
ಹೆಗ್ಗಡದೇವನಕೋಟೆ (ಫೆ.3): ಪತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಆಕೆಯನ್ನು 12 ವರ್ಷ ಮನೆಯೊಳಗೇ ಕೂಡಿಹಾಕಿ, ಬಾಗಿಲಿಗೆ ಮೂರು ಬೀಗ ಹಾಕುತ್ತಿದ್ದ ಅಮಾನವೀಯ ಘಟನೆಯೊಂದು ಸಮೀಪದ ಎಚ್.ಮಟಕೆರೆ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗೃಹ ಬಂಧನದಲ್ಲಿದ್ದ ಈ ಮಹಿಳೆಯು ಮಲ, ಮೂತ್ರ ವಿಸರ್ಜನೆಗೂ ಮನೆಯಿಂದ ಹೊರಬರಲಾಗದೆ ತನ್ನ ಗಂಡ ಕೊಟ್ಟು ಹೋಗುತ್ತಿದ್ದ ಡಬ್ಬಿಯನ್ನೇ ನೈಸರ್ಗಿಕ ಕರೆಗಾಗಿ ಅವಲಂಬಿಸಬೇಕಾದಂಥ ಸ್ಥಿತಿಯಲ್ಲಿ ಬದುಕು ನಡೆಸುತ್ತಿದ್ದ ವಿಚಾರ ಈ ವೇಳೆ ಬಯಲಾಗಿದೆ. ಇದೀಗ ಈ ಮಹಿಳೆಯನ್ನು ರಕ್ಷಿಸಿ, ತವರು ಮನೆಗೆ ಕಳುಹಿಸಲಾಗಿದೆ.
ಶೀಲ ಶಂಕಿಸಿ ಪತ್ನಿ ಕೊಲೆ ಮಾಡಿದ ಗಂಡ, ಇಬ್ಬರು ಹೆಣ್ಣು ಮಕ್ಕಳು ಅನಾಥ
ಎಚ್.ಮಟಕೆರೆ ಗ್ರಾಮದ ಸಣ್ಣಾಲಯ್ಯ ಎಂಬಾತ ಈ ಕೃತ್ಯ ಎಸಗಿರುವ ಆರೋಪಿ. ಆತ ಪಕ್ಕದ ಹೈರಿಗೆ ಗ್ರಾಮದ ಸುಮಾ ಎಂಬುವರನ್ನು 12 ವರ್ಷಗಳ ಹಿಂದೆ 3ನೇ ಮದುವೆಯಾಗಿದ್ದು, ಎರಡು ಮಕ್ಕಳು ಸಹ ಇದ್ದಾರೆ.ಮದುವೆ ಆದಾಗಿನಿಂದಲೂ ಪತ್ನಿಯನ್ನು ಅನುಮಾನದಿಂದಲೇ ನೋಡುತ್ತಿದ್ದ ಸಣ್ಣಾಲಯ್ಯ ಆಕೆಯನ್ನು ಮನೆಯೊಳಗೇ ದಿಗ್ಬಂಧನದಲ್ಲಿರಿಸಿದ್ದ. ಕಿಟಕಿಗಳನ್ನು ಹಗ್ಗದಿಂದ ಭದ್ರಗೊಳಿಸಿ ಮನೆ ಬಾಗಿಲಿಗೆ ಹೊರಗಿನಿಂದ ಮೂರು ಬೀಗ ಹಾಕಿ ಪತ್ನಿ ಈಚೆ ಬಾರದಂತೆ, ಯಾರ ಸಂಪರ್ಕಕ್ಕೂ ಸಿಗದಂತೆ ನೋಡಿಕೊಂಡಿದ್ದ. ಅಷ್ಟೆ ಅಲ್ಲದೆ, ಹಗಲು ಹೊತ್ತು ಮಲಮೂತ್ರ ವಿಸರ್ಜನೆಗೆ ಆಕೆಗೆ ಡಬ್ಬಿ ಕೊಟ್ಟು ರಾತ್ರಿ ತಾನು ಮನೆಗೆ ಬಂದಾಗ ಅದನ್ನು ಹೊರಹಾಕುವ ವ್ಯವಸ್ಥೆ ಮಾಡಿಸಿಕೊಂಡಿದ್ದ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿಯೂ ಭಯ ಹುಟ್ಟಿಸಿದ್ದ.
ಪತ್ನಿಯ ಶೀಲ ಶಂಕಿಸಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿರಾಯ!
ಇದೇ ಕಾರಣಕ್ಕೆ ಇಬ್ಬರು ದೂರ:
ಈತನ ಈ ಅಮಾನವೀಯ ಹಾಗೂ ಪೈಶಾಚಿಕ ವರ್ತನೆಗೆ ಹೆದರಿಕೊಂಡೇ ಈ ಹಿಂದಿನ ಇಬ್ಬರು ಪತ್ನಿಯರು ನ್ಯಾಯ ಪಂಚಾಯ್ತಿ ಮೂಲಕ ದೂರವಾಗಿದ್ದರು. ಮೂರನೇ ಪತ್ನಿ ಸುಮಾ ಮಾತ್ರ ಎಲ್ಲವನ್ನೂ ಸಹಿಸಿಕೊಂಡು ಈತನ ಜತೆಗೆ 12 ವರ್ಷ ಸಂಸಾರ ನಡೆಸಿಕೊಂಡು ಬಂದಿದ್ದಳು.ಸುಮಾಳ ಸಂಬಂಧಿಕರೊಬ್ಬರು ನೀಡಿದ ಮಾಹಿತಿ ಆಧಾರದಲ್ಲಿ ಮಹಿಳಾ ಸಾಂತ್ವನ ಕೇಂದ್ರದ ಸಮಾಲೋಚಕಿ ಜಸ್ಸಿಲ್ಲಾ, ಸಹಾಯಕ ಸಬ್ ಇನ್ಸ್‌ಪೆಕ್ಟರ್ ಸುಹಾನ್, ವಕೀಲ ಸಿದ್ದಪ್ಪಾಜಿ ಗ್ರಾಮಕ್ಕೆ ಭೇಟಿ ಕೊಟ್ಟು ಬಂಧಿತ ಮಹಿಳೆಯನ್ನು ಇದೀಗ ರಕ್ಷಿಸಿದ್ದು, ನಂತರ ತವರು ಮನೆಗೆ ಕಳುಹಿಸಲಾಗಿದೆ. ಘಟನೆಗೆ ಸಂಬಂಧಿಸಿ ಎಚ್.ಡಿ.ಕೋಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ