Asianet Suvarna News Asianet Suvarna News

ಮೂರು ವರ್ಷದೊಳಗಿನ ಮಕ್ಕಳನ್ನು ಶಾಲೆಗೆ ಹೋಗುವಂತೆ ಬಲವಂತಪಡಿಸೋದು ಕಾನೂನುಬಾಹಿರ: ಗುಜರಾತ್ ಹೈಕೋರ್ಟ್

ಈ ಶೈಕ್ಷಣಿಕ  ವರ್ಷದಿಂದ ಜಾರಿಗೆ ಬರುವಂತೆ ಒಂದನೇ ತರಗತಿ ಪ್ರವೇಶಕ್ಕೆ ಆರು ವರ್ಷ ಪೂರ್ಣಗೊಳ್ಳುವುದು ಕಡ್ಡಾಯ ಎಂದು ಗುಜರಾತ್ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಅಧಿಸೂಚನೆಗಳನ್ನು ಪ್ರಶ್ನಿಸಿ ಪೋಷಕರು ಸಲ್ಲಿಸಿದ್ದ ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದೆ. ಮೂರು ವರ್ಷ ತುಂಬುವ ಮುನ್ನವೇ ಮಗುವನ್ನು ಪೂರ್ವ ಪ್ರಾಥಮಿಕ ಶಾಲೆಗೆ ಸೇರಿಸಿರೋದು ಪೋಷಕರ ತಪ್ಪು ಎಂದು ಕೋರ್ಟ್ ಹೇಳಿದೆ. 

 

Forcing children below 3 years to go to pre school is illegal Gujarat High Court anu
Author
First Published Sep 7, 2023, 12:35 PM IST

ಅಹಮದಾಬಾದ್ (ಸೆ.7): ಪ್ರಸಕ್ತ ಶೈಕ್ಷಣಿಕ ವರ್ಷದಿಂದ (2023-24)  ಶಾಲೆಗಳು ಒಂದನೇ ತರಗತಿಗೆ ಆರು ವರ್ಷದ ಕೆಳಗಿನ ಮಕ್ಕಳನ್ನು ಸೇರ್ಪಡೆಗೊಳಿಸದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಗುಜರಾತ್ ಹೈಕೋರ್ಟ್ ಇತ್ತೀಚೆಗೆ ವಜಾಗೊಳಿಸಿದೆ. ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್ ಟಿಇ ಕಾಯ್ದೆ) ಹಾಗೂ ಭಾರತೀಯ ಸಂವಿಧಾನದ ಅನುಚ್ಛೇದ 21ಎ ಅಡಿಯಲ್ಲಿ ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಹಕ್ಕು ಮಗುವಿಗೆ ಆರು ವರ್ಷಗಳು ತುಂಬಿದ ಬಳಿಕವಷ್ಟೇ ಸಿಗಲಿದೆ ಎಂದು ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್ವಾಲ್ ಹಾಗೂ ನ್ಯಾಯಮೂರ್ತಿ ಎನ್ .ವಿ.ಅಂಜಿಯಾ ಅವರನ್ನೊಳಗೊಂಡ ಪೀಠ ಸ್ಪಷ್ಟಪಡಿಸಿದೆ.  ಆರ್ ಟಿಇ ಕಾಯ್ದೆಯ ವಿವಿಧ ನಿಬಂಧನೆಗಳು ಕೂಡ ಆರು ವರ್ಷಗಳಿಗಿಂತ ಹೆಚ್ಚು ವಯಸ್ಸಿನ ಮಗುವು ಯಾವುದೇ ಕಾರಣಕ್ಕೂ ಶಾಲಾ ಶಿಕ್ಷಣದಿಂದ ವಂಚಿತವಾಗಬಾರದು ಹಾಗೂ ಇಂಥ ಮಗು ತನ್ನ ಪ್ರಾಥಮಿಕ ಶಿಕ್ಷಣವನ್ನು ಯಾವುದೇ ಸಮಸ್ಯೆಗಳಿಲ್ಲದೆ ಪೂರ್ಣಗೊಳಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ರಾಜ್ಯ ಸರ್ಕಾರ ಕಡ್ಡಾಯವಾಗಿ ತೆಗೆದುಕೊಳ್ಳಬೇಕು ಎಂದು ಸ್ಪಷ್ಟವಾಗಿ ನಿರ್ದೇಶಿಸಿದೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ. ಅಲ್ಲದೆ, ಮೂರು ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಶಾಲೆಗೆ ಕಳುಹಿಸೋದು ಹೆತ್ತವರ ಕಾನೂನುಬಾಹಿರ ಕ್ರಮ ಕೂಡ ಆಗಿದೆ ಎಂದು ತಿಳಿಸಿದೆ.

ತಮ್ಮ ಮಕ್ಕಳು ಪೂರ್ವ ಪ್ರಾಥಮಿಕ ಶಿಕ್ಷಣವನ್ನು ಈಗಾಗಲೇ ಪೂರ್ಣಗೊಳಿಸಿದ್ದಾರೆ. ಹೀಗಾಗಿ ಒಂದನೇ ತರಗತಿಗೆ ತಮ್ಮ ಮಕ್ಕಳನ್ನು ಆರು ವರ್ಷಕ್ಕಿಂತ ಮೊದಲೇ ಸೇರ್ಪಡೆಗೊಳಿಸಲು ಅವಕಾಶ ನೀಡುವಂತೆ ಕೋರಿ ಹಲವು ಪೋಷಕರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ. ಸಂಬಂಧಪಟ್ಟ ಶೈಕ್ಷಣಿಕ ವರ್ಷದ ಜೂನ್ 1ಕ್ಕೆ ಮಗುವಿಗೆ ಆರು ವರ್ಷ ತುಂಬದಿದ್ದರೆ ಅಂಥ ಮಗುವಿಗೆ ಪ್ರೀ-ಸ್ಕೂಲ್ ಗೆ ಪ್ರವೇಶ ನೀಡೋದನ್ನು ಆರ್ ಟಿಇ ಕಾಯ್ದೆ ನಿರ್ಬಂಧಿಸಿದೆ ಎಂಬ ಅಂಶವನ್ನು ಕೋರ್ಟ್ ಎತ್ತಿ ಹಿಡಿದಿದೆ. 

ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸೂಚನೆ; ಅಂಗನವಾಡಿ ಕಾರ್ಯಕರ್ತರು ತೀವ್ರ ವಿರೋಧ

'ಪ್ರೀ-ಸ್ಕೂಲ್ ನಲ್ಲಿ ಮೂರು ವರ್ಷಗಳ ಆರಂಭಿಕ ಬಾಲ್ಯದ ಕಾಳಜಿ ಆಗೂ ಶಿಕ್ಷಣ ಒಂದು ಮಗುವನ್ನು ಶಾಲೆಯಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆಯಲು ಸಿದ್ಧಪಡಿಸುತ್ತದೆ. ನಮ್ಮ ಮುಂದಿರುವ ಮಕ್ಕಳನ್ನು ಅವರ ಪೋಷಕರು  ಆರ್ ಟಿಇ ಯಲ್ಲಿ ಪ್ರಿ-ಸ್ಕೂಲ್ ಪ್ರವೇಶಕ್ಕೆ ನಿಗದಿಪಡಿಸಿರುವ ಕನಿಷ್ಠ ವಯಸ್ಸಾದ ಮೂರು ವರ್ಷಗಳು ಪೂರ್ಣಗೊಳ್ಳುವ ಮುನ್ನವೇ ದಾಖಲಿಸಿದ್ದಾರೆ' ಎಂಬುದನ್ನು ಗಮನಿಸಿರೋದಾಗಿ ಪೀಠ ತಿಳಿಸಿದೆ. ಹೀಗಾಗಿ ಅರ್ಜಿದಾರರು ಕೋರ್ಟ್ ಮುಂದೆ ಯಾವುದೇ ಕನಿಕರ ಅಥವಾ ನೆರವು ಕೋರುವಂತಿಲ್ಲ. ಏಕೆಂದರೆ ಅವರು ಆರ್ ಟಿಇ ಕಾಯ್ದೆ 2009  ಹಾಗೂ ಆರ್ ಟಿಇ ನಿಯಮಗಳು 2012 ಅನ್ನು ಉಲ್ಲಂಘಿಸಿದ್ದಾರೆ.

'ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಶಾಲೆಗೆ ಹೋಗುವಂತೆ ಬಲವಂತಪಡಿಸೋದು ಹೆತ್ತವರ ಕಾನೂನುಬಾಹಿರ ನಡವಳಿಕೆಯಾಗಿದೆ. ಮೂರು ವರ್ಷ ತುಂಬಿದ ಮಕ್ಕಳು ಶಾಲೆಗೆ ಹೋಗಲು ಸಿದ್ಧರಾಗಿದ್ದು, ಪ್ರೀ-ಸ್ಕೂಲ್ ಗೆ 2020-21ನೇ ಸಾಲಿನಲ್ಲಿ ಸೇರಿಸಿದ್ದರೆ ಅದು ಸರಿಯಾಗಿರುತ್ತಿತ್ತು. ಹೀಗಾಗಿ ಹೆತ್ತವರು ಮಂಡಿಸಿರುವ ವಾದ ನಮ್ಮನ್ನು ಪ್ರಭಾವಿಸಿಲ್ಲ ಎಂದು ಕೋರ್ಟ್ ಹೇಳಿದೆ.  ಈ ವರ್ಷದ ಜೂನ್ 1ರಿಂದ ಜಾರಿಗೆ ಬರುವಂತೆ 2020 ಜನವರಿ 31 ಹಾಗೂ 2020 ಆಗಸ್ಟ್ 4ರಂದು ಹೊರಡಿಸಿರುವ ರಾಜ್ಯ ಸರ್ಕಾರದ ಅಧಿಸೂಚನೆಗಳನ್ನು ಪ್ರಶ್ನಿಸಿ ಪೋಷಕರು ಸಲ್ಲಿಸಿರುವ ಅರ್ಜಿಗಳನ್ನು ಕೋರ್ಟ್ ವಿಚಾರಣೆ ನಡೆಸಿದೆ.

ಪರೀಕ್ಷೆಯಲ್ಲಿ ಶೂನ್ಯ ಅಂಕ ಗಳಿಸಿದ ಮಗಳು, ಅಮ್ಮನ ರಿಯಾಕ್ಷನ್ ಫುಲ್ ವೈರಲ್!

ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಜೂನ್ 1 ಅನ್ನು  ಕಟ್ ಅಪ್ ದಿನಾಂಕವಾಗಿ ನಿಗದಿಪಡಿಸೋದ್ರಿಂದ ಗುಜರಾತ್ ನಲ್ಲಿ ಸುಮಾರು 9ಲಕ್ಷ ಮಕ್ಕಳು ತಮ್ಮ ಶಿಕ್ಷಣದ ಹಕ್ಕಿನಿಂದ ವಂಚಿತರಾಗುತ್ತಾರೆ ಎಂಬ ವಾದವನ್ನು ಒಪ್ಪಿಕೊಳ್ಳಲು ಕೂಡ ಕೋರ್ಟ್ ನಿರಾಕರಿಸಿದೆ. ಇನ್ನು ಪೀಠ ರಾಷ್ಟ್ರೀಯ ಶಿಕ್ಷಣ ನೀತಿ  2020 ಅನ್ನು ಉಲ್ಲೇಖಿಸಿ ಶೇ.85ರಷ್ಟು ಮಕ್ಕಳ ಮೆದುಳಿನ ಬೆಳವಣಿಗೆ ಆರು ವರ್ಷಕ್ಕಿಂತ ಮೊದಲೇ ಆಗುತ್ತದೆ ಎಂದು ತಿಳಿಸಿತ್ತು. ಇದು ಮಿದುಳಿನ ಆರೋಗ್ಯಕರ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಬಾಲ್ಯದ ಪ್ರಾರಂಭಿಕ ಹಂತದಲ್ಲಿ ಸಮರ್ಪಕವಾದ ಕಾಳಜಿ ಹಾಗೂ ಉತ್ತೇಜನ ನೀಡುವುದು ಎಷ್ಟು ಮುಖ್ಯ ಎಂಬುದನ್ನು ತಿಳಿಸುತ್ತದೆ ಎಂದು ಕೋರ್ಟ್ ಹೇಳಿದೆ. 

Follow Us:
Download App:
  • android
  • ios