ರೀಲ್ಸ್ ನೋಡಿ ಮದುವೆಯಾದ ಗಂಡ 8 ತಿಂಗಳಿಗೆ ಹೆಂಡತಿಯ ಹೆಣ ಹಾಕಿದ!

By Sathish Kumar KH  |  First Published Aug 23, 2024, 5:23 PM IST

ಪ್ರತಿನಿತ್ಯ ಮೇಕಪ್ ಮಾಡಿಕೊಂಡು ಹೊಸ ಹೊಸ ರೀಲ್ಸ್ ಮಾಡುತ್ತಿದ್ದ ಸುಂದರಿಯನ್ನು ಮೆಚ್ಚಿ ಮದುವೆಯಾದ ಗಂಡ ಕೇವಲ 8 ತಿಂಗಳಿಗೆ, ಹೆಂಡತಿಯ ರೀಲ್ಸ್ ಹುಚ್ಚಿಗೆ ಬೇಸತ್ತು ಆಕೆಯನ್ನು ಕೊಲೆ ಮಾಡಿ ಬೀಸಾಡಿದ್ದಾನೆ.


ಉಡುಪಿ (ಆ.23):  ಈತ ಉಡುಪಿ ಬ್ರಾಹ್ಮಣ ಹುಡುಗ, ಆಕೆ ಬೀದರ್‌ನ ಲಿಂಗಾಯತ ಹುಡುಗಿ. ರೀಲ್ಸ್ ಮಾಡುತ್ತಿದ್ದ ಸುಂದರಿಯನ್ನು ನೋಡಿ ಪ್ರೀತಿಸಿ ಮದುವೆಯಾದ ಜೋಡಿ ಸುಖ ಸಂಸಾರಕ್ಕೆ ಎಂಟೇ ತಿಂಗಳು ಆಯಸ್ಸು. ಮೊಬೈಲ್‌ನಲ್ಲಿ ರೀಲ್ಸ್ ಮಾಡುತ್ತಾ ನಮ್ಮ ಸಂಸಾರ ಆನಂದ ಸಾಗರ ಎಂದು ವಿಡಿಯೋ ಪೋಸ್ಟ್ ಮಾಡಿದ್ದೇ ಮಾಡಿದ್ದು.. ಹಿಡಿಯೋದು ಹಿಡಿದಿದ್ದಾನೆ ಒಳ್ಳೆ ಕಲಾವಿದೆಯನ್ನೇ ಹಿಡಿದಿದ್ದಾನೆ ಎಂದು ಆತನ ಸ್ನೇಹಿತರು ಹೇಳುತ್ತಿದ್ದರು. ಆದರೆ, ಪತ್ನಿ ರೀಲ್ಸ್ ಹುಚ್ಚಿಗೆ ಬೆಚ್ಚಿಬಿದ್ದ ಗಂಡ, ಒಂದು ವರ್ಷಕ್ಕೆ ಮೊದಲೇ ಹೆಂಡತಿಯ ಹೆಣ ಹಾಕಿದ್ದಾನೆ.

ಮದುವೆಯಾಗಿ ವರ್ಷ ಆಗುವ ಮೊದಲೇ ರೀಲ್ಸ್ ನಲ್ಲಿ ಇದ್ದಷ್ಟು ಆತ್ಮೀಯತೆ ರಿಯಲ್ ಲೈಫ್ ನಲ್ಲಿ ಮೂಡಲಿಲ್ಲ. ಸಂಬಂಧಗಳು ದೂರ ಇದ್ದು ಕ್ಷುಲ್ಲಕ ಕಾರಣಗಳು ಜಗಳ ಹಚ್ಚಿತು. ಕಳೆದ ರಾತ್ರಿ ಅವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಆತ ಆಕೆಗೆ ಮಾಡಬಾರದನ್ನು ಮಾಡಿಬಿಟ್ಟಿದ್ದಾನೆ. ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಯುವಕ ಕಿರಣ್ ಭಟ್ ಸಾಲಿಗ್ರಾಮದ ದೇವಸ್ಥಾನದಲ್ಲಿ ಅಡುಗೆ ಮೇಲ್ವಿಚಾರಕ. ಕಳೆದ 8 ತಿಂಗಳ ಹಿಂದೆ ದೂರದ ಬೀದರ್ ಮೂಲದ ಯುವತಿ ಜಯಶ್ರೀಯನ್ನು ಮದುವೆ ಮಾಡಿಕೊಂಡಿದ್ದನು. ಮದುವೆಯಾದ ಆರಂಭದಲ್ಲಿ ಇಬ್ಬರ ಸಂಸಾರ ಆನಂದ ಸಾಗರವಾಗಿತ್ತು. 

Tap to resize

Latest Videos

ಟೀಚರ್​​ ಮನೆ ಮೇಲೆ ಬಿದ್ದಿತ್ತು ಹುಡುಗರ ಕಣ್ಣು! 18ರ ಹುಡುಗರ ಪ್ಲಾನ್​ ಕೇಳಿ ಪೊಲೀಸರೇ ತಬ್ಬಿಬ್ಬು..!

ಜಯಶ್ರೀ ಲಿಂಗಾಯತ ಸಮುದಾಯಕ್ಕೆ ಸೇರಿದ ಯುವತಿ. ಕಿರಣ್ ಬ್ರಾಹ್ಮಣ, ಯಾವುದೋ ಕಾರಣಕ್ಕೆ ಮನೆಯಲ್ಲಿ ತಕರಾರು ನಡೆದು, ದಂಪತಿ ಇದ್ದ ಮನೆಯನ್ನು ಬಿಟ್ಟು ಸಾಲಿಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿದ್ದರು. ದಿನ ಕಳೆದಂತೆ ಕಿರಣ್ ಮತ್ತು ಜಯಶ್ರೀ ನಡುವೆ ಸಣ್ಣಪುಟ್ಟ ವಿಚಾರಗಳಿಗೆ ಜಗಳ ನಡೆಯುತ್ತಿತ್ತು. ಜಯಶ್ರೀಗೆ ಹಿಂದೊಂದು ಮದುವೆಯಾಗಿ ವಿಚ್ಛೇದನ ಪಡೆದಿದ್ದಳು. ದಂಪತಿಯ ಕ್ಷುಲ್ಲಕ ಜಗಳ ಅಕ್ಕಪಕ್ಕದ ಮನೆಯವರಿಗೂ ಗೊತ್ತಿತ್ತು. ಕಳೆದ ರಾತ್ರಿಯೂ ಹೀಗೆ ಒಂದು ಗಲಾಟೆ ಕೇಳಿಸಿದೆ. ಗಂಡ ಹೆಂಡತಿ ಜಗಳ ಮುಗಿಯಲಿಕ್ಕಿಲ್ಲ ಎಂದು ನೆರೆಹೊರೆಯವರು ತಮ್ಮ ಪಾಡಿಗೆ ಮಲಗಿದ್ದಾರೆ.

ಕಳೆದ ತಡರಾತ್ರಿ ಜಯಶ್ರೀ ಮತ್ತು ಕಿರಣ್ ನಡುವೆ ಪ್ರತಿದಿನಕ್ಕಿಂತ ತುಸು ಜೋರಾಗಿಯೇ ಜಗಳವಾಗಿದೆ. ಮಾತಿಗೆ ಮಾತು ಬೆಳೆದು ಇಬ್ಬರು ಹೊಡೆದಾಡಿಕೊಂಡಿದ್ದಾರೆ. ಕೋಪಗೊಂಡ ಪತಿ ಅಲ್ಲೇ ಪಕ್ಕದಲ್ಲಿದ್ದ ಚಾಕುವಿನಿಂದ ಜಯಶ್ರೀಗೆ ಇರಿದಿದ್ದಾನೆ. ದೇಹದ ಮೂರ್ನಾಲ್ಕು ಭಾಗಗಳಿಗೆ ಗಾಯವಾಗಿ ರಕ್ತಸ್ರಾವವಾಗಿದೆ. ಬೆಳಗ್ಗೆವರೆಗೆ ಸುಮ್ಮನಿದ್ದ ಕಿರಣ್, ಬೆಳಗ್ಗೆ ಪರಿಚಯಸ್ತರಿಗೆ ಕರೆ ಮಾಡಿದ್ದಾನೆ. ಪತ್ನಿ ಟೆರೇಸ್ ಮೇಲಿಂದ ಬಿದ್ದು ಗಾಯಗೊಂಡಿದ್ದಾಗಿ ಹೇಳಿ ಆಂಬುಲೆನ್ಸ್ ಮೂಲಕ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾನೆ.

ಆದರೆ, ಖಾಸಗಿ ಆಸ್ಪತ್ರೆಯಲ್ಲಿ ಇವರನ್ನು ದಾಖಲಿಸಿಕೊಳ್ಳದೇ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಅಲ್ಲಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ ಜಯಶ್ರೀ ಜೀವವನ್ನೇ ಬಿಟ್ಟಿದ್ದಾಳೆ. ಈ ಘಟನೆ ಬಗ್ಗೆ ಕೋಟ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ. ಜಯಶ್ರೀ ಗಂಡನನ್ನು ಪೊಲೀಸರು ವಶಕ್ಕೆ ಪಡೆದು ವಿಚಾಚಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ. ತನ್ನ ಪತ್ನಿ ಮೊಬೈಲ್‌ನಲ್ಲಿ ರೀಲ್ಸ್ ಮಾಡುತ್ತಾ ಬ್ಯುಸಿಯಾಗಿರುತ್ತಿದ್ದಳು. ಚಿನ್ನಕ್ಕಾಗಿ ಸದಾ ಪೀಡಿಸಿ ಹಿಂಸೆ ಕೊಡುತ್ತಿದ್ದಳು. ಸಣ್ಣಪುಟ್ಟ ವಿಚಾರಕ್ಕೆ ತಗಾದೆ ತೆಗೆದು ಜಗಳವಾಡುತ್ತಿದ್ದಳು. ಇದೇ ಕಾರಣಕ್ಕೆ ಜಗಳದ ಸಂದರ್ಭ ಚಾಕುವಿನಿಂದ ಇರಿದಿದ್ದಾಗಿ ಒಪ್ಪಿಕೊಂಡಿದ್ದಾನೆ.

ನೂರಾರು ಜೀವ ಉಳಿಸಿದ್ದ ಸ್ಟಾಫ್ ನರ್ಸ್ ಆತ್ಮಹತ್ಯೆ; ಊರಿಗೆ ಊರೇ ಬಂದ್ ಮಾಡಿದ ಜನತೆ!

ಈ ಘಟನೆ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಕೋರ್ಟಿಗೆ ಹಾಜರುಪಡಿಸಲಿದ್ದಾರೆ. ಜಯಶ್ರೀ ಮನೆಯವರು ಬೀದರ್ ನಿಂದ ಹೊರಟು ಉಡುಪಿಗೆ ಬರುತ್ತಿದ್ದಾರೆ. ಮೃತ ದೇಹವನ್ನು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಕುಟುಂಬಸ್ಥರ ಭೇಟಿ ನಂತರ ಮರಣೋತ್ತರ ಪರೀಕ್ಷೆ ನಡೆಯಲಿದೆ. ಕೋಪದ ಕೈಗೆ ಬುದ್ದಿ ಕೊಟ್ಟು ಪತ್ನಿಯ ಪ್ರಾಣ ಪಕ್ಷಿ ಹಾರಿಹೋಗಿದೆ. ಪತಿ ಕಂಬಿ ಹಿಂದೆ ಕಾಲ ಕಳೆಯುವಂತಾಗಿದೆ.

ವರದಿ - ಶಶಿಧರ್ ಮಾಸ್ತಿಬೈಲು, ಉಡುಪಿ

click me!