
ಬೆಂಗಳೂರು(ಮೇ.25): ಕಳೆದ ವರ್ಷ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳ ಶಾಲಾ ಮಕ್ಕಳಿಗೆ ಜಾರಿಗೊಳಿಸಿದ್ದ ಬಿಸಿಯೂಟದ ಜೊತೆ ಬೇಯಿಸಿದ ಕೋಳಿ ಮೊಟ್ಟೆ ನೀಡುವ ಯೋಜನೆಯನ್ನು ರಾಜ್ಯದ ಎಲ್ಲ ಜಿಲ್ಲೆಗಳ ಮಕ್ಕಳಿಗೂ ವಿಸ್ತರಿಸುವ ಪ್ರಸ್ತಾವನೆಗೆ ಸರ್ಕಾರದ ಸಮ್ಮತಿ ಸಿಕ್ಕಿಲ್ಲ. ಹಾಗಾಗಿ ಈ ಯೋಜನೆಯನ್ನು ಈ ಬಾರಿಯೂ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಿಗೆ ಮಾತ್ರ ಜಾರಿಗೊಳಿಸಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಅತಿ ಹೆಚ್ಚು ಅಪೌಷ್ಠಿಕತೆಯಿಂದ ಬಳಲುತ್ತಿರುವ ಕಲ್ಯಾಣ ಕರ್ನಾಟಕ ಭಾಗದ ಬೀದರ್, ರಾಯಚೂರು, ಕಲಬುರಗಿ, ಯಾದಗಿರಿ, ಕೊಪ್ಪಳ, ಬಳ್ಳಾರಿ, ವಿಜಯನಗರ ಮತ್ತು ವಿಜಯಪುರ ಜಿಲ್ಲೆಗಳ ಸರ್ಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಜೂ.1ರಿಂದ ಪ್ರತಿದಿನ ಮಧ್ಯಾಹ್ನದ ಬಿಸಿಯೂಟದ ಜೊತೆ ಕೋಳಿ ಮೊಟ್ಟೆ, ಮೊಟ್ಟೆತಿನ್ನದ ಮಕ್ಕಳಿಗೆ ಬಾಳೆಹಣ್ಣು ಇಲ್ಲವೇ ಶೇಂಗಾ ಚಿಕ್ಕಿ ವಿತರಿಸಲು ಸುತ್ತೋಲೆ ಹೊರಡಿಸಲಾಗಿದೆ.
Eggs in Mid Day Meal ಶೀಘ್ರವೇ ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆ ವಿತರಣೆ ಸಾಧ್ಯತೆ
ಯೋಜನೆ ಏಕೆ?:
ಶಾಲಾ ಮಕ್ಕಳಲ್ಲಿರುವ ಅಪೌಷ್ಠಿಕತೆ ನಿವಾರಣೆಗಾಗಿ 2021-22ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್’ ಯೋಜನೆಯಡಿ ಪೂರಕ ಪೌಷ್ಠಿಕ ಆಹಾರ ವಿತರಿಸಲು ಕಲ್ಯಾಣ ಕರ್ನಾಟಕ ಭಾಗದ ಮಕ್ಕಳಿಗೆ ಕೋಳಿಮೊಟ್ಟೆ ನೀಡುವ (ಮೊಟ್ಟೆತಿನ್ನದವರಿಗೆ ಬಾಳೆಹಣ್ಣು) ಯೋಜನೆ ಜಾರಿಗೆ ತರಲಾಗಿತ್ತು. ಇದಕ್ಕೆ ಕೇಂದ್ರ ಸರ್ಕಾರವೇ ಅನುದಾನ ಒದಗಿಸಿತ್ತು. ಮೊಟ್ಟೆವಿತರಣೆಗೆ ಕೆಲವರಿಂದ ವಿರೋಧ, ವಿವಾದ ಸೃಷ್ಟಿಸುವ ಪ್ರಯತ್ನ ಸಫಲವಾಗಲಿಲ್ಲ. ಬದಲಿಗೆ ಎಲ್ಲ ಜಿಲ್ಲೆಗಳ ಶಾಲಾ ಮಕ್ಕಳಿಗೂ ವಿಸ್ತರಿಸಬೇಕೆಂದು ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಪ್ರಸಕ್ತ ಸಾಲಿನ ಬಜೆಟ್ ಪೂರ್ವಭಾವಿ ಸಭೆಯ ವೇಳೆ ಎಲ್ಲ ಜಿಲ್ಲೆಗಳ ಮಕ್ಕಳಿಗೂ ಸರ್ಕಾರದ ಅನುದಾನದಲ್ಲಿ ಮೊಟ್ಟೆನೀಡಲು ಅನುಮತಿ ನೀಡುವಂತೆ ಮುಖ್ಯಮಂತ್ರಿ ಅವರನ್ನು ಕೋರಿತ್ತು. ಪರಿಶೀಲಿಸುವ ಭರವಸೆಯನ್ನು ಮುಖ್ಯಮಂತ್ರಿ ಅವರು ನೀಡಿದ್ದರು. ಇದಾದ ಬಳಿಕ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿತ್ತು ಎನ್ನುತ್ತವೆ ಇಲಾಖೆ ಮೂಲಗಳು. ಆದರೆ, ಈ ಪ್ರಸ್ತಾವನೆಗೆ ಅನುಮತಿ ಸಿಕ್ಕಿಲ್ಲ.
NewsHour ರಾಜ್ಯದಲ್ಲಿ ಪಠ್ಯಪುಸ್ತಕ ಪರಿಷ್ಕರಣೆ, ಶಿಕ್ಷಣ ಸಚಿವರ ಖಡಕ್ ಉತ್ತರ
15 ಲಕ್ಷ ಮಕ್ಕಳಿಗೆ ಯೋಜನೆ:
ಮೊಟ್ಟೆ ವಿತರಣೆ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಮಾರ್ಗಸೂಚಿ ಪ್ರಕಟಿಸಿದ್ದು, ಕಲ್ಯಾಣ ಕರ್ನಾಟಕ ಭಾಗದ 8 ಜಿಲ್ಲೆಗಳ ವ್ಯಾಪ್ತಿಯ ಸರ್ಕಾರಿ, ಅನುದಾನಿತ ಶಾಲೆಗಳಲ್ಲಿನ 1ರಿಂದ 8ನೇ ತರಗತಿ ವರೆಗಿನ 15,29,713 ಮಕ್ಕಳಿಗೆ ಜೂ.1ರಿಂದ ಪ್ರತಿ ವಿದ್ಯಾರ್ಥಿಗೆ ವಾರದಲ್ಲಿ ಎರಡು ದಿನ ಮೊಟ್ಟೆನೀಡಬೇಕು. ಕೋಳಿಮೊಟ್ಟೆ, ಮೊಟ್ಟೆತಿನ್ನದವರಿಗೆ ಬಾಳೆಹಣ್ಣು ಇಲ್ಲವೇ ಶೇಂಗಾ ಚಿಕ್ಕಿ ವಿತರಿಸಬೇಕು. ಇದಕ್ಕಾಗಿ 44.94 ಕೋಟಿ ರು. ಅಂದಾಜು ವೆಚ್ಚ ನಿಗದಿಪಡಿಸಲಾಗಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರವು 60:40ರ ಅನುಪಾತದಲ್ಲಿ ಫ್ಲೆಕ್ಸಿ ಅನುದಾನದಡಿ ವೆಚ್ಚ ಬರಿಸಲಿದೆ ಎಂದು ತಿಳಿಸಿದ್ದಾರೆ.
ವಾರದಲ್ಲಿ ಯಾವ ಎರಡು ದಿನ ಮೊಟ್ಟೆನೀಡುವುದು ಎಂಬುದನ್ನು ಸ್ಥಳೀಯ ಮಟ್ಟದಲ್ಲೇ ನಿರ್ಧರಿಸಬೇಕು. ಜೂನ್ ತಿಂಗಳಿಂದ ಸೆಪ್ಟೆಂಬರ್ ವರೆಗೆ 11 ವಾರಗಳು ಹಾಗೂ ಅಕ್ಟೋಬರ್‌ನಿಂದ 2023ರ ಫೆಬ್ರವರಿವರೆಗೆ 13ವಾರ ಸೇರಿ ಒಟ್ಟು 24 ವಾರಗಳ ಅವಧಿಯಲ್ಲಿ ಪೂರಕ ಪೌಷ್ಠಿಕ ಆಹಾರ ನೀಡುವುದು. ಇದಕ್ಕಾಗಿ ಪ್ರತಿ ವಿದ್ಯಾರ್ಥಿಗೆ 6 ರು. ನೀಡಲಾಗುತ್ತದೆ. ಇದರಲ್ಲಿ ಒಂದು ಮೊಟ್ಟೆ, ಇಲ್ಲವೇ ಎರಡು ಬಾಳೆ ಹಣ್ಣು ಅಥವಾ ಶೇಂಗಾ ಚಿಕ್ಕಿ ನೀಡಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.