
ಬೆಂಗಳೂರು (ಜೂ.19): ನೆರೆ ಮನೆಯ ಬೀರುವಿನ ಬೀಗ ಮುರಿದು ಚಿನ್ನದ ಸರ ಕದ್ದಿದ್ದ ಆರೋಪಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಯನಗರ 7ನೇ ಬ್ಲಾಕ್ ನಿವಾಸಿ ವೆಂಕಟೇಶ್(22) ಬಂಧಿತ. ಆರೋಪಿಯಿಂದ ₹80 ಸಾವಿರ ಮೌಲ್ಯದ 10 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಜಯನಗರದ 7ನೇ ಬ್ಲಾಕ್ ನಿವಾಸಿ ದಿಲೀಪ್ ಕುಮಾರ್ ಅವರ ಮನೆಯಲ್ಲಿ ಕಳ್ಳತನವಾಗಿತ್ತು. ಈ ಸಂಬಂಧ ದೂಖಲಾದ ದೂರಿನ ಮೇರೆಗೆ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?: ದೂರುದಾರ ದಿಲೀಪ್ ಕುಮಾರ್ ಮತ್ತು ಆರೋಪಿ ವೆಂಕಟೇಶ್ ನೆರೆಹೊರೆ ನಿವಾಸಿಗಳು. ಹೀಗಾಗಿ ಇಬ್ಬರಿಗೂ ಹಲವು ವರ್ಷಗಳಿಂದ ಪರಿಚಯವಿತ್ತು. ಆರೋಪಿ ವೆಂಕಟೇಶ್ ಕಾರು ವಾಷಿಂಗ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಾನೆ. ಜೂ.9ರಂದು ಕಾರ್ಯನಿಮಿತ್ತ ದಿಲೀಪ್ ಕುಮಾರ್ ಕುಟುಂಬ ಸಮೇತ ಸ್ವಂತ ಊರಿಗೆ ತೆರಳಬೇಕಿತ್ತು. ಮನೆಯಲ್ಲಿ ಬೆಕ್ಕು ಸಾಕಿದ್ದರಿಂದ ಪರಿಚಿತ ವೆಂಕಟೇಶ್‌ಗೆ ಮನೆಯ ಬೀಗ ಕೀ ಕೊಟ್ಟು ಬೆಕ್ಕಿಗೆ ಹಾಲು ಹಾಕುವಂತೆ ಸೂಚಿಸಿ ಸ್ವಂತ ಊರಿಗೆ ತೆರಳಿದ್ದರು.
ವಾರದೊಳಗೆ ಬೆಂಗಳೂರಿನಲ್ಲಿ ಹೊಸ ಜಾಹೀರಾತು ನೀತಿ: ಡಿ.ಕೆ.ಶಿವಕುಮಾರ್
ಅದರಂತೆ ಆರೋಪಿ ವೆಂಕಟೇಶ್, ದಿಲೀಪ್ ಕುಮಾರ್ ಅವರ ಮನೆಯ ಬೀಗ ತೆರೆದು ಹಾಲು ಹಾಕಿದ್ದಾನೆ. ಆದರೆ, ಅಲ್ಲೇ ಇದ್ದ ಬೀರುವಿನ ಬೀಗ ಮುರಿದು ಅದರಲ್ಲಿದ್ದ 10 ಗ್ರಾಂ ತೂಕದ ಚಿನ್ನದ ಸರವನ್ನು ಕದ್ದು ಮತ್ತೆ ಮನೆಯ ಬೀಗ ಹಾಕಿಕೊಂಡು ಮನೆಗೆ ತೆರಳಿದ್ದಾನೆ. ಜೂ.12ರಂದು ರಾತ್ರಿ ಮನೆಗೆ ವಾಪಾಸ್ ಬಂದ ದಿಲೀಪ್ ಕುಮಾರ್‌ಗೆ ಬೀರುವಿನಲ್ಲಿದ್ದ ಚಿನ್ನದ ಸರ ಕಳ್ಳತನವಾಗಿರುವುದು ಗೊತ್ತಾಗಿದೆ.
ಮನೆಯ ಬಾಗಿಲ ಬೀಗಕ್ಕೆ ಹಾನಿಯಾಗಿಲ್ಲ. ಆದರೂ ಬೀರುವಿನಲ್ಲಿದ್ದ ಚಿನ್ನದ ಸರ ಕಳ್ಳತನವಾಗಿರುವುದು ಆಶ್ಚರ್ಯವಾಗಿದೆ. ಬೆಕ್ಕಿಗೆ ಹಾಲು ಹಾಕಲು ನೆರ ಮನೆಯ ವೆಂಕಟೇಶ್‌ಗೆ ಮನೆ ಕೀ ನೀಡಿದ್ದರಿಂದ ಆತನೇ ಈ ಕಳ್ಳತನ ಮಾಡಿರುವ ಬಗ್ಗೆ ಅನುಮಾನಗೊಂಡು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ತನಿಖೆ ಕೈಗೊಂಡು ವೆಂಕಟೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಟ ದರ್ಶನ್ ಮನೆಯಲ್ಲಿದ್ದ ಮೂರು ಬೈಕ್‌ಗಳು ಜಪ್ತಿ: ಕಾರಣವೇನು?
ಮೊಬೈಲ್‌ನಲ್ಲಿ ಅಡಮಾನದ ರಶೀದಿ ಪತ್ತೆ!: ಪೊಲೀಸರ ವಿಚಾರಣೆ ಆರಂಭದಲ್ಲಿ ಆರೋಪಿ ವೆಂಕಟೇಶ್ ನಾನು ಕಳ್ಳತನ ಮಾಡಿಲ್ಲ ಎಂದು ವಾದಿಸಿದ್ದಾನೆ. ಆತನ ಮೊಬೈಲ್ ವಶಕ್ಕೆಪಡೆದು ಪರಿಶೀಲಿಸಿದಾಗ ಚಿನ್ನದ ಸರ ಅಡಮಾನವಿರಿಸಿರುವ ರಶೀದಿ ಪತ್ತೆಯಾಗಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಆರೋಪಿಯು ತಪ್ಪೊಪ್ಪಿಕೊಂಡಿದ್ದಾನೆ. ಆರ್ಥಿಕ ಸಮಸ್ಯೆ ಹಿನ್ನೆಲೆಯಲ್ಲಿ ಚಿನ್ನದ ಸರ ಕಳ್ಳತನ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ. ಬಳಿಕ ಪೊಲೀಸರು ಆ ಚಿನ್ನದ ಸರವನ್ನು ಜಪ್ತಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ