1000 ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆಗೆ ಲಂಡನ್‌ನ ಐಒಎ ಆಸಕ್ತಿ

By Suvarna NewsFirst Published May 22, 2022, 3:21 PM IST
Highlights

* ಲಂಡನ್ ನಡೆಯುತ್ತಿರುವ ವರ್ಲ್ಡ್ ಎಜುಕೆಷನ್ ಫೋರಂ ಸಮಾವೇಶ
* ಉನ್ನತ ಶಿಕ್ಷಣ ಸಚಿವ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಭಾಗಿ
* ಸಾವಿರ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆಗೆ ಐಒಎ ಆಸಕ್ತಿ

ಬೆಂಗಳೂರು, (ಮೇ.22): ಕರ್ನಾಟಕದ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಓದುತ್ತಿರುವ ಆಯ್ದ 1,000 ವಿದ್ಯಾರ್ಥಿಗಳಿಗೆ ಡೇಟಾ ಸಾಕ್ಷರತೆಯನ್ನು ಒದಗಿಸಲು ಮತ್ತು ಶಾಲಾ ವಿದ್ಯಾರ್ಥಿಗಳ ಮಟ್ಟದಲ್ಲಿ ಸಂಪೂರ್ಣವಾಗಿ ಈ ಕಾರ್ಯಕ್ರಮವನ್ನು ವಿಸ್ತರಿಸಲು ಲಂಡನ್ ನ ಅನಲಿಟಿಕ್ಸ್ ಇನ್ಸ್ಟಿಟ್ಯೂಟ್ (ಐಒಎ) ಆಸಕ್ತಿ ತೋರಿಸಿದೆ. 

ಲಂಡನ್ ನಡೆಯುತ್ತಿರುವ ವರ್ಲ್ಡ್ ಎಜುಕೆಷನ್ ಫೋರಂ ಸಮಾವೇಶದಲ್ಲಿ ಭಾಗವಹಿಸಲು ಬಂದಿರುವ ರಾಜ್ಯದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರನ್ನು ಭೇಟಿ ಆ ಸಂಸ್ಥೆಯ ಉನ್ನತಾಧಿಕಾರಿಗಳ ನಿಯೋಗ ಈ ವಿಚಾರವನ್ನು ಹಂಚಿಕೊಂಡಿದೆ.

ಸಚಿವರೊಂದಿಗೆ ಮಾತುಕತೆ ನಡೆಸಿದ ಅನಲಿಟಿಕ್ಸ್ ಐಒಎ ಪ್ರತಿನಿಧಿ ಡಾ.ಕ್ಲೇರ್ ವಾಲ್ಶ್, `ಈ ಕಾರ್ಯಕ್ರಮಗಳಿಗೆ ಸಂಸ್ಥೆಯು ವಿಶೇಷ ನಿಧಿಯನ್ನು ತಾನೇ ಹೊಂದಿಸಲಿದ್ದು, ಇದಕ್ಕಾಗಿ ಕರ್ನಾಟಕ ಸರಕಾರವು ಯಾವುದೇ ವೆಚ್ಚ ಮಾಡಬೇಕಾಗಿಲ್ಲ. ವಿದ್ಯಾರ್ಥಿಗಳ ಜತೆಗೆ ಸರಕಾರದ ಮಾಹಿತಿ ತಂತ್ರಜ್ಞಾನ (ಐಟಿ) ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೂ ನಮ್ಮ ಸಂಸ್ಥೆಯ ಸದಸ್ಯತ್ವ ನೀಡುವ ಮೂಲಕ ಅವರೆಲ್ಲ ತಮ್ಮ ಅನಲಿಟಿಕ್ಸ್ ಕೌಶಲ್ಯವನ್ನು ವೃದ್ಧಿಸಿಕೊಳ್ಳಲು ಡೇಟಾ ಸಾಕ್ಷರತೆ ಕಲಿಸುವುದು ನಮ್ಮ ಸದುದ್ದೇಶವಾಗಿದೆ’ ಎಂದರು.

ಇಂಜಿನಿಯರಿಂಗ್‌ ಕೆಲಸ ತೊರೆದು ಬಿರಿಯಾನಿ ಶಾಪ್ ಇಟ್ಟ ಯುವಕರು

ಎಂಜಿನಿಯರಿಂಗ್ ಕಲಿಯುತ್ತಿರುವವರಿಗೆ ಅನಲಿಟಿಕ್ಸ್ ಜಾಣ್ಮೆ ಕಲಿಸುವುದು ಅಗತ್ಯವಾಗಿದೆ. ಈ ಮೂಲಕ ಐಒಎ ಸಾಮಾಜಿಕ ಜಾಲತಾಣಗಳಲ್ಲಿ ಹೇರಳ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು. ನಮ್ಮ ಸಂಸ್ಥೆಯು ವಿಶ್ವಾದ್ಯಂತ ಅನಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಅಧ್ಯಯನ, ಅನ್ವಯಿಕತೆ ಮತ್ತು ವ್ಯಾಪಕ ಪ್ರಸಾರಕ್ಕೆ ಕಟಿಬದ್ಧವಾಗಿದೆ ಎಂದು ವಾಲ್ಶ್ ತಿಳಿಸಿದರು.

ಅನಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಬಳಕೆಯನ್ನು ಕೇವಲ ಹೈ-ಟೆಕ್ ಉದ್ದಿಮೆಗಳಿಗೆ ಮಾತ್ರ ಸೀಮಿತಗೊಳಿಸಬಾರದು. ಬದಲಿಗೆ ಸರಕಾರಿ ಇಲಾಖೆಗಳಲ್ಲಿ ಕೂಡ ಇದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಐಒಎ ಸಂಸ್ಥೆಯು ಕಾರ್ಪೊರೇಟ್ ಸದಸ್ಯತ್ವದ ಜತೆಗೆ ಕರ್ನಾಟಕ ಸರಕಾರದ ಉದ್ಯೋಗಿಗಳಿಗೆ ಉಚಿತವಾಗಿ 100 ಸದಸ್ಯತ್ವ ಕೊಡಲು ಸಿದ್ಧವಿದೆ ಎಂದು ಅವರು ಮನದಟ್ಟು ಮಾಡಿಕೊಟ್ಟರು.

ಕರ್ನಾಟಕ ಸರಕಾರದೊಂದಿಗೆ ಸಹಭಾಗಿತ್ವ ಹೊಂದಲು ಸಂಸ್ಥೆಯು ಹೊಂದಿರುವ ಆಸಕ್ತಿಯು 2022ರ ಬೆಂಗಳೂರು ತಂತ್ರಜ್ಞಾನ ಸಮಾವೇಶದ ಆಶಯಗಳಿಗೆ ತಕ್ಕಂತಿದೆ. ಈ ಮೂಲಕ ಅನಲಿಟಿಕ್ಸ್ ಮತ್ತು ಡೇಟಾ ಸೈನ್ಸ್ ಎರಡನ್ನೂ ಉಪಯೋಗಿಸುತ್ತಿರುವ ಐಟಿ, ಬಿಟಿ ಮತ್ತು ಡೀಪ್ ಟೆಕ್ ವಲಯದ ಅಗ್ರಗಣ್ಯ ಕಂಪನಿಗಳು ಮತ್ತು ನವೋದ್ಯಮಗಳನ್ನು ಬೆಸೆಯಬಹುದು. ಸಂಸ್ಥೆಯು ಭಾರತದಲ್ಲಿ ಅಂತಾರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದೊಂದಿಗೆ (ಐಎಸ್ಡಿಸಿ) ಕೆಲಸ ಮಾಡುತ್ತಿದೆ ಎಂದು ವಾಲ್ಶ್ ಮಾಹಿತಿ ನೀಡಿದರು.

ಮಾತುಕತೆಯ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮದ (ಐಎಸ್ಡಿಸಿ) ಕಾರ್ಯನಿರ್ವಾಹಕ ನಿರ್ದೇಶಕ ಟಾಮ್ ಜೋಸೆಫ್, ಐಒಎ ಸದಸ್ಯತ್ವ ವಿಭಾಗದ ಮುಖ್ಯಸ್ಥೆ ರೋಸಿ ಸ್ವೀನಿ ಕೂಡ ಇದ್ದರು.
 

click me!