* ಜೂನ್20ರಂದು ಬೆಂಗಳೂರಿಗೆ ಪ್ರಧಾನಿ ಆಗಮನ
* ಬೆಂಗಳೂರು ವಿಶ್ವವಿದ್ಯಾಲಯದಿಂದ ಕಾಲೇಜುಗಳಿಗೆ ರಜೆ ಘೋಷಣೆ
* ಮೋದಿ ಓಡಾಡುವ ರಸ್ತೆಗಳ ಕಾಲೇಜುಗಳಿಗೆ ಸೋಮವಾರ ರಜೆ
ಬೆಂಗಳೂರು, (ಜೂನ್.18): ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ(ಜೂನ್20) ಬೆಂಗಳೂರಿಗೆ ಅಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.
ಇನ್ನು ನರೇಂದ್ರ ಮೋದಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ(Bangalore University)ನಾಳೆ(ಜೂನ್20) ರಜೆ ಘೋಷಣೆ ಮಾಡಲಾಗಿದೆ. ಈ ಬಗ್ಗೆ ಬೆಂಗಳೂರು ವಿಶ್ವವಿದ್ಯಾಲಯ ಸುತ್ತೋಲೆ ಹೊರಡಿಸಿದೆ.
ಬೆಂಗಳೂರಿನಲ್ಲಿ ಮೋದಿ ಓಡಾಡುವ ರಸ್ತೆಗಳ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಬೆಂಗಳೂರು ವಿವಿ ಸಂಯೋಜನೆಗೆ ಒಳಪಟ್ಟ ವಿವಿ ವ್ಯಾಪ್ತಿಯ ಒಟ್ಟು 64 ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಮೋದಿ ಕರ್ನಾಟಕ ಪ್ರವಾಸ, ಪ್ರಧಾನಿ ಕಾರ್ಯಾಲಯದಿಂದ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
ವಿವಿ ಆವರಣದಲ್ಲಿರುವ ಅಂಬೇಡ್ಕರ್ ಸ್ಕೂಲ್ ಎಕನಾಮಿಕ್ಸ್ ಉದ್ಘಾಟನೆ ಹಿನ್ನೆಲೆ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳಿಗೆ ರಜೆ ನೀಡಿ ಬೆಂಗಳೂರು ವಿವಿ ಕುಲಸಚಿವರು ಸುತ್ತೋಲೆ ಪ್ರಕಟಿಸಿದ್ದಾರೆ.
ಡಿಕೆಶಿ ಕೆಂಡಾಮಂಡಲ
ಸರ್ಕಾರದ ಈ ನಿರ್ಧಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೆಂಡಾಮಂಡಲರಾಗಿದ್ದು, ಕಾಲೇಜುಗಳಿಗೆ ಯಾಕೆ ರಜೆ ಕೊಡಬೇಕು? ವಿದ್ಯಾರ್ಥಿಗಳು ಗಲಾಟೆ ಮಾಡ್ತಾರಾ? ರೋಡಲ್ಲಿ ಏನು ಸೆಕ್ಯುರಿಟಿ ಕೊಡಬೇಕೋ ಕೊಡಿ. ರೋಡ್ ಶೋ ಮಾಡಿ ರಾಜಕೀಯ ಮಾಡಿ. ಆದರೆ ವಿದ್ಯಾರ್ಥಿ ಗಳನ್ನು ಯಾಕೆ ಅನುಮಾನದಿಂದ ನೋಡ್ತಿದ್ದೀರಾ? ನಮ್ಮ ವಿದ್ಯಾರ್ಥಿಗಳೇನು ಟೆರರಿಸ್ಟ್ಗಳಾ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮೋದಿ ಕಾರ್ಯಕ್ರಮದ ವಿವರ
ಜೂ. 20, 21ರಂದು ಎರಡು ದಿನಗಳ ಕಾಲ ಮೋದಿ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಎರಡು ದಿನಗಳಲ್ಲಿ ಬೆಂಗಳೂರು ಮತ್ತು ಮೈಸೂರಿನ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಜೂ.20ರ ಮಧ್ಯಾಹ್ನ 11.55ಕ್ಕೆ ಬೆಂಗಳೂರು ಯಲಹಂಕ ವಾಯುನೆಲೆಗೆ ಪ್ರಧಾನಿ ಆಗಮಿಸುತ್ತಾರೆ. ಮಧ್ಯಾಹ್ನ 12.30ಕ್ಕೆ ಇಂಡಿಯನ್ ಇನ್ಸ್ಟ್ಯೂಟ್ ಆಫ್ ಸೈನ್ಸ್ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಮಧ್ಯಾಹ್ನ 1.45ಕ್ಕೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 3.35ಕ್ಕೆ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಉದ್ಘಾಟನೆ ಮಾಡಲಿರುವ ಮೋದಿ, ಸಂಜೆ 5ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ಹೆಲಿಕಾಫ್ಟರ್‌ನಲ್ಲಿ ಮೈಸೂರಿಗೆ ಪ್ರಯಾಣ ಬೆಳೆಸಲಿದ್ದಾರೆ.
ಎಲ್ಲಾ ಸಿದ್ಧತೆ
ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕರ್ನಾಟಕ ಪ್ರವಾಸ ಕೈಗೊಂಡಿದ್ದು, ಇದೇ 20ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಮ್ಮಘಟ್ಟದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆ ಮತ್ತು ಬೆಂಗಳೂರು ವಿವಿ ಆವರಣದಲ್ಲಿ ಅವರು ಉದ್ಘಾಟಿಸಲಿರುವ 'ಬೇಸ್' ವಿವಿ ಕ್ಯಾಂಪಸ್ ಆವರಣದಲ್ಲಿ ನಡೆಯುತ್ತಿರುವ ಪೂರ್ವ ಸಿದ್ಧತೆಗಳನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಮತ್ತು ವಸತಿ ಸಚಿವ ಸೋಮಣ್ಣ ಪರಿಶೀಲಿಸಿದರು.
ಮೊದಲು ಜ್ಞಾನಭಾರತಿ ಆವರಣದ ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿವಿ ಕ್ಯಾಂಪಸ್ಸಿಗೆ ತೆರಳಿದ ಸಚಿವರು, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಕುಲಪತಿ ಡಾ.ಭಾನುಮೂರ್ತಿ, ಕುಲಸಚಿವೆ ಶೋಭಾ ಮತ್ತಿತರ ರೊಂದಿಗೆ ಸಭೆ ನಡೆಸಿ, ಸೂಚನೆಗಳನ್ನು ನೀಡಿದರು.