ಸರಣಿಯಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮ ಸರ್ಕಾರ ಮತ್ತು ಆಡಳಿತ ಪಕ್ಷದವರಿಗೆ ಪ್ರತಿಷ್ಠೆ, ಅವಮಾನ ಮತ್ತು ಮುಜುಗರದ ಪ್ರಶ್ನೆಯಾದರೆ ವಿರೋಧಿ ಪಕ್ಷದವರಿಗೆ ದೂಷಣೆ ಮತ್ತು ನಿಂದನೆಗೆ ಸೂಕ್ತ ವಿಷಯ ಸಿಕ್ಕಿದಂತಾಯಿತು.
ಪರೀಕ್ಷಾ ಅಕ್ರಮ ಇಂದು ನಿನ್ನೆಯದಲ್ಲ. ಇದು ಹಲವಾರು ವರ್ಷಗಳಿಂದ ಕೆಲವೇ ಪರೀಕ್ಷೆಗಳಿಗೆ ಸೀಮಿತವಾಗಿ ನಡೆಯುತ್ತಿದ್ದರೂ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಕ್ರಮ ನಡೆದು ಈಗ ಹಲವು ಪರೀಕ್ಷೆಗಳಿಗೆ ಹರಡಿ ದೊಡ್ಡ ಸುದ್ದಿಯಾಗುತ್ತಿರುವುದು ಭಾರೀ ಆಶ್ಚರ್ಯವಾಗುತ್ತದೆ. ಸಾಮಾನ್ಯವಾಗಿ ಎಸ್.ಎಸ್.ಎಲ್.ಸಿ ಅಥವಾ ಪಿ.ಯು.ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿ ಅಕ್ರಮ ಆಗುತ್ತಿರುವುದು ಬಹಳ ಜನರಿಗೆ ಗೊತ್ತಿರುವ ವಿಷಯ.
ಕಳೆದ ಎರಡು ವರ್ಷಗಳ ಹಿಂದೆ ಪಿ.ಯು.ಸಿ ವಿಜ್ಞಾನ ವಿಷಯದ ಪ್ರಶ್ನೆಪತ್ರಿಕೆ ಸೋರಿಕೆಯಾಗಿ ಕೆಲವು ಅಧ್ಯಾಪಕರೇ ಶಾಮೀಲಾಗಿ ಪರೀಕ್ಷಾ ಅಕ್ರಮ ಎಸಗಿರುವುದು ತೀರಾ ಬೇಸರದ ಸಂಗತಿಯಾಗಿದೆ. ಮೆಡಿಕಲ್ ಪ್ರವೇಶಕ್ಕೆ ರಾಷ್ಟ್ರಮಟ್ಟದ ನೀಟ್ ಪರೀಕ್ಷೆಯ ಅಂಕವೇ ಪ್ರಧಾನವಾದಾಗ ಪಿ.ಯು.ಸಿ ಪರೀಕ್ಷಾ ಅಕ್ರಮ ನಮ್ಮ ರಾಜ್ಯಮಟ್ಟದಲ್ಲಿ ಸ್ವಲ್ಪ ಕಡಿಮೆಯಾಗಲು ಪ್ರಾರಂಭವಾಯಿತು. ಎಂದಿನಿಂದ ಪದವಿ ಪರೀಕ್ಷಾ ಅಂಕಗಳನ್ನು ಉದ್ಯೋಗ ನೇಮಕಾತಿಗೆ ಪರಿಗಣಿಸುವುದನ್ನು ಕಡಿಮೆ ಮಾಡಿ ಸ್ಪರ್ಧಾತ್ಮಕ ಪರೀಕ್ಷಾ ಅಂಕಗಳು ಉದ್ಯೋಗ ನೇಮಕಾತಿಗೆ ಮಾನದಂಡವಾಯಿತೋ ಅಂದಿನಿಂದ ಪದವಿ ಪರೀಕ್ಷಾ ಪ್ರಶ್ನೆ ಪತ್ರಿಕೆಗಳ ಸೋರಿಕೆ ಕಡಿಮೆಯಾಗಿ ಸ್ಪರ್ಧಾತ್ಮಕ ಪರೀಕ್ಷಾ ಪ್ರಶ್ನೆಪತ್ರಿಕೆಗಳು ಸೋರಿಕೆಗೆ ಆರಂಭವಾದವು.
ಸಾರ್ವಜನಿಕ ಆರೋಗ್ಯದಲ್ಲಿ ಪಿಜಿ ಮಾಡಿ, ಉದ್ಯೋಗ ಪಡೆಯಿರಿ
ಶತಾಯಗತಾಯ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕು ಎಂಬ ಹಂಬಲ, ಸರ್ಕಾರದ ಉನ್ನತಾಧಿಕಾರಿಗಳ ಹಾಗೂ ರಾಜಕೀಯ ವ್ಯಕ್ತಿಗಳ ಶಾಮೀಲು, ಹಣದ ಬಲ ಮತ್ತು ವಶೀಲಿ ಮುಂತಾದ ಕಾನೂನುಬಾಹಿರ ಮಾರ್ಗಗಳು ಪರೀಕ್ಷಾ ಅಕ್ರಮಕ್ಕೆ ಕಾರಣವಾದಂತಿದೆ. ಸಾಮಾನ್ಯವಾಗಿ ಕ್ಲಾಸ್-1, ಕ್ಲಾಸ್-2 ಗೆಜೆಟೆಡ್ ಹುದ್ದೆಗಳಿಗೆ ಬಹಳ ವರ್ಷಗಳಿಂದಲೂ ಸ್ಪರ್ಧಾತ್ಮಕ ಪರೀಕ್ಷೆ ನಡೆಯುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಎಸ್.ಡಿ.ಎ, ಎಫ್.ಡಿ.ಎ, ಪಿ.ಡಿ.ಓ ಪೋಲಿಸ್ ಕಾನ್‌ಸ್ಟೇಬಲ್, ಪಿ.ಎಸ್.ಐ, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಕ, ಕಾಲೇಜು ಉಪನ್ಯಾಸಕರ, ಬ್ಯಾಂಕು, ವಿಮೆ ಮುಂತಾದ ಇಲಾಖೆಯ ಆಯಕಟ್ಟಿನ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡುತ್ತಿರುವುದು ಸರ್ವೆ ಸಾಮಾನ್ಯವಾಗಿದೆ.
ನೇರ ನೇಮಕಾತಿಯಲ್ಲಿ ಅಕ್ರಮ-ಅವ್ಯವಹಾರ ಹೆಚ್ಚಾಗಿ ಸರ್ಕಾರಿ ಉದ್ಯೋಗವು ಉಳ್ಳವರ ಪಾಲಾಗಿ, ವಶೀಲಿ ಮತ್ತು ಹಣ ಬಲ ಇಲ್ಲದವರು ಸಮರ್ಥರಾದರೂ ಸೆಲೆಕ್ಟ್ ಆಗದೆ ಉದ್ಯೋಗದಿಂದ ವಂಚಿತರಾಗಿ ಆತ್ಮಹತ್ಯೆ ದರೋಡೆ-ದುವ್ರ್ಯಸನದ ದಾರಿ ಹಿಡಿಯುವುದನ್ನು ತಪ್ಪಿಸುವ ಸಲುವಾಗಿ ಹಾಗೂ ನೇಮಕಾತಿಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಹಲವು ಇಲಾಖಾ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯನ್ನು ಸರ್ಕಾರ ಜಾರಿಯಲ್ಲಿ ತಂದು ಸಮಾಜದ ಸಮರ್ಥರಿಗೆಲ್ಲ ಉದ್ಯೋಗ ಅವಕಾಶ ನೀಡುವ ಪ್ರಯತ್ನ ಮಾಡಿದೆ.
Karwar: ಕಡುಬಡತನದಲ್ಲಿ ಅರಳಿದ ಪ್ರತಿಭೆ: ಅಂಗವಿಕಲ ಯುವತಿಯ ಶಿಕ್ಷಣಕ್ಕೆ ಬೇಕಿದೆ ಸಹಾಯ ಹಸ್ತ
ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಸಲುವಾಗಿಯೇ ಕೆ.ಪಿ.ಎಸ್.ಸಿ, ಕೆ.ಇ.ಎ (ಕರ್ನಾಟಕ ಪರೀಕ್ಷಾ ಪ್ರಾದಿಕಾರ)ಗಳನ್ನು ಹುಟ್ಟುಹಾಕಿ ಪ್ರತಿ ಹಂತದಲ್ಲೂ ಪಾರದರ್ಶಕತೆ ಕಾಯ್ದುಕೊಂಡು ಪರೀಕ್ಷೆ ನಡೆಸಿದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಪ್ರಶ್ನೆಪತ್ರಿಕೆ ತಯಾರಿಸುವವರೆ ಸೋರಿಕೆ ಮಾಡಿದರೆ ಸರ್ಕಾರ ಏನು ತಾನೆ ಮಾಡೀತು? ಲೋಕೋಪಯೋಗಿ, ಪಿ.ಎಸ್.ಐ, ಉಪನ್ಯಾಸಕ ನೇಮಕ ಪರೀಕ್ಷಾ ಅಕ್ರಮದಲ್ಲಿ ಆಯಾ ವಿಭಾಗದ ಉನ್ನತಾಧಿಕಾರಿಗಳೇ ಅಥವಾ ಪ್ರಶ್ನೆ ಪತ್ರಿಕೆ ತೆಗೆಯುವವರೇ ಭಾಗಿಯಾಗಿರುವುದನ್ನು ಕೇಳಿದರೆ ಯಾವ ವ್ಯಕ್ತಿಗಳನ್ನು ನಂಬಿ ಸರ್ಕಾರ ಇಂತಹ ಪರೀಕ್ಷೆಗಳನ್ನು ನಡೆಸಬೇಕು? ಯಾರು ನಂಬಿಕೆಗೆ ಅರ್ಹರು? ಪ್ರಾಮಾಣಿಕತೆಗಾಗಿಯೇ ಪ್ರತ್ಯೇಕ ಪರೀಕ್ಷೆ ನಡೆಸಬೇಕೆ? ಮುಂತಾದ ಪ್ರಶ್ನೆಗಳು ಉದ್ಭವವಾಗುವವು.
ಪರೀಕ್ಷಾ ಅಕ್ರಮದ ಪರಿಣಾಮಗಳು
ಲೋಕೋಪಯೋಗಿ ಇಲಾಖಾ ಪರೀಕ್ಷೆ ಅಕ್ರಮ, ಪಿ.ಎಸ್.ಐ ಪರೀಕ್ಷಾ ಅಕ್ರಮ, ಉಪನ್ಯಾಸಕ ಪರೀಕ್ಷಾ ಅಕ್ರಮ ಹೀಗೆ ಪರೀಕ್ಷಾ ಅಕ್ರಮಗಳ ಸರಣಿಯೇ ಆಗಿ ಕರ್ನಾಟಕವೇ ಹಲವು ಪರೀಕ್ಷೆಗಳ ಅಕ್ರಮ ರಾಜ್ಯವಾಗತೊಡಗಿದೆ. ಪಿ.ಯು.ಸಿ, ಸಿಇಟಿ ಪರೀಕ್ಷೆಗಳಿಗೆ ದೇಶದಲ್ಲಿಯೇ ಮಾದರಿ ರಾಜ್ಯ ಎನಿಸಿಕೊಂಡ ಕರ್ನಾಟಕ ಈಗ ಪರೀಕ್ಷೆ ಅಕ್ರಮಕ್ಕೆ ಮಾದರಿ ರಾಜ್ಯವಾಗ ತೊಡಗಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಭ್ರಷ್ಟರ ಕೈ ಮೇಲಾಗಿ, ಪ್ರಾಮಾಣಿಕರೇ ಭ್ರಷ್ಟರಾಗುವ ಪರಿಸ್ಥಿತಿ ಬರಬಹುದು.
ಪಾಕಿಸ್ತಾನದಲ್ಲಿ ಪದವಿ ಓದಿದ ಭಾರತೀಯರಿಗೆ ಉದ್ಯೋಗ ಮತ್ತು ಉನ್ನತ ಅಭ್ಯಾಸಕ್ಕೆ ಭಾರತದಲ್ಲಿ ಅವಕಾಶ ಇಲ್ಲ ಎಂಬ ಕೇಂದ್ರ ಸರ್ಕಾರದ ಆದೇಶದಂತೆ ಕರ್ನಾಟಕದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಸಾದವರಿಗೆ ಬೇರೆ ರಾಜ್ಯ ಅಥವಾ ದೇಶಗಳಲ್ಲಿ ಉನ್ನತ ಅಭ್ಯಾಸ ಅಥವಾ ಉದ್ಯೋಗಕ್ಕೆ ಅವಕಾಶ ಇಲ್ಲ ಎಂಬ ಪ್ರಕಟಣೆ ಬರಬಹುದೆ? ರಾಜ್ಯದ ಹಲವು ಇಲಾಖೆಗಳ ಮೇಲೆ ಜನರ ನಂಬಿಕೆ ಕಡಿಮೆಯಾಗಿ ಸರ್ಕಾರದ ಮೇಲೆ ಇಟ್ಟವಿಶ್ವಾಸಕ್ಕೆ ಧಕ್ಕೆ ಬರಬಹುದು. ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿ ಹಲವು ಇಲಾಖೆಗಳು ಭ್ರಷ್ಟರ ಗೂಡಾಗಬಹುದು. ಪರೀಕ್ಷೆಯ ಅಕ್ರಮ ಬಯಲಾಗದೆ ಹಣ ಮತ್ತು ಪ್ರಭಾವಿ ವ್ಯಕ್ತಿಗಳ ವಶೀಲಿಯಿಂದ ಅಭ್ಯರ್ಥಿಗಳು ಆಯ್ಕೆಯಾದರೆ ಅಕ್ರಮವೇ ಸಕ್ರಮವಾಗಿ, ಅಪ್ರಾಮಾಣಿಕತೆಯೇ ಪ್ರಾಮಾಣಿಕತೆಯಾಗಿ, ಅವಿಶ್ವಾಸವೇ ವಿಶ್ವಾಸವಾಗಿ, ಅಸಮರ್ಥರೆಲ್ಲಾ ಸಮರ್ಥರಾಗಿ ರಾಜ್ಯದ ಹಲವು ಇಲಾಖೆಗಳು ಅಸಮರ್ಥರÜ, ಅಪ್ರಾಮಾಣಿಕರ ಮತ್ತು ಅವಿಶ್ವಾಸಿಗಳ ಗೂಡಾಗಬಹುದು.
ಹೆಚ್ಚು ಶುಲ್ಕ ಕೇಳಿದರೆ ಕಾಲೇಜು ಮಾನ್ಯತೆ ರದ್ದು: ಸಚಿವ ನಾಗೇಶ್
ಪರೀಕ್ಷಾ ಅಕ್ರಮಕ್ಕೆ ಕೆಲ ಪರಿಹಾರಗಳು
ಸರಣಿಯಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮ ಸರ್ಕಾರ ಮತ್ತು ಆಡಳಿತ ಪಕ್ಷದವರಿಗೆ ಪ್ರತಿಷ್ಠೆ, ಅವಮಾನ ಮತ್ತು ಮುಜುಗರದ ಪ್ರಶ್ನೆಯಾದರೆ ವಿರೋಧಿ ಪಕ್ಷದವರಿಗೆ ದೂಷಣೆ ಮತ್ತು ನಿಂದನೆಗೆ ಸೂಕ್ತ ವಿಷಯ ಸಿಕ್ಕಿದಂತಾಯಿತು. ಪರೀಕ್ಷೆಯಲ್ಲಿ ಪಾಸಾಗಿ ಉದ್ಯೋಗ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆಯಾಯಿತು. ಈಗಾಗಲೇ ಭೂಮಿ, ಹೊಲ ಅಡವಿಟ್ಟು ಹಣ ಕೊಟ್ಟು ವಶೀಲಿ ಹಚ್ಚಿದವರಿಗೆ ಹಣ ಕಳೆದುಕೊಂಡ ನೋವಾಯಿತು. ಇದಕ್ಕೆ ಮಿಗಿಲಾಗಿ ಪಿ.ಎಸ್.ಐ ಅಥವಾ ಉಪನ್ಯಾಸಕ ಹುದ್ದೆಗೆ ಆಯ್ಕೆಯಾದರೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡುವ ಕನಸು ಕಂಡು ಸ್ವಲ್ಪ ಅಡ್ವಾನ್ಸ್ ಹಣ ನೀಡಿದ ಭಾವಿ ಮಾವಂದಿರಿಗೆ ದೊಡ್ಡ ಆಘಾತವೇ ಆಗಿರಬಹುದು. ಆದ್ದರಿಂದ ಜನರ ಒಳಿತಿಗಾಗಿ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಮತ್ತು ಜನಪರ ಪಾರದರ್ಶಕ ಆಡಳಿತ ನೀಡುವ ಸಲುವಾಗಿ ಈ ಪರೀಕ್ಷಾ ಅಕ್ರಮಕ್ಕೆ ಒಂದು ಕಾಯಂ ಪರಿಹಾರವನ್ನು ಸರ್ಕಾರ ಹುಡುಕುವುದು ಲೇಸು. ಈ ದಿಶೆಯಲ್ಲಿ ಈ ಕೆಳಗಿನ ಕೆಲವು ಸಲಹೆ ಸೂಚನೆಗಳು ಪ್ರಯೋಜನಕಾರಿಯಾಗಬಹುದು.
1.ಪರೀಕ್ಷಾ ಅಕ್ರಮದ ಕುರಿತಾಗಿ ಪರೀಕ್ಷಾ ಪ್ರಾಧಿಕಾರ ಅಥವಾ ಪರೀಕ್ಷೆ ನಡೆಸುವ ಇಲಾಖೆಗಳು ಯಾವ ಅಕ್ರಮಕ್ಕೆ ಯಾವ ಶಿಕ್ಷೆ ಮತ್ತು ಎಷ್ಟುದಂಡ ಎನ್ನುವ ನಿಯಮ ರೂಪಿಸಿ ಜಾರಿಗೆ ತರಬೇಕು. ಇಂತಹ ನಿಯಮ ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿಗಳಿಂದ ಹಿಡಿದು ಅಕ್ರಮ ವ್ಯವಹಾರದಲ್ಲಿ ಭಾಗಿಯಾಗುವ ಯಾವುದೇ ಸರ್ಕಾರಿ ಅಥವಾ ಖಾಸಗಿ ನೌಕರರು, ಸಾರ್ವಜನಿಕರು, ಜನಪ್ರತಿನಿಧಿಗಳು, ರಾಜಕೀಯ ಪಕ್ಷದ ಸದಸ್ಯರು ಅಥವಾ ವಕ್ತಾರರು ಎಲ್ಲರಿಗೂ ಅನ್ವಯವಾಗುವಂತಿರಬೇಕು.
ಮದರಸಾ ಶಿಕ್ಷಣವೇ ಇರಕೂಡದು: ಅಸ್ಸಾಂ ಸಿಎಂ ಶರ್ಮಾ ಪ್ರತಿಪಾದನೆ!
2.ಒಮ್ಮೆ ಅಕ್ರಮ ವ್ಯವಹಾರದಲ್ಲಿ ಭಾಗಿಯಾದ ಅಭ್ಯರ್ಥಿಗಳು, ವಿದ್ಯಾರ್ಥಿಗಳು ಹಾಗೂ ಯಾವುದೇ ನೌಕರರು ಮುಂದಿನ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳಲು ಅನರ್ಹರು ಎನ್ನುವಂತಾಗಬೇಕು.
3.ಯಾವುದೇ ಸರ್ಕಾರಿ ನೌಕರರು ಪರೀಕ್ಷೆ ಅಥವಾ ನೇಮಕಾತಿ ಅಕ್ರಮಗಳಲ್ಲಿ ಭಾಗಿಯಾದದ್ದು ರುಜುವಾತಾದರೆ ಅಂತಹ ನೌಕರರನ್ನು ಉದ್ಯೋಗದಿಂದ ವಜಾಗೊಳಿಸಿ ಸಂಬಳ-ಪಿಂಚಣಿ ನಿಲ್ಲಿಸಿ ಮುಂದಿನ ಉದ್ಯೋಗಕ್ಕೆ ಅನರ್ಹರು ಎನ್ನುವ ನಿಯಮ ಜಾರಿಯಲ್ಲಿ ಬಂದರೆ ಯಾವ ಸರ್ಕಾರಿ ನೌಕರನೂ ಇಂತಹ ಅಕ್ರಮ ವ್ಯವಹಾರದಲ್ಲಿ ಭಾಗಿಯಾಗಲಾರರು.
4.ಖಾಸಗಿ ಹಾಗೂ ಹಂಗಾಮಿ ನೌಕರರು ಇಂತಹ ಅಕ್ರಮ ವ್ಯವಹಾರದಲ್ಲಿ ಭಾಗಿಯಾದರೆ ಅವರು ಮುಂದಿನ ಯಾವುದೇ ಉದ್ಯೋಗಕ್ಕೆ ಅರ್ಹರಲ್ಲ ಎನ್ನುವ ನಿಯಮ ರೂಪಿಸಿ, ಕಾರಣಾಂತರದಿಂದ ನಿವೃತ್ತಿ ನೌಕರರು ಭಾಗಿಯಾದರೂ ಅವರ ಪಿಂಚಣಿಯನ್ನೂ ನಿಲ್ಲಿಸಿ ಸರ್ಕಾರಿ ಸವಲತ್ತನ್ನು ಹಿಂಪಡೆಯುವ ನಿಯಮ ರೂಪಿಸಬೇಕು
5.ಯಾವುದೇ ಜನಪ್ರತಿನಿಧಿಗಳು ಅಕ್ರಮ ವ್ಯವಹಾರದಲ್ಲಿ ಭಾಗಿಯಾದದ್ದು ರುಜುವಾತಾದರೆ ಅವರ ಹುದ್ದೆಯನ್ನು ಸ್ಥಗಿತಗೊಳಿಸಿ ಸಕಲ ಸರ್ಕಾರಿ ಸೌಲಭ್ಯವನ್ನು ಹಿಂಪಡೆದುಕೊಂಡು ಮುಂದಿನ ಚುನಾವಣೆಗೆæ ನಿಲ್ಲಲು ಅನರ್ಹರು ಎನ್ನುವ ನಿಯಮ ಜಾರಿಯಲ್ಲಿ ತರಬೇಕು.
6.ಸಾರ್ವಜನಿಕರು, ಸ್ವತಂತ್ರ ಉದ್ಯೋಗಿಗಳು ಹಾಗೂ ಉದ್ದಿಮೆದಾರರು ಇಂತಹ ಅಕ್ರಮ ವ್ಯವಹಾರದಲ್ಲಿ ಭಾಗಿಯಾದರೆ ಅವರಿಗೆ ನೀಡಿದ ವಿವಿಧ ಸವಲತ್ತುಗಳಾದ ಪಡಿತರ ಚೀಟಿ, ಬಿ.ಪಿ.ಎಲ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ನೀರು ಮತ್ತು ವಿದ್ಯುತ್ ಪೂರೈಕೆ ಮುಂತಾದವುಗಳನ್ನೂ ನಿಲ್ಲಿಸುವ ನಿಯಮ ಜಾರಿಯಲ್ಲಿ ಬಂದರೆ ಇಂತಹಾ ಅಕ್ರಮಗಳು ಎಂದೂ ಆಗಲಿಕ್ಕಿಲ್ಲ. ಅಲ್ಲದೇ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ನೇಮಕಾತಿಗಳು ಪಾರದರ್ಶಕವಾಗಿ ನಡೆದು ಸಮರ್ಥರಿಂದ ಸ್ವಚ್ಛ ಆಡಳಿತ ಜನರಿಗೆ ಸಿಗುವಂತಾಗಬಹುದು ಮತ್ತು ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಭಾವನೆಯಿಂದ ನೌಕರರು ಕಾರ‍್ಯಪ್ರವೃತ್ತರಾಗಬಹುದು.
- ಡಾ.ವಿನಾಯಕ ಎಂ. ಭಂಡಾರಿ, ಹೊನ್ನಾವರ