ಮಸೀದಿಯಲ್ಲಿ ಹಿಂದೂ ಶಿಲ್ಪಿಯ ಕೈಯಲ್ಲಿ ಅರಳಿದ ಮರದ ಕೆತ್ತನೆ

Published : Apr 16, 2022, 04:40 AM IST
ಮಸೀದಿಯಲ್ಲಿ ಹಿಂದೂ ಶಿಲ್ಪಿಯ ಕೈಯಲ್ಲಿ ಅರಳಿದ ಮರದ ಕೆತ್ತನೆ

ಸಾರಾಂಶ

ಕೋಮು ದ್ವೇಷದ ಮಧ್ಯೆ ಕೋಮು ಸಾಮರಸ್ಯ ಹಿಂದೂ ಶಿಲ್ಪಿಯ ಕೈಯಲ್ಲಿ ಅರಳಿದ ಮರದ ಕೆತ್ತನೆ ಮೂಲ್ಕಿ ಯ ಪಕ್ಷಿಕೆರೆ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಕಲಾತ್ಮಕ ಕೆತ್ತನೆ

ಮಂಗಳೂರು: ರಾಜ್ಯ, ದೇಶಾದ್ಯಂತ ಹಿಜಾಬ್‌, ಹಲಾಲ್‌, ಜಾತ್ರೆಯಲ್ಲಿ ವ್ಯಾಪಾರಕ್ಕೆ ಅನ್ಯಮತೀಯರಿಗೆ ನಿರ್ಬಂಧ, ಅನ್ಯ ಮತೀಯರು ಕೆತ್ತಿದ ಶಿಲ್ಪಗಳನ್ನು ದೇವಳದಲ್ಲಿ ಪ್ರತಿಷ್ಠಾಪನೆ ಮಾಡಬಾರದು ಮತ್ತಿತರ ವಿವಾದಗಳು ಹುಟ್ಟಿಕೊಂಡಿದ್ದು, ಈ ಮಧ್ಯೆ ಕರಾವಳಿಯ ನವೀಕೃತ ಮಸೀದಿಯೊಂದಕ್ಕೆ ಹಿಂದೂ ಸಮುದಾಯದ ವ್ಯಕ್ತಿಯೊಬ್ಬರು ಮರದ ಕೆತ್ತನೆ ಕೆಲಸ ಮಾಡಿದ್ದಾರೆ. ಈ ಮೂಲಕ ಕೋಮು ವೈಷ್ಯಮದ ಗಾಳಿ ನಡುವೆ ಸೌಹಾರ್ದತೆಗೆ ಪ್ರೇರಣೆ ಸಿಕ್ಕಂತಾಗಿದೆ.

ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಮೂಲ್ಕಿ (Mulki) ತಾಲೂಕಿನ ಪಕ್ಷಿಕೆರೆ ಬದ್ರಿಯಾ ಜುಮ್ಮಾ ಮಸೀದಿಯು (Badria Jumma Masjid) ಸುಮಾರು 1.5 ಕೋಟಿ ರು. ವೆಚ್ಚದಲ್ಲಿ ನವೀಕರಣಗೊಂಡಿದೆ. ಮಸೀದಿಯ ಆಡಳಿತ ಮಂಡಳಿಯು ಮರದ ಕೆತ್ತನೆ ಕೆಲಸಕ್ಕೆ ಸೂಕ್ತ ವ್ಯಕ್ತಿಯ ಹುಡುಕಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಕಾಪುವಿನ ಮಜೂರು ಮಲಾರ್‌ನ ಬದ್ರಿಯ ಜುಮ್ಮಾ ಮಸೀದಿಯಲ್ಲಿ ಮರದ ಕೆತ್ತನೆಯನ್ನು ಕಾಪುವಿನ (Kapu) ವಿಶ್ವಕರ್ಮ ಸಮುದಾಯದ ಹರೀಶ್‌ ಆಚಾರ್ಯ (Harish Acharya) ಮಜೂರು ಉತ್ತಮ ರೀತಿಯಲ್ಲಿ ಮಾಡಿದ್ದು ಗಮನಕ್ಕೆ ಬಂತು. ಪಕ್ಷಿಕೆರೆ ಮಸೀದಿಯ ಮರದ ಕೆತ್ತನೆ ಕಾರ್ಯವನ್ನು ಹರೀಶ್‌ ಆಚಾರ್ಯ ಅವರಿಗೆ ನೀಡಿದ್ದು ಇದೀಗ ಮಸೀದಿಯಲ್ಲಿ ಸುಮಾರು 1000 ಚದರ ಅಡಿ ವ್ಯಾಪ್ತಿಯಲ್ಲಿ ಮರದ ಕಾಷ್ಠಶಿಲ್ಪ ಅದ್ಭುತವಾಗಿ ಮೂಡಿಬಂದಿದೆ.

Vijayapura: ಧರ್ಮ ಸಂಘರ್ಷದ ಮಧ್ಯೆ ಇಲ್ಲಿನ ಹಿಂದೂ ದೇವರಿಗೆ ಮುಸ್ಲಿಂ ಭಕ್ತರೇ ಬೇಕು..!
 

ಮುಸ್ಲಿಂರಿಂದಲೇ ಪ್ರಶಂಸೆ: ದೂರದ ಪ್ರದೇಶಗಳಿಂದ ಜಾತಿ ಮತ ಬೇಧವಿಲ್ಲದೆ ಮರದ ಕೆತ್ತನೆಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಮಸೀದಿಗೆ ಆಗಮಿಸುತ್ತಿದ್ದಾರೆ.

ಯುವ ಶಿಲ್ಪಿ:

ಹರೀಶ್‌ ಆಚಾರ್ಯ ಕಾಪು ನಿವಾಸಿಯಾಗಿದ್ದು ಕಾಪುವಿನಲ್ಲಿ ಮರದ ಕೆತ್ತನೆಯ ಉದ್ಯಮ ನಡೆಸುತ್ತಿದ್ದಾರೆ. ಅವರ ಸಹೋದರ ಕೃಷ್ಣ ಆಚಾರ್ಯ ಮತ್ತು ಗುರುಗಳಾದ ಗಣಪತಿ ಆಚಾರ್ಯರಿಂದ ಮರದ ಕೆತ್ತನೆ ಬಗ್ಗೆ ತರಬೇತಿ ಪಡೆದಿದ್ದಾರೆ. ಇಂಡೋ-ಇಸ್ಲಾಮಿಕ್‌ ಶೈಲಿ ಬಗ್ಗೆಯೂ ಕಲಿತಿದ್ದಾರೆ. ಈ ತನಕ ಸುಮಾರು 25 ದೇವಸ್ಥಾನಗಳ ಮರದ ಕೆತ್ತನೆಯನ್ನು ನಡೆಸಿದ್ದು ಪ್ರಥಮ ಬಾರಿಗೆ ಕಾಪುವಿನ ಮಜೂರು ಮಲಾರ್‌ನ ಬದ್ರಿಯ ಜುಮ್ಮಾ ಮಸೀದಿಯಲ್ಲಿ ಇಂಡೋ-ಇಸ್ಲಾಮಿಕ್‌ ಶೈಲಿಯಲ್ಲಿ ಮರದ ಕೆತ್ತನೆ ಮಾಡಿದ್ದು, ಮುಸ್ಲಿಂ ಸಮುದಾಯದಿಂದ ಮನ್ನಣೆ ಪಡೆದುಕೊಂಡಿದ್ದಾರೆ.

ಪಕ್ಷಿಕೆರೆ ಮಸೀದಿಯಲ್ಲಿ ಸುಮಾರು 14 ತಿಂಗಳ ಕಾಲ 8 ಮಂದಿ ಹಿಂದು ಸಮುದಾಯದ ಕೆತ್ತನೆ ಕೆಲಸಗಾರರು ಹಾಗೂ ಸಹಾಯಕರ ಜೊತೆಗೂಡಿ ಕಾರ್ಯ ನಿರ್ವಹಿಸಿ ಸಂಪೂರ್ಣಗೊಳಿಸಿದ್ದಾರೆ. ಪಕ್ಷಿಕೆರೆ ಮಸೀದಿಯ ಕೆತ್ತನೆ ಕೆಲಸವನ್ನು ನೋಡಿದ ಕೇರಳದ ಮುಸ್ಲಿಂ ಸಮುದಾಯದ ಧರ್ಮಗುರುಗಳು ಶ್ಲಾಘಿಸಿದ್ದಾರೆ.

ಧರ್ಮ ದಂಗಲ್‌ ನಡುವೆ ಸಾಮರಸ್ಯ ಮೆರೆದ ಕೊರಟಗೆರೆ ತಹಶೀಲ್ದಾರ್ ನಹೀದಾ ಜಂಜಂ
ಭಾರತೀಯ ಕಾಷ್ಠಶಿಲ್ಪ ಹಾಗೂ ಇಸ್ಲಾಮಿಕ್‌ ಶೈಲಿಯಲ್ಲಿ ತುಂಬಾ ವ್ಯತ್ಯಾಸವಿದೆ. ಕಾಪುವಿನ ಮಜೂರು ಮಲಾರ್‌ನ ಬದ್ರಿಯ ಜುಮ್ಮಾ ಮಸೀದಿಯಲ್ಲಿ ಇಂಡೋ- ಇಸ್ಲಾಮಿಕ್‌ ಶೈಲಿಯಲ್ಲಿ ಮರದ ಕೆತ್ತನೆ ಕಾರ್ಯ ಮಾಡಿದ್ದು ತುಂಬಾ ಚಾಲೆಂಜಿಂಗ್‌ ಆಗಿತ್ತು. ಇಸ್ಲಾಂ ಆರ್ಕಿಟೆಕ್ಟ್ ಬಗ್ಗೆ ತಿಳಿದುಕೊಂಡು ಹಾಗೂ ಮಾರ್ಗದರ್ಶನದ ಮೂಲಕ ಸಂಪೂರ್ಣಗೊಳಿಸಿದ್ದೆ. ಸಮುದಾಯ ಯಾವುದು ಎಂಬುದು ಮುಖ್ಯವಲ್ಲ, ನನ್ನ ಕೆಸಲವನ್ನು ನಾನು ಮಾಡಿದ್ದೇನೆ ಎನ್ನುತ್ತಾರೆ ಯುವ ಕಾಷ್ಠ ಶಿಲ್ಪಿ ಹರೀಶ್‌ ಆಚಾರ್ಯ ಮಜೂರು.

ನಾವು ಪಕ್ಷಿಕೆರೆಯಲ್ಲಿ ಎಲ್ಲ ಸಮುದಾಯದೊಂದಿಗೆ ಕೋಮು ಸೌಹಾರ್ದತೆಯಿಂದ ಬಾಳುತ್ತಿದ್ದು ಪಕ್ಷಿಕೆರೆಯ ಮಸೀದಿಯ ನವೀಕರಣದ ಸಂದರ್ಭ ಮರದ ಕೆತ್ತನೆಗೆ ಸೂಕ್ತ ವ್ಯಕ್ತಿಯ ಹುಡುಕಾಟದಲ್ಲಿದ್ದೆವು. ಕಾಪು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಇಂಡೋ-ಇಸ್ಲಾಮಿಕ್‌ ಶೈಲಿಯಲ್ಲಿ ಅದ್ಭುತವಾಗಿ ಮೂಡಿಬಂದ ಮರದ ಕೆತ್ತನೆಯ ಶಿಲ್ಪಿ ಬಗ್ಗೆ ವಿಚಾರಿಸಿದಾಗ ಹರೀಶ್‌ ಆಚಾರ್ಯರ (Harish Acharya) ಮಾಹಿತಿ ಸಿಕ್ಕಿತು. ಪರಸ್ಪರ ಒಬ್ಬರಿಗೊಬ್ಬರು ಸಹಕಾರ ನೀಡಿದಾಗ ಕೋಮು ಸೌಹಾರ್ದತೆ ಕಾಪಾಡಲು ಸಾಧ್ಯ ಎಂದು ಬದ್ರಿಯಾ ಜುಮ್ಮಾ ಮಸೀದಿ ಅಧ್ಯಕ್ಷ ಮಹಮ್ಮದ್‌ ಹೇಳಿದರು.
 

PREV
Read more Articles on
click me!

Recommended Stories

ಜಾತಿ ವ್ಯವಸ್ಥೆಗೆ ಪರಿಹಾರ ರೂಪದ ವಿದ್ಯೆ ಅಗತ್ಯ: ಸಿಎಂ ಸಿದ್ದರಾಮಯ್ಯ
ಮಂಗಳೂರು: 'ಡಿಕೆಶಿ ಮುಂದಿನ ಸಿಎಂ’ ಘೋಷಣೆ ಕೂಗಿದ ಐವನ್, ಮಿಥುನ್‌ಗೆ ನೋಟಿಸ್?