ಮಾಜಿ ಪೊಲೀಸ್ ಅಧಿಕಾರಿಯೇ ಮಾಸ್ಟರ್ ಮೈಂಡ್.. ಅಂಬಾನಿಯನ್ನೇ ದೋಚುವ ರೋಚಕ ಪ್ಲಾನ್!

By Suvarna NewsFirst Published Sep 8, 2021, 9:38 PM IST
Highlights

* ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ತುಂಬಿದ್ದ ವಾಹನ ಸಿಕ್ಕ ಪ್ರಕರಣ
* ಮಾಜಿ ಪೊಲೀಸ್ ಅಧಿಕಾರಿಯೇ ಮಾಸ್ಟರ್ ಮೈಂಡ್
* ಚಾರ್ಜ್ ಶೀಟ್ ನಲ್ಲಿ ಬಹಿರಂಗವಾದ ಅಂಶ
* ಸೊಲ್ಲೆತ್ತಿದ ವ್ಯಕ್ತಿಯನ್ನು ಕೊಲೆ ಮಾಡಿದ ಹತ್ತು ಜನರ ತಂಡ

ಮುಂಬೈ(ಸೆ. 08)   ರಿಲಯನ್ಸ್ ಒಡೆಯ ಮುಕೇಶ್ ಅಂಬಾನಿ ಹಣವನ್ನು ದೋಚಲು ಮಾಸ್ಟರ್ ಪ್ಲಾನ್ ಮಾಡಿದ್ದರು ಎಂಬ ಆಘಾತಕಾರಿ ಅಂಶ  ಬಟಾಬಯಲಾಗಿದೆ.   ಪೊಲೀಸ್ ಇಲಾಖೆಯಿಂದ ವಜಾಗೊಂಡಿರುವ ಸಚಿನ್ ವಾಜೆ  ಮಾಸ್ಟರ್ ಮೈಂಡ್ ಎಂಬ ಅಂಶವೂ ಬಹಿರಂಗವಾಗಿದೆ.

ಮುಕೇಶ್ ಅಂಬಾನಿ ಮನೆ ಬಳಿ ಸ್ಫೋಟಕ ತಂದು ಇಟ್ಟಿದ್ದರಲ್ಲಿ ವಜಾಗೊಂಡಿರುವ ಪೊಲೀಸ್ ಅಧಿಕಾರಿಯ ಕೈವಾಡವೂ ಇದೆ ಎಂಬುದನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ತನ್ನ ಚಾರ್ಜ್‌ಶೀಟ್‌ನಲ್ಲಿ ಹೇಳಿದೆ.

ವಜಾಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರು ಉದ್ಯಮಿ ಮುಖೇಶ್ ಅಂಬಾನಿಯವರ ಮನೆಯ ಬಳಿ ಸ್ಫೋಟಕಗಳಿದ್ದ ಎಸ್‌ಯುವಿಯನ್ನು ತಂದು ನಿಲ್ಲಿಸುವ ಮೂಲಕ ತಮ್ಮ "ಸೂಪರ್‌ಕಾಪ್" ಖ್ಯಾತಿಯನ್ನು ಮರಳಿ ಪಡೆಯಲು ಬಯಸಿದ್ದರು  ಎಂಬುದನ್ನು ಈ ಚಾರ್ಜ್ ಶೀಟ್ ಹೇಳಿದೆ.

ನಕಲಿ ಎನ್ ಕೌಂಟರ್ ವಾಸನೆ ಬೆನ್ನು ಹತ್ತಿದ ಎನ್ಐಎ

ಭಯ  ಹುಟ್ಟುಹಾಕುವುದು ಮೊದಲ ಯೋಚನೆಯಾಗಿತ್ತು. ಈ ಮೂಲಕ ಹಣಕ್ಕೆ ಬೇಡಿಕೆ ಇಡುವುದು ಮುಂದಿನ ಹೆಜ್ಜೆಯಾಗಿತ್ತು.  ಈ ಚಿತ್ರಕಥೆಯಲ್ಲಿ ಐದು ಜನ ಅಧಿಕಾರದಲ್ಲಿ ಇರುವ ಆಫೀಸರ್ ಗಳು ಇಬ್ಬರು ನಿವೃತ್ತ ಆಫಿಸರ್ ಗಳು ಇದ್ದರು. ಎನ್ ಕೌಂಟರ್ ಸ್ಪೆಶಲಿಸ್ಟ್ ಪ್ರದೀಶ್ ಶರ್ಮಾ ಹೆಸರು ಕೇಳಿ ಬಂದಿದ್ದು ಜತೆಗೆ ಕ್ರಿಮಿನಲ್ ಪ್ರಕರಣದಲ್ಲಿ ಮಾಸ್ಟರ್ ಮಾಡಿದ್ದ ಐವರನ್ನು ಜತೆ ಮಾಡಿಕೊಳ್ಳಲಾಗಿತ್ತು.  ಭಯ ಹುಟ್ಟಿಸಿ ಸುಲಿಗೆ ಮಾಡುವುದು ಇವರ ಉದ್ದೇಶವಾಗಿತ್ತು ದು ಚಾರ್ಜ್ ಶೀಟ್ ಹೇಳಿದೆ.

ಕಳೆದ ಶುಕ್ರವಾರ ಎನ್ಐಎ, ಅಂಬಾನಿ ಮುಂಬೈ ನಿವಾಸದ ಸಮೀಪ ಸ್ಫೋಟಕ ಪತ್ತೆ ಮತ್ತು ಮನ್ಸುಖ್ ಹಿರೇನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಜಾಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಹಾಗೂ ಇತರ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಸಿಕ್ಕಿಬಿದ್ದ ವಾಜೆ ಸಹಚರ 

ಫೆ. 25ರಂದು ಮುಕೇಶ್ ಅಂಬಾನಿ ಅವರ ನಿವಾಸದ ಬಳಿ ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾಗಿತ್ತು. ಈ ಕುರಿತು ಪ್ರಕರಣದ ತನಿಖೆಯನ್ನು ಎನ್ಐಎ ನಡೆಸುತ್ತಿದೆ. ಸ್ಫೋಟಕ ತುಂಬಿದ್ದ ವಾಹನದಲ್ಲಿ ಬೆದರಿಕೆಯ ಪತ್ರವೂ ಇತ್ತು. 

ಮುಕೇಶ್ ಅವರ ನಿವಾಸ ಆಂಟಿಲಿಯಾ ಬಳಿ ಪತ್ತೆಯಾಗಿದ್ದ ವಾಹನವು ಮನ್‌ಸುಖ್ ಹಿರೇನ್ ಅವರಿಗೆ ಸೇರಿದ್ದಾಗಿತ್ತು, ಈ ವಾಹನ ಕಳವಾಗಿದ್ದ ಕುರಿತು ಕೆಲವು ದಿನಗಳ ಹಿಂದೆಯಷ್ಟೇ ಹಿರಾನ್ ಅವರು ಪೊಲೀಸರಿಗೆ ದೂರು ನೀಡಿದ್ದರು. ಇದಾದ ಕೆಲವೇ ದಿನಗಳಲ್ಲಿ ಮಾರ್ಚ್ 5ರಂದು ಹಿರಾನ್ ಅವರ ಶವ ಪತ್ತೆಯಾಗಿತ್ತು.

ಗಂಡನ ಅನುಮಾನಾಸ್ಪದ ಸಾವಿನಲ್ಲಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರ ಪಾತ್ರವಿದೆಯೆಂದು ಆರೋಪಿಸಿ ಹಿರೇನ್ ಅವರ ಪತ್ನಿ ಅನುಮಾನ ವ್ಯಕ್ತಪಡಿಸಿದ್ದರು. ಈ ಕಾರಣಕ್ಕಾಗಿ ಸಚಿನ್ ಅವರನ್ನು ಮುಂಬೈ ಅಪರಾಧ ತನಿಖಾ ದಳದಿಂದ ಹೊರಗಿಡಲಾಗಿತ್ತು.

ಪ್ರಕರಣದಲ್ಲಿ ಹಿರೇನ್ ಕೂಡ ಭಾಗಿದಾರ

ದಿಕ್ಕು ತಪ್ಪಿಸಲು ಬೆದರಿಕೆ ಪತ್ರ: ತನಿಖಾಧಿಕಾರಿಗಳ ದಿಕ್ಕು ತಪ್ಪಿಸಲು ಉಗ್ರ ಬೆದರಿಕೆ ಪತ್ರವನ್ನು ಬೇಕಂತಲೇ ಇಡಲಾಗಿತ್ತು. ಉಗ್ರ ಸಂಘಟನೆ ಜೈಶ್ ಉಲ್ ಹಿಂದ್ ಹೆಸರನ್ನು ಬಳಕೆ ಮಾಡಿಕೊಳ್ಳಲಾಗಿತ್ತು. 

ಹತ್ತು ಜನರ ತಂಡ: ಹತ್ತು ಜನರ ತಂಡಕ್ಕೆ ಸಚಿನ್ ವಾಜೆ ಮಾಸ್ಟರ್ ಮೈಂಡ್.  ಮುಕೇಶ್ ಅಂಬಾನಿ ಮನೆ ಬಳಿ ವಾಹನ ನಿಲ್ಲಿಸುವುದು ಅಲ್ಲದೇ ತನಿಖಾಧೀಕಾರಿಗಳ ದಿಕ್ಕು ತಪ್ಪಿಸಲು ಸರಿಯಾದ ಪ್ಲಾನ್ ಮಾಡಿದ್ದರು. ವಾಹನದ ಮಾಲೀಕನ ಹಿರಾನ್ ಸಾವನ್ನು ಉಗ್ರ ಸಂಘಟನೆ ಜತೆ ಲಿಂಕ್ ಮಾಡುವಂತೆ ಮಾಡಲಾಗಿತ್ತು.

ಚಾಲಕನಿಗೆ ಗೊತ್ತಿರಲಿಲ್ಲ: ಈ ಪ್ರಕರಣದಲ್ಲಿ ಬಳಕೆಯಾದ ಪೊಲೀಸ್ ವಾಹನದ ಚಾಲಕನಿಗೆ ಏನೂ ಗೊತ್ತಿರಲಿಲ್ಲ. ಅವರಿಗೆ ಇದೊಂದು ಸಿಕ್ರೇಟ್ ಆಪರೇಶನ್ ಎಂದು ನಂಬಿಸಿದ್ದರು. ಸ್ಫೋಟಕ ತುಂಬಿದ ವಾಹನ ಪತ್ತೆ ಎಂಬ ಸುದ್ದಿ ಗೊತ್ತಾದಾಗ  ಚಾಲಕ ಆಘಾತಕ್ಕೆ ಒಳಗಾಗಿದ್ದ. ಆದರೆ ಸಚಿನ್ ವಾಜೆ ಬೆದರಿಕೆಗೆ ಕಾರಣಕ್ಕೆ ಸುಮ್ಮನಾಗಿದೆ.

ವಿಸಿಟರ್ ರಿಜಿಸ್ಟರ್ ನಾಶ: ತಾನು ಮತ್ತ ತನ್ನ ಸಹಚರರ ಚಲನ ವಲನ ಯಾರಿಗೂ ತಿಳಿಯಬಾರದು ಎಂಬ ಕಾರಣಕ್ಕೆ ಸಚಿನ್ ವಾಜೆ ಕಮಿಷನರ್ ಕಚೇರಿಯ ವಿಸಿಟರ್ ದಾಖಲೆಯನ್ನು ನಾಶ ಮಾಡಿದ್ದರು.  ವಾಜೆ ಓಬೇರಾಯ್ ಹೋಟೆಲ್ ನಲ್ಲಿ ಸುಶಾಂತ್ ಖಮಾಕರ್ ಹೆಸರಿನಲ್ಲಿ ನೂರು ದಿನಕ್ಕೆ ರೂಂ ಒಂದನ್ನು ಬುಕ್ ಮಾಡಿದ್ದರು.  ಇಲ್ಲಿಂದಲೇ ಕಾರ್ಯಾಚರಣೆ ನಡೆಸಬಹುದು ಎಂದು ಭಾವಿಸಿಕೊಂಡಿದ್ದರು.

ಕಾರು ಕಳ್ಳತನ ಕೇಸು: ವಾಜೆ ನಿರ್ದೇಶನದ ಮೇರೆಗೆ ವಾಹನದ ಮಾಲೀಕ ಹಿರಾನ್ ಫೆ. 17  ರಂದು ತಮ್ಮ ಸ್ಕಾರ್ಪಿಯೋ ಕಳ್ಳತನವಾಗಿದೆ ಎಂದು ಸುಳ್ಳು ದೂರು ದಾಖಲಿಸಿದ್ದ. ಥಾಣೆಯ ತಮ್ಮ ಜಾಗಕ್ಕೆ ವಾಜೆ ಈ ವಾಹನವನ್ನು ಕೊಂಡೊಯ್ದು ಇಟ್ಟುಕೊಂಡಿದ್ದರು. ಇದಾದ  ನಂತರ ನಾನು ಈ ಪ್ರಕರಣದಲ್ಲಿ ನಿಮ್ಮ ಜತೆ ಇರಲ್ಲ ಎಂದು ಹಿರಾನ್ ಹೇಳಿದಾಗ ಆತನನ್ನು ಮುಗಿಸುವ ಸಿದ್ಧತೆ ಮಾಡಿಕೊಂಡರು. ಈ ಬಗ್ಗೆ ತಮ್ಮೊಳಗೆ ಮೇಲಿಂದ ಮೇಲೆ ಸಭೆ ಮಾಡಿದರು.

ಮಾರ್ಚ್ 3 ರಂದು ವಾಜೆ ಕ್ಯಾಶ್ ಮತ್ತು ಸಿಮ್ ತುಂಬಿದ ಬ್ಯಾಗ್ ಒಂದನ್ನು ಶರ್ಮಾಗೆ ಆತನ ಪಿಎಸ್ ಫೌಂಡೇಶನ್ ಕಚೇರಿ ಬಳಿ ನೀಡಿದರು. ಇದನ್ನು ಶರ್ಮಾ ಸಂತೋಷ್ ಶೆಲ್ಲರ್ ಗೆ ನೀಡಿ ವಾಹನ  ಮತ್ತು ಬೇಕಾದ ಜನರನ್ನು ಅರೆಂಜ್ ಮಾಡಲು ತಿಳಿಸಿದರು. ಆನಂದ್ ಜಾದವ್ ಮತ್ತು ಸತೀಶ್, ಮನೀಶ್ ಜತೆಯಾದರು.

ಹಿರಾನ್ ಕೊಲೆಗೆ  45  ಲಕ್ಷ ರೂ. ನೀಡಲಾಗಿದೆ ಎಂದು ವಿಚಾರಣೆ ವೇಳೆ ಗೊತ್ತಾಗಿದೆ.  ಮಾರ್ಚ್  4 ರಂದು ಹಿರಾನ್ ಗೆ ಕರೆ ಮಾಡಿದ ಮನೆ ನಾನು ಪೊಲೀಸ್ ಅಧಿಕಾರಿ ಮಾತನಾಡುತ್ತಿರುವುದು ಎಂದು ಜಾಗಕ್ಕೆ ಕರೆಸಿಕೊಂಡಿದ್ದಾನೆ. ನಂತರ ಹಿರಾನ್ ಅವರನ್ನು ಶೆಲ್ಲರ್ ಗೆ ಒಪ್ಪಿಸಲಾಗಿದೆ. ಅಲ್ಲಿಂದ ಚಲಿಸುವ ಕಾರ್ ನಲ್ಲಿ ಕರೆದುಕೊಂಡು ಹೋಗುವಾಗ ಕರವಸ್ತ್ರದ ಮೂಲಕ ಉಸಿರುಕಟ್ಟಿ ಸಾಯಿಸಲಾಗಿದೆ. ಥಾಣೆ ಸೇತುವೆಯೊಂದರ ಬಳಿ ಶವ ಎಸೆದು ಪರಾರಿಯಾಗಿದ್ದಾರೆ.

ಶವ ಎಸೆಯುವ ಮುನ್ನ ಹಿರಾನ್ ಮೂಮೇಲಿದ್ದ ಚಿನ್ನದ ಆಭರಣಗಳನ್ನು ಎತ್ತಿಕೊಳ್ಳಲಾಗಿದೆ. ಕ್ಯಾಶ್ ಮತ್ತು ಕ್ರೆಡಿಟ್ ಕಾರ್ಡ್ ಕಸಿದುಕೊಂಡಿದ್ದು ಶವದ ಗುರುತು ಸಿಗಬಾರದು ಎಂದು ಪ್ಲಾನ್ ಮಾಡಲಾಗಿದೆ. ಇದಾದ ಮೇಲೆ ಶರ್ಮಾ ಆಣತಿಯಂತೆ ಕೊಲೆಯಲ್ಲಿ ಭಾಗಿಯಾಗಿದ್ದ ಶೆಲ್ಲರ್, ಜಾಧವ್, ಸೋನಿ ನೇಪಾಳಕ್ಕೆ ತೆರಳಿದ್ದಾರೆ.

ತಮಗೆ ಸೇರಿದ್ದ ಬಿಲ್ಡಿಂಗ್ ಬಳಿಯ ಸಿಸಿಟಿವಿ ದೃಶ್ಯಾವಳಿಗಳನ್ನು ವಾಜೆ ನಾಶ ಮಾಡಿದ್ದಾರೆ. ನಕಲಿ ದೂರವಾಣಿ ಸಂಖ್ಯೆ ಮತ್ತು ಕಾರು ನೋಂದಣಿ ಸಂಖ್ಯೆಯನ್ನು ಬಳಕೆ ಮಾಡಿಕೊಂಡಿದ್ದರು ಎಂಬ ಅಂಶಗಳನ್ನು ಚಾರ್ಜ್ ಶೀಟ್ ಹೇಳಿದೆ. 

click me!