ದ್ವಿತೀಯ ಪಿಯುಸಿ ಫಲಿತಾಂಶದ ಮರುಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಸಮಸ್ಯೆ ಆಗಿದ್ದು, ತಾಂತ್ರಿಕ ಕಾರಣಗಳಿಂದ ಬುಧವಾರ ಸ್ಕ್ಯಾನ್ ಪ್ರತಿಗಳ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು (ಜು.7): ದ್ವಿತೀಯ ಪಿಯುಸಿ ಫಲಿತಾಂಶದ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಲಾಗದೆ ಸಮಸ್ಯೆ ಅನುಭವಿಸುತ್ತಿದ್ದಾರೆ.
ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಬುಧವಾರದಿಂದ ಇಲಾಖೆಯ ವೆಬ್‌ಸೈಟ್‌ನಲ್ಲಿ ಸ್ಕ್ಯಾನ್ ಪ್ರತಿಗಳನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಪಿಯು ಇಲಾಖೆ ತಿಳಿಸಿತ್ತು. ಆದರೆ, ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ದಿನವಿಡೀ ಪ್ರಯತ್ನಿಸಿದರು ಸ್ಕ್ಯಾನ್ ಪ್ರತಿಗಳು ಡೌನ್‌ಲೋಡ್ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕೋವಿಡ್ ವೇಳೆ ಸರ್ಕಾರಿ ಶಾಲೆ, ಕಾಲೇಜು ಪ್ರವೇಶ ಏರಿಕೆ
ಈ ಸಂಬಂಧ ಇಲಾಖೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ತಾಂತ್ರಿಕ ಕಾರಣಗಳಿಂದ ಬುಧವಾರ ಸ್ಕ್ಯಾನ್ ಪ್ರತಿಗಳ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ವಿದ್ಯಾರ್ಥಿಗಳು ಆತಂಕ ಪಡಬೇಕಿಲ್ಲ. ಸಮಸ್ಯೆ ಸರಿಪಡಿಸಲಾಗುತ್ತಿದೆ. ಗುರುವಾರ ಮಧ್ಯಾಹ್ನ 12 ಗಂಟೆಯಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಅಗತ್ಯಬಿದ್ದರೆ ಕಾಲಾವಕಾಶ ವಿಸ್ತರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಸ್ಕ್ಯಾನ್ ಪ್ರತಿ ಪಡೆದವರಿಗೆ ಮಾತ್ರವೇ ಮರು ಮೌಲ್ಯಮಾಪನ ಮತ್ತು ಅಂಕ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ತಾವು ಬರೆದ ಉತ್ತರಕ್ಕೆ ಸರಿಯಾಗಿ ಅಂಕ ಬಂದಿಲ್ಲವೇ ಎಂಬುದನ್ನು ಪರಿಶೀಲಿಸಿಕೊಂಡ ಬಳಿಕವೇ ಅರ್ಜಿ ಸಲ್ಲಿಸಬೇಕಾಗುತ್ತದೆ. ಇದಕ್ಕೆ ಜು.13 ಕೊನೆಯದಿನವಾಗಿದ್ದು, ಪ್ರತಿ ವಿಷಯದ ಮರು ಮೌಲ್ಯಮಾಪನಕ್ಕೆ 1670 ರು. ಶುಲ್ಕ ನಿಗದಿಪಡಿಸಿದೆ. ಅಂಕ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಶುಲ್ಕವಿಲ್ಲ ಎಂದು ಇಲಾಖೆ ಹೇಳಿದೆ.
ಶಿಕ್ಷಕನ ವಿರುದ್ಧ 14 ಲೈಂಗಿಕ ಕಿರುಕುಳ ಕೇಸ್ ವಜಾಕ್ಕೆ ಹೈಕೋರ್ಚ್ ನಕಾರ
ಇಂದು ಪಿಯು ಶಿಕ್ಷಕರ ವರ್ಗಾವಣೆಗೆ ಕೌನ್ಸೆಲಿಂಗ್
ಸರ್ಕಾರಿ ದ್ವಿತೀಯ ಪಿಯುಸಿ ಉಪನ್ಯಾಸಕರ ವರ್ಗಾವಣೆ ಸಂಬಂಧ ಜು.7ರಿಂದ ಕೌನ್ಸೆಲಿಂಗ್ ಆರಂಭವಾಗಲಿದ್ದು, 2018ರಲ್ಲಿ ಕಡ್ಡಾಯ ವರ್ಗಾವಣೆಯಾಗಿದ್ದ ಉಪನ್ಯಾಸಕರಿಗೆ ಕೌನ್ಸೆಲಿಂಗ್‌ನಲ್ಲಿ ಮೊದಲ ಆದ್ಯತೆ ನೀಡಲಾಗಿದೆ. ಈ ಉಪನ್ಯಾಸಕರ ವರ್ಗಾವಣೆ ಪೂರ್ಣಗೊಂಡ ಬಳಿಕ ಉಳಿದವರ ವರ್ಗಾವಣೆ ನಡೆಯಲಿದೆ.
ಗುರುವಾರ ಬೆಳಗ್ಗೆ 9 ಗಂಟೆಯಿಂದ ಇಲಾಖೆಯ ಎಲ್ಲ ಉಪನಿರ್ದೇಶಕರ ಕಚೇರಿಗಳಲ್ಲಿ ವರ್ಗಾವಣೆ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದ್ದು ಸಮಯಕ್ಕೆ ಸರಿಯಾಗಿ ಉಪನ್ಯಾಸಕರು ಸ್ಥಳದಲ್ಲಿ ಹಾಜರಿರಬೇಕು. ಜೇಷ್ಠತಾ ಪಟ್ಟಿಯ ಅನುಸಾರ ಹಾಜರಾತಿ ಸ್ಥಳ ಆಯ್ಕೆ ಮಾಡಿಕೊಳ್ಳಬೇಕು. ಬರುವಾಗ ಕಡ್ಡಾಯ ವರ್ಗಾವಣೆಯ ಆದೇಶ ಪತ್ರ, ಹಾಲಿ ಕಾರ್ಯನಿರ್ವಹಿಸುತ್ತಿರುವ ಕಾಲೇಜಿನಿಂದ ದೃಢೀಕರಣ ಪತ್ರ ಮತ್ತು ಇಲಾಖೆ ಗುರುತಿನ ಚೀಟಿ ತರಬೇಕು.
Textbook Row; ಸರ್ಕಾರದ ವಿರುದ್ಧ ನಾರಾಯಣ ಗುರು ವಿಚಾರ ವೇದಿಕೆ ಪ್ರತಿಭಟನೆ
ಉಪನ್ಯಾಸಕರ ಬದಲು ಬೇರೆ ವ್ಯಕ್ತಿಗಳು ಕೌನ್ಸೆಲಿಂಗ್‌ಗೆ ಹಾಜರಾಗಲು ಅವಕಾಶವಿಲ್ಲ. ಇಲಾಖೆಯು ಝೂಮ್ ತಂತ್ರಾಂಶದ ಮೂಲಕ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಸಲಾಗುವುದು. ತಂತ್ರಾಂಶದ ಲಿಂಕ್ ಅನ್ನು ಎಲ್ಲ ಡಿಡಿಪಿಯುಗಳ ಮೊಬೈಲ್‌ಗೆ ವಾಟ್ಸಾಪ್ ಮೂಲಕ ಕಳುಹಿಸಲಾಗುತ್ತದೆ. ಉಪನಿರ್ದೇಶಕರು ವರ್ಗಾವಣೆ ಪ್ರಕ್ರಿಯೆ ಯಶಸ್ವಿಗಳಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಇಲಾಖೆ ಸೂಚಿಸಿದೆ.