ಕಡಲ ನಗರಿಯಲ್ಲಿ ಅನ್ಯಕೋಮಿನ ಜೋಡಿಯ ಸುತ್ತಾಟದ ವಿರುದ್ದ ಹಿಂದೂ ಸಂಘಟನೆಗಳು ಕೆಂಡವಾಗಿರೋ ಬೆನ್ನಲ್ಲೇ ಒಂದೇ ಕೋಮಿನ ಜೋಡಿಗಳ ಸುತ್ತಾಟದ ವಿರುದ್ದ ಮುಸ್ಲಿಂ ಯುವಕರೂ ನೈತಿಕ ಪೊಲೀಸ್ ಗಿರಿಯ ಹಾದಿ ಹಿಡಿದಂತೆ ಕಾಣುತ್ತಿದೆ.
ವರದಿ- ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು (ಡಿ.8): ಕಡಲ ನಗರಿಯಲ್ಲಿ ಅನ್ಯಕೋಮಿನ ಜೋಡಿಯ ಸುತ್ತಾಟದ ವಿರುದ್ದ ಹಿಂದೂ ಸಂಘಟನೆಗಳು ಕೆಂಡವಾಗಿರೋ ಬೆನ್ನಲ್ಲೇ ಒಂದೇ ಕೋಮಿನ ಜೋಡಿಗಳ ಸುತ್ತಾಟದ ವಿರುದ್ದ ಮುಸ್ಲಿಂ ಯುವಕರೂ ನೈತಿಕ ಪೊಲೀಸ್ ಗಿರಿಯ ಹಾದಿ ಹಿಡಿದಂತೆ ಕಾಣುತ್ತಿದೆ. ಇದಕ್ಕೆ ಸಾಕ್ಷ್ಯವೆಂಬಂತೆ ಸುಳ್ಯದಲ್ಲಿ ಸಿನಿಮಾ ವೀಕ್ಷಣೆಗೆ ಬಂದಿದ್ದ ಮುಸ್ಲಿಂ ಜೋಡಿಯನ್ನು ತಡೆದ ಮುಸ್ಲಿಂ ಯುವಕರ ಗುಂಪೊಂದು ತರಾಟೆಗೆ ತೆಗೆದುಕೊಂಡು ಹಲ್ಲೆಗೆ ಯತ್ನಿಸಿದ ಘಟನೆ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಸಂತೋಷ್ ಚಿತ್ರಮಂದಿರದಲ್ಲಿ ನಡೆದಿದೆ.
ಥಿಯೇಟರ್ ಗೆ ಬಂದ ಜೋಡಿ ಮೇಲೆ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗಿರಿ ನಡೆದಿದ್ದು, ಒಂದೇ ಕೋಮಿನ ಜೋಡಿಯ ಮೇಲೆ ಮುಸ್ಲಿಂ ಯುವಕರು ಹಲ್ಲೆಗೆ ಯತ್ನಿಸಿದ್ದಾರೆ. ಕಾಲೇಜು ತಪ್ಪಿಸಿ ಸಿನಿಮಾ ವೀಕ್ಷಣೆಗೆ ಬಂದಿದ್ದಕ್ಕೆ ಯುವಕರ ಗುಂಪು ಜೋಡಿಯನ್ನ ತರಾಟೆಗೆ ತೆಗೆದುಕೊಂಡಿದೆ ಎನ್ನಲಾಗಿದೆ. ಹಿಜಾಬ್ ಹಾಕಿದ್ದ ಯುವತಿ ಮತ್ತು ಅದೇ ಸಮುದಾಯದ ಯುವಕ ಬಂದಿದ್ದರು. ಕಾಂತಾರ ಸಿನಿಮಾ ವೀಕ್ಷಣೆಗೆ ಥಿಯೇಟರ್ ಗೆ ಬಂದಿದ್ದ ಬಗ್ಗೆ ಮಾಹಿತಿ ಇದ್ದು, ಪಾರ್ಕಿಂಗ್ ನಲ್ಲಿ ಬೈಕ್ ನಿಲ್ಲಿಸಿದ್ದ ವೇಳೆ ಸ್ಥಳೀಯ ಕೆಲ ಮುಸ್ಲಿಂ ಯುವಕರು ತರಾಟೆಗೆ ತೆಗೆದುಕೊಂಡಿದ್ದಾರೆ.
Mangaluru Moral Policing: ಸುಲ್ತಾನ್ ಗೋಲ್ಡ್ ನೈತಿಕ ಪೊಲೀಸ್ ಗಿರಿ ಪ್ರಕರಣ, ಮೂರು ಪ್ರತ್ಯೇಕ ಎಫ್ಐಆರ್ ದಾಖಲು
ಕೇರಳ ಮೂಲದ ಜೋಡಿ ವಿದ್ಯಾರ್ಥಿಗಳು: ಕಾಲೇಜಿಗೆ ಹೋಗದೇ ಸಿನಿಮಾಗೆ ಬಂದಿದ್ದಕ್ಕೆ ಆಕ್ಷೇಪವೆತ್ತಿ ಗಲಾಟೆ ನಡೆದಿದೆ ಎನ್ನಲಾಗಿದ್ದು, ಸುಳ್ಯದ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿರುವ ಕೇರಳ ಮೂಲದ ವಿದ್ಯಾರ್ಥಿ ಜೋಡಿ ಎಂದು ತಿಳಿದು ಬಂದಿದೆ. ಸದ್ಯ ಹಲ್ಲೆಗೆ ಯತ್ನಿಸಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದು, ಮುಸ್ಲಿಂ ಯುವಕರ ಎಚ್ಚರಿಕೆ ಬಳಿಕ ಈ ಜೋಡಿ ಸ್ಥಳದಿಂದ ತೆರಳಿರುವ ಮಾಹಿತಿ ಇದೆ. ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ ವಿರೋಧಗಳು ಹೆಚ್ಚಾಗಿ ಕಂಡುಬರುತ್ತಿದೆ.
ಸಿನಿಮಾ ವೀಕ್ಷಣೆಗೆ ಬಂದಿದ್ದಕ್ಕೆ ವಿರೋಧವಾ?: ಸದ್ಯ ಈ ವಿಡಿಯೋ ವೈರಲ್ ಬೆನ್ನಲ್ಲೇ ಹೊಸ ಚರ್ಚೆಯೊಂದು ಸಾಮಾಜಿಕ ತಾಣಗಳಲ್ಲಿ ಸದ್ದು ಮಾಡುತ್ತಿದೆ. ಮುಸ್ಲಿಂ ವಿದ್ಯಾರ್ಥಿನಿ ಹಿಜಾಬ್ ಹಾಕಿಕೊಂಡೇ ತನ್ನ ಗೆಳೆಯನ ಜೊತೆಗೆ ಸಿನಿಮಾ ವೀಕ್ಷಣೆಗೆ ಬಂದಿದ್ದೇ ಈ ನೈತಿಕ ಪೊಲೀಸ್ ಗಿರಿಗೆ ಕಾರಣ ಎನ್ನಲಾಗುತ್ತಿದೆ. ಇಬ್ಬರೂ ಒಂದೇ ಕೋಮಿನವರಾಗಿದ್ದು, ಕಾಂತಾರ ಚಿತ್ರ ವೀಕ್ಷಿಸಲು ಥಿಯೇಟರ್ ಗೆ ಬಂದಿದ್ದರು ಎನ್ನಲಾಗಿದೆ. ಅಲ್ಲದೇ ಕಾಲೇಜು ತಪ್ಪಿಸಿ ಸಿನಿಮಾಗೆ ಬಂದಿರೋದು ಕೂಡ ಮುಸ್ಲಿಂ ಯುವಕರ ಕಣ್ಣು ಕೆಂಪಗಾಗಿಸಿತ್ತು ಎನ್ನಲಾಗಿದೆ. ಇದೇ ಕಾರಣಕ್ಕೆ ಹಿಜಾಬ್ ತೊಟ್ಟು ಸಿನಿಮಾಗೆ ಬಂದಿದ್ದಕ್ಕೆ ವಿದ್ಯಾರ್ಥಿನಿಗೆ ತರಾಟೆಗೆ ತೆಗೆದುಕೊಂಡಿದ್ದು, ಯುವಕನಿಗೆ ಇದೇ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬರುತ್ತಿದೆ.
ಇರಾನಿನಲ್ಲಿ ಹಿಜಾಬ್ ವಿರೋಧಿ ಹೋರಾಟ: ಏನಿದು 'ಗಷ್ಟ್- ಇ- ಎರ್ಷಾದ್' ನೈತಿಕ ಪಡೆ?
ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ: ಘಟನೆ ಬಗ್ಗೆ ತಿಳಿದ ಸುಳ್ಯ ಪೊಲೀಸರು ಎಲ್ಲರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಬಿಟ್ಟಿದ್ದಾರೆ. ಈವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಸುಳ್ಯ ಪೊಲೀಸ್ ಠಾಣೆಯ ಮಾಹಿತಿ ಪ್ರಕಾರ, ಕಾಲೇಜಿಗೆ ತಪ್ಪಿಸಿ ಸಿನಿಮಾಗೆ ಬಂದಿದ್ದಕ್ಕೆ ಸ್ಥಳೀಯ ಮುಸ್ಲಿಂ ಯುವಕರು ಆಕ್ಷೇಪ ಎತ್ತಿದ್ದಾರೆ. ಆದರೆ ಯಾರಿಗೂ ಹಲ್ಲೆ ಆಗಿಲ್ಲ. ಯಾರೂ ದೂರು ಕೊಟ್ಟಿಲ್ಲ ಮತ್ತು ಪ್ರಕರಣ ಕೂಡ ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.