ಶಿವಮೊಗ್ಗ ಲಾಡ್ಜ್‌ವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ವ್ಯಕ್ತಿ ಡೆತ್ ನೋಟ್‌ನಿಂದ ಕಾಣೆಯಾಗಿದ್ದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಶವ ಪತ್ತೆಯಾಗಿದೆ. ಏನಿದು ಪ್ರಕರಣ? ಈ ಕೆಳಗಿನಂತಿದೆ ನೋಡಿ ಸಂಪೂರ್ಣ ಮಾಹಿತಿ.
ಹಾಸನ/ತುಮಕೂರು/ಶಿವಮೊಗ್ಗ. (ಸೆಪ್ಟೆಂಬರ್.17): ಹುಳಿಯಾರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಸುಧಾ ಅವರ ಮೃತ ದೇಹ ಪತ್ತೆಯಾಗಿದೆ.
ಹಾಸನದ ಅರಸೀಕೆರೆ-ತಿಪಟೂರು ರಾಷ್ಟ್ರೀಯ ಹೆದ್ದಾರಿ 206ರ ಮೈಲನಹಳ್ಳಿ ಗ್ರಾಮದ ಬಳಿ ಸುಧಾ ಶವ ಸಿಕ್ಕಿದೆ. ಇನ್ನು ಈ ಪ್ರಕರಣಕ್ಕೂ ಹಾಗೂ ಶಿವಮೊಗ್ಗದ ಲಾಡ್ಜ್‌ವೊಂದರಲ್ಲಿ ನಿನ್ನೆ(ಸೆ.16) ಮಂಜುನಾಥ್ ಎನ್ನುವ ಆತ್ಮಹತ್ಯೆ ಕೇಸ್‌ಗೂ ಲಿಂಕ್ ಇದೆ.
ಹೌದು...ಶಿವಮೊಗ್ಗದ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಮಂಜುನಾಥ್ ಎನ್ನುವಾತ ಮೃತ ಮಹಿಳಾ ಪೇದೆ ಸುಧಾಳ ಚಿಕ್ಕಪ್ಪನ ಮಗ. ಹಣಕಾಸು ವ್ಯವಹಾರದ ವಿಚಾರವಾಗಿ ಮಂಜುನಾಥ್, ಸುಧಾರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಬಳಿಕ ಆತ ಶಿವಮೊಗ್ಗದ ಲಾಡ್ಜ್‌ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕರ್ತವ್ಯನಿರತ ಮಹಿಳಾ ಪೊಲೀಸ್ ಪೇದೆ ನಾಪತ್ತೆ,ಹುಡುಕಿಕೊಡಿ ಎಂಬ ಪೋಸ್ಟ್ ವೈರಲ್
ಸಹೋದರಿಯನ್ನು ಕೊಲೆಮಾಡಿರುವ ಬಗ್ಗೆ ಮಂಜುನಾಥ ಸ್ವತಃ ತಾನೇ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾನೆ. ಡೆತ್ ನೋಟ್ ಮಾಹಿತಿ ಆಧರಿಸಿ ಪೊಲೀಸರು ಸುಧಾರ ಶವ ಪತ್ತೆ ಮಾಡಿದ್ದಾರೆ. ಸುಧಾ ಶವ ಸಿಕ್ಕ ಸ್ಥಳಕ್ಕೆ ಅರಸೀಕೆರೆ ಗ್ರಾಮಾಂತರ ಹಾಗೂ ತುಮಕೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಹುಳಿಯಾರು ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಮಿಸ್ಸಿಂಗ್ ಕೇಸ್ ದಾಖಲಾಗಿತ್ತು
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರ್ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಕರ್ತವ್ಯನಿರ್ವಹಿಸುತ್ತಿದ್ದ. ಸುಧಾ (39) ನಾಪತ್ತೆಯಾಗಿದ್ದರು.
ಒಂದೂವರೆ ವರ್ಷದಿಂದ ಹುಳಿಯಾರು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಧಾ ಸೆಪ್ಟೆಂವರ್ 13ರಂದು ಕರ್ತವ್ಯಕ್ಕೆ ತೆರಳಿದ್ದರು. ಆದ್ರೆ, ಕರ್ತವ್ಯಕ್ಕೆ ಹೋದವರು ಇದುವರೆಗೂ ವಾಪಸ್ ಬರದೇ ನಾಪತ್ತೆಯಾಗಿದ್ದರು. 2 ವರ್ಷದ ಹಿಂದೆ ಸುಧಾ ಅವರ ಪತಿ ಸಾವನ್ನಪ್ಪಿದ್ದು, ಅವರಿಗೆ 14 ವರ್ಷದ ಗಂಡು ಮಗು ಹಾಗೂ 10 ವರ್ಷದ ಹೆಣ್ಣು ಮಗು ಇದೆ.
ಸುಧಾ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ.ಈ ಹಿನ್ನೆಲೆಯಲ್ಲಿ ಸುಧಾ ತಾಯಿ ದ್ರಾಕ್ಷಾಯಣಮ್ಮ ಅವರು ಹುಳಿಯಾರು ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ದೂರು ನೀಡಿದ್ದರು. ಇದರ ಆಧಾರ ಮೇಲೆ ಪೇದೆ ಸುಧಾರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು. ಮತ್ತೊಂದೆಡೆ ಪೊಲೀಸ್ ಕಾನ್ಸ್‌ಟೇಬಲ್ ಕಾಣೆಯಾಗಿದ್ದಾರೆ ಹುಡುಕಿಕೊಡಿ ಎಂಬ ಪೋಸ್ಟ್ ವೈರಲ್ ಆಗಿತ್ತು.
ಆದ್ರೆ, ಇದೀಗ ಮಹಿಳಾ ಪೇದೆ ಸುಧಾಳನ್ನ ಸ್ವತಃ ಸಹೋದರನೇ ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡಿರುವುದು ದುರಂತ.