Mangaluru: ಸುವರ್ಣ ನ್ಯೂಸ್ ‌ಇಂಪ್ಯಾಕ್ಟ್: ಉಳ್ಳಾಲದ ಮರಳು ದಂಧೆಕೋರರು ಅರೆಸ್ಟ್!

By Govindaraj SFirst Published Sep 12, 2022, 9:40 PM IST
Highlights

ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಉಳ್ಳಾಲದ ತಾಲೂಕು ಆಡಳಿತ ಎಚ್ಚೆತ್ತುಕೊಂಡು ದೂರು ನೀಡಿದ ಪರಿಣಾಮ ಕೊನೆಗೂ ಉಳ್ಳಾಲ ಪೊಲೀಸರು ಮರಳು ದಂಧೆಕೋರರ ಹೆಡೆಮುರಿ ಕಟ್ಟಿದ್ದಾರೆ. 

ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ‌ಮಂಗಳೂರು

ಮಂಗಳೂರು (ಸೆ.12): ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಉಳ್ಳಾಲದ ತಾಲೂಕು ಆಡಳಿತ ಎಚ್ಚೆತ್ತುಕೊಂಡು ದೂರು ನೀಡಿದ ಪರಿಣಾಮ ಕೊನೆಗೂ ಉಳ್ಳಾಲ ಪೊಲೀಸರು ಮರಳು ದಂಧೆಕೋರರ ಹೆಡೆಮುರಿ ಕಟ್ಟಿದ್ದಾರೆ. ಸಿಸಿಟಿವಿ ಒಡೆದು ಹಾಕಿದ ಮರಳು ದಂಧೆಕೋರರ ವಿರುದ್ದ ಇಂದು ಮಧ್ಯಾಹ್ನ ದೂರು ದಾಖಲಾದ ಬೆನ್ನಲ್ಕೇ ಉಳ್ಳಾಲ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಮಂಗಳೂರಿನ ಮಡ್ಯಾರ್ ನಿವಾಸಿ ಸೂರಜ್, ಮುಡಿಪು ನಿವಾಸಿ ಇಕ್ಬಾಲ್, ತಲಪಾಡಿಯ ಅಖಲ್ ಮತ್ತು ಸೋಮೇಶ್ವರದ ಪ್ರಜ್ವಲ್ ಬಂಧಿತ ಆರೋಪಿಗಳು. ಮರಳು ಲಾರಿ ವಶಕ್ಕೆ ‌ಪಡೆದು ನಾಲ್ವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.

ಕಳೆದ ಶುಕ್ರವಾರ ಮರಳು ದಂಧೆಕೋರರು ಸೋಮೇಶ್ವರ ಬಳಿ ಹಾಕಲಾಗಿದ್ದ ಜಿಲ್ಲಾಡಳಿತದ ಸಿಸಿಟಿವಿ ಕ್ಯಾಮರಾವನ್ನು ಲಾರಿಯಿಂದ ಗುದ್ದಿ ಧ್ವಂಸಗೈದು ಅಟ್ಟಹಾಸ ಮೆರೆದಿದ್ದರು. ಹೀಗಿದ್ದರೂ ಉಳ್ಳಾಲ ತಾಲೂಕು ಆಡಳಿತ ಮೂರು ದಿನ ಕಳೆದರೂ ಯಾವುದೇ ದೂರು ನೀಡದೇ ಮರಳು ದಂಧೆಕೋರರ ಜೊತೆ ಶಾಮೀಲಾಗಿತ್ತು. ಈ ಬಗ್ಗೆ ಇಂದು ಬೆಳಿಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ತಾಲೂಕು ಆಡಳಿತದ ವೈಫಲ್ಯದ ಬಗ್ಗೆ ವರದಿ ಪ್ರಸಾರ ಮಾಡಿತ್ತು. ಸುವರ್ಣ ನ್ಯೂಸ್ ಈ ಬಗ್ಗೆ ವರದಿ ಮಾಡಿದ ಬೆನ್ನಲ್ಲೇ ಮಧ್ಯಾಹ್ನದ ಹೊತ್ತಿಗೆ ಉಳ್ಳಾಲ ಪೊಲೀಸ್ ಠಾಣೆಗೆ ಓಡೋಡಿ ಬಂದ ಕಂದಾಯ ನಿರೀಕ್ಷಕ ದೂರು ನೀಡಿದ್ದರು. 

ಸುವರ್ಣ ನ್ಯೂಸ್ ‌ಇಂಪ್ಯಾಕ್ಟ್: ಉಳ್ಳಾಲದ ಮರಳು ದಂಧೆಕೋರರ ವಿರುದ್ದ ಎಫ್ಐಆರ್!

ಉಳ್ಳಾಲ ತಾಲೂಕು ಕಂದಾಯ ನಿರೀಕ್ಷಕ ಮಂಜುನಾಥ್ ಸೋಮೇಶ್ವರ ಬಳಿ ಸಿಸಿಟಿವಿ ಒಡೆದು ಹಾಕಿದ ಮರಳು ದಂಧೆಕೋರರ ವಿರುದ್ದ ದೂರು ನೀಡಿದ್ದರು. ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡ ಉಳ್ಳಾಲ ಪೊಲೀಸರು ಸಂಜೆಯೊಳಗೆ ನಾಲ್ವರು ‌ಮರಳು ದಂಧೆಕೋರರನ್ನು ಬಂಧಿಸಿದ್ದಾರೆ. ದ.ಕ.ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆಗೆ ಬ್ರೇಕ್ ಹಾಕಲು ಜಿಲ್ಲಾಧಿಕಾರಿ ಮತ್ತು ಕೆಲ ಉನ್ನತ ಮಟ್ಟದ ಅಧಿಕಾರಿಗಳು ಕಠಿಣ ಕ್ರಮಗಳನ್ನು ಕೈಗೊಂಡರೂ ಕೆಳ ಮಟ್ಟದ ಅಧಿಕಾರಿಗಳು ಮಾತ್ರ ಇನ್ನೂ ಮರಳು ದಂಧೆಕೋರರಿಗೆ ಸಾಥ್ ನೀಡ್ತಾ ಇದ್ದು, ಪರಿಣಾಮ ಉಳ್ಳಾಲ, ಸೋಮೇಶ್ವರ ಭಾಗದಲ್ಲಿ ಮರಳು ಅಕ್ರಮ ದಂಧೆಕೋರರ ಅಟ್ಟಹಾಸ ಮುಂದುವರೆದಿದೆ ಎಂದು ಬೆಳಿಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ವರದಿ ಪ್ರಸಾರವಾಗಿತ್ತು. 

ಕಳೆದ ಶುಕ್ರವಾರ ಮಧ್ಯರಾತ್ರಿ ಹೊತ್ತಿಗೆ ಜಿಲ್ಲಾಡಳಿತ ಅಳವಡಿಸಿದ್ದ ಸಿಸಿಟಿವಿ ಕ್ಯಾಮಾರಗಳನ್ನೇ ಮರಳು ದಂಧೆಕೋರರು ಪುಡಿ ಗಟ್ಟಿದ್ದು, ಘಟನೆ ನಡೆದು ಮೂರು ದಿನ ಕಳೆದರೂ ಅಧಿಕಾರಿ ವರ್ಗ ಪೊಲೀಸ್ ದೂರು ನೀಡಿರಲಿಲ್ಲ. ಇದು ಮಂಗಳೂರಿನಲ್ಲಿ ಅಕ್ರಮ ಮರಳು ದಂಧೆಕೋರರ ಜೊತೆ ಅಧಿಕಾರಿಗಳು ಶಾಮೀಲಾದ್ರಾ ಎಂಬ ಅನುಮಾನಕ್ಕೆ ಕಾರಣವಾಗಿತ್ತು. ಸಿಸಿಟಿವಿ ಪುಡಿಗೈದ ಮರಳು ಲೂಟಿಕೋರರ ವಿರುದ್ದ ಇನ್ನೂ ಪ್ರಕರಣ ದಾಖಲಾಗದೇ ಇದ್ದು, ಅಕ್ರಮ ದಂಧೆಕೋರರ ವಿರುಧ್ಧ ಪೊಲೀಸ್ ದೂರು ನೀಡಲು ಅಧಿಕಾರಿಗಳು ಮೀನಾಮೇಷಾ ಎಣಿಸುತ್ತಿದ್ದಾರೆ ಎಂದು ವರದಿ ಪ್ರಸಾರವಾಗಿತ್ತು.‌ 

ಅಕ್ರಮ ಮರಳು ದಂಧೆಗೆ ಉಳ್ಳಾಲ ತಾಲೂಕು ಆಡಳಿತ ಸಾಥ್: ಸಿಸಿಟಿವಿ ಒಡೆದರೂ ದಾಖಲಾಗಿಲ್ಲ ದೂರು!

ಮಂಗಳೂರು ಹೊರವಲಯದ ಸೋಮೇಶ್ವರ ಬಳಿ ಸಿಸಿಟಿವಿ ಕ್ಯಾಮರಾ ಪುಡಿಗೈದು ದಾಂಧಲೆ ಮಾಡಿರೋ ಮರಳು ದಂಧೆಕೋರರು, ಮರಳು ಲಾರಿ ಡಿಕ್ಕಿ ಹೊಡೆಸಿ ಸಿಸಿಟಿವಿ ಕ್ಯಾಮೆರಾ ಪುಡಿಗೈದಿದ್ದಾರೆ. ಕಳೆದ ಶುಕ್ರವಾರ ಮಧ್ಯರಾತ್ರಿ ಸೋಮೇಶ್ವರದಲ್ಲಿ ಘಟನೆ ನಡೆದಿದ್ದು, ಉಳ್ಳಾಲ ತಹಶೀಲ್ದಾರ್ ಮತ್ತು ಸೋಮೇಶ್ವರ ಗ್ರಾಮದ ಗ್ರಾಮಕರಣಿಕರ ಶಾಮೀಲಾತಿ ಆರೋಪ ವ್ಯಕ್ತವಾಗಿತ್ತು. ಮೂರು ದಿನ ಕಳೆದರೂ ಇನ್ನೂ ಪೊಲೀಸ್ ದೂರು ನೀಡದ ಅಧಿಕಾರಿಗಳು ಮರಳು ದಂಧೆಕೋರರ ಜೊತೆ ನೇರ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿತ್ತು. ಇನ್ನು ಯಾವುದೇ ದೂರು ಬಂದಿಲ್ಲ ಅಂತ ಉಳ್ಳಾಲ ಪೊಲೀಸರು ಕೈಕಟ್ಟಿ ಕುಳಿತಿದ್ದರು. ಇದೀಗ ವರದಿ ಪ್ರಸಾರವಾದ ಬೆನ್ನಲ್ಲೇ ಡಿಸಿ ಸೂಚನೆ ಹಿನ್ನೆಲೆ ಆರ್.ಐ ಮಂಜುನಾಥ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಗಳು ಅಂದರ್ ಆಗಿದ್ದಾರೆ.

click me!