ದಾವಣಗೆರೆ: 5 ಲಕ್ಷಕ್ಕೆ ನವಜಾತ ಶಿಶು ಮಾರಾಟ, ವೈದ್ಯೆ ಸೇರಿ 8 ಮಂದಿ ಅರೆಸ್ಟ್‌

By Kannadaprabha News  |  First Published Oct 10, 2024, 12:22 PM IST

ದಾವಣಗೆರೆ ನಿವಾಸಿಗಳಾದ ಪ್ರಶಾಂತ, ಜಯಾ ಪ್ರಶಾಂತ ದಂಪತಿಗೆ 5 ಲಕ್ಷಗಳಿಗೆ ಶಿಶುವನ್ನು ಮಾರಾಟ ಮಾಡಲಾಗಿದೆ. ಅನಂತರ ಆಸ್ಪತ್ರೆಯಲ್ಲಿ ಶಿಶು ಜನನ ಕುರಿತಂತೆ ಆರೋಪಿಗಳು ನಕಲಿ ದಾಖಲೆಯನ್ನು ಸೃಷ್ಟಿಸಿದ್ದಾರೆ.


ದಾವಣಗೆರೆ(ಅ.10):  ನವಜಾತ ಶಿಶುವೊಂದನ್ನು ₹5 ಲಕ್ಷಕ್ಕೆ ಮಾರಾಟ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ದಂತೆ ಓರ್ವ ವೈದ್ಯೆ ಸೇರಿದಂತೆ 8 ಮಂದಿ ಆರೋಪಿಗಳನ್ನು ಸ್ಥಳೀಯ ಮಹಿಳಾ ಪೊಲೀಸರು ಬಂಧಿಸಿದ್ದಾರೆ. ನಗರದ ಎಂ.ಕೆ. ಮೆಮೋರಿಯಲ್ ಆಸ್ಪತ್ರೆ ವೈದ್ಯೆ ಡಾ.ಭಾರತಿ ಸೇರಿದಂತೆ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆ.26ರಂದು ಎಂ.ಕೆ. ಸ್ಮಾರಕ ಆಸ್ಪತ್ರೆಯಲ್ಲಿ ಗರ್ಭಿಣಿಯೊಬ್ಬರು ಮಗುವೊಂದಕ್ಕೆ ಜನ್ಮ ನೀಡಿದ್ದರು. ತಾನೇ ಹೆತ್ತ ಶಿಶುವನ್ನು ತನಗೆ ಬೇಡ ಎಂದು ತಾಯಿ ಹೇಳಿದ್ದಳು. ಇದರಿಂದ ಆಸ್ಪತ್ರೆ ಸಿಬ್ಬಂದಿಯಾದ ಟಿ. ರಾಜ, ಮಂಜಮ್ಮ ಎಂಬ ದಂಪತಿ ಮಧ್ಯವರ್ತಿಗಳಾಗಿ ಕೆಲಸ ಮಾಡಿ, ತಮ್ಮ ಕಡೆಯವರಿಗೆ ಈ ಶಿಶು ನೀಡಬೇಕೆಂದು ಕೂಸಿನ ತಾಯಿಗೆ ಮನವೊಲಿಸಿದ್ದಾರೆ. ಕಡೆಗೆ ಎಲ್ಲಾದರೂ ಕೂಸು ಬದುಕಿದರೆ ಸಾಕೆಂದು ತಾಯಿ ಸಮ್ಮತಿಸಿದ್ದಳು. ಬಳಿಕ ದಾವಣಗೆರೆ ನಿವಾಸಿಗಳಾದ ಪ್ರಶಾಂತ, ಜಯಾ ಪ್ರಶಾಂತ ದಂಪತಿಗೆ 5 ಲಕ್ಷಗಳಿಗೆ ಶಿಶುವನ್ನು ಮಾರಾಟ ಮಾಡಲಾಗಿದೆ. ಅನಂತರ ಆಸ್ಪತ್ರೆಯಲ್ಲಿ ಶಿಶು ಜನನ ಕುರಿತಂತೆ ಆರೋಪಿಗಳು ನಕಲಿ ದಾಖಲೆಯನ್ನು ಸೃಷ್ಟಿಸಿದ್ದಾರೆ. ಅಲ್ಲಿ ಜಯಾ ಪ್ರಶಾಂತ ಎಂಬ ಮಹಿಳೆಗೆ ಕೂಸು ಹುಟ್ಟಿದ್ದು, ತಂದೆ ಹೆಸರು ಪ್ರಶಾಂತ ಎಂಬುದಾಗಿ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಇದೇ ದಾಖಲೆ ಆಧರಿಸಿ ದಾವಣಗೆರೆ ಪಾಲಿಕೆ ಕಚೇರಿಯಲ್ಲಿ ಆರೋಪಿಗಳು ಶಿಶುವಿನ ಜನನ ಪ್ರಮಾಣ ಪತ್ರ ಪಡೆದಿದ್ದರು. 

Latest Videos

undefined

ನವಜಾತ ಶಿಶುವನ್ನು ಕಸದಂತೆ ಚರಂಡಿಗೆ ಎಸೆದುಹೋದ ಪಾಪಿಗಳು!

ಶಿಶುವಿನ ನಕಲಿ ಜನ್ಮ ಪ್ರಮಾಣ ಪತ್ರ, ದಾಖಲೆಗಳಿಗೆ ಸಹಿ ಮಾಡಿದ ಎಂ.ಕೆ. ಮೆಮೋರಿಯಲ್ ಆಸ್ಪತ್ರೆಯ ಡಾ.ಭಾರತಿ ಸೇರಿದಂತೆ 8 ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

ಜಯಾ ಪ್ರಶಾಂತ, ಪ್ರಶಾಂತ ದಂಪತಿಗೆ ಮಾರಾಟ ಮಾಡಲಾಗಿದ್ದ ಕೂಸನ್ನು ರಕ್ಷಿಸಿದ ಪೊಲೀಸರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆರೈಕೆ ಕೇಂದ್ರದಲ್ಲಿ ಶಿಶುವಿಗೆ ಆಶ್ರಯ ಕಲ್ಪಿಸಿದ್ದಾರೆ.

click me!