುಂದೂಡಲಾಗಿದೆ. ತಾತ್ಕಾಲಿಕ ದಿನಾಂಕ ನಿಗದಿ ಮಾಡಿದ್ದು, ಇದೇ ಅಂತಿಮ ಎಂದು ಹೇಳಲು ಸಾಧ್ಯವಿಲ್ಲ.
ಬೆಂಗಳೂರು (ನ.10): ಇದೇ ನವೆಂಬರ್ 26ರಂದು ನಡೆಸಲು ಉದ್ದೇಶಿಸಿದ್ದ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್) 2023ನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದೂಡಿದೆ. ಕಾರಣಾಂತರಗಳಿಂದ ಪರೀಕ್ಷಾ ದಿನಾಂಕವನ್ನು ಮುಂದೂಡಲಾಗಿದೆ.
ನವೆಂಬರ್ 26ರ ಬದಲು ಪರೀಕ್ಷೆಯನ್ನು ಡಿ.31ರಂದು ನಡೆಸಲು ಪ್ರಾಧಿಕಾರ ತಾತ್ಕಾಲಿಕ ದಿನಾಂಕ ನಿಗದಿ ಮಾಡಿದೆ. ಇದೇ ದಿನಾಂಕವೇ ಅಂತಿಮ ದಿನಾಂಕ ಆಗಬಹುದು ಅಥವಾ ಬದಲಾವಣೆಯೂ ಆಗಬಹುದು ಎಂದು ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.
undefined
ಒಂದು ಕಪ್ ಟೀ ಸಿಕ್ಕಿಲ್ಲವೆಂದು ರೋಗಿಯನ್ನು ಆಪರೇಷನ್ ಥಿಯೇಟರ್‌ನಲ್ಲೇ ಬಿಟ್ಟು ಹೋದ ವೈದ್ಯ!
ಕೆ- ಸೆಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರಿಗೆ ಪ್ರಶ್ನೆ ಪತ್ರಿಕೆ -೧ ಸಾಮಾನ್ಯವಾಗಿರಲಿದೆ. ಅಭ್ಯರ್ಥಿಗಳು ಪರಿಮಾಣಾತ್ಮಕ ತರಬೇತಿಗಿಂತ ಗುಣಾತ್ಮಕ ತರಬೇತಿಗೆ ಹೆಚ್ಚು ಒತ್ತು ನೀಡಬೇಕಾಗುತ್ತದೆ. ಪ್ರಶ್ನೆ ಪತ್ರಿಕೆ-೧ ರ ಪಠ್ಯಕ್ರಮದ ಜೊತೆ ಅದರಲ್ಲಿರುವ ವಿವಿಧ ಮಾದರಿಯ ಪ್ರಶ್ನೆಗಳ ಬಗ್ಗೆ ಜ್ಞಾನ ಹೊಂದಿರಬೇಕು.
ವರ್ಷಾಂತ್ಯದೊಳಗೆ ನೇಮಕ: ಈ ಮಧ್ಯೆ, ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ 1208 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ತಿಳಿಸಿದ್ದಾರೆ.
10 ನೇ ತರಗತಿಯಾದವರಿಗೆ ಸಂತಸದ ಸುದ್ದಿ, ಕೇಂದ್ರ ಗುಪ್ತಚರ ಇಲಾಖೆಯಲ್ಲಿ ನೇಮಕಾತಿ
ಇಲಾಖಾ ಅಧಿಕಾರಿಗಳ ಸಭೆ ನಡೆಸಿ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯ ದಾಖಲಾತಿ ಪರಿಶೀಲನೆಗೆ ಶೀಘ್ರ ಕ್ರಮ ವಹಿಸಲು ಸಚಿವರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ಸಚಿವರ ನಿವಾಸಕ್ಕೆ ಭೇಟಿ ನೀಡಿ ಅಭಿನಂದನೆ ಸಲ್ಲಿಸಿದ ಸಂದರ್ಭದಲ್ಲಿ ಅವರು ಈ ವಿಚಾರ ತಿಳಿಸಿದರು.
ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾದರೂ ನೇಮಕಾತಿ ಆದೇಶ ಸಿಗದೆ ಕಳೆದ ಮೂರು ವರ್ಷಗಳಿಂದ ಅಭ್ಯರ್ಥಿಗಳು ಅನುಭವಿಸಿರುವ ನೋವು ನನ್ನ ಗಮನಕ್ಕಿದೆ. ಇದನ್ನು ಮನಗಂಡು ಈ ವಿಷಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದಾಗ ಅವರು ತುರ್ತಾಗಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸಹಕಾರ ನೀಡಿದರು. ಅವರ ಸಲಹೆಯಂತೆ ಸಮಿತಿ ರಚಿಸಿ ವರದಿ ಪಡೆದು ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಮುಂದಿನ ಡಿಸೆಂಬರ್ ವೇಳೆಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆಯ್ಕೆಯಾಗಿರುವ 1208 ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಗೆ ಅಧಿಕಾರಿ ವರ್ಗದಿಂದ ಯಾವುದೇ ಅಡಚಣೆಯಾಗುವುದಿಲ್ಲ ಎಂದು ಭರವಸೆ ನೀಡಿದರು.
ಕೆಲವೇ ದಿನಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಸರ್ಕಾರದ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಡ್ಡಾಯವಾಗಿ ಗ್ರಾಮೀಣ ಭಾಗದಿಂದ ವೃತ್ತಿಯನ್ನು ಆರಂಭಿಸಬೇಕು. ವರ್ಗಾವಣೆಗಾಗಿ ಒತ್ತಡ ಹೇರುವ ಕೆಲಸ ಮಾಡಬಾರದು. ನಾನು ಅಭ್ಯರ್ಥಿಗಳಿಂದ ಇದನ್ನು ನಿರೀಕ್ಷಿಸುತ್ತೇನೆ ಎಂದು ಸಚಿವರು ಹೇಳಿದರು.
- ನವೆಂಬರ್ 26ರಂದು ನಡೆಸಲು ಉದ್ದೇಶಿಸಿದ್ದ ಕೆ ಸೆಟ್ ಪರೀಕ್ಷೆ
- ಕಾರಣಾಂತರಗಳಿಂದ ಪರೀಕ್ಷೆಯ ದಿನಾಂಕ ಮುಂದೂಡಿಕೆ
- ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಈ ಬಗ್ಗೆ ಪ್ರಕಟಣೆ
- ಪರೀಕ್ಷೆಯನ್ನು ಡಿ.31ಕ್ಕೆ ನಡೆಸಲು ತಾತ್ಕಾಲಿಕ ದಿನಾಂಕ ನಿಗದಿ
- ದಿನಾಂಕ ಬದಲಾವಣೆಯೂ ಆಗಬಹುದು ಎಂದ ಪ್ರಾಧಿಕಾರ