ವಾರದೊಳಗೆ ಬೆಂಗಳೂರಿನಲ್ಲಿ ಹೊಸ ಜಾಹೀರಾತು ನೀತಿ: ಡಿ.ಕೆ.ಶಿವಕುಮಾರ್
ಮುಂದಿನ ಒಂದು ವಾರದ ಒಳಗಾಗಿ ಬಿಬಿಎಂಪಿ ವ್ಯಾಪ್ತಿಗೆ ಸಂಬಂಧಿಸಿದಂತೆ ನೂತನ ಜಾಹೀರಾತು ನೀತಿ ಜಾರಿಗೆ ತರಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು (ಜೂ.19): ಮುಂದಿನ ಒಂದು ವಾರದ ಒಳಗಾಗಿ ಬಿಬಿಎಂಪಿ ವ್ಯಾಪ್ತಿಗೆ ಸಂಬಂಧಿಸಿದಂತೆ ನೂತನ ಜಾಹೀರಾತು ನೀತಿ ಜಾರಿಗೆ ತರಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಈ ನೂತನ ಜಾಹೀರಾತು ನೀತಿಯಲ್ಲಿ ಮೆಟ್ರೋ ಪಿಲ್ಲರ್‌ಗಳನ್ನು ಬಳಸಿಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ ಎಂದರು. ಮುಂಬೈನಲ್ಲಿ ಇತ್ತೀಚೆಗೆ ಬೃಹತ್ ಹೋರ್ಡಿಂಗ್ಸ್ ಬಿದ್ದು ಆರು ಜನರ ಪ್ರಾಣ ಹೋಯಿತು.
ಬೆಂಗಳೂರಿನಲ್ಲೂ ಹೋರ್ಡಿಂಗ್ಸ್‌ಗೆ ಅವಕಾಶ ನೀಡುವುದರಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಎಂಬ ಪ್ರಶ್ನೆಗೆ, ಇದರ ಬಗ್ಗೆ ಈಗಾಗಲೇ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರಥಮ ಹಂತವಾಗಿ ಫ್ಲೆಕ್ಸ್ ನಿಷೇಧಿಸಲಾಗಿದೆ. 15 ಸಾವಿರಕ್ಕೂ ಹೆಚ್ಚು ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ ದೂರು ದಾಖಲಿಸಿಕೊಳ್ಳಲಾಗಿದೆ ಎಂದರು. ಗ್ಯಾರಂಟಿ ಯೋಜನೆಗಳಿಗೆ ಹಣವಿಲ್ಲದೆ ಬಿಬಿಎಂಪಿ ಆಸ್ತಿಗಳನ್ನು ಸರ್ಕಾರ ಅಡವಿಡುತ್ತಿದೆ, ಬೆಂಗಳೂರು ಸುತ್ತಮುತ್ತ 20 ಸಾವಿರ ಎಕರೆ ಜಮೀನು ಮಾರಾಟ ನಡೆಸುತ್ತಿದೆ ಎಂದು ಬಿಜೆಪಿಯವರು ಆರೋಪಿಸಿದ್ದಾರಲ್ಲ ಎಂಬ ಪ್ರಶ್ನೆಗೆ, ಅದೆಲ್ಲಾ ಅಪ್ಪಟ ಸುಳ್ಳು. ಯಾವ ಅಡಮಾನವೂ ಇಲ್ಲ.
ಮಾರಾಟವೂ ಇಲ್ಲ. ನಮ್ಮ ಬಿಬಿಎಂಪಿಯ ಆಸ್ತಿಯಗಳ ರಕ್ಷಣೆ ಹಾಗೂ ಎಷ್ಟು ಆಸ್ತಿಗಳಿವೆ ಎನ್ನುವ ಮರು ಸಮೀಕ್ಷೆ, ಗುತ್ತಿಗೆ ನವೀಕರಣ ಸೇರಿದಂತೆ ದಾಖಲೆಗಳನ್ನು ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ಮಾರಾಟ ಮಾಡೋಕೆ 20 ಸಾವಿರ ಎಕರೆ ಜಮೀನು ಎಲ್ಲಿದೆ. ಪೆರಿಫೆರಲ್ ರಿಂಗ್ ರಸ್ತೆ ನಿರ್ಮಿಸಲು ಭೂಸ್ವಾಧೀನದ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. 60/40 ಹಂಚಿಕೆಯ ಸೂತ್ರದ ಆಧಾರದ ಮೇಲೆ ನಿರ್ಮಾಣ ಮಾಡಲು ಹೊರಟಿದ್ದೇವೆ. ಇದರಿಂದ ರೈತರಿಗೂ ಹೆಚ್ಚು ಅನುಕೂಲವಾಗಲಿದೆ. ಇದರಿಂದ ರೈತರಿಗೆ 5 ಕೋಟಿಯಷ್ಟು ಪರಿಹಾರ ದೊರೆಯುತ್ತದೆ. ಇದರ ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ನಟ ದರ್ಶನ್ ಮನೆಯಲ್ಲಿದ್ದ ಮೂರು ಬೈಕ್‌ಗಳು ಜಪ್ತಿ: ಕಾರಣವೇನು?
ನೀರಿನ ಬೆಲೆ ಏರಿಕೆ ಅನಿವಾರ್ಯ: ಬೆಂಗಳೂರಿನಲ್ಲಿ ಕುಡಿಯುವ ನೀರಿನ ಶುಲ್ಕ 14 ವರ್ಷದಿಂದ ಏರಿಕೆಯಾಗಿಲ್ಲ. ಹಾಗಾಗಿ ನೀರಿನ ದರ ಹೆಚ್ಚಳ ಅನಿವಾರ್ಯ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದೇ ವೇಳೆ ಹೇಳಿದ್ದಾರೆ. ಬೆಲೆ ಏರಿಕೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ವಿದ್ಯುತ್ ಬಿಲ್ ಕಟ್ಟಲು ಆಗುತ್ತಿಲ್ಲ, ಸಿಬ್ಬಂದಿಗೆ ಸಂಬಳ ಕೊಡುವುದಕ್ಕೂ ಕಷ್ಟವಾಗಿದೆ. ಪ್ರತಿ ವರ್ಷ ನಷ್ಟ ಆಗುತ್ತಲೇ ಇದೆ. ಆದರೆ ಬೆಂಗಳೂರಿಗೆ ಕುಡಿಯುವ ನೀರು ಬೇಕು. ನೀರಿನ ದರ ಹೆಚ್ಚು ಮಾಡಬೇಕಾ ಬೇಡವಾ ನೀವೇ ಹೇಳಿ. ಬಿಜೆಪಿಯವರು ಇದ್ದಾಗ ವಿದ್ಯುತ್ ಬೆಲೆ ಜಾಸ್ತಿ ಮಾಡಿದರು. ನಾವು ಬಂದು ಕಡಿಮೆ ಮಾಡಿದೆವು. ಕಡಿಮೆ ಮಾಡಿದರೆ ಮಾತೇ ಆಡುವುದಿಲ್ಲ. ದರ ಹೆಚ್ಚಿಸಿದರೆ ಮಾತನಾಡುತ್ತೀರಿ. ₹400 ಇದ್ದ ಗ್ಯಾಸ್ ಸಿಲಿಂಡರ್ ₹1 ಸಾವಿರ ಆಯಿತು. ₹75 ಇದ್ದ ಪೆಟ್ರೋಲ್ ₹100 ಆಯಿತು. ₹3 ಜಾಸ್ತಿನಾ ಅಥವಾ ₹30 ಜಾಸ್ತಿನಾ ಎಂದು ಪ್ರಶ್ನಿಸಿದರು.