ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೃತ್ಯಕ್ಕೆ ಬಳಸಿದ್ದವು ಎಂಬ ಮಾಹಿತಿ ಮೇರೆಗೆ ನಟ ದರ್ಶನ್ ಮನೆ ಆವರಣದಲ್ಲಿ ನಿಲ್ಲಿಸಲಾಗಿದ್ದ ಅವರ ಸಹಚರರ ಮೂರು ಸ್ಕೂಟರ್‌ಗಳನ್ನು ಪೊಲೀಸರು ಮಂಗಳವಾರ ಜಪ್ತಿ ಮಾಡಿದ್ದಾರೆ.
ಬೆಂಗಳೂರು (ಜೂ.19): ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೃತ್ಯಕ್ಕೆ ಬಳಸಿದ್ದವು ಎಂಬ ಮಾಹಿತಿ ಮೇರೆಗೆ ನಟ ದರ್ಶನ್ ಮನೆ ಆವರಣದಲ್ಲಿ ನಿಲ್ಲಿಸಲಾಗಿದ್ದ ಅವರ ಸಹಚರರ ಮೂರು ಸ್ಕೂಟರ್‌ಗಳನ್ನು ಪೊಲೀಸರು ಮಂಗಳವಾರ ಜಪ್ತಿ ಮಾಡಿದ್ದಾರೆ. ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಲೇಔಟ್‌ನಲ್ಲಿರುವ ದರ್ಶನ್‌ರವರ ಮನೆಗೆ ಕೊಲೆ ಪ್ರಕರಣ ಸಂಬಂಧ ಮಹಜರ್‌ಗೆ ಅವರ ಸಹಚರರಾದ ನಂದೀಶ್, ಪವನ್ ಹಾಗೂ ಧನರಾಜ್ ಅಲಿಯಾಸ್ ರಾಜುನನ್ನು ಪೊಲೀಸರು ಕರೆತಂದಿದ್ದರು.
ಈ ವೇಳೆ ಮೂರು ತಾಸು ಮಹಜರ್ ಬಳಿಕ ದರ್ಶನ್‌ರವರ ಮನೆ ಆವರಣದಲ್ಲಿ ನಿಲ್ಲಿಸಲಾಗಿದ್ದ ಆ್ಯಕ್ಸಿಸ್ ಹಾಗೂ ಹೋಂಡಾ ಆ್ಯಕ್ಟಿವಾ ಸೇರಿದಂತೆ ಮೂರು ಸ್ಕೂಟರ್‌ಗಳನ್ನು ಟಾಟಾ ಏಸ್ ಆಟೋದಲ್ಲಿ ತುಂಬಿಕೊಂಡು ಪೊಲೀಸರು ತೆರಳಿದರು. ಶೆಡ್‌ಗೆ ಊಟ, ಕೃತ್ಯ ನಡೆದ ಬಳಿಕ ಹೊಸ ಬಟ್ಟೆ ಹಾಗೂ ವಿದ್ಯುತ್ ಶಾಕ್ ನೀಡಲು ಮೆಗ್ಗರ್ ಸಾಧನ ತರಲು ಸೇರಿದಂತೆ ಇತರೆ ಕೆಲಸಗಳಿಗೆ ಈ ಸ್ಕೂಟರ್‌ಗಳಲ್ಲಿ ಆರೋಪಿಗಳು ಓಡಾಡಿದ್ದರು ಎಂಬ ಮಾಹಿತಿ ಮೇರೆಗೆ ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಅಭಿಮಾನಿಗಳ ಪಾದಯಾತ್ರೆ: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿರುವ ನಟ ದರ್ಶನ ಬಿಡುಗಡೆಗಾಗಿ ಅಭಿಮಾನಿಗಳು ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಐತಿಹಾಸಿಕ ಗುರುಗುಂಟಾ ಅಮರೇಶ್ವರ ದೇವರ ಮೋರೆ ಹೋಗಿದ್ದಾರೆ. ತಾಲೂಕಿನ ಯರಡೋಣ ಗ್ರಾಮದ ಅಭಿಮಾನಿಗಳು ದರ್ಶನ್ ಭಾವಚಿತ್ರಕ್ಕೆ ಹೂ ಮಾಲೆ ಹಾಕಿ 8 ಕಿ.ಮೀ. ದೂರದಲ್ಲಿರುವ ಗುರುಗುಂಟಾ ಅಮರೇಶ್ವರ ದೇವಸ್ಥಾನದವರೆಗೆ ಪಾದಯಾತ್ರೆ ನಡೆಸಿ ಮಂಗಳವಾರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ರೇಣುಕಾಸ್ವಾಮಿ ಹತ್ಯೆ ದಿನ ದರ್ಶನ್ ಧರಿಸಿದ್ದ ಶೂ ಪತ್ನಿ ವಿಜಯಲಕ್ಷ್ಮೀ ಮನೆಯಲ್ಲಿ ಪತ್ತೆ!
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿರುವ ನೆಚ್ಚಿನ ನಟ ದರ್ಶನ್‌ಗೆ ಪ್ರಕರಣದಿಂದ ಮುಕ್ತಿ ಸಿಗಲಿ, ಆದಷ್ಟು ಬೇಗ ಹೊರ ಬರಲಿ ಎಂದು ಪ್ರಾರ್ಥಿಸಿದರು. ನಮ್ಮ ಬಾಸ್ ತಪ್ಪು ಮಾಡಿದ್ದರೆ ಅದಕ್ಕೆ ಕಾನೂನು ಇದೆ. ದರ್ಶನ್ ತಪ್ಪತಸ್ಥನೆಂದು ತೀರ್ಮಾನವಾಗದೆ ದರ್ಶನ್ ಅಭಿಮಾನಿಗಳಿಗೆ ಯಾರೂ ನೋವು ಮಾಡಬೇಡಿ. ದರ್ಶನ್ ಯಾರಿಗೂ ನೋವು ಮಾಡುವವರಲ್ಲ. ಏಕೆಂದರೆ ಪ್ರಾಣಿಗಳಿಗೂ ಕೂಡಾ ಒಳ್ಳೆಯದನ್ನೇ ಬಯಸುತ್ತಾರೆ. ನಮ್ಮ ಜೀವ ಇರುವವರೆಗೂ ನಾವು ದರ್ಶನ್ ಅಭಿಮಾನಿಗಳಾಗಿ ಇರುತ್ತೇವೆ ಎಂದು ಶಪಥ ಮಾಡಿದರು.