* ತೆರೆ ಎಳೆಯಲು ಲಕ್ಷಾಂತರ ರು.ಗಳ ಹಣದ ಆಮಿಷ?
* ಯಾದಗಿರಿಯಲ್ಲಿ ಬೆಂಗಳೂರು ಮೂಲದ ನವವಿವಾಹಿತೆ ಸಾವು
* ನೇಣುಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದ ಮಹಿಳೆ
ಯಾದಗಿರಿ(ಸೆ.25): ಕೇವಲ ಐದಾರು ತಿಂಗಳ ಹಿಂದಷ್ಟೇ ಇಲ್ಲಿನ ಶಾಲಾ ಶಿಕ್ಷಕನೊಂದಿಗೆ ವಿವಾಹವಾಗಿದ್ದ, ಬೆಂಗಳೂರು(Bengaluru) ಮೂಲದ ಗೃಹಿಣಿಯೊಬ್ಬಳ ಅನುಮಾನಾಸ್ಪದ ಸಾವು ಪ್ರಕರಣ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಯಾದಗಿರಿ(Yadgir) ನಗರದ ಮಾತೆ ಮಾಣಿಕೇಶ್ವರಿ ಕಾಲೋನಿಯಲ್ಲಿ ವಾಸವಿದ್ದ 25 ವರ್ಷದ ನವವಿವಾಹಿತೆಯೊಬ್ಬಳು ಸೆ.23ರ ಸಂಜೆ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಳು. ಕೋಲಾರ ಜಿಲ್ಲೆ ಮುಳಬಾಗಿಲು ಮೂಲದ ಈಕೆಯ ಪತಿ ಯಾದಗಿರಿ ಸಮೀಪದ ಸರ್ಕಾರಿ ಶಾಲೆಯೊಂದರಲ್ಲಿ ಶಿಕ್ಷಕರೆಂದು ಕಾರ್ಯನಿರ್ವಹಿಸುತ್ತಿದ್ದಾರೆ. ನವವಿವಾಹಿತೆಯ ಅನುಮಾನಾಸ್ಪದ ಸಾವಿನ ಪ್ರಕರಣದ ಮಾಹಿತಿ ಅರಿಯುತ್ತಲೇ ಕಾರ್ಯಪ್ರವೃತ್ತರಾದ ಪೊಲೀಸರು(Police) ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
undefined
ಇತ್ತ, ಪಾಲಕರು ಹಾಗೂ ಸಂಬಂಧಿಕರಿಗೆ ಈ ಮಾಹಿತಿ ದೊರೆತಾಗ ಮಹಿಳಾ ಪೊಲೀಸ್ ಠಾಣೆಗೆ ಆಗಮಿಸಿದ ಅವರೆಲ್ಲರ ಆಕ್ರಂದನ ಮುಗಿಲು ಮುಟ್ಟಿತ್ತು. ಅಲ್ಲಿದ್ದ ಮಾಧ್ಯಮಗಳೆದುರು ಆಗ ಪ್ರತಿಕ್ರಿಯಿಸಿದ್ದ ಮೃತಳ ಸಮೀಪದ ಸಂಬಂಧಿಕರು, ಶಿಕ್ಷಕ ಪತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಆತ್ಮಹತ್ಯೆಯಲ್ಲ, ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಕಿಡಿ ಕಾರಿದ್ದರು.
ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ನೋಡಿ ಹೆಂಡ್ತಿ ಹತ್ಯೆಗೆ ಸಂಚು..!
ಪತಿಯ ನಡವಳಿಕೆಯ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದ ಆ ಸಂಬಂಧಿಕರು, ತಮ್ಮ ಮಗುವಿಗೆ (ನವವಿವಾಹಿತೆ) ಕಿರುಕುಳ ನೀಡಿ ಕೊಲೆ ಮಾಡಲಾಗಿದೆ. ಸರ್ಕಾರಿ ನೌಕರನೆಂಬ ಕಾರಣಕ್ಕೆ ಅದ್ಧೂರಿ ಮದುವೆ ಮಾಡಿದ್ದೆವು, ಮುಗ್ಧ ಜೀವ ಬಲಿಯಾಯ್ತು ಎಂದೆಲ್ಲಾ ಆರೋಪಿಸಿದ್ದರು. ಆದರೆ, ಬೆಳಿಗ್ಗೆಯಿಂದ ನಡೆದಿದ್ದ ಈ ಬೆಳವಣಿಗೆಗಳು ಸಂಜೆಯ ವೇಳೆ ಕರಗತೊಡ ಗಿದ್ದವು. ಶಿಕ್ಷಕ ಪತಿ ವಿರುದ್ಧ ದೂರು ನೀಡದಂತೆ, ಇದೊಂದು ಸಹಜ ಆತ್ಮಹತ್ಯೆ ಎಂಬಂತೆ ದೂರು ದಾಖಲಿಸುವಂತೆ ಪಾಲಕರಿಗೆ ಒತ್ತಡ ಹೇರುತ್ತಿದ್ದ ಕೆಲವರು, ಮನವೊಲೈಕೆಗೆ ಯತ್ನಿಸುತ್ತಿರುವುದು ಕಂಡುಬಂತು. ಶಿಕ್ಷಕರ ಸಂಘದ ಕೆಲವು ಮುಖಂಡರು, ರಾಜಕೀಯ ಪ್ರಭಾವಿಗಳು ಪಾಲಕರ ಜೊತೆಗೆ ಮಾತು ಕತೆಗೆ ನಿಂತಂತಿತ್ತು. ಸುಮಾರು 10 ರಿಂದ 12 ಲಕ್ಷ ರು.ಗಳ ಹಣದ ಮಾತುಕತೆ ನಡೆದು, ಪತಿಯ ವಿರುದ್ಧ ಮುಂದಿನ ದಿನಗಳಲ್ಲಿ ದೂರು ನೀಡುವುದಿಲ್ಲ ಎಂಬುದಾಗಿ ಬಾಂಡ್ ಪೇಪರಿನಲ್ಲಿ ಬರೆಯಿಸಿಕೊಂಡ ಒಪ್ಪಂದ ನಡೆದು, ಕೊನೆಗೆ ನಗರ ಠಾಣೆಯಲ್ಲಿ ಆತ್ಮಹತ್ಯೆ ದೂರು ದಾಖಲಿಸಲಾಯಿತು ಎಂಬ ಮಾತುಗಳು ಸಾರ್ವಜನಿಕರ ಹಾಗೂ ಶಿಕ್ಷಕರ ವಲಯದಲ್ಲಿ ಕೇಳಿಬರುತ್ತಿವೆ.
ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಒಂದೆಡೆ ಮೃತದೇಹ ಇದ್ದರೆ, ಇನ್ನೊಂದೆಡೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಒಪ್ಪಂದ ಮಾತುಕತೆಗಳು ಬಿರುಸಾಗಿ ನಡೆದಿದ್ದವು ಎಂದು ಕನ್ನಡಪ್ರಭಕ್ಕೆ ತಿಳಿಸಿದ ಹೆಸರೇಳಲಿಚ್ಛಿಸದ ಶಿಕ್ಷಕರೊಬ್ಬರು, ಇಂತಹ ಬೆಳವಣಿಗೆ ಮುಂದಿನ ದಿನಗಳಲ್ಲಿ ಮತ್ತಷ್ಟೂ ಅಪರಾಧ ಕೃತ್ಯಗಳಿಗೆ ಕುಮ್ಮಕ್ಕು ನೀಡಿದಂತೆ ಎಂದಿದ್ದರು. ಇತ್ತ, ಪಾಲಕರು ದೂರು ನೀಡಲು ಬರುತ್ತಾರೆಂದು ಗಂಟೆಗಟ್ಟಲೇ ಕಾಯ್ದ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ಈ ಎಲ್ಲ ಬೆಳವಣಿಗೆಗೆಗಳಿಗೆ ಮೂಕ ಪ್ರೇಕ್ಷರಂತಾಗಬೇಕಾಗಿತ್ತು. ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಗಳು ಮನನೊಂದು ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ, ಮಗಳ ಸಾವಿನಲ್ಲಿ ಯಾವ ಸಂಶಯವೂ ಇಲ್ಲ ಎಂದುಪಾಲಕರು ದೂರು ನೀಡಿದ್ದಾರೆ. (ಪ್ರಕರಣ ಸಂ. ಯುಡಿಆರ್ : 0014/2021).
ನವವಿವಾಹಿತೆಯ ಅನುಮಾನಾಸ್ಪದ ಸಾವು(Dead) ಪ್ರಕರಣದ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು. ಅದ್ಯಾವುದೋ ಒತ್ತಡಕ್ಕೆ ಮಣಿದು ಪ್ರಕರಣದ ದಾರಿ ತಪ್ಪಿಸುವಂತಿರಬಾರದು ಎಂದು ಕಲಬುರಗಿ ಜನವಾದಿ ಮಹಿಳಾ ಸಂಘಟನೆ ಕೆ.ನೀಲಾ ತಿಳಿಸಿದ್ದಾರೆ.