ಹೆತ್ತ ಕರುಳು, ಕರುಳ ಬಳ್ಳಿಯ ಸಂಬಂಧ, ತಾಯಿ-ಮಗುವಿನ ಬಾಂಧವ್ಯ ಅನ್ನೋದೆಲ್ಲಾ ಸುಮ್ನೇನಾ. ಯಾಕಂದ್ರೆ ಇಲ್ಲೊಬ್ಬ ತಾಯಿ ಮಾಡಿರೋ ಕೆಲ್ಸ ಹಾಗಿದೆ. ಐಫೋನ್ ಖರೀದಿಸೋ ಹುಚ್ಚಿಗೆ ದಂಪತಿ ಹಾಲುಗಲ್ಲದ ಹಸುಳೆಯನ್ನೇ ಮಾರಾಟ ಮಾಡಿದ್ದಾರೆ.
ಇತ್ತೀಚಿಗೆ ಯಾರು ನೋಡಿದ್ರೂ ಯೂಟ್ಯೂಬರ್ಸ್, ಕಂಟೆಂಟ್ ಕ್ರಿಯೇಟರ್ಸ್. ನಗರಗಳಿಂದ ಹಿಡಿದು ಹಳ್ಳಿಗಳಲ್ಲೂ ರೀಲ್ಸ್, ವಿಡಿಯೋ ಹವಾ ಹೆಚ್ಚಿದೆ. ಇನ್‌ಸ್ಟಾಗ್ರಾಂ, ಯೂಟ್ಯೂಬ್‌ಗಳಲ್ಲಿ ವಿಡಿಯೋ ಮಾಡಿ ಪೋಸ್ಟ್ ಮಾಡಿದರೆ ಸಾಕು ಆದಾಯವೂ ಸಿಗುತ್ತದೆ. ಹೀಗಾಗಿಯೇ ಬಹುತೇಕರು ತಮ್ಮ ದಿನನಿತ್ಯದ ಜೀವನದ ಆಗುಹೋಗುಗಳನ್ನೇ ರೀಲ್ಸ್ ಮಾಡೋಕೆ ಶುರು ಮಾಡಿದ್ದಾರೆ. ಇದಕ್ಕಾಗಿಯೇ ಬೆಸ್ಟ್ ಕ್ಯಾಮರಾ ಕ್ವಾಲಿಟಿಯುಳ್ಳ ಫೋನ್ ಖರೀದಿಸುತ್ತಾರೆ. ಹೀಗೆ ರೀಲ್ಸ್ ಮಾಡುವ ಬಹುತೇಕರು ನೆಚ್ಚಿಕೊಳ್ಳುವುದು ಐಫೋನ್. ಫೋಟೋ, ವಿಶುವಲ್ ಕ್ಲಾರಿಟಿ ಚೆನ್ನಾಗಿರುತ್ತೆ ಅನ್ನೋ ಕಾರಣಕ್ಕೆ ಕಾಸ್ಟ್ಲೀಯಾದರೂ ಐಫೋನ್‌ನ್ನು ಖರೀದಿಸುತ್ತಾರೆ. ಕೆಲವೊಬ್ಬರು ಐಫೋನ್ ಕೊಳ್ಳಲೆಂದೇ ದುಡ್ಡು ಕೂಡಿಡುವುದೂ ಇದೆ. ಆದರೆ, ಪಶ್ಚಿಮ ಬಂಗಾಳದ ದಂಪತಿ ಇನ್‌ಸ್ಟಾಗ್ರಾಂ ರೀಲ್ಸ್ ತಯಾರಿಸಲು ಐಫೋನ್ 14 ಖರೀದಿಸಲು 8 ತಿಂಗಳ ಮಗುವನ್ನೇ ಮಾರಾಟ ಮಾಡಿದ್ದಾರೆ.
ನಂಬೋಕೆ ಕಷ್ಟವೆನಿಸಿದರೂ ಇದು ನಿಜ. ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಹಣ ಗಳಿಸುವುದು ಟ್ರೆಂಡ್ ಆಗುತ್ತಿದೆ. ಈ ದಂಪತಿ ಕೂಡಾ ಹಾಗೆಯೇ ಮಾಡಿ ಹಣ ಗಳಿಸಲು ಬಯಸಿದ್ದರು. ಅದಕ್ಕಾಗಿ ಪಶ್ಚಿಮ ಬಂಗಾಳದ ಈ ದಂಪತಿ (Couple) ತಮ್ಮ ಎಂಟು ತಿಂಗಳ ಮಗನನ್ನು ಐಫೋನ್ 14 ಖರೀದಿಸಲು ಮಾರಾಟ ಮಾಡಿದರು. ಮಗು (Infant)ವನ್ನು ಮಾರಾಟ ಮಾಡಿದ ದುಡ್ಡಿನಿಂದ ಐಫೋನ್ ಖರೀದಿಸಿ ಅವರು ಇನ್‌ಸ್ಟಾಗ್ರಾಂ ರೀಲ್ಸ್ ಮಾಡಲು ಬಯಸಿದ್ದರು. ರಾಜ್ಯದಾದ್ಯಂತ ಪ್ರಯಾಣಿಸುವಾಗ ರೀಲ್ಸ್ ಮಾಡಿ ಹಣ (Money) ಗಳಿಸಬಹುದು ಎಂದು ಅಂದುಕೊಂಡಿದ್ದರು.
ಮೊಬೈಲ್ ಅಡಿಕ್ಟ್ ತಾಯಿ, ತೋಳಲ್ಲೇ ಇದ್ದ ಮಗುವಿಗಾಗಿ ರೂಮೆಲ್ಲಾ ಹುಡುಕಾಡಿದ್ಲು!
ಅನುಮಾನಗೊಂಡ ನೆರೆಮನೆಯವರಿಂದ ಪೊಲೀಸರಿಗೆ ದೂರು
ದಂಪತಿಗಳಾದ ಜಯದೇವ್ ಮತ್ತು ಸತಿ ಘೋಷ್ ಪಶ್ಚಿಮ ಬಂಗಾಳದ ಉತ್ತರ ಪರಗಣ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ. ಘಟನೆ ಬೆಳಕಿಗೆ ಬಂದ ನಂತರ ಪೊಲೀಸರು ಸತಿಘೋಷ್‌ನ್ನು ಬಂಧಿಸಿದರು. ಆದರೆ ಜಯದೇವ್ ಘೋಷ್ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಹುಡುಕುತ್ತಿದ್ದಾರೆ.
ದಂಪತಿಯ ನೆರೆಹೊರೆಯವರು ಅನುಮಾನಗೊಂಡು ಪೊಲೀಸರಿಗೆ ದೂರು (Complaint) ನೀಡಿದ ನಂತರ ನಂತರ ಘಟನೆ ಬೆಳಕಿಗೆ ಬಂದಿದೆ. ದಂಪತಿ ಸ್ವಲ್ಪ ಸಮಯದಿಂದ ಕಾಣೆಯಾದ ತಮ್ಮ 8 ತಿಂಗಳ ಮಗುವಿನ ಬಗ್ಗೆ ಯಾವುದೇ ಚಿಂತೆ ಮಾಡದಿರುವುದನ್ನು ನೆರೆಹೊರೆಯವರು ಗಮನಿಸಿದರು. ಅದಲ್ಲದೆ ದಂಪತಿಯ ಕೈಯಲ್ಲಿ ಸುಮಾರು 70,000 ರೂ. ಬೆಲೆ ಬಾಳುವ ಐಫೋನ್ ಸಹ ಇರುವುದು ಎಲ್ಲರಿಗೂ ಸಂಶಯವನ್ನುಂಟು ಮಾಡಿತು. ಯಾಕೆಂದರೆ ದಂಪತಿ ಅಲ್ಪ ಆದಾಯವನ್ನು ಹೊಂದಿದ್ದರು. ಸಾಕಷ್ಟು ಆರ್ಥಿಕ ಸಮಸ್ಯೆಗಳನ್ನು ಸಹ ಎದುರಿಸುತ್ತಿದ್ದರು.
ಖತರ್ನಾಕ್ ಕಳ್ಳಿಯ ಹಿಸ್ಟರಿಯೇ ಭಯಾನಕ: ನವಜಾತ ಶಿಶುಗೆ ಹಾಲು ಕುಡಿಸೋ ಬದ್ಲು ಉಪ್ಪಿಟ್ಟು ಕೊಡ್ತಿದ್ದ ಪಾಪಿ..!
ಹೀಗೆ ಸಂಶಯಗೊಂಡ ನೆರೆಮನೆಯವರು ಸ್ಥಳೀಯ ಕೌನ್ಸಿಲರ್ ತಾರಕ್ ಗುಹಾ ಅವರಿಗೆ ಮಾಹಿತಿ ನೀಡಿದ್ದು, ಅವರು ತನಿಖೆ ನಡೆಸುವಂತೆ ಪೊಲೀಸರನ್ನು ಕೇಳಿದ್ದಾರೆ. ವಿಚಾರಣೆ ನಡೆಸಿದಾಗ, ತಾಯಿ ತನ್ನ ಮಗುವನ್ನು ಐಫೋನ್‌ಗಾಗಿ ಮಾರಾಟ (Sale) ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಅವರು ಈ ಹಿಂದೆ ತಮ್ಮ 7 ವರ್ಷದ ಮಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದರು ಎಂಬ ಅಂಶವೂ ಬೆಳಕಿಗೆ ಬಂದಿದೆ. ದಂಪತಿ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದಾರೆ. 8 ತಿಂಗಳ ಮಗುವನ್ನು ಖರೀದಿಸಿದ ಮಹಿಳೆಯ ಮೇಲೂ ಮಾನವ ಕಳ್ಳಸಾಗಣೆ ಆರೋಪ ಹೊರಿಸಲಾಗಿದೆ.
ಅದೇನೆ ಇರ್ಲಿ, ತನ್ನ ಮಗುವಿಗಾಗಿ ಎಂಥಾ ತ್ಯಾಗವನ್ನೂ ಮಾಡಲು ಸಿದ್ಧವಾಗಿರುವ ತಾಯಂದಿರ ಮಧ್ಯೆ, ಐಫೋನ್ ಖರೀದಿಸಬೇಕೆಂದು ಮಗುವನ್ನೇ ಮಾರಿದ ಈಕೆ, ತಾಯಂದಿರ ಕುಲಕ್ಕೆ ಅವಮಾನವೇ ಸರಿ.