ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣ: ನನ್ನ ಪರಿಸ್ಥಿತಿ ಯಾರಿಗೂ ಬರಬಾರದು ರಿಕ್ಷಾ ಚಾಲಕನ ಸಂಕಟ

By Kannadaprabha News  |  First Published Jan 16, 2023, 11:42 AM IST

ಮಂಗಳೂರಿನ ನಾಗುರಿಯಲ್ಲಿ 2022ರ ನ.19ರಂದು ಚಲಿಸುತ್ತಿದ್ದ ರಿಕ್ಷಾದಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟದ ಸಂತ್ರಸ್ತ (Cooker blast victim) ಆಟೋ ಚಾಲಕ ಪುರುಷೋತ್ತಮ ಪೂಜಾರಿ ಆಸ್ಪತ್ರೆಯಿಂದ ಬಿಡುಗಡೆಯಾದರು ಕೆಲಸ ಮಾಡಲಾಗುತ್ತಿಲ್ಲ. ಈ ಬಗ್ಗೆ ಅವರು ನೋವು ತೋಡಿಕೊಂಡಿದ್ದಾರೆ.


ಸಂದೀಪ್‌ ವಾಗ್ಲೆ, ಕನ್ನಡಪ್ರಭ ವಾರ್ತೆ

ಮಂಗಳೂರು: ನನ್ನ ಗ್ರಹಚಾರವೊ, ಏನೋ, ಕುಕ್ಕರ್‌ ಬಾಂಬ್‌ ಸ್ಫೋಟವನ್ನು ನನ್ನ ಜೀವನದಲ್ಲಿ ನಾನೆಂದೂ ನೋಡಿಲ್ಲ. ನನ್ನ ಪರಿಸ್ಥಿತಿ ಬೇರೆ ಯಾರಿಗೂ ಬರಬಾರದು. ಘಟನೆ ಬಳಿಕ ಸರ್ಕಾರದಿಂದ ನನ್ನ ಕುಟುಂಬಕ್ಕೆ ಪರಿಹಾರ ತೆಗೆಸಿಕೊಡುವುದಾಗಿ ಜನಪ್ರತಿನಿಧಿಗಳು, ಸಚಿವರು ಭರವಸೆ ನೀಡಿ ಹೋಗಿದ್ದಾರೆ, ಹೊಸ ರಿಕ್ಷಾ ತೆಗೆಸಿಕೊಡುವುದಾಗಿಯೂ ಹೇಳಿದ್ದಾರೆ. ಆದರೆ, ಇದುವರೆಗೂ ಯಾವ ಪರಿಹಾರವೂ ಸಿಕ್ಕಿಲ್ಲ. ತುಂಬ ಕಷ್ಟದಿಂದ ಬದುಕು ಸಾಗಿಸುತ್ತಿದ್ದೇವೆ ಇದು ಮಂಗಳೂರಿನ ನಾಗುರಿಯಲ್ಲಿ 2022ರ ನ.19ರಂದು ಚಲಿಸುತ್ತಿದ್ದ ರಿಕ್ಷಾದಲ್ಲಿ ನಡೆದ ಕುಕ್ಕರ್‌ ಬಾಂಬ್‌ ಸ್ಫೋಟದ ಸಂತ್ರಸ್ತ (Cooker blast victim) ಆಟೋ ಚಾಲಕ ಪುರುಷೋತ್ತಮ ಪೂಜಾರಿ (61) ಅವರ ಮನದಾಳದ ನೋವುಗಳಿವು.

Tap to resize

Latest Videos

ಇನ್ನೂ ಗುಣವಾಗಿಲ್ಲ:

ಪುರುಷೋತ್ತಮ ಅವರು ಬಾಂಬ್‌ ಸ್ಫೋಟದಿಂದ ತೀವ್ರ ಸುಟ್ಟಗಾಯಗಳಿಂದ 56 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಶನಿವಾರವಷ್ಟೇ ಮನೆಗೆ ಮರಳಿದ್ದಾರೆ. ಸುಟ್ಟಗಾಯ ಇನ್ನೂ ಪೂರ್ತಿಯಾಗಿ ಗುಣವಾಗಿಲ್ಲ. ‘ಕನ್ನಡಪ್ರಭ’ ಪ್ರತಿನಿಧಿ ನಗರದ ಉಜ್ಜೋಡಿಯಲ್ಲಿರುವ ಅವರ ಪುಟ್ಟಬಾಡಿಗೆ ಮನೆಗೆ ತೆರಳಿದಾಗ ಸುಟ್ಟುಹೋದ ಎರಡೂ ಕೈಗಳನ್ನು ತೋರಿಸಿ ದು:ಖತಪ್ತರಾದರು. ಮಲಗಿದಲ್ಲೇ ಅವರ ಪತ್ನಿ ಹಣ್ಣು ತಿನ್ನಿಸುತ್ತಿದ್ದರು. ಬಾಂಬ್‌ ಸ್ಫೋಟದಿಂದ (Bomb blast) ಅವರ ಕೈಗಳು ಸುಟ್ಟು ಬಲಹೀನವಾಗಿವೆ. ಹೆಚ್ಚು ಮಾತನಾಡಲು ತ್ರಾಣವಿಲ್ಲ. ಅವರ ಎಲ್ಲ ಕೆಲಸಗಳನ್ನು ಪತ್ನಿ, ಇಬ್ಬರು ಪುತ್ರಿಯರು ಮಾಡುತ್ತಿದ್ದಾರೆ. ಎಲ್ಲವೂ ಸರಿಯಾಗಿ ಮತ್ತೆ ರಿಕ್ಷಾ ಓಡಿಸಲು ಇನ್ನು ಏನಿಲ್ಲವೆಂದರೂ 6 ತಿಂಗಳಿನಿಂದ ಒಂದು ವರ್ಷವಾದರೂ ಬೇಕು. ಪ್ರಸ್ತುತ ಸುಟ್ಟಗಾಯ ಉಲ್ಭಣಿಸದಂತೆ ಜನರಿಂದ ಪ್ರತ್ಯೇಕವಾಗಿ ಕೊಠಡಿಯಲ್ಲಿ ವಾಸಿಸುತ್ತಿದ್ದಾರೆ. ಜೀವನಕ್ಕೇನು... ಎಂದರೆ ಮೌನವಾದರು.

Shivamogga: ತೀರ್ಥಹಳ್ಳಿಯಲ್ಲಿ ನಡೆದಿದ್ದು ಇಡಿ ದಾಳಿ ಅಲ್ಲ: ಎನ್‌ಐಎ ರೇಡ್‌

ಬಾಂಬ್‌ ಅಂತ ಗೊತ್ತೇ ಇರಲಿಲ್ಲ

ನ.19ರಂದು ಸಂಜೆ ಬಾಡಿಗೆಗೆ ಹೋಗಿದ್ದವನು ಕಂಕನಾಡಿ (Kankanadi) ರೈಲ್ವೆ ನಿಲ್ದಾಣದಿಂದ ಬರುತ್ತಿದ್ದಾಗ ನಾಗುರಿ ಬಸ್‌ ನಿಲ್ದಾಣದಲ್ಲಿ ಯುವಕನೊಬ್ಬ ಕೈಯಲ್ಲಿ ಬ್ಯಾಗ್‌ ಹಿಡಿದು ಪಂಪ್‌ವೆಲ್‌ಗೆ ಕರೆದೊಯ್ಯುವಂತೆ ತಿಳಿಸಿದ. ಅವನನ್ನು ಕುಳ್ಳಿರಿಸಿಕೊಂಡು ಸ್ವಲ್ಪ ದೂರ ಬರುತ್ತಿದ್ದಂತೆ ಟಫ್‌ ಅಂತ ದೊಡ್ಡ ಶಬ್ದ, ಅದರ ಬೆನ್ನಿಗೆ ದಟ್ಟಹೊಗೆ-ಬೆಂಕಿ ಆವರಿಸಿತು. ಹೊಗೆಯಿಂದಾಗಿ ಏನೂ ಕಾಣದೆ ಹೇಗೋ ರಿಕ್ಷಾವನ್ನು ರಸ್ತೆ ಪಕ್ಕ ತಂದು ನಿಲ್ಲಿಸಿದೆ. ಬಾಂಬ್‌ ಸ್ಫೋಟಿಸಿದ ಯುವಕ ರಿಕ್ಷಾದಿಂದ ಹೊರಗೋಡಿದ. ಅಲ್ಲಿನ ಯುವಕರು ಸುಟ್ಟಗಾಯ ಹೆಚ್ಚದಂತೆ ಆತನ ಅಂಗಿ ತೆಗೆದು ಉಪಚರಿಸಿದರು. ಬಳಿಕ ನಮ್ಮಿಬ್ಬರನ್ನು ಮತ್ತೊಂದು ರಿಕ್ಷಾದಲ್ಲಿ ಒಟ್ಟಿಗೆ ಆಸ್ಪತ್ರೆಗೆ ಕರೆದೊಯ್ದರು. ಆಸ್ಪತ್ರೆಗೆ ದಾಖಲಾಗುವವರೆಗೂ ಆತ ಸ್ಫೋಟಿಸಿದ್ದು ಬಾಂಬ್‌ ಅಂತ ನನಗೆ ಗೊತ್ತಿರಲೇ ಇಲ್ಲ. ಬಳಿಕ ನಿಧಾನವಾಗಿ ಗೊತ್ತಾಯಿತು ಎಂದು ಆ ದಿನಗಳ ಮೆಲುಕು ಹಾಕಿದರು.

ಮೇ 3ಕ್ಕೆ ಪುತ್ರಿ ವಿವಾಹ:

ಪ್ರಸ್ತುತ ಕುದ್ರೋಳಿ (Kudroli) ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‌ ಮತ್ತಿತರರು ಸೇರಿ ನನ್ನ ಮನೆ ನವೀಕರಣ ಮಾಡುತ್ತಿದ್ದಾರೆ, ಹಾಗಾಗಿ ಬಾಡಿಗೆ ಮನೆಗೆ ಬಂದಿದ್ದೇನೆ. ಈ ತಿಂಗಳ ಅಂತ್ಯಕ್ಕೆ ನವೀಕರಣ ಕಾರ್ಯ ಮುಗಿಯುವ ನಿರೀಕ್ಷೆಯಿದೆ. ನನ್ನ ಹಿರಿಯ ಪುತ್ರಿಯ ವಿವಾಹ ಮೇ 3ಕ್ಕೆ ನಿಗದಿಯಾಗಿದೆ. ನಾನೀಗ ಕೆಲಸ ಮಾಡಲಾಗದೆ ಮಲಗಿದ್ದೇನೆ. ನನ್ನ ಜೀವನದಲ್ಲಿ ಈ ದುರ್ಘಟನೆ ನಡೆಯದೇ ಇರುತ್ತಿದ್ದರೆ ದುಡಿದು, ಸಾಲ ಮಾಡಿಯಾದರೂ ಮಗಳ ಮದುವೆಗೆ ಹಣ ಹೊಂದಿಸುತ್ತಿದ್ದೆ. ಆದರೆ, ಈಗೇನು ಮಾಡಲಿ ಎಂದು ನೋವು ತೋಡಿಕೊಂಡರು.

ತರಬೇತಿ ಇಲ್ಲದೇ ಬಾಂಬ್ ತಯಾರಿಸಿದ ಶಾರೀಕ್: ಸ್ಫೋಟಕ ರಹಸ್ಯ ಬಯಲು

ಪರಿಹಾರದ ನಿರೀಕ್ಷೆಯಲ್ಲಿ: ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ಇಎಸ್‌ಐನಿಂದ ಭರಿಸಲಾಗಿದೆ. ಗಾಯ ಗುಣವಾಗುವವರೆಗೆ ಪ್ರತಿದಿನ ಔಷಧಿ ತೆಗೆದುಕೊಳ್ಳಬೇಕು. ಪ್ರತಿವಾರ ಆಸ್ಪತ್ರೆಗೆ ಹೋಗಬೇಕು, ಆ ಖರ್ಚನ್ನು ಕೈಯಿಂದಲೇ ಭರಿಸಬೇಕಾಗಿದೆ. ಬಾಂಬ್‌ ಸ್ಫೋಟದ ಬಳಿಕ ಗೃಹ ಸಚಿವರು ಸೇರಿದಂತೆ ಸಂಸದರು, ಉಸ್ತುವಾರಿ ಸಚಿವರು, ಶಾಸಕರು ಭೇಟಿಯಾಗಿ ವೈಯಕ್ತಿಕ ಧನ ಸಹಾಯ ಮಾಡಿದ್ದರು. ಅಲ್ಲದೆ, ನಮ್ಮ ಕುಟುಂಬದ ಜೀವನ ಭದ್ರತೆಗೆ ಸರ್ಕಾರದಿಂದ ಪರಿಹಾರ ತೆಗೆಸಿಕೊಡುವುದಾಗಿ ಭರವಸೆ ನೀಡಿದ್ದರು. ಹೊಸ ರಿಕ್ಷಾ ತೆಗೆಸಿಕೊಡುವುದಾಗಿಯೂ ಹೇಳಿದ್ದರು. ಆ ನಿರೀಕ್ಷೆಯಲ್ಲೇ ಕಾಲ ಕಳೆಯುತ್ತಿದ್ದೇನೆ. ಈಗ ಯಾರೂ ಕೇಳುವವರಿಲ್ಲವಾಗಿದೆ. ಬಾಂಬ್‌ ಸ್ಫೋಟವಾದ ರಿಕ್ಷಾ ಕೂಡ ಎಲ್ಲಿದೆ ಎನ್ನುವುದು ಗೊತ್ತಿಲ್ಲ. ಹೊಸ ರಿಕ್ಷಾ ಸಿಗದಿದ್ದರೆ ಹಳೆ ರಿಕ್ಷಾ ರಿಪೇರಿ ಮಾಡಲು ಇನ್ನೆಷ್ಟುಕಷ್ಟವಾದೀತೊ ಎಂದು ಕಣ್ಣೀರಾದರು. ಸಚಿವರು, ಜನಪ್ರತಿನಿಧಿಗಳು ಭರವಸೆ ನೀಡಿದಂತೆ ಸರ್ಕಾರದಿಂದ ಪರಿಹಾರ ಸಿಗಬಹುದು ಎನ್ನುವ ನಿರೀಕ್ಷೆಯಲ್ಲಿದ್ದೇನೆ. ನನ್ನ ಪುತ್ರಿಯ ವಿವಾಹಕ್ಕಿಂತ ಮೊದಲು ಪರಿಹಾರ ದೊರೆತರೆ ಅದೇ ದೊಡ್ಡ ಉಪಕಾರ ಎಂದು ಅವರು ಹೇಳಿದರು. 

click me!