Ramanagara News: ರಾಮನಗರ ತಾಲೂಕಿನ ಅಚ್ಚಲು ಕಾಲೋನಿಯ ಬಳಿ ನಡೆದಿದ್ದ ಕೆಂಪಮ್ಮ ಎಂಬ ಮಹಿಳೆಯ ಭೀಕರ ಕೊಲೆ ಪ್ರಕರಣವನ್ನ ಪೊಲೀಸರು ಭೇದಿಸಿದ್ದಾರೆ
ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣ ನ್ಯೂಸ್, ರಾಮನಗರ
ರಾಮನಗರ (ಸೆ. 12): ಆಕೆಯದ್ದು ಸುಂದರ ಸಂಸಾರವಾಗಿತ್ತು. ಮನೆಗೆ ಆಧಾರವಾಗಿದ್ದ ಆಕೆ, ಕಿರಾಣಿ ಅಂಗಡಿ, ಹೈನುಗಾರಿಕೆ ಮಾಡಿಕೊಂಡು ಬದುಕು ಸಾಗಿಸುತ್ತಿದ್ದಳು. ಹೀಗಿದ್ದವಳು ಅದೊಂದು ದಿನ ಮೇಯಲು ಬಿಟ್ಟಿದ್ದ ಹಸುಗಳನ್ನ ಕರೆತರಲು ಹೋದಾಗ ಭೀಕರವಾಗಿ ಹತ್ಯೆಯಾಗಿದ್ದಳು. ಈ ವಿಚಾರ ಇಡೀ ಗ್ರಾಮಸ್ಥರನ್ನ ಆತಂಕಕ್ಕೆ ಒಳಗಾಗುವಂತೆ ಮಾಡಿತ್ತು. ಈ ಪ್ರಕರಣವನ್ನ ಭೇದಿಸಿರುವ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಅದೇ ಗ್ರಾಮದ ಒಬ್ಬ ಬಾಲಾಪರಾಧಿ ಸೇರಿದಂತೆ ಮೂವರನ್ನ ಬಂಧಿಸಿದ್ದಾರೆ.
ಅಚ್ಚಲು ಗ್ರಾಮದಲ್ಲಿ ಮಹಿಳೆಯ ಭೀಕರ ಹತ್ಯೆ: ಸೆಪ್ಟೆಂಬರ್ 8ರಂದು ರಾಮನಗರ ತಾಲೂಕಿನ ಅಚ್ಚಲು ಕಾಲೋನಿಯ ಬಳಿ ನಡೆದಿದ್ದ ಕೆಂಪಮ್ಮ(50) ಎಂಬ ಮಹಿಳೆಯ ಭೀಕರ ಕೊಲೆ ಪ್ರಕರಣವನ್ನ ಭೇದಿಸಿರುವ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಅದೇ ಗ್ರಾಮದ ಒಬ್ಬ ಬಾಲಾಪರಾಧಿ ಸೇರಿ ಮೂವರನ್ನ ಬಂಧಿಸಿದ್ದಾರೆ.
ಅಂದಹಾಗೆ ಅಚ್ಚಲುಕಾಲೋನಿ ಗ್ರಾಮದ ಕೆಂಪಮ್ಮಳ ಗಂಡ ಕೆಂಚಯ್ಯನಿಗೆ ಒಂದು ಕಾಲು ಇಲ್ಲ. ಇಬ್ಬರು ಮಕ್ಕಳಿದ್ದೂ ಆಟೋ ಓಡಿಸುತ್ತಿದ್ದು, ಬೇರೆ ಇದ್ದಾರೆ. ಹೀಗಾಗಿ ಕೆಂಪಮ್ಮ ಗ್ರಾಮದಲ್ಲಿ ಸಣ್ಣದಾದ ಕಿರಾಣಿ ಅಂಗಡಿ ಇಟ್ಟುಕೊಂಡು, ಜೊತೆಗೆ ಹೈನುಗಾರಿಕೆ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ.
ಹೀಗಾಗಿ ಪ್ರತಿನಿತ್ಯ ಹಸುಗಳನ್ನ ಬೆಳಗ್ಗೆ ಸಮಯದಲ್ಲಿ ಸೇನಾಪತಿ ವೈಟ್ಲೆ ಕಾರ್ಖಾನೆ ಹಿಂಭಾಗದಲ್ಲಿ ಇರುವ ಖಾಲಿ ಜಮೀನಿನಲ್ಲಿ ಮೇಯಲು ಬಿಟ್ಟು ಸಂಜೆ ವೇಳೆ ಹೋಗಿ ಹಸುಗಳನ್ನ ವಾಪಾಸ್ ಮನೆಗೆ ಕರೆದುಕೊಂಡು ಬರುತ್ತಿದ್ದಳು. ಅದೇ ರೀತಿ ಸೆಪ್ಟೆಂಬರ್ 8ರ ಸಂಜೆ ಐದು ಗಂಟೆ ಸುಮಾರಿಗೆ ಹಸುಗಳನ್ನ ಕರೆತರಲು ಹೋದಾಗ ಲಿಂಗರಾಜು, ರವಿ ಹಾಗೂ ಮತ್ತೊಬ್ಬ ಬಾಲಾಪರಾಧಿ ಸೇರಿ ಆಕೆಯನ್ನ ಕೊಲೆಗೈದಿದ್ರು.
ಹಿಂದುಳಿದ ಜಾತಿಯ ಯುವಕನೊಂದಿಗೆ ಪ್ರೇಮ; ಮಗಳನ್ನು ಕೊಂದು ಬೆಂಕಿಯಿಟ್ಟ ಅಪ್ಪ
ಆರ್ಕಾವತಿ ನದಿಗೆ ಶವ ಎಸೆದು ಪರಾರಿ: ಮೊದಲಿಗೆ ಆಕೆಯನ್ನ ಹಿಂದಿನಿಂದ ತಳ್ಳಿ, ಆಕೆ ನೆಲಕ್ಕೆ ಬಿದ್ದ ಮೇಲೆ ಹಗ್ಗದಿಂದ ಕತ್ತು ಬಿಗಿದು ಆಕೆ ಸಾವನ್ನಪ್ಪಿದ ಮೇಲೆ ಆಕೆಯ ಮೈಮೇಲೆ ಇದ್ದ ಕಿವಿ ಓಲೆ, ಮಾಟಿ, ತಾಳಿ, ಲಕ್ಷೀ ಕಾಸನ್ನ ಕಿತ್ತುಕೊಂಡಿದ್ರು. ಆನಂತರ ದೊಡ್ಡದಾದ ಚೀಲದಲ್ಲಿ ಮೃತದೇಹವನ್ನ ಹಾಕಿ, ಪಕ್ಕದಲ್ಲೇ ಇದ್ದ ಆರ್ಕಾವತಿ ನದಿಗೆ ಎಸೆದು ಪರಾರಿಯಾಗಿದ್ದರು.
ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು, ಪ್ರಕರಣ ಸಂಬಂಧ ಅದೇ ಅಚ್ಚಲುಕಾಲೋನಿ ಗ್ರಾಮದ ಲಿಂಗರಾಜು, ರವಿ ಹಾಗೂ ಮತ್ತೊಬ್ಬ ಬಾಲಾಪರಾಧಿಯನ್ನ ಬಂಧಿಸಿದ್ದಾರೆ. ಬಂಧಿತರಿಂದ 51 ಸಾವಿರ ಮೌಲ್ಯದ ಚಿನ್ನಾಭರಣ ಹಾಗೂ ಒಂದು ಮೊಬೈಲ್ ವಶಪಡಿಸಿಕೊಂಡಿದ್ದಾರೆ.
ಮೈತುಂಬ ಸಾಲ ಮಾಡಿಕೊಂಡಿದ್ದ ಆರೋಪಿ: ಅಂದಹಾಗೆ ಅಚ್ಚಲುಕಾಲೋನಿಯ ನಿವಾಸಿಯಾದ 19 ವರ್ಷದ ಐನಾತಿ ಲಿಂಗರಾಜು, ಅದೇ ಗ್ರಾಮದ ಬಳಿ ಇರುವ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಕುಡಿತದ ದಾಸನಾಗಿದ್ದ ಈತ ಮೈತುಂಬ ಸಾಲ ಮಾಡಿಕೊಂಡಿದ್ದ. ಅಲ್ಲದೆ ಹೊಸ ಬೈಕ್ ಬೇರೆ ತಗೋಳ್ಳಬೇಕು ಅಂದುಕೊಂಡಿದ್ದ.
ಪ್ರತಿನಿತ್ಯ ಕೆಂಪಮ್ಮಳ ಅಂಗಡಿಯಲ್ಲಿ ಎಣ್ಣೆ ಕೂಡ ಪಡೆಯುತ್ತಿದ್ದ. ಆಕೆಯ ಬಳಿಯೇ ಸಾಲ ಕೂಡ ಮಾಡಿದ್ದ. ಅಲ್ಲದೆ ಆಕೆಯ ಮೈಮೇಲೆ ಇರುವ ಚಿನ್ನಾಭರಣಗಳನ್ನ ಲಿಂಗರಾಜು ಗಮನಿಸಿದ್ದ. ಹೀಗಾಗಿ ಆಕೆಯನ್ನ ಕೊಲೆ ಮಾಡಿ ಚಿನ್ನಾಭರಣಗಳನ್ನ ಕಳ್ಳತನ ಮಾಡಿ ಆನಂತರ ಮಾರಾಟ ಮಾಡಿದ್ರೆ ದುಡ್ಡು ಸಿಗುತ್ತೆ ಅಂತಾ ಪ್ಲಾನ್ ಮಾಡಿದ್ದ.
ಹಳೆ ವೈಷಮ್ಯ ಹಾಗೂ ಹವಾ ಮೆಂಟೇನ್ ಮಾಡಲು ಜೈಲಿಂದ ಹೊರ ಬಂದಿದ್ದವನ ಬರ್ಬರ ಹತ್ಯೆ!
ಹೀಗಾಗಿ ಅದೇ ಗ್ರಾಮದ ರವಿ ಹಾಗೂ ಮತ್ತೊಬ್ಬ ಬಾಲಾಪರಾಧಿಯನ್ನ ತನ್ನ ಜೊತೆಗೆ ಹಾಕಿಕೊಂಡಿದ್ದ. ಮತ್ತೊಬ್ಬರಿಗೂ ಕೂಡ ಹಣದ ಅವಶ್ಯಕತೆ ಇತ್ತು. ಹಿಗಾಗಿ ಕೆಂಪಮ್ಮಳ ಚಲನವಲನದ ಬಗ್ಗೆ ತಿಳಿದುಕೊಂಡು ಆಕೆ ದನ ಕರೆತರಲು ಹೋದಾಗ ಅಲ್ಲಿಯೇ ಕೊಂಚು ಹಾಕಿ ಕುಳಿತು ಹತ್ಯೆ ಮಾಡಿ, ನಂತರ ಚಿನ್ನಾಭರಣಗಳನ್ನ ಮೂವರು ಸಮನಾಗಿ ಹಂಚಿಕೊಂಡಿದ್ರು.
ಇನ್ನು ಕೊಲೆ ಮಾಡಿದ ನಂತರ ಘಟನಾ ಸ್ಥಳಕ್ಕೆ ಶ್ವಾನದಳದ ಜೊತೆ ಪೊಲೀಸರು ಹೋದಾಗ ಲಿಂಗರಾಜು ಹಾಗೂ ರವಿ ಅಲ್ಲಿಯೇ ಇದ್ದು, ಪೊಲೀಸರ ಬಗ್ಗೆ ಮಾಹಿತಿ ತಿಳಿದುಕೊಂಡಿದ್ರು. ಒಟ್ಟಾರೆ ಮಹಿಳೆಯ ಕೊಲೆ ಪ್ರಕರಣವನ್ನ ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ಭೇದಿಸಿ ಮೂವರನ್ನ ಜೈಲಿನಲ್ಲಿ ಮುದ್ದೆ ಮುರಿಯುವಂತೆ ಮಾಡಿದ್ದಾರೆ.