Fake Stamp Paper| ಜ್ಯೂನಿಯರ್‌ ಕರೀಂಲಾಲಾ ತೆಲಗಿ ಬಂಧನ: ಕೋಟ್ಯಂತರ ರೂ. ಆಸ್ತಿ ಕಬಳಿಕೆ?

By Kannadaprabha NewsFirst Published Nov 20, 2021, 7:02 AM IST
Highlights

*   ನಿಷೇಧ ಪೂರ್ವದ ಛಾಪಾ ಕಾಗದದ ನಕಲಿ ಪ್ರತಿ ಮಾರಾಟ ಜಾಲ ಬೆಳಕಿಗೆ
*   64 ಲಕ್ಷ ಮುಖಬೆಲೆಯ ಛಾಪಾ ಕಾಗದ ವಶ
*   ಕೋಟ್ಯಂತರ ಮೌಲ್ಯ ಆಸ್ತಿ ಕಬಳಿಕೆ?
 

ಬೆಂಗಳೂರು(ನ.20):  ನಿಷೇಧ ಪೂರ್ವದ ಛಾಪಾ ಕಾಗದದ(Fake Stamp Paper) ನಕಲಿ ಪ್ರತಿಗಳನ್ನು ಸೃಷ್ಟಿಸಿ ಭೂ ಮಾಫಿಯಾಕ್ಕೆ ಸರಬರಾಜು ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಪೂರ್ವ ವಿಭಾಗದ ವಿಶೇಷ ತನಿಖಾ ದಳ(Special Investigation Squad), ಈ ಸಂಬಂಧ ಜ್ಯೂನಿಯರ್‌ ಕರೀಂಲಾಲ್‌ ತೆಲಗಿ ಹಾಗೂ ಆತನ ಸಹಚರರನ್ನು ಸೆರೆ ಹಿಡಿದಿದೆ.

ಬೆಂಗಳೂರಿನ(Bengaluru) ವಿವೇಕನಗರದ ಹುಸೇನ್‌ ಮೋದಿ ಬಾಬು ಅಲಿಯಾಸ್‌ ಜ್ಯೂನಿಯರ್‌ ಕರೀಂಲಾಲ್‌ ತೆಲಗಿ(Junior Karim Lala Telgi) (58), ಬಾಪೂಜಿನಗರದ ಸೀಮಾ ಅಲಿಯಾಸ್‌ ಶಾವರ್‌ (45), ಶಾಮಣ್ಣನಗರದ ನಯಾಜ್‌ ಅಹಮದ್‌ (45) ವಿಜಯನಗರದ ಶಬ್ಬೀರ್‌ ಅಹಮದ್‌ (38) ಹಾಗೂ ಬಸವೇಶ್ವರನಗರದ ಹರೀಶ್‌ (55) ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) ಪುರಾತನ ಕಾಲದ್ದು ಸೇರಿದಂತೆ .20 ರಿಂದ .25 ಸಾವಿರ ಮುಖಬೆಲೆಯ 63.57 ಲಕ್ಷ ರು ಮೌಲ್ಯದ ನಕಲಿ ಛಾಪಾ ಕಾಗದಗಳು, ಕಾಟನ್‌ಪೇಟೆ ಎಸ್‌ಬಿಐ ಶಾಖೆ ರೌಂಡ್‌ ಸೀಲ್‌, ರಬ್ಬರ್‌ ಸೀಲುಗಳು, 233 ಖಾಲಿ ಕಾಗದ, ವಿವಿಧ ಮುಖಬೆಲೆಯ 208 ಖಾಲಿ ಇ-ಸ್ಟಾಂಪ್‌ ಪೇಪರ್‌ ಜಪ್ತಿ ಮಾಡಲಾಗಿದೆ. ಈ ದಂಧೆಯಲ್ಲಿ ಸಬ್‌ ರಿಜಿಸ್ಟ್ರಾರ್‌ಗಳು ಹಾಗೂ ಕೆಲ ವಕೀಲರು ಸಹ ಪಾಲ್ಗೊಂಡಿರುವ ಶಂಕಿಸಿರುವ ಎಸ್‌ಐಟಿ, ಜ್ಯೂನಿಯರ್‌ ತೆಲಗಿ ತಂಡದ ಸಂಪರ್ಕ ಜಾಲದ ಕೊಂಡಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರೆಸಿದೆ.

 ರಾಜ್ಯದಲ್ಲಿ ಮತ್ತೆ ಸಕ್ರಿಯವಾಗಿದೆ 'ಈ' ಗ್ಯಾಂಗ್; ಯಾಮಾರಿದ್ರೆ ಕೋಟಿ ಕೋಟಿ ಲಪಟಾಯಿಸಿ ಬಿಡ್ತಾರೆ..!

ದಂಧೆ ಬೆಳಕಿಗೆ ಬಂದಿದ್ದು ಹೇಗೆ?

ಕೆಲ ತಿಂಗಳ ಹಿಂದೆ ಕೆಲವು ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆ ವೇಳೆ ನಕಲಿ ಛಾಪಾ ಕಾಗದವನ್ನು ಪತ್ತೆ ಹಚ್ಚಿದ್ದ ಗಾಂಧಿನಗರದ ಸಬ್‌ ರಿಜಿಸ್ಟ್ರಾರ್‌(Sub Registrar) ಅವರು, ಈ ಬಗ್ಗೆ ಹಲಸೂರು ಗೇಟ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು. ಆಗ ನಕಲಿ ಛಾಪಾಕಾಗದ ಹಗರಣದ ಸಮಗ್ರ ತನಿಖೆಗೆ ಒತ್ತಾಯಿಸಿ ಹೈಕೋರ್ಟ್‌ಗೆ ಕೆಲವು ನಾಗರಿಕರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ನ್ಯಾಯಮೂರ್ತಿಗಳು, ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸುವಂತೆ ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌(Kamal Pant) ಅವರಿಗೆ ಆದೇಶಿಸಿದರು. ಅಂತೆಯೇ ಪೂರ್ವ ವಿಭಾಗದ ಡಿಸಿಪಿ ಡಾ.ಎಸ್‌.ಡಿ.ಶರಣಪ್ಪ ನೇತೃತ್ವದಲ್ಲಿ ಬಾಣಸವಾಡಿ ಉಪ ವಿಭಾಗ ಎಸಿಪಿ ನಿಂಗಪ್ಪ ಬಿ. ಸಕ್ರಿ, ಗೋವಿಂದಪುರ ಠಾಣೆ ಇನ್‌ಸ್ಪೆಕ್ಟರ್‌ ಆರ್‌.ಪ್ರಕಾಶ್‌ ಅವರನ್ನೊಳಗೊಂಡ ತನಿಖಾ ತಂಡ ಅಸ್ವಿತ್ವಕ್ಕೆ ಬಂದಿತು. ತನಿಖೆ ಶುರು ಮಾಡಿದ ಪೊಲೀಸರು, ನ.14 ರಂದು ಜ್ಯೂನಿಯರ್‌ ತೆಲಗಿ ಹಾಗೂ ಆತನ ಸಹಚರರ ಮನೆಗಳ ಮೇಲೆ ದಾಳಿ(Raid) ನಡೆಸಿದರು. ಆಗ ಕೆಲವು ದಾಖಲೆಗಳನ್ನು ಜಪ್ತಿ ಮಾಡಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ತೆಲಗಿ ವೃತ್ತಿಪರ ಕ್ರಿಮಿನಲ್‌ ಆಗಿದ್ದು, 2012ರಲ್ಲಿ ನಕಲಿ ಛಾಪಾಕಾಗದ ಪ್ರಕರಣದಲ್ಲಿ ಆತ ಜೈಲು ಸೇರಿದ್ದ. ಬಳಿಕ ಜಾಮೀನು ಪಡೆದು ಹೊರ ಬಂದು ಮತ್ತೆ ತನ್ನ ದಂಧೆಯನ್ನು ಆತ ಮುಂದುವರೆಸಿದ್ದ. ಅವನಿಗೆ ಟೈಪಿಸ್ಟ್‌ ಸೀಮಾ ಹಾಗೂ ಇತರರು ಸಾಥ್‌ ಕೊಟ್ಟಿದ್ದಾರೆ. 2005ರಿಂದ ನಕಲಿ ಛಾಪಾ ಕಾಗದ ಮತ್ತು ಇ-ಸ್ಟಾಂಪ್‌(E-Stamp) ತಯಾರಿಸುತ್ತಿದ್ದ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕೋಟ್ಯಂತರ ಮೌಲ್ಯ ಆಸ್ತಿ ಕಬಳಿಕೆ?:

ಬೆಂಗಳೂರು ಸೇರಿದಂತೆ ರಾಜ್ಯದ(Karnataka) ವಿವಿಧೆಡೆ ಕೋಟ್ಯಾಂತರ ಮೌಲ್ಯದ ಆಸ್ತಿ ಕಬಳಿಕೆಗೆ ನಕಲಿ ದಾಖಲೆ ಸೃಷ್ಟಿಸಲು ಈ ಛಾಪಾ ಕಾಗದಗಳನ್ನು ಭೂ ಮಾಫಿಯಾ ಬಳಸಿರುವ ಸಾಧ್ಯತೆಗಳಿವೆ ಎಂದು ಎಸ್‌ಐಟಿ ಶಂಕಿಸಿದೆ. ಭೂಮಿ ಮೂಲ ವಾರಸುದಾರರು ಆಸ್ತಿ ಕರಾರು ಮಾಡಿಕೊಟ್ಟಿರುವಂತೆ ದಾಖಲೆ ತಯಾರಿಸಿ ವಂಚಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ನಕಲಿ ಛಾಪ ಕಾಗದ ಸೃಷ್ಟಿ ಹೇಗೆ?

ಜ್ಯೂನಿಯರ್‌ ತೆಲಗಿ ತಂಡದ ಬಳಿ ಮೈಸೂರು ಮಹಾರಾಜ(Mysuru Maharaj) ಕಾಲದಿಂದ ಇತ್ತೀಚಿನವರೆಗೆ ಚಲಾವಣೆಯಲ್ಲಿದ್ದ ಛಾಪಾ ಕಾಗದಗಳ ನಕಲಿ ದಾಖಲೆಗಳು ಪತ್ತೆಯಾಗಿವೆ. ಹೀಗಾಗಿ ಹಳೇ ಛಾಪಾ ಕಾಗದವನ್ನೇ ಹೋಲುವಂತೆ ಚಿಕ್ಕ ಮತ್ತು ದೊಡ್ಡ ಗಾತ್ರದ ಸ್ಕ್ರೀನ್‌ ಪ್ರಿಂಟ್‌ ಮೇಷಿನ್‌ ಸಿದ್ದಪಡಿಸಿಕೊಳ್ಳುತ್ತಿದ್ದರು. ಖಾಲಿ ಕಾಗದ ಮೇಲೆ ಸ್ಕ್ರೀನ್‌ ಪ್ರಿಂಟ್‌ ಮಾಡಿ ಅದಕ್ಕೆ ಭಾರತ ಸರ್ಕಾರ ಎಂಬ ಆಂಗ್ಲ ಭಾಷೆಯಲ್ಲಿ ಮತ್ತು ಭಾರತ್‌ ಸರ್ಕಾರ್‌ ಹಿಂದಿ ಭಾಷೆಯಲ್ಲಿ ವಾಟರ್‌ ಮಾರ್ಕ್ ಮುದ್ರಿಸಿ ನಕಲಿ ಛಾಪಾ ಕಾಗದ ತಯಾರಿಸಿ ಮಾರುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

Shivamogga| ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ್ದ ನಟೋರಿಯಸ್‌ ಬಚ್ಚನ್‌ ಅರೆಸ್ಟ್‌

ಫ್ರ್ಯಾಂಕಿಂಗ್‌ ನಕಲಿ

ಕರೀಂ ಲಾಲ್‌ ತೆಲಗಿಯ ಛಾಪಾ ಕಾಗದ ಹಗರಣ ಬೆಳಕಿಗೆ ಬಂದ ನಂತರ ರಾಜ್ಯದಲ್ಲಿ ಛಾಪಾ ಕಾಗದವನ್ನು ಸರ್ಕಾರ ನಿಷೇಧಿಸಿತು. ಛಾಪಾ ಕಾಗದಕ್ಕೆ ಪರ್ಯಾಯವಾಗಿ ಬಳಕೆಗೆ ಬಂದ ಇ-ಸ್ಟಾಂಪ್‌ ಪೇಪರ್‌ ಅನ್ನು ಕೂಡಾ ಆರೋಪಿಗಳು ನಕಲಿ ಮಾಡಿರುವುದು ತನಿಖೆಯಲ್ಲಿ(Investigation) ಗೊತ್ತಾಗಿದೆ.

ಬ್ಯಾಂಕ್‌ ಮತ್ತು ಸಹಕಾರ ಸಂಘಗಳಿಂದ ಶುಲ್ಕ ಪಾವತಿ ಮಾಡಿ ಇ-ಸ್ಟಾಂಪ್‌ ಪೇಪರ್‌ ಪಡೆಯಬೇಕು. ಅಲ್ಲದೆ ಸಬ್‌ ರಿಜಿಸ್ಟ್ರಾರ್‌ ಕಚೇರಿಯಲ್ಲಿ ಶುಲ್ಕ ಪಾವತಿಸಿ ಫ್ರ್ಯಾಂಕಿಂಗ್‌ ಮಾಡಿಸಬೇಕಿದೆ. ಆದರೆ ಆರೋಪಿಗಳು, ಬ್ಯಾಂಕ್‌ ಅಥವಾ ಸಹಕಾರ ಸಂಘದ ಹೆಸರಿನ ನಕಲಿ ಮುದ್ರೆಗಳನ್ನು ಉಪಯೋಗಿಸಿ ಇ-ಸ್ಟಾಂಪ್‌ ಪೇಪರ್‌ ಸೃಷ್ಟಿಸಿ ಅದರ ಮೇಲೆ ನಕಲಿ ಫ್ರ್ಯಾಂಕಿಂಗ್‌ ಮಾಡುತ್ತಿದ್ದರು. ಹಾಗೆಯೇ ಇ-ಸ್ಟಾಂಪ್‌ ಪೇಪರ್‌ ಮೇಲೆ ದಿನಾಂಕ ಬದಲಾಯಿಸಿ ಮಾರುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

click me!