ಬೆಂಗಳೂರು (ಜೂ.11) : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, 12ನೇ ಶತಮಾನದ ಸಮಾಜ ಸುಧಾರಕ ಬಸವೇಶ್ವರರು ಸೇರಿದಂತೆ ವಿವಿಧ ಮಹನೀಯರು, ದಾರ್ಶನಿಕರಿಗೆ ಸಂಬಂಧಿಸಿದ ಪಠ್ಯಗಳಲ್ಲಿನ ಆಕ್ಷೇಪಾರ್ಹ ವಿಚಾರಗಳನ್ನು ಸರಿಪಡಿಸುವ ಪ್ರಕ್ರಿಯೆಗೆ ಶಿಕ್ಷಣ ಇಲಾಖೆ ಚಾಲನೆ ನೀಡಿದೆ.
ಪಠ್ಯ ಮರು ಪರಿಷ್ಕರಣೆಗೆ ಇಲಾಖೆಯು ಯಾವುದೇ ಪ್ರತ್ಯೇಕ ಸಮಿತಿ ರಚನೆ ಮಾಡಿಲ್ಲ. ಬದಲಿಗೆ ಇಲಾಖೆಯ ಪ್ರಮುಖ ಅಧಿಕಾರಿಗಳಿಗೇ ಇದರ ಉಸ್ತುವಾರಿ ನೀಡಿದೆ. ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಪರಿಷ್ಕರಿಸಿರುವ 1ರಿಂದ 10ನೇ ತರಗತಿವರೆಗಿನ ಕನ್ನಡ ಪ್ರಥಮ, ದ್ವಿತೀಯ ಮತ್ತು ತೃತೀಯ ಭಾಷಾ ವಿಷಯದ ಪಠ್ಯಗಳು ಹಾಗೂ 6ರಿಂದ 10ನೇ ತರಗತಿವರೆಗಿನ ಸಮಾಜ ವಿಜ್ಞಾನ ಪಠ್ಯ ಪುಸ್ತಕಗಳಲ್ಲಿರುವ ಆಕ್ಷೇಪಾರ್ಹ ಅಂಶಗಳನ್ನು ಪರಿಷ್ಕರಿಸಿ ಲೋಪಗಳಾಗಿದ್ದರೆ ಸರಿಪಡಿಸಲು ಅಧಿಕಾರಿಗಳಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಸೂಚನೆ ನೀಡಿದ್ದಾರೆ ಎಂದು ಇಲಾಖೆ ಮೂಲಗಳು ಖಚಿತಪಡಿಸಿವೆ.
ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧರಾಗುವ ಮುನ್ನ, ಈ ಸಲಹೆಗಳನ್ನು ತಪ್ಪದೇ ತಿಳಿದುಕೊಳ್ಳಿ
ಪ್ರಮುಖವಾಗಿ ಅಂಬೇಡ್ಕರ್ ಅವರ ಬಗೆಗಿನ ಪಾಠದಲ್ಲಿ ಬಿಟ್ಟು ಹೋಗಿರುವ ‘ಸಂವಿಧಾನ ಶಿಲ್ಪಿ’ ಗೌರವವನ್ನು ಮರು ಸೇರ್ಪಡೆ ಮಾಡುವುದು ಹಾಗೂ ಕಡಿತಗೊಳಿಸಿರುವ ಅವರ ಜನನ, ಊರು, ತಂದೆ-ತಾಯಿ ಇತರೆ ಮಾಹಿತಿಯನ್ನು ಹಿಂದೆ ಇದ್ದಂತೆ ಸೇರಿಸಲು ಸೂಚಿಸಲಾಗಿದೆ. ಬಸವೇಶ್ವರರಿಗೆ ಸಂಬಂಧಿಸಿದ ಪಾಠದಲ್ಲೂ ನಾಡಿನ ವಿವಿಧ ಮಠಾಧೀಶರು ಎತ್ತಿರುವ ಆಕ್ಷೇಪಗಳನ್ನು ಪರಿಗಣಿಸಿ ಅಗತ್ಯವಿದ್ದರೆ ಮಠಾಧೀಶರೊಂದಿಗೆ ಮತ್ತೊಮ್ಮೆ ಮಾತನಾಡಿ ಸೂಕ್ತ ತಿದ್ದುಪಡಿ ಮಾಡಲು ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.
ಸರ್ಕಾರ ಈಗಾಗಲೇ ಪಠ್ಯ ಪರಿಷ್ಕರಣೆಯಲ್ಲಿನ ಯಾವುದೇ ಆಕ್ಷೇಪಾರ್ಹ ವಿಚಾರಗಳನ್ನು ಪರಿಶೀಲಿಸಿ ಲೋಪಗಳಾಗಿರುವುದು ಕಂಡುಬಂದರೆ ಸರಿಪಡಿಸಲು ಮುಕ್ತ ಮನಸ್ಸು ಹೊಂದಿರುವುದಾಗಿ ಘೋಷಿಸಿದೆ. ಅದರಂತೆ ಬರುವ ಆಕ್ಷೇಪಗಳನ್ನು ವಿಷಯ ತಜ್ಞರು ಮತ್ತು ಶಿಕ್ಷಕರಿಂದ ಪರಿಶೀಲಿಸಿ ಮಾರ್ಪಡಿಸಲು ಸಚಿವರು ಸೂಚಿಸಿದ್ದಾರೆ. ಈ ಉದ್ದೇಶಕ್ಕಾಗಿ ಕರ್ನಾಟಕ ಪಠ್ಯಪುಸ್ತಕ ಸೊಸೈಟಿಯ (ಕೆಟಿಬಿಎಸ್) ಇಬ್ಬರು ಹಿರಿಯ ಅಧಿಕಾರಿಗಳಿಗೆ ಉಸ್ತುವಾರಿ ವಹಿಸಲಾಗಿದೆ. ಸ್ವೀಕರಿಸಿದ ಎಲ್ಲಾ ಆಕ್ಷೇಪಣೆಗಳನ್ನು ಅವರಿಗೆ ರವಾನಿಸಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
Koppalaದಲ್ಲಿ ಬಿಇಓ ವಿರುದ್ಧ ಶಿಕ್ಷಕನ ಮೌನ ಪ್ರತಿಭಟನೆ
ರೋಹಿತ್ ಚಕ್ರತೀರ್ಥನನ್ನು ಬಂಧಿಸುವಂತೆ ಪ್ರತಿಭಟನೆ: ರಾಷ್ಟ್ರಕವಿ ಕುವೆಂಪುರವರ ನಾಡ ಗೀತೆಯನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ನಿಂದನೆ ಮಾಡಿರುವ ನಾಡದ್ರೋಹಿ ರೋಹಿತ್ ಚಕ್ರತೀರ್ಥನನ್ನು ಬಂಧಿಸುವಂತೆ ಆಗ್ರಹಿಸಿ ತಾಲೂಕು ಒಕ್ಕಲಿಗರ ಸಂಘ ಹಾಗೂ ವಿವಿಧ ಸಂಘಟನೆಗಳು ತಾಲೂಕಿನ ನೊಣವಿನಕೆರೆಯಲ್ಲಿ ಬುಧವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಕೆ.ಟಿ. ಶಾಂತಕುಮಾರ್ ಮಾತನಾಡಿ, ಕುವೆಂಪು ಒಂದು ಸಮಾಜಕ್ಕೆ ಸೀಮಿತರಲ್ಲ. ಅವರು ರಾಷ್ಟ್ರಕವಿ. ಇವರು ಬರೆದಿರುವ ನಾಡಗೀತೆಯನ್ನು ರೋಹಿತ್ ಚಕ್ರತೀರ್ಥ ಕೀಳು ಭಾಷೆಯಲ್ಲಿ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವುದು ಹೇಯಕೃತ್ಯ. ಅವನಿಗೆ ಬಸವಣ್ಣ, ಕುವೆಂಪು ಯಾರೆಂಬ ಅರಿವಿಲ್ಲ. ಇಂತಹವರಿಗೆ ಸರ್ಕಾರ ಕುಮ್ಮಕ್ಕು ನೀಡದೆ ಕೂಡಲೆ ಬಂಧಿಸಬೇಕು ಎಂದರು.
ಜೂನ್ 13 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದ ರಾಜ್ಯ ಸರಕಾರ
ಜಾತಿ ರಾಜಕಾರಣದ ನೆಪದಲ್ಲಿ ಮಕ್ಕಳಲ್ಲಿ ವಿಷಬೀಜ ಬಿತ್ತುವ ಕೆಲಸವಾಗುತ್ತಿದ್ದು, ಸರ್ಕಾರ ಸಮಾಜ ದ್ರೋಹಿಗಳಿಗೆ ಆಶ್ರಯ ನೀಡುತ್ತಿದೆ. ಶಿಕ್ಷಣ ವ್ಯವಸ್ಥೆ ಹದಗೆಡಲು ಇಲ್ಲಿನ ಶಿಕ್ಷಣ ಸಚಿವರೇ ಕಾರಣರಾಗಿದ್ದು, ಸಚಿವರು ಬ್ರಾಹ್ಮಣತ್ವವನ್ನು ಎಲ್ಲಾ ಕಡೆ ಹರಡಲು ಹೊರಟಿದ್ದು ಜಾತಿ ರಾಜಕೀಯದಿಂದ ಸಮಾಜದ ಶಾಂತಿಯನ್ನು ಕದಡುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಪ್ರಕಟವಾಗಿರುವ ಪುಸ್ತಕಗಳನ್ನು ಸರ್ಕಾರ ಹಿಂಪಡೆದು ಹೊಸ ಪಠ್ಯ ಪುಸ್ತಕಗಳ ಹೆಸರಲ್ಲಿ ಕುವೆಂಪು, ಬಸವಣ್ಣ, ಅಂಬೇಡ್ಕರ್, ಚಂದ್ರಶೇಖರ ಆಜಾದ್‌ರವರ ಹೆಸರನ್ನು ಸೇರಿಸಿ ಮುದ್ರಿಸಬೇಕು ಎಂದರು.
ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಚಿದಾನಂದ್ ಮಾತನಾಡಿ, ಮಹಾನ್ ಚೇತನರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ರೋಹಿತ್ ಚಕ್ರತೀರ್ಥನನ್ನು ಸರ್ಕಾರ ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಉಗ್ರಸ್ವರೂಪ ತೆಗೆದುಕೊಳ್ಳಲಿದೆ ಎಂದರು.