* ಸಮಾಜ ಸೇವಕನ ಭೀಕರ ಕೊಲೆ
* ಈ ಸಂಬಂಧ ಕಲಬುರಗಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು
* ಬರ್ಬರವಾಗಿ ಕೊಲೆಯಾದ ಸಮಾಜ ಸೇವಕ ಗುರುರಾಜ ಕುಲಕರ್ಣಿ
ಕಲಬುರಗಿ(ಸೆ.25): ಇಲ್ಲಿನ ರಿಂಗ್ ರಸ್ತೆಯ ಚಹಾ ಅಂಗಡಿ ಮುಂದೆ ಶುಕ್ರವಾರ ಸಂಭವಿಸಿರುವ ಸಮಾಜ ಸೇವಕ ಗುರುರಾಜ ಕುಲಕರ್ಣಿ ಕೊಲೆ ಪ್ರಕರಣ ಕಲಬುರಗಿ(Kalaburagi) ಪೊಲೀಸರ ಕಾರ್ಯವೈಖರಿಯ ಮೇಲೆಯೇ ಜನಸಾಮಾನ್ಯರು ಪರಾಮರ್ಶೆಗಿಳಿಯುವಂತೆ ಮಾಡಿದೆ.
ಕೆಎಚ್‌ಬಿ ಕಾಲೋನಿ ಜನ, ನಾವು ಎಲ್ಲಾರೂ ಪವನ್ ಜಾಗಿರ್ದಾರ್ ಮಾಡೋ ಕಿರಿಕ್‌ಗಳ ಬಗ್ಗೆ ಗ್ರಾಮಾಂತರ ಠಾಣಾಕ್ಕ ಹೋಗಿ ದೂರು ಕೊಟ್ರೂ ಬಿಗಿ ಕ್ರಮದ ಮಾತಿರಲಿ, ಅವನಿಗೆ ಹುಡ್ಕೋ ನೆಪದಾಗ ಅವರ ಮನ್ಯಾಗೇ ಹೋಗಿ ಚಹಾ ಕುಡ್ದು ಬಂದಾರ್ರಿ. ಹೀಂಗ ಯಾವನ ವಿರುದ್ಧ ಇಡೀ ಕಾಲೋನಿ ಮಂದಿ ದೂರ್ಯಾರೋ ಅವರ ಜತೆಗೇ ಪೊಲೀಸರು ಸಲಿಗಿ ಇದ್ರ ಅವನ ಮ್ಯಾಗಿನ ಕೇಸ್ ಹಳ್ಳ ಹಿಡಿದೇ ಇನ್ನೇನ ಆಗ್ತದ ಹೇಳ್ರಿ? ಎಂದು ಕೊಲೆಯಾದ ಗುರುರಾಜನ ಸಹೋದರಿ ಅರುಣಾ, ಸೀಮಾ, ಸಹೋದಪ ಶೇಷಗಿರಿ ಪೊಲೀಸರ(Police) ಕಾರ್ಯವೈಖರಿಯನ್ನೇ ಪ್ರಶ್ನಿಸಿದ್ದಾರೆ.
ಪಕ್ಕದಲ್ಲೇ ಸಹೋದರನ ಚಾಕು ತಿವಿದ ದೇಹ ರಕ್ತಸಿಕ್ತವಾಗಿ ಬಿದ್ದುಕೊಂಡಿದ್ದನ್ನ ನೋಡುತ್ತಲೇ ನೋವು- ಯಾತನೆ, ಸಂಕಟ, ರೋಶಾವೇಶದಿಂದ ನೊಂದ ಕುಟುಂಬದ ಮನೆ ಮಂದಿ, ಜಗಳಕ್ಕೆ ಸಾಕ್ಷಿಯಾದ ಕೆಎಚ್‌ಬಿ ಬಡಾವಣೆಯ ನಿವಾಸಿಗಳೆಲ್ಲ ನಗರ ಪೊಲಸ್ ಕಾರ್ಯವೈಖರಿಯನ್ನೇ ಟೀಕಿಸುತ್ತಿದ್ದ ನೋಟಗಳು ಘಟನಾ ಸ್ಥಳಕ್ಕೆ ಕನ್ನಡಪ್ರಭ ಭೇಟಿ ನೀಡಿದಾಗ ಕಂಡು ಬಂತು.
ಕಲಬುರಗಿ ದಿಗಂಬರನ ಸಿಟ್ಟು... ಪತ್ನಿ-ಮಗಳ ಹತ್ಯೆ ಮಾಡಿ ನೇರವಾಗಿ ಠಾಣೆಗೆ ಬಂದ!
ಆ.7ರ ಜಗಳದಿಂದಲೇ ಇಷ್ಟೆಲ್ಲಾ ರಾದ್ಧಾಂತ:
ಕೊಲೆಯಾದ ಗುರುರಾಜ ಕುಲಕರ್ಣಿ ಸಹೋದರಿ ಮನೆ, ಕೊಲೆ (Murder) ಆರೋಪ ಹೊತ್ತಿರುವ ಪವನ್ ಜಾಗಿರ್ದಾರ್ ಮನೆ ಅಕ್ಕಪಕ್ಕದಲ್ಲೇ ಇರೋದು. ಗುರುರಾಜನ ಸಹೋದರಿ ಮಗಳು ನಾಯಿಗೆ ಬಿಸ್ಕತ್ತು ಹಾಕಲು ಹೋದಾಗ ಪವನ್ ಕಲ್ಲೆಸೆದಿದ್ದಾನೆ. ಅದು ಹೋಗಿ ಗುರುನ ಸಹೋದರಿಗೆ ತಾಕಿದೆ. ಇಲ್ಲೇ ಜಗಳ ಮೊಳಕೆಯೊಡಿದಿದ್ದಲ್ಲದೆ ಹಾಗೇ ಬೆಳೆದು ಕೊಲೆಯಲ್ಲಿ ಅಂತ್ಯ ಕಂಡಿದೆ. ನಾಯಿಗೆ ಕಲ್ಲೆಸೆದ ರಾದ್ದಾಂತ ವಿಚಾರ ಗುರುನ ದೊಡ್ಡಣ್ಣ ಶೇಷಗಿರಿ ಗಮನಕ್ಕೆ ಬಂದಾಗ ಅವರು ಪವನ್‌ಗೆ ಕೇಳಿದ್ದಾರಲ್ಲದೆ ಹೀಗೆಲ್ಲ ನೆರೆ ಮನೆ ಮಂದಿ ಜಗಳ ಮಾಡೋದು ಸರಿಯಲ್ಲವೆಂಬ ಬುದ್ಧಿವಾದವನ್ನೂ ಹೇಳಿದ್ದಾರೆ.
ಗ್ರಾಮಾಂತರ ಠಾಣೆ ಸಿಪಿಐ ನಮ್ಮನ್ನೇ ಗದರಿದ್ರು:
ಪದೇ ಪದೇ ಕ್ರಮಕ್ಕೆ ಆಗ್ರಹಿಸಿದಾಗ ಗ್ರಾಮಾಂತರ ಠಾಣೆ ಸಿಪಿಐ ತಮ್ಮನ್ನೇ ಗದರಿದ ಪ್ರಸಂಗವನ್ನು ನೆನೆದು ಕಣ್ಣೀರು ಹಾಕಿದರು. ಪೊಲೀಸ್ರಿಗೂ ಒಂದು ಚೌಕಟ್ಟಿರ್ತದ. ಅದರಲ್ಲೇ ನಾವು ಕೆಲ್ಸ ಮಾಡಬೇಕು. ನೀವೇ ಹಿಡದು ಕೊಡರಿ ಆತನ್ನ ಎಂದು ದಬಾಯಿಸಿದ್ರು, ನಾವು ಹಿಡಿಯೋದಿದ್ರ ಇವರ ಬಳ್ಯಾಕ ಯಾಕ ಹೋಗಬೇಕಿತ್ತು? ಪೊಲೀಸರು ನಮಗೆ ಈ ಕೇಸ್‌ನಲ್ಲಿ ನೆರವು ನೀಡೋ ಬದಲು ಗದರುತ್ತಲೇ ಅಸಹಕಾರ ತೋರಿದ್ರು, ಕಮೀಷ್ನರ್ ಕಚೇರಿಗೆ ಹೋದ್ರೆ ಅಲ್ಲಿ ಸಾಹೇಬರ ಭೇಟಿಗೂ ಅವಕಾಶ ಸಿಗಲಿಲ್ಲ ಎಂದು ಶೇಷಗಿರಿ ಮಾಧ್ಯಮದವರ ಮುಂದೆ ಕಣ್ಣೀರಿಟ್ಟಾಗ ಸಿಪಿಐ ಬಾಸು ಚವ್ಹಾಣ್, ಡಿವೈಎಸ್ಪಿ ಜೆಎಚ್ ಇನಾಮದಾರ್, ಡಿಸಿಪಿ ಶ್ರೀಕಾಂತ ಕಟ್ಟೀಮನಿ, ಸಂಚಾರ ವಿಭಾಗದ ಸುಧಾ ಅದಿ ಇದ್ದರು.
ಪೊಲೀಸರ ವಿರುದ್ಧ ಜನರಿಂದ ಧಿಕ್ಕಾರದ ಘೋಷಣೆ:
ಆರೋಪಿಗಳ ಬಂಧಿಸದ ಹೊರತು ಕೊಲೆಯಾದ ಸ್ಥಳದಿಂದ ಗುರುರಾಜನ ದೇಹ ಕದಲಲು ಬಿಡೋದಿಲ್ಲವೆಂಬ ಮನೆ ಮಂದಿ ಪಟ್ಟಿಗೆ ಪೊಲೀಸರು ಮೌನವಾಗಿದ್ದರು. ಸುದ್ದಿ ತಿಳಿದು ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲ್, ಡಿಸಿಪಿ ಶ್ರೀನಿವಾಸುಲು, ಶ್ರೀಕಾಂತ ಕಟ್ಟೀಮನಿ ಆಗಮಿಸುತ್ತಿದ್ದಂತೆಯೇ ಸೇರಿದ್ದ ಸಾವಿರಾರು ಜ ಜೀವ ಬೆದರಿಕೆ ಇದೆ ಅಂತ ದೂರು ಕೊಟ್ಟರೂ ಪೊಲೀಸರು ಕೊಲೆ ಘಟನೆ ನಿಲ್ಲಿಸಲಾಗಲಿಲ್ಲವೆಂದರೆ ಇವರು ಯಾಕೆ ಪೊಲೀಸ್ ಕೆಲ್ಸಕ್ಕಿರಬೇಕು. ನಮಗಾದ ತೊಂದರೆ ಹೇಳಿದಾಕ್ಷಣ ಯಾವ ಕಲಂ ಹಚ್ಚಿದ್ರ ಕ್ರಿಮಿನಲ್‌ಗಳ(Criminal) ಬೆಂಡೆತ್ತಬಹುದೆಂಬೋದು ಪೊಲೀಸರು ಚಿಂತನೆ ಮಾಡಬೇಕು, ನಮಗೇ ಕೇಳಿದ್ರ ನಾವೇನು ಹೇಳೋದು, ಇವರಿಗೆ ಕೈಲಾಗೋದಿಲ್ಲವೆಂದರೆ ನಮಗೆ ಜೀಪ್ ಕೊಡ್ರಿ, ನಾನೇ ಹೋಗಿ ಆರೋಪಿಗಳ ಹಿಡಿದು ಸದೆಬಡಿತೀವಿ ಮಹಿಳಾ ಹೋರಾಟಗಾರ್ತಿ ರಾಜಶ್ರೀ ದೇಶಮುಖ ಅವರು ಹೇಳಿದ್ದಾರೆ.
ಕಲಬುರಗಿ: ವೃದ್ಧೆಗೆ ಮಚ್ಚಿನಿಂದ ಗಾಯಗೊಳಿಸಿದ ಕಳ್ಳ
ಇದೊಂದು ಹೀನ ಕೃತ್ಯ, ಆರೋಪಿಗಳನ್ನು ಪತ್ತೆ ಹಚ್ಚಿ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಭರವಸೆ ಪೊಲೀಸರು ನೀಡಿದ್ದಾರೆ. 24 ಗಂಟೆಯಲ್ಲಿ ಕೊಲೆಗಾರರ ಬಂಧನವಾಗದೆ ಹೋದಲ್ಲಿ ನಾವು ಪೊಲೀಸ್ ಕಮಿಷ್ನರ್ ಕಚೇರಿ ಮುಂದೆ ಸೇರಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಕಲಬುರಗಿ ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲ್ ತಿಳಿಸಿದ್ದಾರೆ.
ಸಮಾಜ ಸೇವಕನ ಭೀಕರ ಕೊಲೆ
ಸಮಾಜ ಸೇವಕ, ಕೊರೋನಾ ವಾರಿಯರ್ ಗುರುರಾಜ ಕುಲಕರ್ಣಿ ಈತನನ್ನು ಕಲ್ಲಿನಿಂದ ಜಜ್ಜಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ರಿಂಗ್ ರಸ್ತೆಯ ಹೈಕೋರ್ಟ್ ಪೀಠದ ಮುಂದಿರುವ ಅಕ್ಕಮಹಾದೇವಿ ಕಾಲೋನಿಯಲ್ಲಿ ತಡರಾತ್ರಿ ನಡೆದಿದೆ.
ಘಟನೆಯಲ್ಲಿ ಸಮಾಜ ಸೇವಕ ಗುರುರಾಜ ಕುಲಕರ್ಣಿ (35) ಬರ್ಬರವಾಗಿ ಕೊಲೆಯಾಗಿದ್ದಾನೆ. ಕಳೆದ ಕೆಲವು ದಿನಗಳ ಹಿಂದೆ ಗುರು ರಾಜ ಹಾಗೂ ಪಕ್ಕದ ಮನೆಯ ಪವನ್ ಜಾಗಿರ್ದಾರ್ ನಡುವೆ ಗಲಾಟೆ ನಡೆದಿತ್ತು. ಈ ಗಲಾಟೆಯೇ ಅನೇಕ ತಿರುವುಗಳನ್ನು ಪಡೆದುಕೊಂಡು ಕೊಲೆಯಲ್ಲಿ ಪರ್ಯವಸಾನಗೊಂಡಿದೆ ಎಂದು ಹೇಳಲಾಗುತ್ತಿದೆ.
ಮೇಲ್ನೋಟಕ್ಕೆ ಇದೊಂದು ನಾಯಿಗೆ ಕಲ್ಲು ಹೊಡೆದಂತಹ ವಿಚಾರವಾಗಿ ನಡೆದ ಜಗಳ ಎನ್ನಲಾಗುತ್ತಿದೆ. ಗುರುರಾಜ್ ಮನೆಯಲ್ಲಿನ ನಾಯಿಗೆ ಅವರ ಸಹೋದರಿ ಮಗಳು ಬಿಸ್ಕತ್ ಹಾಕಿದಾಗೆಲ್ಲಾ ಆ ನಾಯಿ ಹಾಗೇ ಸುತ್ತಾಡಿ ಕೊಂಡಿರುವ ಪಕ್ಕದ ಮನೆಯ ಪವನ್ ಕಲ್ಲು ಹೊಡೆಯುತ್ತಿದ್ದ. ಇದೇ ವಿಚಾರಕ್ಕೆ ಎರಡು ತಿಂಗಳ ಹಿಂದೆ ಗಲಾಟೆ ಕೂಡ ನಡೆದಿತ್ತು ಎಂದು ಹೇಳಲಾಗುತ್ತಿದೆ. ಆದರೆ ನಾಯಿಗೆ ಕಲ್ಲು ಹೊಡೆದ ವಿಚಾರ ಒಂದೇ ಕೊಲೆಗೆ ಕಾರಣವಲ್ಲ, ಕೊಲೆಗೆ ಬೇರೆ ಕಾರಣ ಇದೆ ಎಂಬ ಅನುಮಾನವೂ ವ್ಯಕ್ತವಾಗಿದೆ.
ಹತ್ಯೆಯಾದ ಗುರುರಾಜ ನಿನ್ನೆ ರಾತ್ರಿ 11 ಗಟೆಗೆ ಮತನ್ನ ಮನೆಯಿಂದ ಹೊರಗೆ ಹೋಗಿದ್ದಾನೆ. ಪವನ್ ಹಾಗೂ ಆತನ ಸ್ನೇಹಿತರು ಗುರುರಾಜನನ್ನು ಸಂಧಾನಕ್ಕಾಗಿ ಕರೆಯಿಸಿಕೊಂಡಿದ್ದರು. ಈ ಸಂಗತಿ ಮನೆಯಲ್ಲಿ ಹೇಳಿಯೇ ಗುರುರಾಜ ಹೊರಗೆ ಹೋಗಿದ್ದ, ಆದರೆ ಬೆಳಗಿನ ಜಾವ ಆತ ಕೊಲೆಯಾಗಿರುವ ಸುದ್ದಿ ಕೇಳಿ ಶಾಕ್ ಆಯಿತೆಂದು ಮನೆ ಮಂದಿ ಕಣ್ಣೀರಿಡುತ್ತಿದ್ದಾರೆ. ಗುರುರಾಜನನ್ನು ಸಂಧಾನಕ್ಕೆ ಕರೆದಿದ್ದ ಪವನ್ ಹಾಗೂ ಆತನ ಸ್ನೇಹಿತರ ನಡುವೆ ಮಾತಿಗೆ ಮಾತು ಬೆಳೆದು ಜಗಳವಾಗಿರಬಹುದು. ಅದರಲ್ಲೇ ಅವರೆಲ್ಲರೂ ಸೇರಿಕೊಂಡು ಪವನನನ್ನು ಕೊಲೆ ಮಾಡಿರಬಹುದೆಂದು ಮನೆಮಂದಿ ರೋದಿಸುತ್ತಿದ್ದಾರೆ. ಕೊಲೆಯಾದ ರಕ್ತಸಿಕ್ತ ಸ್ಥಿತಿಯಲ್ಲಿದ್ದ ಗುರುರಾಜನ ಶವ ಹೈಕೋರ್ಟ್ ಮುಂದಿನ ಅಕ್ಕ ಮಹಾದೇವಿ ರಸ್ತೆಯಲ್ಲಿನ ಚಾಯ್ ಹೋಟಲ್ ಒಳಗೆ ಬಿದ್ದಿತ್ತು.
ಈ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುರುರಾಜನ ಕೊಲೆಗೆ ಪೊಲೀಸರ ಅಲಕ್ಷತನವೇ ಕಾರಣ. ಪವನ್ ಎಂಬಾತ ಜಗಳವಾಡುತ್ತಿದ್ದಾನೆ, ಮನೆ ಹೊಕ್ಕು ನಮಗೆಲ್ಲ ಕೊಲೆ ಮಾಡುವ ಬೆದರಿಕೆ ಹಾಕಿದ್ದ ಸಂಗತಿ ಅದಾಗಲೇ ಪೊಲೀಸರಿಗೆ ಹೇಳಿದ್ದೇವು. ಜೊತೆಗೇ ಕೊಲೆಯಾದ ಗುರುರಾಜನ ಸಹೋದರ ಶೇಷಗಿರಿ ಇವರಿಗೆ ಪವನ್ ಅದಾಗಲೇ ಬ್ಯಾಟ್‌ನಿಂದ ಹೊಡೆದು ಕಾಲು ಮುರಿದಿದ್ದಾನೆ.
ಈ ಪ್ರಕರಣದಲ್ಲಿಯೂ ನಾವು ಪೊಲೀಸರ ಮೊರೆ ಹೋದರೂ ಅಲ್ಲಿಂದ ಸಕಾಲಕ್ಕೆ ನೆರವು ದೊರಕಿಲ್ಲವೆಂದು ಕೊಲೆಯಾದ ಗುರುರಾಜ ಕುಟುಂಬದ ಸದಸ್ಯರು ರೋದಿಸಿ ಪೊಲೀಸರ ಮೇಲೆ ಆರೋಪಗಳ ಸುರಿಮಳೆ ಮಾಡಿದ್ದಾರೆ.