ಮೇಲ್ನೋಟಕ್ಕೆ ಸರಳವಾಗಿ ಕಾಣುವ ಈ ತಿದ್ದುಪಡಿಗಳು ಉಂಟುಮಾಡುವ ಪರಿಣಾಮ ಅಪಾರ. ಎಳವೆಯಲ್ಲಿಯೇ ರಾಷ್ಟ್ರಪ್ರೇಮ ಬೆಳೆಸುತ್ತದೆ, ಚಿಂತನೆಗೆ ಪ್ರೇರೇಪಿಸುತ್ತದೆ, ಸಬಲ ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ.
ಎರಡನೇ ಮಹಾಯುದ್ಧದ ವೇಳೆಗೆ ಜಪಾನ್ ಸಂಪೂರ್ಣ ನೆಲಕ್ಕಚ್ಚಿತ್ತು. ಕ್ಯೋಟೋ ನಗರದದ ಹೊರತು ಅಷ್ಟೂನಗರಗಳು ಧೂಳೀಪಟವಾಗಿದ್ದವು. ಎಲ್ಲಾ ರೀತಿಯ ಸಂಪನ್ಮೂಲಗಳಿಂದ ಆ ದೇಶ ವಂಚಿತವಾಗಿತ್ತು. ಆದರೆ ಒಂದೇ ತಲೆಮಾರು ಬೆಳೆದು ನಿಲ್ಲುವ ಕಾಲದಲ್ಲಿ, ಎರಡೇ ದಶಕಗಳಲ್ಲಿ ಪುಟಿದೆದ್ದು ನಿಂತಿತು. ದೇಶ ಕಟ್ಟಲು ಒಂದಿಡೀ ತಲೆಮಾರನ್ನೇ ತಯಾರು ಮಾಡಿದ್ದು ಅಲ್ಲಿನ ಶಿಕ್ಷಣ ವ್ಯವಸ್ಥೆ.
ಇಂದಿಗೂ ಅಲ್ಲಿ ಪ್ರಾಥಮಿಕ ಹಂತದ ಶಿಕ್ಷಣ ಮಕ್ಕಳಲ್ಲಿ ಒಳ್ಳೆಯ ಗುಣ-ನಡತೆ ಬೆಳೆಸಿ ಉತ್ತಮ ವ್ಯಕ್ತಿತ್ವ ನಿರ್ಮಾಣ ಮಾಡುವ ಕಡೆಗಷ್ಟೇ ಗಮನ ಕೇಂದ್ರೀಕರಿಸುತ್ತದೆ. ಆರ್ಥಿಕವಾಗಿ ಎಷ್ಟೇ ಮುಂದುವರಿದಿದ್ದರೂ ಜಪಾನೀಯರು ತಮ್ಮ ಸಾಂಸ್ಕೃತಿಕ ಹಿನ್ನೆಲೆ ಮರೆಯದಂತೆ ಮಾಡಿರುವುದು ಅಲ್ಲಿನ ಶಿಕ್ಷಣ ಪದ್ಧತಿ. ಒಂದು ಜನಾಂಗ ತನ್ನ ಸಾಂಸ್ಕೃತಿಕ ಶ್ರೀಮಂತಿಕೆ ಅರಿತಾಗಲಷ್ಟೇ ತನ್ನತನ ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ. ಅಂಥ ಜನಾಂಗದಿಂದ ಮಾತ್ರ ದೇಶ ಕಟ್ಟಲು ಸಾಧ್ಯ.
ದ್ವಿತೀಯ ಮಹಾಯುದ್ಧ ಕಳೆದು ಎರಡೇ ವರ್ಷಗಳಲ್ಲಿ ಭಾರತವೂ ಸ್ವಾತಂತ್ರ್ಯ ಪಡೆಯಿತು. ಆದರೆ ಆಳುವ ಅಧಿಕಾರ ಪಡೆದ ಕಾಂಗ್ರೆಸ್ ದುರದೃಷ್ಟವಶಾತ್ ದಾಸ್ಯದ ಮನಸ್ಥಿತಿಯಿಂದ ಮುಕ್ತವಾಗಲಿಲ್ಲ. ಕಾಂಗ್ರೆಸ್‌ನ ದಾಸ್ಯದ ಮನಸ್ಥಿತಿ ಇಂದಿಗೂ ಬದಲಾಗಿಲ್ಲ ನಿಜ, ಆದರೆ ದೇಶ ಬದಲಾದ ಕಾರಣ ಅದೀಗ ಕಾಂಗ್ರೆಸ್‌ನ ಆಂತರಿಕ ವಿಚಾರವಾಗಿ ಉಳಿದಿದೆ. ಸಮಸ್ಯೆ ಉಂಟುಮಾಡಿರುವುದು ಈ ಹಿಂದೆ ಇಟ್ಟತಪ್ಪು ಹೆಜ್ಜೆಗಳು. ಶಿಕ್ಷಣ ವ್ಯವಸ್ಥೆಯಲ್ಲಿ ಭಾರತೀಯತೆಗೆ ಒತ್ತು ಕೊಟ್ಟು ಸದೃಢ ಸಮಾಜ ನಿರ್ಮಾಣ ಮಾಡುವ ಉತ್ತಮ ಅವಕಾಶ ಕಾಂಗ್ರೆಸ್ ಪಕ್ಷಕ್ಕೆ ಇತ್ತು. ಆದರೆ ಬ್ರಿಟಿಷ್ ಮನಸ್ಥಿತಿ ರೂಢಿಸಿಕೊಂಡಿದ್ದ ಕಾಂಗ್ರೆಸ್‌ನ ಅಧಿಕಾರರೂಢಿ ನಾಯಕರು ಐಷಾರಾಮಿತನದ ಆಸ್ವಾದನೆಯಲ್ಲಿ ತಲ್ಲೀನರಾಗಿದ್ದರು.
ನನ್ನ ಜಾಗದಲ್ಲಿ ಸಿಟಿ ರವಿ ಇದ್ದಿದ್ದರೆ ಅರೆಸ್ಟ್ ಆಗಿ ಪೊಲೀಸರ ನೆಕ್ಕುತ್ತಿದ್ರು ಹೇಳಿಕೆಗೆ ತಿರುಗೇಟು
ಹಾಗಾಗಿ ಆರ್ಥಿಕ ನೀತಿಯನ್ನು ಸೋವಿಯತ್ ಒಕ್ಕೂಟದಿಂದ ಎರವಲು ಪಡೆದು, ಶೈಕ್ಷಣಿಕ ನೀತಿಯ ಜವಾಬ್ದಾರಿಯನ್ನು ಎಡಪಂಥೀಯರಿಗೆ ಗುತ್ತಿಗೆ ನೀಡಿದರು. ನೆಹರೂ ಅವರು ಆಯಕಟ್ಟಿನ ವಿವಿಗಳಲ್ಲಿ ಎಡಪಂಥೀಯರನ್ನು ಕೂರಿಸಿ ಶಿಕ್ಷಣ ಸಚಿವರ ಸ್ಥಾನದಲ್ಲಿ ಇಸ್ಲಾಮಿಕ್ ಶಿಕ್ಷಣದಲ್ಲಿ ಪರಿಣತಿ ಹೊಂದಿದವರನ್ನು ಕೂರಿಸಿದರು. 1947ರಿಂದ 1968ರ ವರೆಗೆ ಕೇಂದ್ರ ಶಿಕ್ಷಣ ಸಚಿವರಾಗಿ ಬರೋಬ್ಬರಿ ಹನ್ನೊಂದು ವರ್ಷ ಕೂತಿದ್ದವರು ಓರ್ವ ಮೌಲಾನಾ! ಆಗ ಅದು ಕೋಮುವಾದವಲ್ಲ! ಆದರೆ ಈಗಿನ ನಿರ್ಣಯಗಳು ಕೋಮುವಾದಿ ಧೋರಣೆ ಹೊಂದಿವೆ, ಬ್ರಾಹ್ಮಣ್ಯ ಪೋಷಿಸುತ್ತಿದೆ ಎನ್ನುತ್ತಿರುವುದು ಪರಿಸ್ಥಿತಿಯ ವ್ಯಂಗ್ಯ, ಅನುಕೂಲಸಿಂಧು ರಾಜಕಾರಣ.
ಕಾಂಗ್ರೆಸ್‌ಗೆ ಮತಬ್ಯಾಂಕ್ ಭೀತಿ
ಇವತ್ತಿಗೂ ಕಾಂಗ್ರೆಸ್ ತಪ್ಪುಕಲ್ಪನೆಯ ಸುಳಿಯಲ್ಲಿ ಸಿಲುಕಿದೆ. ರಾಷ್ಟ್ರೀಯವಾದ ಎಂದ ಕೂಡಲೇ ಅದನ್ನು ಕೇಸರೀಕರಣ, ಬಿಜೆಪಿಯ ಹಿತಾಸಕ್ತಿಗಳ ಪ್ರದರ್ಶನ ಎಂದು ಭಾವಿಸುತ್ತಿದೆ. ರಾಷ್ಟ್ರೀಯವಾದ ಬಲಗೊಂಡರೆ ತನ್ನ ಮತಬ್ಯಾಂಕ್ ಬಲಹೀನಗೊಳ್ಳುತ್ತದೆ ಎಂಬ ಗಾಬರಿಯಲ್ಲಿ ಕಾಂಗ್ರೆಸ್ ಆ ರೀತಿ ವರ್ತಿಸುತ್ತಿದೆ. ವಾಸ್ತವದಲ್ಲಿ ಹಿಂದುತ್ವ ಎಂದರೆ ಜಾತಿವಾದವಲ್ಲ. ಅದು ಜೀವನ ಪದ್ಧತಿ, ಹಿಂದುತ್ವ ಎಲ್ಲರನ್ನೂ ಒಳಗೊಳ್ಳುವ ಪದ್ಧತಿ. ಇವತ್ತಿಗೂ ಅಫ್ಘಾನಿಸ್ತಾನ, ಇರಾನ್ ಕಡೆಯಲ್ಲೆಲ್ಲ ಭಾರತೀಯರನ್ನು ಹಿಂದೂಸ್ಥಾನಿ ಎಂದೇ ಕರೆಯುತ್ತಾರೆ. ನಮ್ಮ ಮುಸಲ್ಮಾನರನ್ನೂ ಅವರು ಗುರುತಿಸುವುದು ಹಿಂದೀ ಎಂದು. ಹಿಂದೂ ಎಂದರೆ ಭಾರತವೆಂಬ ರಾಷ್ಟ್ರದ ಪರಿಧಿಯಲ್ಲಿರುವ ಮಂದಿ ಎಂಬುದು ಐತಿಹಾಸಿಕವಾಗಿ ನಡೆದುಬಂದ ಪರಿಪಾಠ. ಅದು ಜಾತೀಯ ಗುರುತಿಸುವಿಕೆಯಲ್ಲ, ಭಾರತವೆಂಬ ಸಾಂಸ್ಕೃತಿಕ ಅಂಗದ ಗುರುತು.
Exam Result 10 ನೇ ತರಗತಿ ಪರೀಕ್ಷೆ ಬರೆದ 43 ವರ್ಷದ ಅಪ್ಪ ಪಾಸ್, ಮಗ ಫೇಲ್!
ಕಮ್ಯುನಿಸ್ಟರು ರೂಪಿಸಿದ ಶಿಕ್ಷಣ
ಆರಂಭದಲ್ಲಿ ಭಾರತದ ಶಿಕ್ಷಣ ವ್ಯವಸ್ಥೆಯ ರೂಪರೇಷೆ ಸಿದ್ಧಪಡಿಸಲು ಅನುವಾದ ಕಮ್ಯುನಿಸ್ಟರಿಗೆ ನಮ್ಮ ಐತಿಹಾಸಿಕ ಅಸ್ಮಿತೆ, ಸಾಂಸ್ಕೃತಿಕ ವೈಭವ ಅನಗತ್ಯ ಸರಕುಗಳಾದವು. ಕಮ್ಯುನಿಸ್ಟ್ ಸಿದ್ಧಾಂತಕ್ಕೂ ಸಾಂಸ್ಕೃತಿಕತೆಗೂ ಎಣ್ಣೆ ಸೀಗೇಕಾಯಿ ಸಂಬಂಧ. ಬೆಳೆ ಇದ್ದಲ್ಲಿ ಕಳೆಗೆ ಹೇಗೆ ಜಾಗವಿಲ್ಲವೋ ಹಾಗೆ ಸಾಂಸ್ಕೃತಿಕತೆ ಇದ್ದಲ್ಲಿ ಕಮ್ಯುನಿಸಮ್‌ಗೆ ಮನ್ನಣೆ ಸಿಗುವುದಿಲ್ಲ. ಪರಿಣಾಮವಾಗಿ ಶಿಕ್ಷಣ ಕ್ಷೇತ್ರದ ಮೂಲಕ ನಮ್ಮ ಸಾಂಸ್ಕೃತಿಕ ಹಿನ್ನೆಲೆಯನ್ನು ಕಡೆಗಣಿಸುವ ಕೈವಾಡ ಕಮ್ಯುನಿಸ್ಟರಿಂದ ನಡೆಯಿತು. ಭಾರತದ ವೀರ ಸೇನಾನಿಗಳಿಗಿಂತ ಹೆಚ್ಚು ದೇಶವನ್ನು ಕೊಳ್ಳೆ ಹೊಡೆದ ಡಕಾಯಿತರು ಪಠ್ಯಪುಸ್ತಕಗಳ ಹೆಚ್ಚಿನ ಪುಟಗಳಲ್ಲಿ ಪ್ರಾಶಸ್ತ್ಯ ಪಡೆಯಲು ಇದೇ ಕಾರಣ.
ನಿಜವಾದ ಇತಿಹಾಸ ಹೇಳಬೇಕು
‘ಹಾಗಾದರೆ ನೀವು ಇತಿಹಾಸವನ್ನು ಬದಲಾಯಿಸುತ್ತೀರಾ?’ ಎಂದು ಪ್ರಮುಖ ರಾಜಕಾರಣಿಯೊಬ್ಬರು ಪ್ರಶ್ನೆ ಮಾಡುತ್ತಾರೆ. ಈ ರೀತಿ ಪ್ರಶ್ನೆಗೆ ಕಾರಣ ಗುಪ್ತ ಹಿತಾಸಕ್ತಿಗಳ ಶಿಕ್ಷಣ ವ್ಯವಸ್ಥೆ. ತಮ್ಮಲ್ಲಿ ಊಟಕ್ಕಿಲ್ಲದೆ ಭಾರತಕ್ಕೆ ದಾಳಿ ಮಾಡಿದ ಬಂಡುಕೋರರ ಕತೆಗಳನ್ನೇ ಇತಿಹಾಸ ಎಂದು ತುರುಕಿ ಬೋಧಿಸಿದಾಗ ಸತ್ಯವನ್ನೇ ಪ್ರಶ್ನಿಸುವ ಒಂದು ತಲೆಮಾರು ಹುಟ್ಟಿಕೊಳ್ಳುವುದು ಸಹಜ. ಕದಂಬರು ಮಿಶ್ರ ಬೆಳೆ ಬೇಸಾಯ ಪದ್ಧತಿ ಅನುಸರಿಸಿ ಆಹಾರ ಭದ್ರತೆ ಕಾಪಾಡಿದ್ದರು. ಕದಂಬರ ಕಾಲದಲ್ಲಿ ಮಹಿಳೆಯರಿಗೆ ಗ್ರಾಮದ ಮುಖ್ಯಸ್ಥೆ ಸ್ಥಾನ ಕೊಡಲಾಗುತ್ತಿತ್ತು. ಇಂದಿನ ಕಲಬುರಗಿಯ ರಾಷ್ಟ್ರಕೂಟರ ಆಡಳಿತ ಯುಮುನಾ ನದಿ ತೀರದವರೆಗೂ ವಿಸ್ತರಿಸಿತ್ತು. ಹೊಯ್ಸಳರ ಶಿಲ್ಪಕಲೆಗೆ ಶತಮಾನಗಳ ದಾಳಿ ನಂತರ ಇಂದಿಗೂ ಸಾಕ್ಷಿಯಾಗಿ ನಿಲ್ಲುವ ಶಕ್ತಿಯಿದೆ.
ಚೀನಾ, ಈಜಿಪ್ಟ್, ಅರೇಬಿಯಾ, ಪರ್ಶಿಯಾಕ್ಕೆ ವಸ್ತ್ರ, ವಜ್ರ-ವೈಢೂರ್ಯ ಮಾತ್ರವಲ್ಲದೆ ಜೀವನಾವಶ್ಯಕ ಉಪ್ಪನ್ನೂ ರಫ್ತು ಮಾಡುತ್ತಿದ್ದುದು ನಮ್ಮ ಹೊಯ್ಸಳ ಸಾಮ್ರಾಜ್ಯ. ಪರದೇಶಿಗಳಿಗೆ ಕಣ್ಣು ಕುಕ್ಕುವ ಸಂಪತ್ತದು. ನಾವು ಎಂದಿಗೂ ಮರೆಯಲಾರದ ವಿಜಯನಗರ ಸಾಮ್ರಾಜ್ಯ ಪಶ್ಚಿಮದ ಕಡಲಿನಿಂದ ಪೂರ್ವದ ಕಡಲವರೆಗೆ ವಿಸ್ತರಿಸಿದ್ದಂಥದ್ದು. ಭಾರತವನ್ನು ಜಾಗತಿಕ ವ್ಯಾಪಾರ ಕೇಂದ್ರವಾಗಿಸಿದ್ದ ಆಡಳಿತವದು. ಯಾವುದೇ ಆಡಳಿತ ಕಲೆ-ಸಂಸ್ಕೃತಿಗೆ ಒತ್ತು ಕೊಡುವ ಮೊದಲು ತನ್ನ ಜನರ ಹೊಟ್ಟೆತುಂಬಿಸಬೇಕು. ವಿಜಯನಗರದ ಸಾಂಸ್ಕೃತಿಕ ವೈಭವದ ಕುರುಹುಗಳು ಇಂದು ಕನ್ನಡಿಗರಲ್ಲೇ ಉಳಿದುಬಂದಿದೆ. ಅದರ ಮೇಲೆ ನಿರಂತರ ದಾಳಿ ನಡೆಸಿದ ಬಹಮನಿ ಸುಲ್ತಾನ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ.
ಕೊನೆಗೆ ವಿಜಯನಗರ ಕೊಳ್ಳೆ ಹೊಡೆಯಲು ಅದಿಲ್‌ಶಾಹಿ ಜೊತೆ ಮೂವರು ಮುಸ್ಲಿಂ ರಾಜರು ಒಂದಾಗಬೇಕಾಯಿತು. ಚಿನ್ನವಿರುವ ಮನೆಗೇ ಅಲ್ಲವೆ ಕಳ್ಳರು ಕನ್ನ ಹಾಕುವುದು. ಹಾಗಾಗಿ ದಂಗೆಕೋರರು ಇಲ್ಲಿಗೆ ಬಂದರು ಎಂಬುದು ಇತಿಹಾಸದ ಭಾಗವಲ್ಲವೇ? ದೋಚಿದ ಸಂಪತ್ತಿನ ಪಟ್ಟಿಕೊಟ್ಟರೆ ಇತಿಹಾಸದ ತಿರುಚುವಿಕೆಯೇ? ಪೃಥ್ವಿರಾಜ್ ಚೌಹಾಣ್ ಎದುರು 16 ಬಾರಿ ಸೋತ ಮಹಮ್ಮದ್ ಘೋರಿ 17ನೆಯ ಸಲ ಮೋಸದಿಂದ ಗೆಲ್ಲುತ್ತಾನೆ. ಸಣ್ಣ ರಾಜ್ಯ, ಪುಟ್ಟಸೇನೆ ಹೊಂದಿದ್ದ ಮಹಾರಾಣಾ ಪ್ರತಾಪ ಮೊಘಲರ ವಿರುದ್ಧ ಏಕಾಂಗಿ ಹೋರಾಟ ನಡೆಸುತ್ತಾನೆ. ಆದಿಲ್‌ಶಾಹಿಯ ಬೆವರಿಳಿಸಿದ್ದು ಛತ್ರಪತಿ ಶಿವಾಜಿ ಎಂಬ ವಿಚಾರಗಳನ್ನೆಲ್ಲ ವಿಸ್ತೃತವಾಗಿ ತಿಳಿಸುವುದು ಇತಿಹಾಸದ ಬದಲಾವಣೆಯಲ್ಲ, ವಾಸ್ತವಿಕ ಚಿತ್ರಣ.
Textbook Revision Committeeಯ ಮತ್ತೊಂದು ಎಡವಟ್ಟು ಬಹಿರಂಗ
ಸಿ ಕ್ಯೂಬ್ ಮಾಫಿಯಾ ಹಿತಾಸಕ್ತಿ
ಪರಂಪರೆ ಮರೆತ ತಲೆಮಾರನ್ನು ಸೃಷ್ಟಿಸುವ ಅನಿವಾರ್ಯವಿದ್ದ ಇನ್ನೊಂದು ವ್ಯವಸ್ಥೆ ಮತಾಂತರ ಮಾಫಿಯಾ. ತನ್ನತನವಿರುವ, ತನ್ನ ಪರಂಪರೆ ಅರಿತ ವ್ಯಕ್ತಿಯನ್ನು ಮತಾಂತರ ಮಾಡುವುದು ಅಸಾಧ್ಯ. ಕ್ರೈಸ್ತ ಮಿಷನರಿಗಳು ಬ್ರಿಟಿಷ್ ಕಾಲದಿಂದಲೇ ಶೈಕ್ಷಣಿಕ ವಲಯದಲ್ಲಿ ಸಕ್ರಿಯವಾಗಿದ್ದರೂ ಭಾರತೀಯರಿಂದ ಪರಂಪರೆ ಬೇರ್ಪಡಿಸುವಲ್ಲಿ ಸಂಪೂರ್ಣ ಯಶ ಕಾಣಲಿಲ್ಲ. ಭಾರತೀಯನ ತಲೆಗೆ ಇತಿಹಾಸವನ್ನು ತಪ್ಪಾಗಿ ತುಂಬಬಹುದು, ಆದರೆ ತನ್ನ ಅಪ್ಪ-ಅಜ್ಜ-ಮುತ್ತಜ್ಜಂದಿರ ಕೊಂಡಿ ಕಳಚುವುದು ಸುಲಭವಲ್ಲ.
ಹಾಗಾಗಿ ತಲೆಮಾರಿನಿಂದ ತಲೆಮಾರಿಗೆ ವ್ಯವಸ್ಥಿತವಾಗಿ ಪಾರಂಪರಿಕ ಮೌಲ್ಯಗಳ ಕತ್ತು ಹಿಸುಕಲು ಜಾತ್ಯತೀತ ಮತ್ತು ಎಡಪಂಥೀಯ ವಾದಿಗಳ ಜತೆ ಮತಾಂತರ ಮಾಫಿಯಾ ಕತ್ತಲಲ್ಲಿ ಕೈಜೋಡಿಸಿತು. ಇದು ಬಹುಕಾಲ ಭಾರತದ ಮೇಲೆ ಪರಿಣಾಮ ಬೀರಿದೆ ಎಂಬುದಕ್ಕೆ 60ರಿಂದ 80ರ ದಶಕದ ತಲೆಮಾರು ಸಾಕ್ಷಿ. ಭಾರತದಲ್ಲೇ ಉನ್ನತ ವ್ಯಾಸಂಗ ಪಡೆದು, ಇಲ್ಲೇ ಪರಿಣತಿ ಪಡೆದ ನಂತರ ದೇಶ ಕಟ್ಟುವ ಹಂಬಲಕ್ಕಿಂತ ಹೆಚ್ಚು ಅವರಿಗೆ ವಿದೇಶಿ ನೌಕರಿ ಮೇಲೆ ಆಸಕ್ತಿ ಹುಟ್ಟಿತು. ಭಾರತ ಜ್ಞಾನಿಗಳ ಸೋರಿಕೆಯ ಸಮಸ್ಯೆ ಎದುರಿಸಿತು.
ಸಿ ಕ್ಯೂಬ್ ಎಂದು ಕರೆಯಬಹುದಾದ ಕಾಂಗ್ರೆಸ್, ಕಮ್ಯುನಿಸ್ಟ್ ಮತ್ತು ಕನ್ವರ್ಷನ್ ಮಾಫಿಯಾ ಉಂಟುಮಾಡಿದ ಹಿತಾಸಕ್ತಿಗಳ ಪರಿಣಾಮವಿದು. ನಿರ್ದಿಷ್ಟವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಹಂತದಲ್ಲಿ ನಿರಭಿಮಾನ, ನಿರಾಕರಣೆ ಮತ್ತು ಸ್ವಾರ್ಥದ ಬೀಜ ಬಿತ್ತುವುದು ಈ ಮೂರೂ ಹಿತಾಸಕ್ತಿಗಳ ಮುಖ್ಯ ಕಾರ್ಯ. ಕ್ರೈಸ್ತ ಮತ ಪ್ರೀತಿಯ ಸಂಕೇತ ಹಾಗೂ ಇಸ್ಲಾಂ ಶಾಂತಿಯ ಸಂಕೇತ ಎಂದು ಅವುಗಳ ದೌರ್ಬಲ್ಯ ಮರೆಮಾಚಿ, ದೇಶೀಯ ಮೌಲ್ಯಗಳನ್ನು ಕಡೆಗಣಿಸಿ ಸತ್ಯ ತಿರುಚಿ ಮಕ್ಕಳಿಗೆ ಓದಿಸಲಾಯ್ತು.
ಸಮಾಜ ಪಾಠದಲ್ಲಿ ಈ ರೀತಿಯ ಪರೋಕ್ಷ ಧರ್ಮ ಪ್ರಚಾರಕ್ಕಿಂತ ಹೆಚ್ಚು ಅಗತ್ಯವಿರುವುದು ಸಾಮಾಜಿಕ ಜವಾಬ್ದಾರಿಗಳ ಬಗೆಗಿನ ಪಠ್ಯ. ನಿಸರ್ಗದ ಮಹತ್ವ, ಅದರ ಅಗತ್ಯ, ಪ್ರಕೃತಿ-ಮಾನವ ಸಂಬಂಧ, ನಮ್ಮ ಮೇಲಿರುವ ಪ್ರಾಕೃತಿಕ ಉಳಿವಿನ ಜವಾಬ್ದಾರಿಗಳನ್ನು ಮಕ್ಕಳಿಗೆ ಕಲಿಸಬೇಕಿರುವುದು ಅತ್ಯಗತ್ಯ. ಜತೆಜತೆಗೆ ವ್ಯಾವಹಾರಿಕ ಪರಿಜ್ಞಾನ ಜಾಗೃತಗೊಳಿಸುವ ಕಾರ್ಯಗಳಾಗಬೇಕು. ಸಹಕಾರಿ ಸಂಸ್ಥೆಗಳ ಧ್ಯೇಯೋದ್ದೇಶ, ಕಂಪನಿ ಸ್ಥಾಪನೆಯ ಪ್ರಾಥಮಿಕ ಮಾಹಿತಿಗಳನ್ನು ಮಕ್ಕಳಿಗೆ ನೀಡುವ ಮೂಲಕ ಉದ್ಯಮಶೀಲ ಮನೋವೃತ್ತಿ ಬೆಳೆಸಬೇಕು. ಐದು ಸಾವಿರ ವರ್ಷ ಇತಿಹಾಸವಿರುವ, ಜಾಗತಿಕವಾಗಿ ಮನ್ನಣೆ ಪಡೆದ ಯೋಗವಿದ್ಯೆಯ ಪರಿಚಯ ಪಠ್ಯಗಳಲ್ಲಾಗಬೇಕು.
ಪಠ್ಯ ಪರಿಷ್ಕರಣೆಯಿಂದ ಮಕ್ಕಳಲ್ಲಿ ವಿಷಬೀಜ ಬಿತ್ತನೆ: ಅಜಯ್ ಸಿಂಗ್
ಜನಾಂಗೀಯ ವಿಭಜನೆ ಹುನ್ನಾರ
ಈ ಎಲ್ಲವುಗಳ ಅನುಪಸ್ಥಿತಿಯ ಕಾರಣ ಯಾವುದೇ ವ್ಯಾವಹಾರಿಕ ಜ್ಞಾನವೂ ಇಲ್ಲದ, ಸಾಮಾಜಿಕ ಪರಿಕಲ್ಪನೆಯಿಲ್ಲದ, ಸಂವಿಧಾನದ ಆಶಯವನ್ನೂ ತಿಳಿಯಲು ಅಶಕ್ತರಾದ ಮಕ್ಕಳು ಪ್ರೌಢಶಾಲೆಯಿಂದ ಹೊರಬರುತ್ತಿದ್ದಾರೆ. ವಿಶ್ವಾತ್ಮಕ ಚಿಂತನೆ ಮಾಡಬೇಕಾದವರು ಕಾನೂನಿನ ಪರಿಕಲ್ಪನೆ ಇಲ್ಲದೆ ಸ್ವತಃ ನಿರ್ಬಂಧಕ್ಕೆ ಒಳಗಾಗುತ್ತಿದ್ದಾರೆ. ಹಿಜಾಬ್ ಪರ ಹೋರಾಟಕ್ಕಿಳಿಯುವ ಮನೋವೃತ್ತಿ ನಿರ್ಮಾಣ ಮಾಡಿದ್ದು ಮಾನವೀಯ ಮೌಲ್ಯಗಳ ಹಿನ್ನೆಲೆಯಲ್ಲೂ ಖೇದಕರ ಬೆಳವಣಿಗೆ. ಹಿಜಾಬ್ ಹಾಕಿ ವಿಶ್ವಮಾನವರಾಗಲು ಹೇಗೆ ಸಾಧ್ಯ? ಈ ಕೋನದಿಂದ ಸಮಸ್ಯೆಯನ್ನು ವಿಶ್ಲೇಷಿಸುವ ಬದಲಾಗಿ ನಮ್ಮಲ್ಲಿ ವಿಚಾರವಾದಿ ಅನಿಸಿಕೊಂಡವರು ವಿನಾಕಾರಣ ಕುವೆಂಪು, ಬಸವಣ್ಣನವರಿಗೆ ಅವಮಾನವಾಗಿದೆ ಎಂದು ಹುರುಳಿಲ್ಲದ ಆರೋಪ ಮಾಡುತ್ತಿದ್ದಾರೆ. ಈ ಆರೋಪಗಳು ದಿಕ್ಕುತಪ್ಪಿಸಿ ಜನಾಂಗೀಯ ವಿಭಜನೆ ಮಾಡುವ ಹುನ್ನಾರವೇ ಹೊರತು ಬೇರೇನಲ್ಲ.
ನಮ್ಮ ಸಾಧಕರ ಇತಿಹಾಸ ಹೇಳೋಣ
ಹಾಗಾದರೆ ನಮ್ಮ ಶಿಕ್ಷಣ ವ್ಯವಸ್ಥೆ ಹೇಗಿರಬೇಕು ಎಂಬ ಪ್ರಶ್ನೆಗೆ ಉತ್ತರ ಸರಳ. ಗ್ರೀಕ್ ನಾಗರೀಕತೆ ಕಲಿಸುವ ಮೊದಲು ಭಾರತದ ಜ್ಞಾನ-ಪರಂಪರೆಯ ವ್ಯಾಪ್ತಿ, ನಮ್ಮ ದೇಶದ ಶಿಲ್ಪಕಲೆ, ನಮ್ಮ ಕಲಾಪ್ರಕಾರಗಳ ಪರಿಚಯ ಮಾಡಿಸಬೇಕು. ಅಲೆಕ್ಸಾಂಡರ್, ಅಕ್ಬರನನ್ನು ವೈಭವೀಕರಿಸುವ ಬದಲು ಶಿವಾಜಿ, ರಾಣಿ ಚೆನ್ನಮ್ಮ, ಪೋರ್ಚುಗೀಸರಿಗೆ ಸಡ್ಡು ಹೊಡೆದ ರಾಣಿ ಅಬ್ಬಕ್ಕ, ನಿರಂತರ 54 ವರ್ಷ ಆಡಳಿತ ನಡೆಸಿದ ವಿದೇಶಿ ವ್ಯಾಪಾರ ಪರಿಣತೆ ಕರ್ನಾಟಕದ ಚನ್ನಭೈರಾದೇವಿ - ಇಂಥವರು ಇತಿಹಾಸ ಪಠ್ಯದಲ್ಲಿ ಸ್ಥಾನ ಪಡೆಯಬೇಕು. ಸ್ವಾತಂತ್ರ್ಯ ಹೋರಾಟಗಾರರ ವಿಚಾರಕ್ಕೆ ಬಂದಾಗ ಗಾಂಧೀಜಿಯವರ ಜೊತೆಗೆ ಸುಭಾಷ್ ಚಂದ್ರ ಬೋಸ್, ಲಾಲಾ ಲಜಪತ್ ರಾಯ್, ಬಾಲ ಗಂಗಾಂಧರ ತಿಲಕ್, ಬಿಪಿನ್ ಚಂದ್ರ ಪಾಲ್ ಹಾಗೂ ಇತರೆ ಕ್ರಾಂತಿಕಾರಿಗಳ ಕೊಡುಗೆಗಳನ್ನೂ ತಿಳಿಸಬೇಕು. ಷೇಕ್ಸ್‌ಪಿಯರನನ್ನು ಪರಿಚಯಿಸುವ ಮೊದಲು ಕಾಳಿದಾಸನ ಪರಿಚಯವಾಗಬೇಕು. ಜೀವನ ಮೌಲ್ಯ ಕಲಿಸಲು ಎಲ್ಲೆಲ್ಲಿಂದಲೋ ಪಠ್ಯ ಆಯ್ಕೆ ಮಾಡುತ್ತೇವೆ. ಕ್ರಿ.ಪೂ.200ರಲ್ಲೇ ಪಂಚತಂತ್ರ ಜೀವತಳೆದ ನಾಡು ನಮ್ಮದು.
ಇದರಲ್ಲಿ ರಾಜಕೀಯ ಬೇಡ
ಮೇಲ್ನೋಟಕ್ಕೆ ಸರಳವಾಗಿ ಕಾಣುವ ಈ ತಿದ್ದುಪಡಿಗಳು ಉಂಟುಮಾಡುವ ಪರಿಣಾಮ ಅಪಾರ. ಎಳವೆಯಲ್ಲಿಯೇ ರಾಷ್ಟ್ರಪ್ರೇಮ ಬೆಳೆಸುತ್ತದೆ, ಚಿಂತನೆಗೆ ಪ್ರೇರೇಪಿಸುತ್ತದೆ, ಸಬಲ ವ್ಯಕ್ತಿತ್ವ ನಿರ್ಮಾಣ ಮಾಡುತ್ತದೆ. ಶಿಕ್ಷಣವೆಂದರೆ ನೂರು ಮೀಟರ್ ಓಟವಲ್ಲ, ಅದೊಂದು ಮ್ಯಾರಥಾನ್. ಮಕ್ಕಳ ಪ್ರಯತ್ನದ ಜತೆಗೆ ಸರಕಾರದ ಪ್ರಯತ್ನವೂ ನಿರಂತರ. ಅಂದ ಮಾತ್ರಕ್ಕೆ ಇದು ಕೇಸರೀಕರಣವಾಗಲೀ, ಬ್ರಾಹ್ಮಣೀಕರಣವಾಗಲಿ ಅಲ್ಲ. ಆದರೆ ಇದರಿಂದ ರಾಜಕೀಯವಾಗಿ ಸಿ ಕ್ಯೂಬ್ ಒಕ್ಕೂಟಕ್ಕೆ ಭಾರಿ ನಷ್ಟವಾಗುತ್ತದೆ.
ಹಿಂದೂ ಎಂದು ಬರೆದಿದ್ದಕ್ಕೆ ಮೊರಾರ್ಜಿ ಶಾಲೆಯಲ್ಲಿ 71 ವಿದ್ಯಾರ್ಥಿಗಳಿಗಿಲ್ಲ ಪ್ರವೇಶ
ಈ ಸತ್ಯದ ಅರಿವಿರುವ ಕಾರಣಕ್ಕೇ ಆ ಒಕ್ಕೂಟ ಬಿಜೆಪಿಯನ್ನು ವಿರೋಧಿಸುವ ಭರದಲ್ಲಿ ರಾಷ್ಟ್ರೀಯತೆಯ ವಿರೋಧಕ್ಕೆ ಟೊಂಕ ಕಟ್ಟಿದೆ. ವಿರೋಧಕ್ಕೆ ಬೇಕಾದಷ್ಟುಸರಕು ಸಿಗದ ಕಾರಣ ಪ್ರಾದೇಶಿಕತೆಯ ವಾದ ಮುಂದಿಡಲಾಗುತ್ತಿದೆ - ಇದೂ ಸತ್ವರಹಿತ ವಾದ. ಹಲವು ಪ್ರಾದೇಶಿಕತೆಯ ಸಮ್ಮಿಲನವೇ ಭಾರತ. ನಮ್ಮಲ್ಲಿ ಪ್ರತಿ 20 ಕಿಲೋಮೀಟರಿಗೆ ಪ್ರಾದೇಶಿಕತೆ ಬದಲಾಗುತ್ತದೆ. ಹಾಗೆಂದು ಲಾಗಾಯ್ತಿನಿಂದಲೂ ಪ್ರಾದೇಶಿಕ ಕೊಡು-ಕೊಳ್ಳುವಿಕೆ ನಡೆಯುತ್ತಲೇ ಬಂದಿದೆ. ಎಲ್ಲ ಪ್ರಾದೇಶಿಕ ಸಂಸ್ಕೃತಿಗಳು ಸೇರಿಯೇ ದೇಶೀಯ ಸಾಂಸ್ಕೃತಿಕತೆ ಅಸ್ತಿತ್ವ ಪಡೆದಿರುವುದು. ಆದರೆ ಇದನ್ನೇ ದೇಶ ಒಡೆಯುವ ಹುನ್ನಾರವನ್ನಾಗಿ ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಮನಸ್ಥಿತಿ ತೀರಾ ಕೆಳಮಟ್ಟದ ರಾಜಕಾರಣ. ಮಕ್ಕಳ ಮೇಲೆ ಅಂಥ ರಾಜಕಾರಣದ ಪ್ರಭಾವ ಆಗುತ್ತಿರುವುದು ವಿಪರ್ಯಾಸ.
- ಸಿ.ಟಿ.ರವಿ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಿಜೆಪಿ