ಎನ್‌ಇಪಿಯಿಂದ ಭಾರತ ಸೂಪರ್‌ ಪವರ್‌: ಅಮಿತ್‌ ಶಾ

By Girish Goudar  |  First Published May 4, 2022, 4:59 AM IST

*   ಜ್ಞಾನಾಧಾರಿತ ದೇಶವನ್ನಾಗಿ ರೂಪಿಸಲು ಹೊಸ ಶಿಕ್ಷಣ ನೀತಿ ಪೂರಕ
*   ಬೆಂಗಳೂರಲ್ಲಿ ನೃಪತುಂಗ ವಿವಿ ಉದ್ಘಾಟಿಸಿ ಕೇಂದ್ರ ಸಚಿವ ಪ್ರತಿಪಾದನೆ
*   ಬಸವಣ್ಣನ ವಚನಗಳನ್ನು ಎಲ್ಲರೂ ಓದಬೇಕು 
 


ಬೆಂಗಳೂರು(ಮೇ.04): ರಾಷ್ಟ್ರೀಯ ನೂತನ ಶಿಕ್ಷಣ ನೀತಿ (NEP) ಮೂಲಕ ಭಾರತವನ್ನು ಜ್ಞಾನವಂತರ ಅಥವಾ ಜ್ಞಾನಾಧಾರಿತ ‘ಸೂಪರ್‌ ಪವರ್‌’(Super Power) ದೇಶವನ್ನಾಗಿ ರೂಪಿಸಿ ದೇಶದ ಯುವಜನರಿಗೆ ಉಜ್ವಲ ಅವಕಾಶಗಳನ್ನು ಒದಗಿಸುವುದು ಕೇಂದ್ರ ಸರ್ಕಾರದ ದೃಢ ಸಂಕಲ್ಪವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit Shah) ಹೇಳಿದ್ದಾರೆ.

ಕೇಂದ್ರ ಸರ್ಕಾರದ(Central Government) ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ನಗರದಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ನೃಪತುಂಗ ವಿಶ್ವವಿದ್ಯಾಲಯ, ವಿವಿಯ ಶೈಕ್ಷಣಿಕ ಸಮುಚ್ಚಯದ ಶಂಕುಸ್ಥಾಪನೆ, ಲಾಂಛನ ಅನಾವರಣ ಹಾಗೂ ಬಳ್ಳಾರಿಯಲ್ಲಿ(Ballari) ಸ್ಥಾಪಿಸಲಾಗಿರುವ ವಿಧಿವಿಜ್ಞಾನ ಪ್ರಯೋಗಾಲಯವನ್ನು ವರ್ಚುವಲ್‌ ಆಗಿ ಉದ್ಘಾಟಿಸಿದರು.

Tap to resize

Latest Videos

NEP 2020: ಬಲಿಷ್ಠ ಭಾರತ ನಿರ್ಮಾಣಕ್ಕೆ ರಾಷ್ಟೀಯ ಶಿಕ್ಷಣ ನೀತಿ ಅವಶ್ಯಕ: ಸಚಿವ ಅಶ್ವತ್ಥ ನಾರಾಯಣ

ನಂತರ ಮಾತನಾಡಿದ ಅವರು, ಶಿಕ್ಷಣದ(Education) ಮೂಲಕ ಕ್ರಾಂತಿಕಾರಕ ಬದಲಾವಣೆ ತರಲು ದೇಶದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗಿದೆ. ದೇಶದಲ್ಲಿ(India) ಸಂಭವಿಸುತ್ತಿರುವ ಶೈಕ್ಷಣಿಕ ಕ್ರಾಂತಿಯಲ್ಲಿ ಭಾರತೀಯ ಪ್ರಾದೇಶಿಕ ಭಾಷೆಗಳಿಗೆ ಮಹತ್ತ್ವದ ಸ್ಥಾನವಿದೆ. ಕರ್ನಾಟಕ(Karnataka) ಎನ್‌ಇಪಿಯನ್ನು ಜಾರಿಗೊಳಿಸಿರುವ ದೇಶದ ಮೊದಲ ರಾಜ್ಯವಾಗಿದ್ದು, ಇತರೆ ರಾಜ್ಯಗಳಿಗೂ ಇದೊಂದು ಮಾದರಿ ನಡೆಯಾಗಿದೆ ಎಂದು ಶ್ಲಾಘಿಸಿದರು.

ದೇಶದ ಭವಿಷ್ಯವಾಗಿರುವ ವಿದ್ಯಾರ್ಥಿಗಳಲ್ಲಿ ದೇಶಭಕ್ತಿಯ ಸಂಸ್ಕಾರವನ್ನು ಬೆಳೆಸಬೇಕಾಗಿದೆ. ದೇಶವನ್ನು ಪ್ರೀತಿಸುವಂತಹ ಶಿಕ್ಷಣವನ್ನು ಎನ್‌ಇಪಿ ಅಡಿಯಲ್ಲಿ ಒದಗಿಸಲಾಗುವುದು. ಎನ್‌ಇಪಿಯಿಂದ ಭಾರತ ಜ್ಞಾನವಂತರ ದೇಶವಾಗಿ ರೂಪುಗೊಳ್ಳಲಿದೆ. ಇಲ್ಲಿಯೇ ಎಲ್ಲ ಕ್ಷೇತ್ರದಲ್ಲೂ ಉತ್ಪಾದನೆ ಮಾಡಲು ಅವಕಾಶಗಳಿವೆ. ಪ್ರಧಾನಿ ಮೋದಿ ಅವರು ಪ್ರತಿ ಕ್ಷೇತ್ರಕ್ಕೂ ಒತ್ತು ನೀಡಿದ್ದಾರೆ. ಇನ್ನು ನೂರು ವರ್ಷಗಳಲ್ಲಿ ಭಾರತ ವಿಶ್ವದ ನಂಬರ್‌ 1 ರಾಷ್ಟ್ರವಾಗಿ ಅಥವಾ ವಿಶ್ವಗುರು ಎನಿಸಿಕೊಳ್ಳುವುದು ನಿಶ್ಚಿತ ಎಂದರು.

ದೇಶದಲ್ಲಿ ಮೋದಿ(Narendra Modi) ಸರ್ಕಾರ ಬಂದ ಮೇಲೆ 230ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳನ್ನು ನಮ್ಮ ಸರ್ಕಾರ ಸ್ಥಾಪಿಸಿದೆ. 200ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಗ್ರಾಮೀಣ ಭಾಗದಲ್ಲೇ 410ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳನ್ನು ಅಸ್ತಿತ್ವಕ್ಕೆ ತರಲಾಗಿದೆ. ಜಮ್ಮು-ಕಾಶ್ಮೀರದ(Jammu Kashmri) ಲಡಾಖ್‌ ಮತ್ತು ಈಶಾನ್ಯ ಭಾರತ ಸೇರಿದಂತೆ ದೇಶದ ಉದ್ದಗಲಕ್ಕೂ ಕೇಂದ್ರೀಯ ವಿವಿ, ಏಮ್ಸ್‌, ಐಐಟಿಗಳು, ವೈದ್ಯಕೀಯ ಕಾಲೇಜುಗಳು, ವಿಶ್ವವಿದ್ಯಾಲಯಗಳನ್ನು ಆರಂಭಿಸಲಾಗಿದೆ. ಪ್ರಧಾನಿ ಮೋದಿ ತಮ್ಮ ದಕ್ಷ ನೀತಿಗಳ ಮೂಲಕ ದೇಶವನ್ನು ಜಾಗತಿಕ ತಯಾರಿಕಾ ವಲಯವಾಗಿ ಬೆಳೆಸುತ್ತಿದ್ದಾರೆ. ಮತ್ತೊಂದೆಡೆ ಭಯೋತ್ಪಾದನೆ ಮತ್ತಿತರ ಪಿಡುಗುಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತಿದೆ. ಉರಿ, ಪುಲ್ವಾಮದಲ್ಲಿ ಏರ್‌ ಸ್ಟೆ್ರೖಕ್‌ ಮಾಡಿಸಿ ದೇಶದ ತಂಟೆಗೆ ಬಂದರೆ ಏನಾಗಲಿದೆ ಎನ್ನುವುದನ್ನೂ ತೋರಿಸಿಕೊಟ್ಟಿದ್ದಾರೆ. ಇನ್ನು ಕೆಲವೇ ವರ್ಷಗಳಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಭಾರತವು ಅಮೆರಿಕ ಮತ್ತು ಇಸ್ರೇಲ್‌ ದೇಶಗಳ ಮಟ್ಟಕ್ಕೆ ಬೆಳೆದು, ಬೆಳಗಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ನೂರು ವರ್ಷಗಳಿಗೂ ಹೆಚ್ಚು ಇತಿಹಾಸವಿರುವ ಸರ್ಕಾರಿ ವಿಜ್ಞಾನ ಕಾಲೇಜು ಈಗ ಒಂದು ವಿಶ್ವವಿದ್ಯಾಲಯವಾಗಿದೆ. ರಾಷ್ಟ್ರಕೂಟರ ಪ್ರಸಿದ್ಧ ಅರಸ ಅಮೋಘವರ್ಷ ನೃಪತುಂಗನ ಹೆಸರಿಟ್ಟಿರುವುದು ಸಂತಸದ ವಿಚಾರ. ಇನ್ಮುಂದೆ ಇದು ಪ್ರಸಿದ್ಧ ವಿವಿಯಾಗಿ ಬೆಳೆಯಲಿ ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ, ಸಂಸದ ಪಿ.ಸಿ.ಮೋಹನ್‌, ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌, ನೃಪತುಂಗ ವಿವಿ ಕುಲಪತಿ ಶ್ರೀನಿವಾಸ ಎಸ್‌. ಬಳ್ಳಿ ಮತ್ತಿತರರು ಉಪಸ್ಥಿತರಿದ್ದರು.

ಬಸವಣ್ಣನ ವಚನಗಳನ್ನು ಎಲ್ಲರೂ ಓದಬೇಕು: ಶಾ

ಹನ್ನೆರಡನೇ ಶತಮಾನದ ಸಾಮಾಜಿಕ ಹರಿಕಾರ ಬಸವಣ್ಣನವರ(Basavanna) ವಚನಗಳಲ್ಲಿನ ಆದರ್ಶ, ಅವರ ಚಿಂತನೆಗಳನ್ನು ಪಾಲಿಸಿದರೆ ನಾವೂ ಕೂಡ ಆದರ್ಶಪ್ರಾಯರಾಗಿ ಮುನ್ನಡೆಯಲು ಸಾಧ್ಯವಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

Language Politics: ಭಾಷೆ ಹೆಸರಲ್ಲಿ ರಾಜಕೀಯ ಬೇಡ: ಕೇಂದ್ರ ಸಚಿವ ಪ್ರಧಾನ್‌

ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ನೃಪತುಂಗ ವಿಶ್ವವಿದ್ಯಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಸವಣ್ಣ ಹಾಗೂ ಸರಸ್ವತಿ ದೇವಿಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಇವತ್ತು ಅಕ್ಷಯ ತೃತೀಯಾದ ಪವಿತ್ರ ದಿನ. ದೇಶದಲ್ಲಿ ಕೃಷಿಕರು ಹಸುವಿನ ಪೂಜೆ ನೆರವೇರಿಸಿ ವರ್ಷವನ್ನು ಆರಂಭಿಸುತ್ತಾರೆ. ಅಲ್ಲದೆ, ಬಸವಣ್ಣನವರ ಜಯಂತಿ ಕೂಡ. ಬಸವಣ್ಣನವರು ರಚಿಸಿದ ವಚನಗಳಲ್ಲಿನ ಆದರ್ಶ ಪಾಲನೆಯನ್ನು ನಾವೆಲ್ಲರೂ ಮಾಡಬೇಕು. ಅವರ ಚಿಂತನೆಗಳನ್ನು ಪಾಲಿಸಿದರೆ ನಾವೂ ಆದರ್ಶಪ್ರಾಯರಾಗಿ ಮುನ್ನಡೆಯುತ್ತೇವೆ. ಪ್ರಜಾತಂತ್ರದ ಸ್ಪಷ್ಟಉದಾಹರಣೆಯನ್ನು ಅನುಭವ ಮಂಟಪದ ಮೂಲಕ ಬಸವಣ್ಣ ಬೋಧಿಸಿದ್ದಾರೆ. ಯುವಕರು ತಮ್ಮ ಶಾಲೆ, ಕಾಲೇಜಿನ ಪಠ್ಯ ವ್ಯಾಸಂಗದ ಜೊತೆಗೆ ಬಸವಣ್ಣನವರ ವಚನಗಳನ್ನೂ ಓದಬೇಕು. ವಿದ್ಯಾರ್ಥಿಗಳು ಮಾತ್ರವಲ್ಲ ಪ್ರತಿಯೊಬ್ಬರೂ ಓದಬೇಕು. ಆಗ, ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾಗದು. ಯಾವುದೇ ಸಮಸ್ಯೆ ಎದುರಾದರೂ ಎದುರಿಸುವ ಹಾಗೂ ಪರಿಹಾರಿಸುವ ಶಕ್ತಿ ಈ ವಚನಗಳಿಂದ ಸಿಗಲಿದೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನದಡಿ ಸ್ಥಾಪಿಸಲಾಗಿರುವ ‘ನೃಪತುಂಗ ವಿಶ್ವವಿದ್ಯಾಲಯ’ವನ್ನು ಮಂಗಳವಾರ ಅಧಿಕೃತವಾಗಿ ಉದ್ಘಾಟಿಸಿದ ಕೇಂದ್ರ ಸಚಿವ ಅಮಿತ್‌ ಶಾ ಅವರು ಇದೇ ವೇಳೆ ವಿವಿಯ ಶೈಕ್ಷಣಿಕ ಸಮುಚ್ಚಯದ ಶಂಕುಸ್ಥಾಪನೆ, ಲಾಂಛನ ಅನಾವರಣಗೊಳಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತಿತರರಿದ್ದರು.
 

click me!