ವಿಡಿಯೋಗಾಗಿ ಮನೆಯಲ್ಲಿ ಹಾವು ಸಾಕಿದ youtuber ಬಂಧನ

By Anusha KbFirst Published Aug 24, 2022, 4:58 PM IST
Highlights

ಫೇಮಸ್‌ ಆಗುವ ಹುಚ್ಚಿನಿಂದ ಮನೆಯಲ್ಲೇ ಆರು ಹಾವು ಹಾಗೂ ಊಸರವಳ್ಳಿಗಳನ್ನು ಸಾಕಿಕೊಂಡಿದ್ದ ಅವುಗಳನ್ನು ಬಳಸಿಕೊಂಡು ವಿಡಿಯೋ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 

ಎಂಥಾ ವಿಚಿತ್ರ ಅಲ್ವಾ, ಇದು ಸಾಮಾಜಿಕ ಜಾಲತಾಣದ ಯುಗ. ಇದು ಎಷ್ಟೊಂದು ಪ್ರಭಾವಶಾಲಿಯಾಗಿದೆ ಎಂದರೆ ಇಲ್ಲಿ ಫೇಮಸ್‌ ಆಗುವ ಸಲುವಾಗಿ ಯುವ ಸಮೂಹ ಏನೇನೋ ಕಿತಾಪತಿಗಳನ್ನು ಮಾಡುತ್ತಾರೆ. ಜೊತೆಗೆ ತಮ್ಮ ಜೀವಕ್ಕೂ ಸಂಚಾಕಾರ ತಂದುಕೊಳ್ಳುತ್ತಾರೆ. ಫೇಮಸ್ ಆಗುವ ಸಲುವಾಗಿ ವಿಚಿತ್ರವಾಗಿ ಸ್ಟಂಟ್ ಮಾಡಲು ಹೋಗಿ ಪ್ರಾಣಿ ಕಳೆದುಕೊಂಡವರಿದ್ದಾರೆ. ಜೊತೆಗೆ ಅಪಾಯಕಾರಿ ಸ್ಥಳಗಳಲ್ಲಿ ವಿಡಿಯೋ ಮಾಡಲು ಹೋಗಿ ಪ್ರಾಣಕ್ಕೆ ಕಂಟಕ ತಂದು ಕೊಟ್ಟಿದ್ದಾರೆ. ಹೀಗೆ ಫೇಮಸ್‌ ಆಗುವ ಹುಚ್ಚಿನಿಂದ ಮನೆಯಲ್ಲೇ ಆರು ಹಾವು ಹಾಗೂ ಊಸರವಳ್ಳಿಗಳನ್ನು ಸಾಕಿಕೊಂಡಿದ್ದ ಅವುಗಳನ್ನು ಬಳಸಿಕೊಂಡು ವಿಡಿಯೋ ಮಾಡುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. 

31 ವರ್ಷದ ಯೂಟ್ಯೂಬರ್‌ ರಾಮಚಂದ್ರ ರಾಣಾ ಬಂಧಿತ ವ್ಯಕ್ತಿ. ಒಡಿಶಾದ ಸಂಬಾಲ್‌ಪುರ ಜಿಲ್ಲೆಯ ಕಂರಂಜುಲಾ ಪ್ರದೇಶದಲ್ಲಿ ಈತನನ್ನು ಒಡಿಶಾದ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಈತ ವಿಡಿಯೋ ಮಾಡುವುದಕ್ಕೋಸ್ಕರ ಮನೆಯಲ್ಲಿ ಆರು ಹಾವುಗಳನ್ನು ಸಾಕಿದ್ದ. ಇವುಗಳಲ್ಲಿ ನಾಗರಹಾವುಗಳು ಇದ್ದವು, ಜೊತೆಗೆ ಈತ ನಾಲ್ಕು ಊಸರವಳ್ಳಿಗಳನ್ನು ಕೂಡ ತನ್ನೊಂದಿಗೆ ಇರಿಸಿಕೊಂಡಿದ್ದ. ಆರೋಪಿ ರಾಮಚಂದ್ರ ರಾಣಾ, ಪಶ್ಚಿಮ ಒಡಿಶಾದ ರೆಡಾಖೋಲೆ ಪ್ರದೇಶದ ನಿವಾಸಿ. ಈತ ಜನರನ್ನು ಸೆಳೆಯುವ ಸಲುವಾಗಿ ತನ್ನ ವಿಡಿಯೋಗಳಲ್ಲಿ ಹಾವುಗಳು, ಊಸರವಳ್ಳಿಗಳು ಹಾಗೂ ಇತರ ಸರೀಸೃಪಗಳು ಹಾಗೂ ವನ್ಯಜೀವಿಗಳನ್ನು ಬಳಸಿಕೊಂಡಿದ್ದ. ಈತನಿಗೆ ಈತನ ಯುಟ್ಯೂಬ್ ಚಾನಲ್‌ನಲ್ಲಿ ಒಂದು ಲಕ್ಷ ಜನ ಸಬ್‌ಸ್ಕ್ರೈಬರ್‌ಗಳಿದ್ದಾರೆ. 

ಉತ್ತರಕನ್ನಡ: ಕುಮಟಾದಲ್ಲಿ ಅಪರೂಪದ ಬಿಳಿ ಹೆಬ್ಬಾವು ಪತ್ತೆ

ಇನ್ನು ಬಂಧನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಾಣಾ ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಅಲ್ಲದೇ ಈ ವಿಭಿನ್ನ ಪ್ರಬೇಧಗಳ ಸರೀಸೃಪಗಳು ಮಳೆಗಾಲದಲ್ಲಿ ವಿವಿಧ ಸ್ಥಳಗಳಲ್ಲಿ ತನಗೆ ಸಿಕ್ಕಿದ್ದಾಗಿ ಈತ ಹೇಳಿಕೊಂಡಿದ್ದಾನೆ. ಅಲ್ಲದೇ ಕೆಲವು ವಿಡಿಯೋ ಮಾಡಿದ ಬಳಿಕ ಈ ಜೀವಿಗಳನ್ನು ಕಾಡಿಗೆ ಬಿಡುತ್ತಿದೆ ಎಂದು ಹೇಳಿಕೊಂಡಿದ್ದಾನೆ. ಆದಾಗ್ಯೂ ವನ್ಯಜೀವಿ ಮಾರಾಟ ದಂಧೆಯಲ್ಲಿ ಭಾಗಿಯಾದ ಆರೋಪವನ್ನು ನಿರಾಕರಿಸಿದ್ದಾನೆ.

ಈತ ವನ್ಯಜೀವಿಗಳನ್ನು ಬಳಸಿಕೊಂಡು ವಿಡಿಯೋ ಮಾಡುತ್ತಿರುವ ಬಗ್ಗೆ ಅರಣ್ಯ ಸಿಬ್ಬಂದಿಗೆ ಮಾಹಿತಿ ಬಂದ ಹಿನ್ನೆಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಹಾವು ಊಸರವಳ್ಳಿ ಮುಂತಾದ ಸರೀಸೃಪಗಳನ್ನು ವಶಕ್ಕೆ ಪಡೆದಿದ್ದಾರೆ. ನಾವು ಒಂದು ಲಕ್ಷ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ಯೂಟ್ಯೂಬ್‌ ಚಾನಲ್‌ ನಡೆಸುತ್ತಿದ್ದ ಯುವಕನನ್ನು ಬಂಧಿಸಿದ್ದೇವೆ. ಆತನಲ್ಲಿ ಈ ವನ್ಯಜೀವಿಗಳ ಬಗ್ಗೆ ಕೇಳಿದಾಗ ಆತ ನಮ್ಮನ್ನು ಆತನ ಮನೆಗೆ ಕರೆದೊಯ್ದ, ಅಲ್ಲಿ ನಾವು ಮೂರು ನಾಗರಹಾವು ಸೇರಿದಂತೆ ಆರು ಹಾವುಗಳನ್ನು ಹಾಗೂ ಊಸರವಳ್ಳಿಗಳನ್ನು ರಕ್ಷಿಸಿದ್ದೇವೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಅಶೋಕ್ ಭಟ್ ಹೇಳಿದರು. 

35 ಸಾವಿರಕ್ಕೂ ಹೆಚ್ಚು ಉರಗಗಳನ್ನ ರಕ್ಷಿಸಿ ಜನರ ಮೆಚ್ಚುಗೆ ಪಡೆದಿದ್ದ ಸ್ನೇಕ್ ಲೋಕೇಶ್ ಇನ್ನಿಲ್ಲ

ಈ ಎರಡು ಪ್ರಬೇಧಗಳ ಸರೀಸೃಪಗಳು ವನ್ಯಜೀವಿ ರಕ್ಷಣಾ ಕಾಯ್ದೆ 1972ರ ಶೆಡ್ಯೂಲ್‌ ಎರಡರಲ್ಲಿ ಬರುತ್ತವೆ. ಇವುಗಳನ್ನು ಮನೆಯಲ್ಲಿ ಸಾಕುವುದು ಭೇಟೆಯಾಡುವುದು ಅಪರಾಧ. ಅಲ್ಲದೇ ಈ ಯುವಕ ಕಾಡು ಪ್ರಾಣಿಗಳ ಮಾರಾಟ ದಂಧೆಯಲ್ಲಿ ಭಾಗಿಯಾಗಿರಬಹುದೇ ಎಂಬ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದರು. 
 

click me!