1ನೇ ಕ್ಲಾಸ್‌ ಪ್ರವೇಶಕ್ಕೆ 6 ವರ್ಷ: ಮತ್ತೆ ಗೊಂದಲ?

By Kannadaprabha News  |  First Published Feb 27, 2024, 12:30 PM IST

ಕೇಂದ್ರದ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಪೋಷಕರ ವಲಯದಲ್ಲಿ 1ನೇ ತರಗತಿ ಪ್ರವೇಶಾತಿಗೆ ಸಂಬಂಧಿಸಿದ ವಯೋಮಿತಿ ಸಂಬಂಧ ಮತ್ತೆ ಗೊಂದಲ ಸೃಷ್ಟಿಸಿದೆ. ಕೇಂದ್ರದಿಂದ ಪತ್ರ ಬಂದು 10 ದಿನ ಕಳೆದರೂ ರಾಜ್ಯ ಶಿಕ್ಷಣ ಇಲಾಖೆಯು ಈ ಬಗ್ಗೆ ಪೋಷಕರಿಗೆ ಯಾವುದೇ ಸ್ಪಷ್ಟನೆ ನೀಡದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ, ಅಸಮಾಧಾನ ವ್ಯಕ್ತವಾಗಿದೆ.


ಲಿಂಗರಾಜು ಕೋರಾ

ಬೆಂಗಳೂರು(ಫೆ.27):  ರಾಜ್ಯದಲ್ಲಿ ಒಂದನೇ ತರಗತಿ ಪ್ರವೇಶಕ್ಕೆ ಮಕ್ಕಳ ವಯಸ್ಸು ಕಡ್ಡಾಯವಾಗಿ ಕನಿಷ್ಠ 6 ವರ್ಷ ಪೂರ್ಣಗೊಂಡಿರಬೇಕೆಂಬ ನಿಯಮ 2025-26ನೇ ಸಾಲಿನಿಂದ ಜಾರಿಗೆ ಬರಲಿದೆ ಎಂದು ರಾಜ್ಯ ಸರ್ಕಾರ ಈಗಾಗಲೇ ಎರಡು ವರ್ಷದ ಹಿಂದೆಯೇ ಆದೇಶಿಸಿದೆ. ಆದರೆ, ಇದೀಗ ಕೇಂದ್ರ ಸರ್ಕಾರ ಈ ನಿಯಮವನ್ನು 2024-25ನೇ ಸಾಲಿನಿಂದಲೇ ಜಾರಿಗೊಳಿಸುವಂತೆ ಸೂಚಿಸಿ ಮತ್ತೊಂದು ಪತ್ರ ರವಾನಿಸಿದೆ.

Tap to resize

Latest Videos

undefined

ಕೇಂದ್ರದ ಈ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಪೋಷಕರ ವಲಯದಲ್ಲಿ 1ನೇ ತರಗತಿ ಪ್ರವೇಶಾತಿಗೆ ಸಂಬಂಧಿಸಿದ ವಯೋಮಿತಿ ಸಂಬಂಧ ಮತ್ತೆ ಗೊಂದಲ ಸೃಷ್ಟಿಸಿದೆ. ಕೇಂದ್ರದಿಂದ ಪತ್ರ ಬಂದು 10 ದಿನ ಕಳೆದರೂ ರಾಜ್ಯ ಶಿಕ್ಷಣ ಇಲಾಖೆಯು ಈ ಬಗ್ಗೆ ಪೋಷಕರಿಗೆ ಯಾವುದೇ ಸ್ಪಷ್ಟನೆ ನೀಡದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ, ಅಸಮಾಧಾನ ವ್ಯಕ್ತವಾಗಿದೆ.

2024-25ರ ಸಾಲಿನ 1ನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯೋಮಿತಿ 6ಕ್ಕಿಂತ ಹೆಚ್ಚು: ಶಿಕ್ಷಣ ಇಲಾಖೆ ಆದೇಶ

ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದೆ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಶಿಕ್ಷಣ ಇಲಾಖೆಗಳಿಗೆ ಪತ್ರ ಕಳುಹಿಸಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್‌ಇಪಿ) ಜೊತೆ ವಯಸ್ಸನ್ನು ಹೊಂದಿಸಲು 1ನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳ ವಯಸ್ಸು ಆರು ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟಿರಬೇಕು ಎಂಬ ನಿಯಮವನ್ನು ಮುಂಬರುವ ಶೈಕ್ಷಣಿಕ ಸಾಲಿನಿಂದಲೇ ಜಾರಿಗೊಳಿಸುವಂತೆ ಸೂಚಿಸಿದೆ. ಕೇಂದ್ರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವಾಲಯದ ಜಂಟಿ ಕಾರ್ಯದರ್ಶಿ (ಎಸ್‌ಎಸ್‌.ಐ ಮತ್ತು ಎಇ) ಅರ್ಚನಾ ಶರ್ಮಾ ಅವಸ್ಥಿ ಅವರು ಇದೇ ಫೆ.15ರಂದು ಬರೆದಿರುವ ಪತ್ರ ಕರ್ನಾಟಕ ಸರ್ಕಾರಕ್ಕೆ ಬಂದಿದೆ.

ರಾಜ್ಯದಲ್ಲಿ ಎಲ್‌ಕೆಜಿಗೂ ವಯೋಮಿತಿ: 

‘2025-26ನೇ ಶೈಕ್ಷಣಿಕ ಸಾಲಿನಿಂದ ಅನ್ವಯಿಸುವಂತೆ’ ಆಯಾ ಶೈಕ್ಷಣಿಕ ವರ್ಷದ ಜೂನ್‌ 1ನೇ ತಾರೀಖಿಗೆ ಕಡ್ಡಾಯವಾಗಿ 6 ವರ್ಷಗಳು ಪೂರ್ಣಗೊಂಡಿರುವ ಮಗುವನ್ನು ಮಾತ್ರ ಒಂದನೇ ತರಗತಿಗೆ ದಾಖಲಿಸಲು ವಯೋಮಿತಿಯನ್ನು ನಿಗದಿಪಡಿಸಿ ರಾಜ್ಯ ಸರ್ಕಾರ 2022ರ ನವೆಂಬರ್‌ 15ರಂದು ಆದೇಶ ಮಾಡಿದೆ. ಅಲ್ಲದೆ, ಎಲ್‌ಕೆಜಿ-ಯುಕೆಜಿಗೆ ಮಕ್ಕಳನ್ನು ದಾಖಲಿಸುವಾಗ ಅವರು 1ನೇ ತರಗತಿಗೆ ಬರುವಾಗ 6 ವರ್ಷ ಪೂರ್ಣಗೊಂಡಿರುವಂತೆ ನೋಡಿಕೊಳ್ಳಲು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಕಳೆದ ವರ್ಷದ ಏಪ್ರಿಲ್‌ 27ರಂದು 2023-24ನೇ ಸಾಲಿನಿಂದ ಎಲ್‌ಕೆಜಿ ತರಗತಿಯ ದಾಖಲಾತಿಗೆ ಆಯಾ ಶೈಕ್ಷಣಿಕ ಸಾಲಿನ ಜೂನ್‌ 1ನೇ ತಾರೀಖಿಗೆ ಮಗುವಿನ ವಯಸ್ಸು 4 ವರ್ಷ ಪೂರ್ಣಗೊಂಡಿರಬೇಕೆಂದು ಜ್ಞಾಪನ ಪತ್ರ ಹೊರಡಿಸಿದ್ದಾರೆ. ಇನ್ನು ಈ ನಿರ್ದೇಶನವನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರಾದರೂ ಅದನ್ನು ನ್ಯಾಯಾಲಯ ತಿರಸ್ಕರಿಸಿತ್ತು.

ಮೂರು ವರ್ಷದೊಳಗಿನ ಮಕ್ಕಳನ್ನು ಶಾಲೆಗೆ ಹೋಗುವಂತೆ ಬಲವಂತಪಡಿಸೋದು ಕಾನೂನುಬಾಹಿರ: ಗುಜರಾತ್ ಹೈಕೋರ್ಟ್

1ನೇ ತರಗತಿ ಪ್ರವೇಶಕ್ಕೆ 6 ವರ್ಷ ಪೂರ್ಣಗೊಂಡಿರಬೇಕೆಂಬ ನಿಯಮ ರಾಜ್ಯದಲ್ಲಿ 2025-26ನೇ ಸಾಲಿನಿಂದ ಜಾರಿಗೆ ಬರುವುದಾಗಿ ಈಗಾಗಲೇ ರಾಜ್ಯ ಸರ್ಕಾರ ಆದೇಶ ಮಾಡಿರುವುದರಿಂದ ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪೋಷಕರಲ್ಲಿ ಗೊಂದಲ ಬೇಡ. ಈ ಬಗ್ಗೆ ಕೇಂದ್ರ ಸರ್ಕಾರದ ಪತ್ರಕ್ಕೆ ನಮ್ಮ ಇಲಾಖೆಯ ಉನ್ನತ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಲಿದ್ದಾರೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತೆ ಬಿ.ಬಿ.ಕಾವೇರಿ ಹೇಳಿದ್ದಾರೆ.  

6 ವರ್ಷ ಪೂರ್ಣಗೊಂಡಿರಬೇಕೆಂಬ ನಿಯಮವೇ ಅವೈಜ್ಞಾನಿಕ. ಇದರಿಂದ 6 ವರ್ಷಕ್ಕೆ ಒಂದು ದಿನ ಕಡಿಮೆ ಇದ್ದರೂ ಆ ಮಗು 1ನೇ ತರಗತಿ ದಾಖಲಾತಿಗೆ ಮುಂದಿನ ಶೈಕ್ಷಣಿಕ ವರ್ಷಕ್ಕೆ ಕಾಯಬೇಕು. ಯಾವಾಗಲೂ ಮಕ್ಕಳ ದಾಖಲಾತಿಗೆ ವಯೋಮಿತಿಯನ್ನು ವಯಸ್ಸು ಪೂರ್ಣಗೊಳ್ಳುವ ವಿಧಾನದಲ್ಲಿ ನಿಗದಿಪಡಿಸಬಾರದು. ಬದಲಿಗೆ ಕೆಲವು ತಿಂಗಳ ಕಂಟಿನ್ಯೂಟಿ ಆಧಾರದಲ್ಲಿ ನಿಗದಿಪಡಿಸಬೇಕು. ಕರ್ನಾಟಕ ಸರ್ಕಾರವೂ ಇದನ್ನು ಒಪ್ಪಿಕೊಂಡು 2025-26ನೇ ಸಾಲಿನಿಂದ ಜಾರಿಗೊಳಿಸಲು ಹೊರಟಿದೆ. ಇದರ ಬದಲು ಹೇಗೂ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ತರುತ್ತಿರುವುದರಿಂದ ಅದರಡಿ ದಾಖಲಾತಿಗೆ ಇದುವರೆಗೆ ಇದ್ದಂತೆ ಕೆಲ ತಿಂಗಳ ಮುಂದುವರಿಕೆವರೆಗೆ ಅವಕಾಶ ನೀಡಬಹುದು ಎಂದು ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ತಿಳಿಸಿದ್ದಾರೆ.

click me!