Textbook Row; ಸರ್ಕಾರದ ವಿರುದ್ಧ ನಾರಾಯಣ ಗುರು ವಿಚಾರ ವೇದಿಕೆ ಪ್ರತಿಭಟನೆ

By Suvarna News  |  First Published Jul 6, 2022, 8:22 PM IST

ರಾಜ್ಯದ ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ತಾರಕಕ್ಕೇರಿದ್ದು ಸರಕಾರ ಮತ್ತು ಶಿಕ್ಷಣ ಸಚಿವರು ಒಂದಷ್ಟು ತೇಪೆ ಹಚ್ಚುವ ಕೆಲಸದ ಮೂಲಕ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಲ್ಲವ ಸಮುದಾಯದ ಸಂಘಟನೆ ಕೋಪ  ವ್ಯಕ್ತಪಡಿಸಿದೆ.


ಉಡುಪಿ (ಜು.6): ರಾಜ್ಯ ಸರ್ಕಾರದ ವಿರುದ್ಧ ಕರಾವಳಿ ಭಾಗದ ಬಿಲ್ಲವ ಸಮುದಾಯದ ಸಂಘಟನೆಗಳ ಕೋಪ ಭುಗಿಲೆದ್ದಿದೆ. ಬಿಲ್ಲವ ವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ತೀರ್ಮಾನಿಸಿದೆ.

ರಾಜ್ಯದ ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ತಾರಕಕ್ಕೇರಿದ್ದು ಸರಕಾರ ಮತ್ತು ಶಿಕ್ಷಣ ಸಚಿವರು ಒಂದಷ್ಟು ತೇಪೆ ಹಚ್ಚುವ ಕೆಲಸದ ಮೂಲಕ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಬ್ರಹ್ಮಶ್ರೀ , ನಾರಾಯಣ ಗುರುಗಳ ಮತ್ತು ಪೆರಿಯಾರ್ ಅವರ ಜೀವನ ಚರಿತ್ರೆ ಹತ್ತನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಿಂದ ಕೈಬಿಟ್ಟಿರುವ ಬಗ್ಗೆ ಬಿಲ್ಲವ ಸಮುದಾಯಕ್ಕೆ ಅನ್ಯಾಯ ಆಗಿರುವುದಾಗಿ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ  ಉಡುಪಿ ಜಿಲ್ಲಾ ಅಧ್ಯಕ್ಷ ಜಗನ್ನಾಥ ಕೋಟೆ  ಹೇಳಿದ್ದಾರೆ.

Tap to resize

Latest Videos

ನಂತರದ ದಿನಗಳಲ್ಲಿ ಭಗತ್‌ ಸಿಂಗ್‌ ಚರಿತ್ರೆ ಕೈಬಿಟ್ಟಿರುವುದು ಜೊತೆಯಲ್ಲಿ ಬಸವಣ್ಣ, ಕುವೆಂಪು, ಅಂಬೇಡ್ಕರ್ ಅವರ ಚರಿತ್ರೆಯ ಪಾಠಗಳಲ್ಲಿ ಆಗಿರುವ ಲೋಪದೋಷಗಳ ಬಗ್ಗೆ ಲಿಂಗಾಯತರು, ಒಕ್ಕಲಿಗೆ ಸಮಾಜ ಮುಂತಾದ ಮೇಲ್ವರ್ಗಗಳ ಸ್ವಾಮೀಜಿಗಳ ಹೋರಾಟದ ಎಚ್ಚರಿಕೆ ಬಂದಾಗ ಎಚ್ಚರಗೊಂಡ ಕರ್ನಾಟಕ ಸರ್ಕಾರ ಹಾಗೂ ಶಿಕ್ಷಣ ಸಚಿವರು ರೋಹಿತ್ ಚಕ್ರತೀರ್ಥ ಸಮಿತಿ ವಿಸರ್ಜಿಸುವುದರ ಜೊತೆಗೆ ಕೇವಲ ಕುವೆಂಪು ಮತ್ತು ಬಸವಣ್ಣನವರ ಚರಿತ್ರೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿದೆ. ಈ ಮುಖಾಂತರ ಮೇಲ್ವರ್ಗಗಳನ್ನು ಓಲೈಸಲು ಹೊರಟಿರುವುದು ಮಾಧ್ಯಮಗಳ ಮುಖಾಂತರ ನಮ್ಮ ಗಮನಕ್ಕೆ ಬರುತ್ತಿದೆ.ಆದರೆ ಹಿಂದುಳಿದ ವರ್ಗಗಳ ಬೇಡಿಕೆಗೆ ಇವತ್ತಿಗೂ ಬೆಲೆ ಇಲ್ಲದಂತಾಗಿದೆ ಎಂದು ನೋವು ಹೊರಹಾಕಿದ್ದಾರೆ.

ಶಿಕ್ಷಕನ ವಿರುದ್ಧ 14 ಲೈಂಗಿಕ ಕಿರುಕುಳ ಕೇಸ್‌ ವಜಾಕ್ಕೆ ಹೈಕೋರ್ಚ್‌ ನಕಾರ

ಕೇರಳದಲ್ಲಿ ಮೇಲ್ವರ್ಗದವರ ಅನಾಚಾರ, ದಬ್ಬಾಳಿಕೆಯಿ೦ದಾಗಿ ಮತಾಂತರವಾಗುತ್ತಿದ್ದ ಹಿಂದುಳಿದ ವರ್ಗಗಳಿಗೆ ಸ್ವರವಾಗಿದ್ದ ಶ್ರೀ ನಾರಾಯಣ ಗುರುಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ . ಹಿಂದುಳಿದ ವರ್ಗದ ಜನರನ್ನು ಹಿಂದುತ್ವದಲ್ಲಿ ಉಳಿಸಿ ಕೇರಳವನ್ನು ದೇವರ ನಾಡನ್ನಾಗಿ ಪರಿವರ್ತಿಸಿದ ಮಹಾನ್ ಸಂತ, ವಿದ್ಯೆಯ ಮಹತ್ವವನ್ನು ಸಮಾಜಕ್ಕೆ ತಿಳಿಸಿಕೊಟ್ಟು ಕೇರಳದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ ಪರಮಪೂಜ್ಯ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು ಎಲ್ಲಾ ವಿದ್ಯಾರ್ಥಿಗಳು ಅಧ್ಯಯನ ಮಾಡಲೇಬೇಕು. ಹಾಗಾಗಿ ಎಲ್ಲಾ ಮಕ್ಕಳು ಓದುವ ಸಮಾಜ ವಿಜ್ಞಾನ ಪಠ್ಯ ಪುಸ್ತಕದಿಂದ ತೆಗೆದು ವಿದ್ಯಾರ್ಥಿಗಳಿಗೆ ಐಚಿಕವಾದ ಕನ್ನಡ ಪಠ್ಯ ಪುಸ್ತಕದಲ್ಲಿ ಸೇರ್ಪಡೆಗೊಳಿಸಿ ಈ ಸಮಾಜದ ಕಣ್ಣೂರೆಸುವ ತಂತ್ರ ಮಾಡುತ್ತಿದೆ ಎಂದು ವೇದಿಕೆ ಆರೋಪಿಸಿದೆ .

ದೆಹಲಿಯಲ್ಲಿ ಜನವರಿ 26ರ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರದ ಟ್ಯಾಬ್ಲೊಗೆ ಅವಕಾಶ ನಿರಾಕರಣೆ ಸಂದರ್ಭದಲ್ಲಿ ಗುರುಗಳಿಗೆ ಆಗಿರುವ ಅವಮಾನವನ್ನು ನಮ್ಮ ಸಮಾಜ ಇನ್ನೂ ಮರೆತಿಲ್ಲ ಈಗ ಮತ್ತೊಮ್ಮೆ ಹಿಂದುಳಿದ ವರ್ಗಗಳ, ಜನಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿ ಬರುವ ಬಿಲ್ಲವ, ಈಡಿಗ, ನಾಮಧಾರಿಯಾಗಿ 26 ಪಂಗಡಗಳನ್ನು ಒಳಗೊಂಡ ನಾರಾಯಣ ಗುರು ಸಮಾಜದ ಅವಶ್ಯಕತೆ ಇಲ್ಲವೆಂದು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.

ಸರ್ಕಾರ ಹಾಗೂ ಶಿಕ್ಷಣ ಸಚಿವರಿಗೆ ಎಚ್ಚರಿಕೆಯನ್ನು ಕೊಡುತ್ತಿದ್ದೇವೆ. ಸಮಾಜದ ಆಗ್ರಹದಂತೆ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿಯೇ ನಾರಾಯಣ ಗುರುಗಳ ಜೀವನ ಚರಿತ್ರೆ ಈ ಹಿಂದೆ ಇದ್ದಂತೆ ಬರಬೇಕು. ಇದ ಜೊತೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಶ್ರೀ ನಾರಾಯಣ ಗುರು ಸಮಾಜಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಪ್ರತ್ಯೇಕ ನಿಗಮ ರಚಿಸಬೇಕೇಂಬ ಬೇಡಿಕೆ ಇದೆ. ನಮ್ಮ ನಂತರ ಬೇಡಿಕೆ ಇಟ್ಟ ಅನೇಕ ಸಮಾಜಗಳಿಗೆ ಸರಕಾರ ತಕ್ಷಣ ಪ್ರತ್ಯೇಕ ನಿಗಮ ರಚಿಸಿ ನೂರಾರ ಕೋಟಿ ಅನುದಾನವನ್ನು ನೀಡಿದೆ. ಆದರೆ ನಮಗೆ ಪ್ರತ್ಯೇಕ ನಿಗಮ ರಚಿಸದೆ ಬೇರೆ ಸಮಾಜಗಳಿಗೆ ಇದ್ದ ನಿಗಮಕ್ಕೆ ನಮ್ಮನ್ನು ತೂರಿಸು ಕೆಲಸ ಆಗಿದೆ. 

ಶೇ.92 ಮಕ್ಕಳಿಗೆ ಪುಸ್ತಕ ವಿತರಣೆಯಾಗಿದೆ, ಪೂರೈಕೆಯಲ್ಲಿ ಕೊರತೆಯಿಲ್ಲ: BC Nagesh

ಸಮಾಜದ ಅಭಿವೃದ್ಧಿಗೆ ಯಾವುದೇ ಪ್ರಯೋಜನ ಇಲ್ಲದ 5 ವಸತಿ ಶಾಲೆಗಳಿಗೆ ಕೇವಲ ಶ್ರೀ ನಾರಾಯಣ ಗುರುಗಳ ಹೆಸರನ್ನಿಟ್ಟು ಸಮಾಜಕ್ಕೆ ಭಾರಿ ಕೊಡುಗೆ ನೀಡಿದ ಹಾಗೆ ಸರಕಾರ ಮತ್ತು ಮಂತ್ರಿಗಳು ಪ್ರಚಾರ ನೀಡಿರುತ್ತಾರೆ.ಇದನ್ನೂ ನಾವು ತೀವ್ರವಾಗಿ ಖಂಡಿಸುತ್ತಿದ್ದು ಬಿಲ್ಲವ ಸಮಾಜದ ಬಗ್ಗೆ ಸರಕಾರಕ್ಕೆ ನಿಜವಾಗಿ ಕಾಳಜಿ ಇದ್ದಲ್ಲಿ ಸರಕಾರ ತಕ್ಷಣ ಸಮಾಜಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ನಿಗಮ ರಚಿಸಬೇಕೆಂದು ಒತ್ತಾಯಿಸುತ್ತಿದ್ದೇವೆ ಎಂದು ಜಗನ್ನಾಥ್ ಕೋಟೆ ಹೇಳಿದ್ದಾರೆ .

ಈ ಬಗ್ಗೆ ದಿನಾಂಕ ಜುಲೈ 8 ಶುಕ್ರವಾರ ಮಣಿಪಾಲ ಟೈಗರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಉಡುಪಿ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗೆ ಸಹಯೋಗದೊಂದಿಗೆ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಮುಂದಾಳುತ್ವದಲ್ಲಿ ಜರಗುವ ಪ್ರತಿಭಟಣಾ ಸಭೆಯಲ್ಲಿ ಶ್ರೀ ನಾರಾಯಣಗುರು ವಿಚಾರ ವೇದಿಕೆಯ ಎಲ್ಲಾ ತಾಲೂಕು ಮತ್ತು ವಲಯ ಸಮಿತಿಗಳ ಪದಾಧಿಕಾರಿಗಳು ಭಾಗವಹಿಸುತ್ತಿದೆ ಎಂದು ಎಚ್ಚರಿಸಿದ್ದಾರೆ.

click me!