Social Media Upload| ಸಾಲ ವಾಪಸ್ ಕೊಡದ್ದಕ್ಕೆ ಬೆತ್ತಲಾಗಿಸಿ ಡ್ಯಾನ್ಸ್ ಮಾಡಿಸಿದ ಜ್ಯೋತಿಷಿ!

By Kannadaprabha NewsFirst Published Nov 19, 2021, 1:22 PM IST
Highlights

*  ನೃತ್ಯ ಮಾಡಿಸಿ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್‌
*  ಕ್ಯಾಬ್‌ ಚಾಲಕನನ್ನು ಅಪಹರಿಸಿ ಚಿತ್ರಹಿಂಸೆ ನೀಡಿದ ಜ್ಯೋತಿಷಿ ಹಾಗೂ ಆತನ ಸಹಚರರು 
*  ಈ ಸಂಬಂಧ ಕೆ.ಆರ್‌.ಪುರ ಠಾಣೆಯಲ್ಲಿ ಪ್ರಕರಣ ದಾಖಲು
 

ಬೆಂಗಳೂರು(ನ.19):  ಎರಡು ಲಕ್ಷ ರು. ಸಾಲದ(Loan) ಹಣದ ವಿಚಾರವಾಗಿ ತಮ್ಮ ಪರಿಚಿತ ಕ್ಯಾಬ್‌ ಚಾಲಕನನ್ನು ಅಪಹರಿಸಿ ಬಳಿಕ ಆತನಿಂದ ನಗ್ನವಾಗಿ ನಾಗಿಣಿ ನೃತ್ಯ ಮಾಡಿಸಿ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಜ್ಯೋತಿಷಿ(Astrologer) ಹಾಗೂ ಆತನ ಸಹಚರರು ಅಪ್‌ಲೋಡ್‌ ಮಾಡಿರುವ ಘಟನೆ ನಡೆದಿದೆ.

ಕೆ.ಆರ್‌.ಪುರದ ನಿವಾಸಿ ಕ್ಯಾಬ್‌ ಚಾಲಕ ದೌರ್ಜನ್ಯಕ್ಕೊಳಗಾಗಿದ್ದು, ಈ ಕೃತ್ಯ ಎಸಗಿ ಪರಾರಿಯಾಗಿರುವ ದಯಾಳ್‌ ಮಂಜ ಅಲಿಯಾಸ್‌ ಪುಲಿ ಮಂಜ ಮತ್ತು ಇತರರ ವಿರುದ್ಧ ಕೆ.ಆರ್‌.ಪುರ ಠಾಣೆಯಲ್ಲಿ ಪ್ರಕರಣ(case) ದಾಖಲಾಗಿದೆ. ಹಲವು ದಿನಗಳಿಂದ ಜ್ಯೋತಿಷಿ ದಯಾಳ್‌ ಮಂಜಗೆ ಸಂತ್ರಸ್ತ ಕ್ಯಾಬ್‌ ಚಾಲಕನ ಪರಿಚಯವಿತ್ತು. ಈ ಗೆಳೆತನದಲ್ಲಿ ದಯಾಳ್‌ನಿಂದ ಆತ 2 ಲಕ್ಷ ರು. ಸಾಲ ಪಡೆದಿದ್ದ. ಆದರೆ ಸಕಾಲಕ್ಕೆ ಸಾಲ ತೀರಿಸದ ಕಾರಣಕ್ಕೆ ಕೆರಳಿದ ದಯಾಳ್‌, ನ.10 ರಂದು ಸಂತ್ರಸ್ತನ್ನು ಮಾತುಕತೆ ನೆಪದಲ್ಲಿ ಕರೆಸಿಕೊಂಡಿದ್ದಾರೆ. ಕ್ಯಾಬ್‌ ಚಾಲಕನನ್ನು ಕೋಲಾರ(Kolar) ಜಿಲ್ಲೆ ಮುಳುಬಾಗಿಲು ತಾಲೂಕಿಗೆ ಕರೆದೊಯ್ದು ಆರೋಪಿಗಳು(Accused), ಅಲ್ಲಿ ಆತನನ್ನು ಶೋಷಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ಸಂತ್ರಸ್ತನ ಪತ್ನಿ, ಕೆ.ಆರ್‌.ಪುರ ಠಾಣೆಗೆ ದೂರು ನೀಡಿದ್ದಾರೆ.

ಸಾಲ ವಾಪಸ್‌ ನೀಡದ್ದಕ್ಕೆ ವಾಹನ ಗುದ್ದಿಸಿ ಕೊಲೆ

ಚಿಕ್ಕನಾಯಕನಹಳ್ಳಿ(ತುಮಕೂರು): ಸಾಲದ ಹಣ ವಾಪಸ್‌ ನೀಡದಿದ್ದಕ್ಕೆ ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ಸೇರಿ ಇಬ್ಬರ ಮೇಲೆ ವಾಹನದಲ್ಲಿ ಗುದ್ದಿಸಿ ಕೊಲೆ(Murder) ಮಾಡಿದ ಘಟನೆ ನ.10 ರಂದು ಹಂದನಕೆರೆ ಹೋಬಳಿಯ ಕೆಂಗಲಾಪುರ ಸಮೀಪ ಭೀಮಾನಾಯ್ಕನ ತಾಂಡಾದಲ್ಲಿ ಸಂಭವಿಸಿದೆ.

Firing| ಕಾಲಿಗೆ ಗುಂಡಿಕ್ಕಿ ಕುಖ್ಯಾತ ರೌಡಿಶೀಟರ್‌ ಪಳನಿ ಸೆರೆ

ಹಂದನಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಅಶೋಕ್‌ (35) ಹಾಗೂ ಜೊತೆಗಿದ್ದ ಸೋಮಶೇಖರ್‌ ನಾಯ್ಕ್‌ (35) ದುಷ್ಕೃತ್ಯಕ್ಕೆ ಬಲಿಯಾದ ದುರ್ದೈವಿಗಳು. ಮೃತ ಅಶೋಕ್‌ ಅವರು ಆರೋಪಿ ನಾಗರಾಜ ನಾಯ್ಕ್‌ (38) ಅವರಿಂದ 15 ಸಾವಿರ ರು.ಸಾಲ ಪಡೆದಿದ್ದರು. ಈ ಬಗ್ಗೆ ಅಶೋಕ್‌ ಮತ್ತು ನಾಗರಾಜ್‌ ನಾಯ್ಕ್‌ ಅವರಿಗೆ ಜಗಳವಾಗಿ ಸ್ಥಳೀಯರು ಬುದ್ಧಿ ಹೇಳಿ ಜಗಳ ಬಿಡಿಸಿದ್ದರು.

ಆ ಬಳಿಕ ಅಶೋಕ್‌ ಹಾಗೂ ಅದೇ ಗ್ರಾಮದ ಸೋಮಶೇಖರ ನಾಯ್ಕ್‌ ಕಮಲಿ ಬಾಯಿ ಎಂಬುವರ ಪೆಟ್ಟಿಗೆ ಅಂಗಡಿ ಮುಂದೆ ಇರುವ ಮರದ ಕೆಳಗೆ ನಿಂತು 10.30ರ ಸುಮಾರಿಗೆ ಮಾತನಾಡುತ್ತಿದ್ದಾಗ ಆರೋಪಿ ತನ್ನ ಕೆ.ಎ.44ಎ 0672 ಮಹೀಂದ್ರ ಸುಪ್ರೋ ಲಗೇಜ್‌ ವಾಹನದಲ್ಲಿ ಅತಿ ವೇಗವಾಗಿ ಬಂದು ನಿಂತಿದ್ದವರಿಗೆ ಗುದ್ದಿದ್ದಾರೆ. ಈ ವೇಳೆ ಸೋಮಶೇಖರ್‌ ಸ್ಥಳದಲ್ಲೇ ಸಾವನಪ್ಪಿದ್ದು, ಅಶೋಕ್‌ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಹಂದನಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪೊಲೀಸರ(Police) ವಶದಲ್ಲಿದ್ದಾನೆ.

ಸಾಲ ವಾಪಸ್‌ ಕೇಳಿದ್ದಕ್ಕೆ ಕೊಂದು ಕಾಲುವೆಗೆ ಎಸೆದರು!

ಬೆಂಗಳೂರು: ಯುವಕನ ಕೈಕಾಲು ಕಟ್ಟಿಬಾಯಿಗೆ ಟೇಪ್‌ ಬಿಗಿದು ಹತ್ಯೆ ಮಾಡಿ ರಾಜಕಾಲುವೆಗೆ ಎಸೆದಿದ್ದ ಪ್ರಕರಣ ಬೇಧಿಸಿರುವ ರಾಜರಾಜೇಶ್ವರಿನಗರ ಠಾಣೆ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ(Arrest).
ಜೆ.ಜೆ.ನಗರ ನಿವಾಸಿ ತಜೀಮುಲ್ಲಾ ಪಾಷಾ (39) ಹಾಗೂ ಆತನ ಸಹೋದರ ವಾಲ್ಮೀಕಿನಗರ ನಿವಾಸಿ ಸಯ್ಯದ್‌ ನಾಸೀರ್‌ (26) ಬಂಧಿತರು. ನ.2ರಂದು ಬೆಳಗ್ಗೆ ಡಿಸೋಜಾ ನಗರದ ರಾಜಕಾಲುವೆ ಬಳಿ ಚೀಲದಲ್ಲಿ ಯುವಕನ ಮೃತದೇಹ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿದಾಗ ಮೃತ ಯುವಕ ಭಾರತಿನಗರದ ನಿವಾಸಿ ಮಣಿ ಎಂಬುವವರ ಪುತ್ರ ತರುಣ್‌ (21) ಎಂಬುದು ತಿಳಿದು ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ಜಾಡು ಹಿಡಿದು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಯಾದ ತರುಣ್‌ ತಂದೆ ಮಣಿ ಹಣ್ಣಿನ ವ್ಯಾಪಾರಿಯಾಗಿದ್ದಾರೆ. ಆರೋಪಿ ತಜೀಮುಲ್ಲಾ ಸರಕು ಸಾಗಣೆ ವಾಹನ ಚಾಲಕನಾಗಿದ್ದು, ಮಣಿ ಬಳಿ ಕೆಲಸ ಮಾಡುತ್ತಿದ್ದ. ಕೆಲ ತಿಂಗಳ ಹಿಂದೆ ಮಣಿಯಿಂದ .3 ಲಕ್ಷ ಸಾಲ ಪಡೆದಿದ್ದ. ಮೂರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಸಾಲದ ಹಣ ಹಿಂದಿರುಗಿಸಿರಲಿಲ್ಲ. ಈ ನಡುವೆ ಮಣಿ ಅವರು ಹಣ ಹಿಂದಿರುಗಿಸುವಂತೆ ತಜೀಮುಲ್ಲಾನನ್ನು ಕೇಳುತ್ತಿದ್ದರು. ಇದು ತಜೀಮುಲ್ಲಾಗೆ ಕಿರಿಕಿರಿಯಾಗಿತ್ತು. ಮಣಿ ಬಳಿ ಹಣ ಇರುವ ಬಗ್ಗೆ ತಿಳಿದುಕೊಂಡಿದ್ದ ಆರೋಪಿ ತಜೀಮುಲ್ಲಾ, ಮಣಿಯ ಪುತ್ರ ತರುಣ್‌ನನ್ನು ಅಪಹರಿಸಿ(Kidnap) ಹಣ ಸುಲಿಗೆಗೆ ಸಂಚು ರೂಪಿಸಿದ್ದ. ಇದಕ್ಕೆ ಸಹೋದರ ಸಯ್ಯದ್‌ ನಾಸೀರ್‌ ಸಾಥ್‌ ಪಡೆದಿದ್ದ.

ಸಹೋದ್ಯೋಗಿಗೆ ಲೈಂಗಿಕ ಕಿರುಕುಳ : ನಗ್ನ ಫೋಟೊ ಕಳಿಸೆಂದ ಅಧಿಕಾರಿ ಅರೆಸ್ಟ್

ಪುಸಲಾಯಿಸಿ ಕರೆದೊಯ್ದರು:

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ನ.1ರಂದು ಮಣಿ ಪುತ್ರ ತರುಣ್‌ ಪಟಾಕಿ(Fireworks) ತರಲು ತಾಯಿಯಿಂದ ಹಣ ಪಡೆದು ಹೊರಬಂದಿದ್ದ. ಈ ವೇಳೆ ತರುಣ್‌ನನ್ನು ಭೇಟಿಯಾದ ಆರೋಪಿಗಳು, ಪುಟ್ಟೇನಹಳ್ಳಿಯ ಅರಕೆರೆಯಲ್ಲಿರುವ ತಮ್ಮ ಸಹೋದರಿಯ ಮನೆಯಲ್ಲಿ ಕಡಿಮೆ ದರಕ್ಕೆ ಪಟಾಕಿ ಸಿಗಲಿದೆ ಎಂದು ಪುಸಲಾಯಿಸಿ ಕರೆದೊಯ್ದಿದ್ದರು. ಬಳಿಕ ಒಂದು ಕೊಠಡಿಯಲ್ಲಿ ತರುಣ್‌ನನ್ನು ಕೂಡಿ ಹಾಕಿ ಹಲ್ಲೆ ನಡೆಸಿದ್ದರು. ಚೀರಾಟದಂತೆ ಬಾಯಿಗೆ ಪ್ಲಾಸ್ಟರ್‌ ಹಾಕಿ ಕೈ ಕಾಲು ಕಟ್ಟಿದ್ದರು. ಈ ವೇಳೆ ತರುಣ್‌ ತೀವ್ರ ಪ್ರತಿರೋಧ ತೋರಿದಾಗ ವೈಯರ್‌ ತೆಗೆದುಕೊಂಡು ಆತನ ಕುತ್ತಿಗೆಗೆ ಹಾಕಿ ಬಿಗಿದಿದ್ದಾರೆ. ಆಗ ಉಸಿರಾಡಲು ಸಾಧ್ಯವಾಗದೇ ತರುಣ್‌ ಮೃತಪಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದರು.

50 ಲಕ್ಷಕ್ಕೆ ಬೇಡಿಕೆ

ಈ ನಡುವೆ ಆರೋಪಿಗಳು ಅಪರಿಚಿತರ ಸೋಗಿನಲ್ಲಿ ಮಣಿಗೆ ಕರೆ ಮಾಡಿ, ತರುಣ್‌ ಅಪಹರಣದ ಬಗ್ಗೆ ಮಾಹಿತಿ ನೀಡಿದ್ದರು. ಅಂತೆಯೆ ಆತನನ್ನು ಬಿಡಲು .50 ಲಕ್ಷಕ್ಕೆ ಬೇಡಿಕೆ ಇರಿಸಿದ್ದು, ಹಣ ಕೊಡದಿದ್ದರೆ ಮಗನನ್ನು ಕೊಲೆ ಮಾಡುವುದಾಗಿ ಬೆದರಿಸಿದ್ದರು. ಮತ್ತೊಂದೆಡೆ ತರುಣ್‌ ಮೃತಪಟ್ಟಿದ್ದರಿಂದ(Dead) ಆರೋಪಿಗಳು ಮೃತದೇಹವನ್ನು ಪ್ಲಾಸ್ಟಿಕ್‌ ಚೀಲಕ್ಕೆ ಹಾಕಿ ಡಿಸೋಜಾ ನಗರದ ರಾಜಕಾಲುವೆ ಬಳಿ ಎಸೆದಿದ್ದರು. ನ.2ರಂದು ಬೆಳಗ್ಗೆ ಚಿಂದಿ ಆಯುವ ವ್ಯಕ್ತಿಯೊಬ್ಬ ಚೀಲದಲ್ಲಿ ಮೃತದೇಹ ಇರುವುದನ್ನು ಗಮನಿಸಿ ಸ್ಥಳೀಯರಿಗೆ ತಿಳಿಸಿದ್ದ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಾಸಿಕೊಂಡಿದ್ದ ರಾಜರಾಜೇಶ್ವರಿನಗರ ಠಾಣೆ ಪೊಲೀಸರು, ಮಣಿ ಮೊಬೈಲ್‌ಗೆ ಬಂದಿದ್ದ ಕರೆಯ ಜಾಡು ಹಿಡಿದು ಆರೋಪಿಗಳನ್ನು ಬಂಧಿಸಿದ್ದರು.
 

click me!