ರಾಜ್ಯದ 2 ಮತ್ತು 3ನೇ ಸ್ತರದ ನಗರಗಳಲ್ಲಿ ಉದ್ಯಮಗಳು ನೆಲೆಯೂರುವಂತೆ ಮಾಡುವ ಉದ್ದೇಶದಿಂದ ರೂಪಿಸಿರುವ 'ಬಿಯಾಂಡ್ ಬೆಂಗಳೂರು' ಉಪಕ್ರಮದ ಭಾಗವಾಗಿ ಇದೇ 16 ಮತ್ತು 17ರಂದು ಮಂಗಳೂರಿನ ಟಿ.ಎಂ.ಎ.ಪೈ ಕನ್ವೆನ್ಷನ್ ಸೆಂಟರ್ ನಲ್ಲಿ 'ಮಂಗಳೂರು ಟೆಕ್ನೋವಾಂಜಾ' ಸಮಾವೇಶ ನಡೆಯಲಿದೆ.
ಬೆಂಗಳೂರು (ಡಿ.14): ರಾಜ್ಯದ 2 ಮತ್ತು 3ನೇ ಸ್ತರದ ನಗರಗಳಲ್ಲಿ ಉದ್ಯಮಗಳು ನೆಲೆಯೂರುವಂತೆ ಮಾಡುವ ಉದ್ದೇಶದಿಂದ ರೂಪಿಸಿರುವ 'ಬಿಯಾಂಡ್ ಬೆಂಗಳೂರು' ಉಪಕ್ರಮದ ಭಾಗವಾಗಿ ಇದೇ 16 ಮತ್ತು 17ರಂದು ಮಂಗಳೂರಿನ ಟಿ.ಎಂ.ಎ.ಪೈ ಕನ್ವೆನ್ಷನ್ ಸೆಂಟರ್ ನಲ್ಲಿ 'ಮಂಗಳೂರು ಟೆಕ್ನೋವಾಂಜಾ' ಸಮಾವೇಶ ನಡೆಯಲಿದೆ ಎಂದು ಐಟಿ-ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.
ಈ ಕುರಿತು ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಫಿನ್-ಟೆಕ್ ಉದ್ದಿಮೆಗಳ ತೊಟ್ಟಿಲಾಗಿ ಬೆಳೆಯುವ ಸಾಮರ್ಥ್ಯ ಹೊಂದಿರುವ ಮಂಗಳೂರಿನಲ್ಲಿ ಇದು ಈ ಬಗೆಯ ಎರಡನೆಯ ಸಮಾವೇಶವಾಗಿದ್ದು, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮೂಲಕ ಇದನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದಿದ್ದಾರೆ.
ಸಮಾವೇಶದ ಅಂಗವಾಗಿ ಆಯ್ದ ಸ್ಟಾರ್ಟಪ್‌ಗಳ ಮುಖ್ಯಸ್ಥರು ಮತ್ತು ಹೂಡಿಕೆದಾರರ ವಿಚಾರ ವಿನಿಮಯದ ಉದ್ದೇಶದಿಂದ 'ಮಂಗಳೂರು ಬ್ಲೂ', ಉದ್ದಿಮೆ, ಶಿಕ್ಷಣ ಮತ್ತು ಸಾಮಾಜಿಕ ವಲಯಗಳಲ್ಲಿ ಸಕ್ರಿಯವಾಗಿರುವ ಸಾಧಕ ಮಹಿಳೆಯರ 'ವುಮೆನ್@ವರ್ಕ್', ರಾಜ್ಯದ ಪ್ರಮುಖ ಕಂಪನಿಗಳ ಸಿಇಒಗಳ ದುಂಡು ಮೇಜಿನ ಸಭೆ, ವಿದ್ಯಾರ್ಥಿಗಳು ಮತ್ತು ಉದ್ಯಮಗಳ ಬಗ್ಗೆ ಅರಿವು ಮೂಡಿಸಲು 5 ಕಿ.ಮೀ. ಉದ್ದದ ವಾಕಥಾನ್ ಮತ್ತು ಪರಿಣತರಿಂದ ವಿಚಾರ ಗೋಷ್ಠಿಗಳನ್ನು ಈ ಎರಡು ದಿನಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಉನ್ನತ ಶಿಕ್ಷಣ ಇಲಾಖೆ ಸಿಬ್ಬಂದಿ ಸಮಸ್ಯೆ ಪರಿಹರಿಸಲು ಸಮಗ್ರ ಪೋರ್ಟಲ್, ಡಿ.25ರಂದು ಲೋಕಾರ್ಪಣೆ
ಮೂರು ಕಚೇರಿಗಳ ಉದ್ಘಾಟನೆ: ಇದೇ ಸಂದರ್ಭದಲ್ಲಿ 'ಕ್ಯಾಶ್‌ಫ್ರೀ ಪೇಮೆಂಟ್ಸ್' ಕಂಪನಿಯ ಮಂಗಳೂರು ಕಚೇರಿ ಮತ್ತು ಕ್ಲೌಡ್ ಕಂಪ್ಯೂಟಿಂಗ್ ಆಧಾರಿತ 'ನೀವಿಯಸ್ ಸೊಲ್ಯೂಷನ್ಸ್' ಕಂಪನಿಯ ಉಡುಪಿ ಕಚೇರಿಯನ್ನು ಉದ್ಘಾಟಿಸಲಾಗುವುದು. ಇವು ಸ್ಥಳೀಯರಿಗೆ ಅಪಾರ ಸಂಖ್ಯೆಯ ಉದ್ಯೋಗಗಳನ್ನು ಸೃಷ್ಟಿಸಲಿದ್ದು, ಇವುಗಳಿಗೆ ಡಿಜಿಟಲ್ ಎಕಾನಮಿ ಮಿಷನ್ ಮೂಲಕ ಅಗತ್ಯ ಸೌಲಭ್ಯಗಳ ನೆರವನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
25 ಕೋಟಿ ರೂ. ಬೀಜನಿಧಿ: ಡಿಜಿಟಲ್ ಎಕಾನಮಿ ಮಿಷನ್ ಅಡಿಯಲ್ಲಿ ಮಂಗಳೂರು ಕ್ಲಸ್ಟರ್ ಅಭಿವೃದ್ಧಿಗೆ 25 ಕೋಟಿ ರೂ.ಗಳ ಬೀಜನಿಧಿಯನ್ನು ಒದಗಿಸಲಾಗಿದೆ. ಇದಕ್ಕೆ ಪೂರಕವಾಗಿ ಮಂಗಳೂರಿನಲ್ಲಿ ಫಿನ್‌ಟೆಕ್ ಉತ್ಕೃಷ್ಟತಾ ಕೇಂದ್ರ ಮತ್ತು ಉಡುಪಿಯಲ್ಲಿ ಎವಿಜಿಸಿ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸುವ ಬಗ್ಗೆ ಸರಕಾರವು ಸಂಬಂಧಿಸಿದವರೊಂದಿಗೆ ಗಂಭೀರವಾಗಿ ಚರ್ಚಿಸುತ್ತಿದೆ. ಅಲ್ಲದೆ, ಮಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಪಾರ್ಕ್ ಸ್ಥಾಪಿಸುವ ಸಂಬಂಧ ಕಿಯೋನಿಕ್ಸ್ ಜತೆ ಮಾತುಕತೆ ಪ್ರಗತಿಯಲ್ಲಿದೆ. ಬಿಯಾಂಡ್ ಬೆಂಗಳೂರು ಉಪಕ್ರಮದಿಂದಾಗಿ ಬೆಂಗಳೂರಿನ ಆಚೆಗಿರುವ ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಕ್ಲಸ್ಟರ್‍ಗಳಲ್ಲಿ ಈಗಾಗಲೇ 24 ಕಂಪನಿಗಳು ಕಾರ್ಯಾರಂಭ ಮಾಡಿವೆ. ಇದು ರಾಜ್ಯದ ಸಮಗ್ರ ಅಭಿವೃದ್ಧಿಗೆ ಇಂಬು ನೀಡುವ ಬೆಳವಣಿಗೆಯಾಗಿದ್ದು, 2026ರ ಹೊತ್ತಿಗೆ 1 ಟ್ರಿಲಿಯನ್ ಡಾಲರ್‍ಗಳಷ್ಟು ಆರ್ಥಿಕತೆಯಾಗಿ ಬೆಳೆಯಲಿದೆ ಎಂದು ಹೇಳಿದರು.
ಮೂರು ದಿನಗಳ Bengaluru Design Week ಫೆಸ್ಟಿವಲ್ ಗೆ ಚಾಲನೆ, ಪಠ್ಯಕ್ರಮದಲ್ಲಿ ಡಿಸೈನ್ ಕಲಿಕೆ ಸೇರ್ಪಡೆಗೆ ಚಿಂತನೆ
ಹಲವು ಉದ್ಯಮಿಗಳು ಭಾಗಿ: 'ಮಂಗಳೂರು ಟೆಕ್ನೋವಾಂಜಾ'ದಲ್ಲಿ ಸಚಿವ ಎಸ್.ಅಂಗಾರ, ಹರ್ಷಿಲ್ ಮಾಥೂರ್, ಆಕಾಶ್ ಸಿನ್ಹಾ, ರವೀಶ್ ನರೇಶ್, ನಿಖಿಲ್ ಕಾಮತ್ ಸೇರಿದಂತೆ 30ಕ್ಕೂ ಹೆಚ್ಚು ಉದ್ಯಮಿಗಳು, ಕರ್ನಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಭಟ್, ಭಾರತೀಯ ಸ್ಟೇಟ್ ಬ್ಯಾಂಕ್‌ನ ಚೀಫ್ ಜನರಲ್ ಮ್ಯಾನೇಜರ್ ನಂದಕಿಶೋರ್, ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ನ ಸಿಐಒ ಮಹಮದ್ ಜುಬೇರ್, ಕೆನರಾ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಗಣೇಶ್ ಕಾಮತ್, ಎಸ್‌ಟಿಪಿಐ ನಿರ್ದೇಶಕ ರವೀಂದ್ರ ಆರೂರ್ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.