ರೋಹಿತ್ ಚಕ್ರತೀರ್ಥ ಸಮಿತಿಯ ಪರಿಷ್ಕೃತ ಪಠ್ಯ ತಿದ್ದುಪಡಿಗೆ ಕರ್ನಾಟಕ ಸರ್ಕಾರ ಆದೇಶಿಸಿದೆ. ವಿವಾದಗಳಿಗೆ ಅಂತ್ಯ ಹಾಡಲು ಸರ್ಕಾರ ತಪ್ಪುಗಳನ್ನ ತಿದ್ದೋಲೆ ಮೂಲಕ ಪ್ರಕಟಿಸಲು ಆದೇಶ ಹೊರಡಿಸಿದೆ.
ವರದಿಳ ಮಾರುತೇಶ್, ಏಷ್ಯಾನೆಟ್ ಸುವರ್ಣ ನ್ಯೂಸ್ ಬೆಂಗಳೂರು
ಬೆಂಗಳೂರು (ಜೂ.27): ರೋಹಿತ್ ಚಕ್ರತೀರ್ಥ ಸಮಿತಿಯ ಪಠ್ಯ ಪರಿಷ್ಕರಣೆಗೆ ಭಾರೀ ವಿರೋಧ ಕೇಳಿ ಬಂದ ಹಿನ್ನೆಲೆಯಲ್ಲಿ ಕೆಲವೊಂದು ಮಾರ್ಪಾಡು ಮಾಡಲು ಸರ್ಕಾರ ಆದೇಶ ಹೊರಡಿಸಿದೆ. ಪಠ್ಯ ಪರಿಷ್ಕರಣೆ ಬಗ್ಗೆ ನಿತ್ಯ ಒಂದಿಲ್ಲೊಂದು ಸುದ್ದಿ ವಿವಾದದ ಸ್ವರೂಪ ಪಡೆಯುತ್ತಲೇ ಇತ್ತು.
ಹೀಗಾಗಿ ವಿವಾದಗಳಿಗೆ ಅಂತ್ಯ ಹಾಡಲು ಸರ್ಕಾರ ತಪ್ಪುಗಳನ್ನ ತಿದ್ದೋಲೆ ಮೂಲಕ ಪ್ರಕಟಿಸಲು ಆದೇಶ ಹೊರಡಿಸಿದೆ. ಪ್ರಮುಖವಾಗಿ 9ನೇ ತರಗತಿಯ ಸಮಾಜವಿಜ್ಞಾನ ವಿಷಯದ ಭಾಗ 1ರಲ್ಲಿ ಕೈ ಬಿಡಲಾಗಿರುವ ಸಂವಿಧಾನ ಶಿಲ್ಪಿ ಎಂಬ ಹೆಸರನ್ನು ಮತ್ತೆ ಸೇರಿಸುವಂತೆ ಆದೇಶಿದೆ. ಸಂವಿಧಾನ ಶಿಲ್ಪಿ, ಜನರ ಪ್ರೋತ್ಸಾಹದಿಂದ ಕುವೆಂಪು ಕವಿ ಎನಿಸಿಕೊಂಡರು, ಬಸವಣ್ಣನವರ ಸಂಪೂರ್ಣ ಪಾಠ ಸೇರಿದಂತೆ ರೋಹಿತ್ ಚಕ್ರತೀರ್ಥ ಸಮಿತಿ ಕೈ ಬಿಟ್ಟ ಹಲವು ವಿವರಗಳನ್ಮ ಮರು ಸೇರ್ಪಡೆ ಮಾಡಿ ಎಂದು ಸರ್ಕಾರ ಆದೇಶಿಸಿದೆ.
ಪಠ್ಯದಲ್ಲಿ ವೀರಶೈವ Vs ಲಿಂಗಾಯತ ಫೈಟ್, ಸರ್ಕಾರಕ್ಕೆ ಸಂಕಷ್ಟ ತಂದ ಬಸವಣ್ಣ ಪಠ್ಯ ಪರಿಷ್ಕರಣೆ
8 ತಿದ್ದುಪಡಿಗಳು ಯಾವುವು..?
1) 9ನೇ ತರಗತಿ ಸಮಾಜ ವಿಜ್ಞಾನ ಭಾಗ-01ರ ನಮ್ಮ ಸಂವಿಧಾನ ಎಂಬ ಪಾಠದಲ್ಲಿ ಸಂವಿಧಾನದ ಕರಡು ರಚನೆ ಸಮಿತಿ ಬಗ್ಗೆ ಉಲ್ಲೇಖವಿರುತ್ತದೆ. ಅದರಲ್ಲಿ ಪರಿಷ್ಕೃತ ಪಠ್ಯದಲ್ಲಿ ಇವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ಸಂವಿಧಾನದ ಶಿಲ್ಪಿ ಎಂದು ಕರೆಯಲಾಗಿದೆ. "ಸಂವಿಧಾನದ ಶಿಲ್ಪಿ" ಎಂಬುದರ ಪುನರ್ ಸೇರ್ಪಡೆ
2) 7ನೇ ತರಗತಿಯ ಸಮಾಜ ವಿಜ್ಞಾನ, ಭಾಗ-01ರ ಭಕ್ತಿ ಪಂಥ ಹಾಗೂ ಸೂಫಿ ಸಂತರು ಪಾಠವನ್ನು ಪೂರ್ಣವಾಗಿ ಕೈಬಿಡಲಾಗಿದೆ. 9ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಭಾಗ-2 ರಲ್ಲಿ ಭಕ್ತಿಪಂಥ ಎಂಬ ಅಧ್ಯಾಯದಲ್ಲಿ ಪುರಂದರದಾಸರು, ಕನಕದಾಸರ ಕುರಿತು ವಿಷಯಗಳು ಸಂಕ್ಷಿಪ್ತಗೊಳಿಸಲಾಗಿದೆ. ಆದ್ದರಿಂದ, 2021-22ನೇ ಸಾಲಿನ 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-01ರ ಭಕ್ತಿ ಪಂಥ ಹಾಗೂ ಸೂಫಿ ಸಂತರು ಸಂಪೂರ್ಣ ಪಾಠ ಸೇರ್ಪಡೆ
3) 7ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದ ಪುಟ ಸಂಖ್ಯೆ 147 ರಲ್ಲಿ ಗೊಂದೆ ಕಲಿಸುವ ನೀತಿ' ಪದ್ಯದ ಕೃತಿಕಾರರ ಹೆಸರು ಡಾ. ಆರ್.ಎನ್.ಜಯಗೋಪಾಲ್ ಎಂದು ತಪ್ಪಾಗಿ ಮುದ್ರಣಗೊಂಡಿದ್ದು, ಮೂಲ ಕೃತಿಕಾರರಾದ ಚಿ.ಉದಯಶಂಕರ್ ರವರ ಕವಿ ಪರಿಚಯ ಸೇರ್ಪಡೆ ಮಾಡಿ ಪರಿಷ್ಕರಣೆ
4) 6ನೇ ತರಗತಿ ಸಮಾಜ ವಿಜ್ಞಾನ ಭಾಗ-1ರ ಪಾಠ ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ ಪಾಠದಲ್ಲಿ ಸಿದ್ದಗಂಗಾ ಮಠ ಹಾಗೂ ಆದಿಚುಂಚನಗಿರಿ ಮಠದ ಕುರಿತಾದ ಸೇವೆಯ ಸಾಲುಗಳು ಕೈಬಿಡಲಾಗಿತ್ತು. ಸಿದ್ದಗಂಗಾ ಮಠ ಹಾಗೂ ಆದಿಚುಂಚನಗಿರಿ ಮಠದ ಸೇವೆಯ ಕುರಿತಾದ ಸಾಲುಗಳು ಪುನರ ಸೇರ್ಪಡೆ
5) 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-1 ರ ಮೈಸೂರು ಮತ್ತು ಇತರ ಸಂಸ್ಥಾನಗಳು ಎಂಬ ಪಾಠದಲ್ಲಿದ್ದ ಸುರಪುರ ನಾಯಕರ ಕುರಿತಾದ ವಿವರಗಳ ಸೇರ್ಪಡೆ
6) ಪರಿವರ್ತಕರು ಎಂಬ ಅಧ್ಯಾಯದಲ್ಲಿ ಬಸವಣ್ಣನವರ ಕುರಿತಾದ ವಿಷಯಾಂಶ ಕುರಿತು ಪುನರ ಪರಿಷ್ಕರಣೆ
7). 7ನೇ ತರಗತಿ ಸಮಾಜ ವಿಜ್ಞಾನ ಭಾಗ-2 ರ ಪಠ್ಯಪುಸ್ತಕದ ಕರ್ನಾಟಕ ರಾಜ್ಯ ಏಕೀಕರಣ ಹಾಗೂ ಗಡಿವಿವಾದಗಳು ಎಂಬ ಪಾಠದಲ್ಲಿ ರಾಷ್ಟ್ರಕವಿ ಕುವೆಂಪು ರವರ ಹಾಗೂ ಹುಯಿಲಗೋಳ ನಾರಾಯಣರಾವ್ ರವರ ಭಾವಚಿತ್ರಗಳನ್ನು ಅಳವಡಿಸುವುದು
8) 4ನೇ ತರಗತಿಯ ಪರಿಸರ ಅಧ್ಯಯನ ಪ್ರತಿಯೊಬ್ಬರು ವಿಶಿಷ್ಟ ಎಂಬ ಪಾಠದಲ್ಲಿ 'ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಕುವೆಂಪು ರವರಿಗೆ ಚಿಕ್ಕಂದಿನಿಂದಲು ಕಥೆ, ಕವನ, ಪುಸ್ತಕ ಓದುವ, ಬರೆಯುವ ಅಭ್ಯಾಸ ಇತ್ತು ಎಂಬ ವಾಕ್ಯದ ನಂತರ ಆನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು ಎಂಬ ಸಾಲನ್ನು ಕೈಬಿಡುವುದು
ತಿದ್ದೋಲೆಗೆ ಸರ್ಕಾರದ ಸಮರ್ಥನೆ
ಸಾಮಾನ್ಯವಾಗಿ ಪಠ್ಯಪುಸ್ತಕಗಳ ರಚನೆ. ಪರಿಷ್ಕರಣೆಗಳಾದಾಗ ಆಗ ತಿದ್ದುಪಡಿಗಳನ್ನು ತಿದ್ದೋಲೆ ರೂಪದಲ್ಲಿ ನೀಡುವುದು ಶಿಕ್ಷಣ ಇಲಾಖೆಯಲ್ಲಿ ಈ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪಕ್ರಿಯೆಯಾಗಿದೆ ಎಂದು ಸರ್ಕಾರ ತಿದ್ದೋಲೆ ಆದೇಶದಲ್ಲಿ ತಿಳಿಸಿದೆ. ಈ ಮೂಲಕ ಹಿಂದಿನ ಸಮಿತಿ ಕೂಡ ತಿದ್ದೋಲೆ ಪ್ರಕಟಿಸಿ ತಪ್ಪುಗಳನ್ನ ಸರಿಪಡಿಸಿದೆ ಎಂಬುದನ್ನ ಹೇಳಲಾಗಿದೆ.