ಬೆಂಗಳೂರಿನಲ್ಲಿ 25 ಲಕ್ಷ ರೂ. ಮೌಲ್ಯದ 2000 ರೂ. ನಕಲಿ ನೋಟುಗಳನ್ನು RBI ನಲ್ಲಿ ವಿನಿಮಯ ಮಾಡಿಕೊಳ್ಳಲು ಯತ್ನಿಸಿದಾಗ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಕಾಸರಗೋಡಿನಲ್ಲಿ ನಕಲಿ ನೋಟುಗಳನ್ನು ಮುದ್ರಿಸಿ, ಬೆಂಗಳೂರಿನಲ್ಲಿ ವಿನಿಮಯ ಮಾಡಿಕೊಳ್ಳುವ ಯೋಜನೆ ಹೊಂದಿದ್ದರು.
ಬೆಂಗಳೂರು (ಅ.10): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಕಲಿ ನೋಟುಗಳ ಕಾಲ ಪತ್ತೆಯಾಗಿದೆ. ಬರೋಬ್ಬರಿ 25 ಲಕ್ಷ ರೂ. ಮೌಲ್ಯದ 2000 ನೋಟುಗಳನ್ನು ತಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಬೆಂಗಳೂರು ಕಚೇರಿಯಲ್ಲಿ ಎಕ್ಸ್‌ಚೇಂಜ್ ಮಾಡಿಕೊಳ್ಳುವಾಗ ನಕಲಿ ನೋಟು ಮುದ್ರಿಸಿ ತಂದಿರುವುದು ಪತ್ತೆಯಾಗಿದೆ.
ಸಿನಿಮಾ ಸ್ಟೈಲ್ ನಲ್ಲಿ ನಕಲಿ ನೋಟು ಮುದ್ರಿಸಿ ಎಕ್ಸ್ ಚೇಂಜ್ ಯತ್ನ ಮಾಡಲು ಮುಂದಾಗಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಹಲಸೂರು ಗೇಟ್ ಪೊಲೀಸರಿಂದ ಅಫ್ಜಲ್, ಅನ್ವರ್, ಪ್ರಸಿದ್ಧ್ ಸೇರಿ ನಾಲ್ವರು ಆರೋಪಿಗಳನ್ನು ಬಂಧನ ಮಾಡಲಾಗಿದೆ. ಇವರ ಪೈಕಿ ಅಫ್ಜಲ್ ಎನ್ನುವ ವ್ಯಕ್ತಿ ಕೇರಳದಿಂದ ಬೆಂಗಳೂರು ನಗರಕ್ಕೆ 25 ಲಕ್ಷ ರೂ. ಹಣ ತಂದಿದ್ದನು. ಎಲ್ಲ ನೋಟುಗಳು 2,000 ರೂ. ಮೌಲ್ಯದ ನೋಟುಗಳಾಗಿದ್ದು, ಅವುಗಳನ್ನು ಬೆಂಗಳೂರಿನಲ್ಲಿರುವ ಆರ್‌ಬಿಐ ಶಾಖಾ ಕಚೇರಿಯಲ್ಲಿ ಎಕ್ಸ್‌ಚೇಂಜ್ ಮಾಡಿಕೊಳ್ಳಲು ಮುಂದಾಗಿದ್ದರು.
undefined
ಒಟ್ಟು 25 ಲಕ್ಷ ರೂ. ಮೌಲ್ಯದ ಎಲ್ಲ 2,000 ರೂ. ಮುಖಬೆಲೆಯ ನೋಟುಗಳನ್ನ ತಂದು ಈ ಹಣವನ್ನು ಪ್ರಸ್ತುತ ಚಾಲ್ತಿಯಲ್ಲಿರುವ 500 ರೂ. ಮುಖಬೆಲೆಯ ನೋಟುಗಳಿಗೆ ಎಕ್ಸ್ ಚೇಂಜ್ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ. ಇನ್ನು ಇದಕ್ಕೆ ಆರ್‌ಬಿಐನಿಂದ ತಗುಲುವ ಶುಲ್ಕವನ್ನು ವಿಧಿಸಿ, ಉಳಿದ ಹಣವನ್ನು 500 ರೂ. ಮುಖಬೆಲೆಯ ನೋಟುಗಳನ್ನು ನೀಡುವಂತೆ ಆಫ್ಜಲ್ ಕೇಳಿದ್ದಾರೆ. ಇದರಿಂದ ಮೊದಲು ನೋಟುಗಳನ್ನು ನೋಡಿದ ಆರ್‌ಬಿಐ ಅಧಿಕಾರಿಗಳಿಗೆ ನಕಲಿ ನೋಟಿನ ಬಗ್ಗೆ ಅನುಮಾನ ಬಂದಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಫ್ರಿಡ್ಜ್ ಮರ್ಡರ್ ಕೇಸ್‌ಗೆ ಸ್ಫೋಟಕ ಟ್ವಿಸ್ಟ್, ಪ್ರಿಯಕರ ಬರೆದಿಟ್ಟ ಡೆತ್‌ನೋಟ್ ಪತ್ತೆ!
ಸ್ಥಳಕ್ಕೆ ಬಂದ ಪೊಲೀಸರು ಅಫ್ಜಲ್ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದಾರೆ. ಈ ವಿಚಾರಣೆ ವೇಳೆ ಕಾಸರಗೋಡಿನಲ್ಲಿ ನೋಟು ಮುದ್ರಣ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿದೆ. ಈ ಮಾಹಿತಿಯನ್ನು ಆಧರಿಸಿ ಕಾಸರಗೋಡಿಗೆ ತೆರಳಿದ ಪೊಲೀಸರು ನಕಲಿ ನೋಟು ಮುದ್ರಣ ಮಾಡುತ್ತಿದ್ದ ಉಳಿದ ಮೂವರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಈ ವೇಳೆ ನೋಟು ಮುದ್ರಣ ಯಂತ್ರ, ಪೇಪರ್ ಹಾಗೂ 29 ಲಕ್ಷ ರೂ. ಮೌಲ್ಯದ ನಕಲಿ ನೋಟು ವಶಕ್ಕೆ ಪಡೆದಿದ್ದಾರೆ. ಇನ್ನು ನೋಟಿಗೆ ಬಳಕೆ ಮಾಡುವ ಗಟ್ಟಿ ಪೇಪರ್ ತಂದು 2 ಸಾವಿರ ರೂ. ಮುಖ ಬೆಲೆಯ ನೋಟುಗಳ ಮುದ್ರಣ ಮಾಡುವುದು ಪತ್ತೆಯಾಗಿದೆ.
ಇದನ್ನೂ ಓದಿ: ಬೆಂಗಳೂರಿನ ನಂತರ ಚೆನ್ನೈಗೆ ಕಾಲಿಟ್ಟ TRAI ಮತ್ತು FedEx ಹೆಸರಲ್ಲಿ ಆನ್‌ಲೈನ್ ವಂಚನೆ!
ಇಲ್ಲಿ ನಕಲಿ ನೋಟು ಮುದ್ರಿಸಿ ಬೆಂಗಳೂರಿಗೆ ತಂದು ಎಕ್ಸ್ ಚೇಂಜ್ ಮಾಡುತ್ತಿದ್ದರು. ಇದೀಗ ಚಾಲ್ತಿಯಲ್ಲಿರುವ 500 ರೂಪಾಯಿ ನೋಟುಗಳಿಗೆ ಹಣ ಎಕ್ಸ್ ಚೇಂಜ್ ಮಾಡಿಕೊಂಡು ಸುಲಭವಾಗಿ ವಾಮ ಮಾರ್ಗದ ಮೂಲಕ ಶ್ರೀಮಂತರಾಗಲು ಪ್ರಯತ್ನ ಮಾಡುತ್ತಿದ್ದರು. ಈ ಮೂಲಕ ಸರ್ಕಾರಕ್ಕೆ ಹಾಗೂ ಆರ್‌ಬಿಐ ಬ್ಯಾಂಕ್‌ಗೆ ಉಂಡೆನಾಮ ಹಾಕಲು ಹೋಗಿ ತಾವೇ ತೋಡೊದ ಖೆಡ್ಡಾಕ್ಕೆ ತಾವೇ ಬಿದ್ದಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಬಂಧಿತರಿಂದ ಒಟ್ಟು 54 ಲಕ್ಷ ರೂ. ನಕಲಿ ನೋಟು, ಪ್ರಿಂಟಿಂಗ್ ಮೆಷಿನ್, ಪೇಪರ್, ಕಚ್ಚಾವಸ್ತುಗಳು ವಶಕ್ಕೆ ಪಡೆಯಲಾಗಿದೆ.