Udupi ಮಲಗಿಕೊಂಡೇ ಓದಿ 580 ಅಂಕ ಪಡೆದ ಶ್ರಾವ್ಯಾ!

By Suvarna News  |  First Published May 24, 2022, 8:42 PM IST

ಕುಂದಾಪುರ ತಾಲೂಕಿನ ವಿದ್ಯಾರ್ಥಿನಿಯೊಬ್ಬಳು ಶಾಲೆ ಮೆಟ್ಟಿಲನ್ನೂ ಹತ್ತಲಾರದೆ , ಮಲಗಿಕೊಂಡೇ ಓದಿ 580 ಅಂಕ ತಂದು ಅದ್ಭುತ ಸಾಧನೆ ಮಾಡಿದ್ದಾಳೆ!


ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್

ಉಡುಪಿ(ಮೇ.24): ಇದೊಂದು ಅಪರೂಪದ ಸಾಧನೆ. ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನೇಕ ಸಾಧಕ ವಿದ್ಯಾರ್ಥಿಗಳನ್ನು ನೋಡಿದ್ದೇವೆ. ಉಡುಪಿಯಲ್ಲೇ ಎಸೆಸೆಲ್ಸಿ ಪರೀಕ್ಷೆಯಲ್ಲಿ ಗಾರೆ ಕೆಲಸದವರ ಮಕ್ಕಳು, ಮೀನುಗಾರರ ಮಕ್ಕಳು ,ಬಡ ರೈತರ ಮಕ್ಕಳು ಓದಿ ಸಾಧನೆ ಮಾಡಿದ್ದನ್ನು ಕೇಳಿದ್ದೇವೆ. ಆದರೆ  ಕುಂದಾಪುರ ತಾಲೂಕಿನ ವಿದ್ಯಾರ್ಥಿನಿಯೊಬ್ಬಳು ಶಾಲೆ ಮೆಟ್ಟಿಲನ್ನೂ ಹತ್ತಲಾರದೆ , ಮಲಗಿಕೊಂಡೇ ಓದಿ 580 ಅಂಕ ತಂದು ಅದ್ಭುತ ಸಾಧನೆ ಮಾಡಿದ್ದಾಳೆ!

Tap to resize

Latest Videos

ಕುಂದಾಪುರ ತಾಲೂಕಿನ ಹಕ್ಲಾಡಿ ರಾಜು ಪೂಜಾರಿ ಸುಜಾತಾ ಪೂಜಾರಿ ದಂಪತಿ ಪುತ್ರಿ ಶ್ರಾವ್ಯಾ ಕರುಳು ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾಳೆ. ಹೀಗಾಗಿ ಈಕೆಗೆ ಆರು ತಿಂಗಳು ಶಾಲೆಗೆ ಹೋಗಲು ಆಗಿರಲಿಲ್ಲ. ತರಗತಿಗೆ ಹೋಗಿ ಪಾಠವನ್ನೂ ಕೇಳಿಲ್ಲ. ಮಲಗಿದ ಸ್ಥಿತಿಯಲ್ಲೇ ಓದು ಬರಹ ಮಾಡಿ ಈಕೆ 580 ಅಂಕ ತರುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದ್ದಾಳೆ. ತನ್ನ ಸಮಸ್ಯೆಗಳ ನಡುವೆಯೂ ಈಕೆಯ ಈ ಸಾಧನೆ ಎಲ್ಲರ ಹುಬ್ಬೇರುವಂತೆ ಮಾಡಿದೆ. 

Olympic Values Education Programme ಭಾರತದಾದ್ಯಂತ ಪ್ರಾರಂಭ

ಆರು ತಿಂಗಳು ಮಂಚದಲ್ಲಿ ಮಲಗಿದ ಸ್ಥಿತಿಯಲ್ಲಿದ್ದರೂ ಈಕೆ ಅಲರ್ಟ್ ಆಗಿದ್ದಳು. ನೋಟ್ಸ್ ಮತ್ತು ಛಾಯಾಪ್ರತಿ ತರಿಸೊಕೊಂಡು ಓದಿ ಶ್ರಾವ್ಯಾ ಈ ಸಾಧನೆ ಮಾಡಿದ್ದು ವಿಶೇಷ. ಎಲ್ಲರಂತೆ ಆಕ್ಟಿವ್ ಆಗಿದ್ದ ಶ್ರಾವ್ಯಾ ಐಬಿಡಿ ಎನ್ನುವ ಕರುಳು ಸಂಬಂಧಿ ಕಾಯಿಲೆಯಿಂದಾಗಿ ದೇಹದ ತೂಕ ಕಳೆದುಕೊಂಡು ಈಗ ಕೇವಲ 21 ಕೆ.ಜಿ.ಗೆ ಇಳಿದಿದ್ದಾಳೆ. ಈಕೆ ಆತ್ರಾಡಿಯ ಮಕ್ಕಳ ಕೂಟ ಶಾಲೆಗೆ ದಾಖಲಾಗಿ ಎಸ್ಸೆಸ್ಸೆಲ್ಸಿ ಪೂರೈಸಿದ್ದು, ಮಕ್ಕಳ ಕೂಟ ಶಾಲಾ ಸಂಚಾಲಕ ಸುಭಾರ್ ಶೆಟ್ಟಿ ಹಾಗೂ ದೀಪಿಕಾ ಶೆಟ್ಟಿ ಅನಾರೋಗ್ಯದ ನಡುವೆಯೂ ಶ್ರಾವ್ಯಾಳ ಓದಿನ ತುಡಿತ ಕಂಡು ನೋಟ್ಸ್ ಹಾಗೂ ಆನ್‌ಲೈನ್‌ ಪಾಠದ ಛಾಯಾಪ್ರತಿ ನೀಡಿ ಸಹಕರಿಸಿದ್ದರು. ಶಾವ್ಯಾಳ ತಂದೆ ತಾಯಿ ಹೆಮ್ಮಾಡಿಯಲ್ಲಿ ಚಿಕ್ಕ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿದ್ದಾರೆ.

ಶ್ರಾವ್ಯಾಳ ದೈಹಿಕ ಶಕ್ತಿ ಕುಂದಿದ್ದರೂ, ಓದುವ ಆಸಕ್ತಿ ಬತ್ತಿಲ್ಲ. ಪಿಯುಸಿಯಲ್ಲಿ ಪಿಸಿಎಂಬಿ ಆಯ್ಕೆ ಮಾಡಿ ಸ್ವಾವಲಂಬಿ ಜೀವನ ಸಾಗಿಸಬೇಕೆಂಬ ಕನಸು ಕಟ್ಟಿಕೊಂಡಿದ್ದಾಳೆ, ಸದ್ಯ ಪಕೃತಿ ಚಿಕಿತ್ಸಾ ಕೇಂದ್ರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಸಾಧಕಿಯ ಭವಿಷ್ಯಕ್ಕೊಂದು ಬೆಸ್ಟ್ ಅಫ್ ಲಕ್ ಹೇಳೋಣ.

ಜ್ಞಾನವ್ಯಾಪಿ ಮಂದಿರದ ಪರ ಬ್ಯಾಟ್ ಮಾಡಿದ ಬೆಂಗಳೂರು ಶಿಕ್ಷಣ ಸಂಸ್ಥೆ

ಉಡುಪಿ ಕಾಲೇಜಿನ ವಿದ್ಯಾರ್ಥಿನಿ ಅಮೋಘ ಸಾಧನೆ: ಬಡಮಕ್ಕಳ ಕಾಲೇಜಿನ ಹುಡುಗಿಯೊಬ್ಬಳು ಅತಿ ದೊಡ್ಡ ಸಾಧನೆ ಮಾಡಿದ್ದಾಳೆ. ಹಿಜಾಬ್ ವಿವಾದ ಆರಂಭವಾದ ಉಡುಪಿಯ ಸರಕಾರಿ ಪದವಿಪೂರ್ವ ಹೆಣ್ಮಕ್ಕಳ ಕಾಲೇಜಿನ, 10ನೇ ತರಗತಿಯ ವಿದ್ಯಾರ್ಥಿ 625 ಅಂಕ ಪಡೆದು ಹೊಸ ಸಾಧನೆ ಮೆರೆದಿದ್ದಾಳೆ. ಧರ್ಮ ಮುಖ್ಯವೋ ಶಿಕ್ಷಣ ಮುಖ್ಯವೋ? ಎಂಬ ಚರ್ಚೆಯನ್ನು ರಾಜ್ಯಾದ್ಯಂತ ಹುಟ್ಟುಹಾಕಿದ್ದ ಕಾಲೇಜು, ಶಿಕ್ಷಣವೇ ಮುಖ್ಯ ಅನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ.

ಉಡುಪಿಯಲ್ಲಿ ಹಿಜಾಬ್ ವಿವಾದ ಆರಂಭವಾದಾಗ ಈ  ಪಿಯು ಕಾಲೇಜಿನ ಬಗ್ಗೆ ಮೂಗು ಮುರಿದವರೇ ಹೆಚ್ಚು . ಇದೇ ಕಾಲೇಜಿನ ಪಿಯುಸಿ ವಿಭಾಗದ  ಆರು ವಿದ್ಯಾರ್ಥಿನಿಯರು ಹೈ ಕೋರ್ಟ್ ಮೆಟ್ಟಿಲೇರಿದಾಗ, ಅದೇ ಸಮುದಾಯದ ಇತರ ವಿದ್ಯಾರ್ಥಿನಿಯರು ಅನೇಕರು ಶಿಕ್ಷಣ ವಂಚಿತರಾಗಬೇಕಾಯಿತು. ರಾಜ್ಯದಲ್ಲಿ ಶಿಕ್ಷಣ ಮುಖ್ಯವೋ ಧರ್ಮ ಮುಖ್ಯವೋ ಎಂಬ ಮಹತ್ವದ ಚರ್ಚೆ ಕೂಡ ನಡೆಯಿತು. ಇದೀಗ ಜೀವನದ ಸುಧಾರಣೆಗೆ ಬದಲಾವಣೆಗೆ ಶಿಕ್ಷಣವೇ ಮುಖ್ಯ ಅನ್ನುವುದನ್ನು ಅದೇ ಕಾಲೇಜು ಸಾಬೀತು ಮಾಡಿದೆ. ಹೆಣ್ಣುಮಕ್ಕಳ ಪದವಿಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದ ವಿದ್ಯಾರ್ಥಿನಿಯೊಬ್ಬಳು, ಹಿಜಾಬ್ ವಿವಾದದ ಗದ್ದಲಗಳ ನಡುವೆ 625 ಅಂಕ ಪಡೆದು ಶಾಲೆಯ ಕೀರ್ತಿ ಪತಾಕೆ ಹಾರಿಸಿದ್ದಾಳೆ.

ಪ್ರೌಢಶಾಲಾ ವಿಭಾಗದ 10ನೇ ತರಗತಿ ವಿದ್ಯಾರ್ಥಿನಿ ಗಾಯತ್ರಿ ಈ ಸಾಧನೆ ಮಾಡಿದ ಹುಡುಗಿ. ನಿಜಕ್ಕೂ ಈ ಸಾಧನೆಗೊಂದು ಅರ್ಥ ಇದೆ. ಜೀವನದಲ್ಲಿ ಶಿಕ್ಷಣಕ್ಕೆ ಮಾತ್ರ ಕೊಟ್ಟರೆ ಯಾವುದೇ ಸಮಸ್ಯೆಗಳು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಈ ಈಕೇನೇ ಸಾಕ್ಷಿ. ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದರೂ , ಪೋಷಕರು ಶೈಕ್ಷಣಿಕವಾಗಿ ಸದೃಢರಲ್ಲದೇ ಹೋದರೂ ಬಡವರ ಕಾಲೇಜಿನ ಬಡವರ ಹುಡುಗಿ ಈ ಹೊಸ ದಾಖಲೆ ಬರೆದಿದ್ದಾಳೆ. ತಂದೆ ಮೇಸ್ತ್ರಿ ಕೆಲಸ ಮಾಡುತ್ತಾರೆ ತಾಯಿ ಬೀಡಿ ಕಟ್ಟುತ್ತಾರೆ, ಮಗಳು 625 ಅಂಕ ಗಳಿಸುತ್ತಾಳೆ.... ಇದೆಲ್ಲಾ ಹೇಗಮ್ಮಾ ಸಾಧ್ಯವಾಯಿತು ಎಂದು ಕೇಳಿದರೆ... ಓದು, ಶಿಕ್ಷಕರ ಸಹಾಯ , ಮನೆಯವರ ಪ್ರೋತ್ಸಾಹ ಕಾರಣ ಎನ್ನುತ್ತಾಳೆ ಗಾಯತ್ರಿ.

click me!