ಶಾಂಪೇನ್‌ ಬಾಟಲ್‌ನಲ್ಲಿತ್ತು 2.5 ಕೋಟಿ ಡ್ರಗ್‌..!

By Kannadaprabha NewsFirst Published Sep 25, 2021, 7:39 AM IST
Highlights

*  ಗೋವಾದಿಂದ ಬೆಂಗಳೂರಿಗೆ ತಂದು ಮಾರಾಟ
*  ಐವರಿ ಕೋಸ್ಟಲ್‌ ಪ್ರಜೆಯ ಕರಾಮತ್ತು
*  ಶಾಂಪೇನ್‌ ಬಾಟಲಿ 60ರಿಂದ 70 ಲಕ್ಷಕ್ಕೆ ಮಾರಾಟ 
 

ಬೆಂಗಳೂರು(ಸೆ.25): ಶಾಂಪೇನ್‌ ಬಾಟಲಿಗಳಲ್ಲಿ (Champagne Bottle) ಮಾದಕವಸ್ತು ತುಂಬಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಯೊಬ್ಬನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಐವರಿ ಕೋಸ್ಟಲ್‌ ದೇಶದ ದೋಸು ಖಲೀಫ್‌ (28) ಬಂಧಿತ. ಆರೋಪಿಯಿಂದ 2.5 ಕೋಟಿ ಮೌಲ್ಯದ 2,500 ಗ್ರಾಂ ತೂಕದ ಎಂಡಿಎಂಎ ಕ್ರಿಸ್ಟಲ್‌ ಪೌಡರ್‌ ಎಂಬ ಮಾದಕ ವಸ್ತು(Drugs), ಮೊಬೈಲ್‌, ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಕಳೆದ ಮೂರು ವರ್ಷಗಳ ಹಿಂದೆ ಆರೋಪಿ ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದಿದ್ದು, ಆತನ ಬಳಿ ಯಾವುದೇ ವೀಸಾ ಮತ್ತು ಪಾಸ್‌ಪೋರ್ಟ್‌ ದೊರೆತಿಲ್ಲ. ಆತನ ವಿರುದ್ಧ ವಿದೇಶಿ ಕಾಯ್ದೆಯಡಿ ಕೂಡ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಆರೋಪಿಯು ಶಾಂಪೇನ್‌ ಬಾಟಲ್‌ನಲ್ಲಿ ಗೋವಾದಿಂದ(Goa) ಮಾದಕ ವಸ್ತು ಎಂಡಿಎಂಎ ಕ್ರಿಸ್ಟಲ್‌ಗಳನ್ನು ತುಂಬಿಕೊಂಡು ಗೋವಾದಿಂದ ನಗರಕ್ಕೆ ತರುತ್ತಿದ್ದ. ಬಳಿಕ ನಗರದಲ್ಲಿ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ವಿದ್ಯಾರ್ಥಿಗಳಿಗೆ, ಉದ್ಯಮಿಗಳಿಗೆ ಮಾರಾಟ ಮಾಡುತ್ತಿದ್ದ. ಆರೋಪಿ ಗೋವಾದಲ್ಲಿ ಯಾರ ಬಳಿ ಮಾದಕ ವಸ್ತು ಖರೀದಿ ಮಾಡುತ್ತಿದ್ದ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಎಚ್‌ಬಿಆರ್‌ ಲೇಔಟ್‌ನ ಯೂಸಫ್‌ ಮಸೀದಿ ಬಳಿ ಸವೀರ್‍ಸ್‌ ರಸ್ತೆಯಲ್ಲಿ ಆರೋಪಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಇನ್‌ಸ್ಪೆಕ್ಟರ್‌ ಪ್ರಕಾಶ್‌ ಹಾಗೂ ಸಬ್‌ ಇನ್‌ಸ್ಪೆಕ್ಟರ್‌ ಮೊಹಮ್ಮದ್‌ ಅಲಿ ಇಮ್ರಾನ್‌ ಅವರ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ.

ಮನೆಯಲ್ಲೇ ತಯಾರಾಗ್ತಿತ್ತು ಡ್ರಗ್ಸ್; ಪೊಲೀಸರಿಂದ ರೋಚಕ ಕಾರ್ಯಾಚರಣೆ

ಆರೋಪಿ ಈ ಹಿಂದೆ 2019ರಲ್ಲಿ ಬಾಗಲೂರು ಹಾಗೂ ಕಳೆದ ವರ್ಷ ಕೋಣನಕುಂಟೆ ಪೊಲೀಸರಿಂದ(Police) ಮಾದಕ ವಸ್ತು ಮಾರಾಟದ ವೇಳೆ ಬಂಧನಕ್ಕೆ ಒಳಗಾಗಿದ್ದ. ಜೈಲಿನಿಂದ ಬಿಡುಗಡೆಗೊಂಡ ಬಳಿಕವೂ ಕೃತ್ಯ ಮುಂದುವರೆಸಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದರು.

60ರಿಂದ 70 ಲಕ್ಷ: 

ಆರೋಪಿ ಒಂದು ಮಾದಕ ವಸ್ತು ಇದ್ದ ಶಾಂಪೇನ್‌ ಬಾಟಲಿಯನ್ನು 60ರಿಂದ 70 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದ. ಬಳಿಕ ಇತರ ಪೆಡ್ಲರ್‌ಗಳು ಗ್ರಾಂ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದರು. ಈತನೊಂದಿಗೆ ಇನ್ನು ಹಲವು ಮಂದಿ ಭಾಗಿಯಾಗಿರುವ ಶಂಕೆ ಇದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ. ಇನ್ನು ವಿದೇಶಿ ಪ್ರಜೆಯ ಪಾಸ್‌ಪೋರ್ಟ್‌ ಮತ್ತು ವೀಸಾ ಪರಿಶೀಲಿಸದೆ ಬಾಡಿಗೆ ನೀಡಿರುವ ಮನೆ ಮಾಲೀಕನಿಗೆ ನೋಟಿಸ್‌ ನೀಡಲಾಗಿದ್ದು, ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದರು.
 

click me!