
ಪಟನಾ (ಜನವರಿ 23, 2023): ದಿಲ್ಲಿ, ಬೆಂಗಳೂರು ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಅಪಘಾತದ ವೇಳೆ ವಾಹನಗಳು ಮನುಷ್ಯರನ್ನು ಕಿ.ಮೀ.ಗಟ್ಟಲೇ ಎಳೆದೊಯ್ದಿರುವ ಘಟನೆಗಳು ನಡೆದ ಬೆನ್ನಲ್ಲೇ, ಬಿಹಾರದಲ್ಲೂ ಕೂಡ ಅಂಥದ್ದೇ ಘಟನೆ ಸಂಭವಿಸಿದೆ. ಕಾರೊಂದು ವೃದ್ಧರೊಬ್ಬರನ್ನು ಬಾನೆಟ್ ಮೇಲೆ ಕೂರಿಸಿಕೊಂಡು 8 ಕಿ.ಮೀ. ಎಳೆದೊಯ್ದಿದ್ದು, ಬಳಿಕ ಬಾನೆಟ್ ಮೇಲಿಂದ ಬಿದ್ದು ವೃದ್ಧ ದಾರುಣವಾಗಿ ಸಾವನ್ನಪ್ಪಿದ್ದಾರೆ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 27ರಲ್ಲಿ ಈ ಘಟನೆ ನಡೆದಿದೆ. ಕಾರು ಚಾಲಕ ಪರಾರಿಯಾಗಿದ್ದು, ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಬಾಂಗ್ರಾ ಗ್ರಾಮದ ಶಂಕರ್ ಚೌಧುರಿ (70) ಎಂದು ಗುರುತಿಸಲಾಗಿದೆ.
ಆಗಿದ್ದೇನು..?:
ಶಂಕರ್ ಚೌಧರಿ ತನ್ನ ಬೈಸಿಕಲ್‌ನಲ್ಲಿ ಹೆದ್ದಾರಿಯನ್ನು ದಾಟುತ್ತಿದ್ದ ವೇಳೆ ಗೋಪಾಲ್‌ಗಂಜ್ ನಗರದಿಂದ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಈ ವೇಳೆ ಶಂಕರ್ ಕಾರಿನ ಬಾನೆಟ್ ಮೇಲೆ ಬಿದ್ದು, ವೈಪರ್ ಅನ್ನು ಆಸರೆಯಾಗಿ ಹಿಡಿದುಕೊಂಡಿದ್ದಾರೆ. ಕಾರು ನಿಲ್ಲಿಸುವಂತೆ ಕಿರುಚಿಕೊಂಡರೂ, ಕಾರು 8 ಕಿ.ಮೀ. ಸಾಗಿದೆ. ಆಗ ಮುಂದೆ ರಸ್ತೆಯಲ್ಲಿ ಹೆಚ್ಚಿನ ಜನರು ಇದ್ದ ಕಾರಣ, ಹೆದರಿದ ಚಾಲಕ ಬ್ರೇಕ್ ಹಾಕಿದ್ದಾನೆ. ಬ್ರೇಕ್ ಹಾಕಿದ ರಭಸಕ್ಕೆ ಬಾನೆಟ್‌ನಿಂದ ರಸ್ತೆಗೆ ಶಂಕರ್ ಬಿದ್ದಿದ್ದಾರೆ. ಅವರ ಮೇಲೆಯೇ ಕಾರು ಹರಿದಿದ್ದು, ಶಂಕರ್ ಸಾವನ್ನಪ್ಪಿದ್ದಾರೆ. ಈ ವೇಳೆ ಕಾರು ಸಮೇತ ಚಾಲಕ ಪರಾರಿಯಾಗಿದ್ದಾನೆ.
ಇದನ್ನು ಓದಿ: Bengaluru: ಕಾರ್ ಬಾನೆಟ್ ಮೇಲೆ ವ್ಯಕ್ತಿ ಇದ್ರೂ ಕಾರು ಓಡಿಸಿದ ಲೇಡಿ ಜೈಲಿಗೆ
ಈಗ ಕಾರನ್ನು ಪೋಲಿಸರು ವಶಪಡಿಸಿಕೊಂಡಿದ್ದು, ಆರೋಪಿ ಚಾಲಕನಿಗೆ ವ್ಯಾಪಕ ಶೋಧಕಾರ್ಯ ನಡೆಸುತ್ತಿದ್ದಾರೆ.
ಇತ್ತೀಚೆಗೆ ಇದೇ ರೀತಿ ಬಾನೆಟ್ ಮೇಲಿದ್ದ ವ್ಯಕ್ತಿಯೊಬ್ಬನನ್ನು ಬೆಂಗಳೂರಿನಲ್ಲಿ ಕಾರೊಂದು 2 ಕಿ.ಮೀ. ಎಳೆದುಕೊಂಡು ಹೋಗಿತ್ತು. ದಿಲ್ಲಿಯಲ್ಲಿ ಮಹಿಳೆಯೊಬ್ಬಳನ್ನು ಕಾರು 12 ಕಿ.ಮೀ.ನಷ್ಟು ಎಳೆದೊಯ್ದಿತ್ತು.
ಇದನ್ನೂ ಓದಿ: ಬಾನೆಟ್ ಮೇಲೆ ವ್ಯಕ್ತಿಯಿದ್ರೂ ಮೂರು ಕಿ.ಮೀ. ಕಾರು ಚಾಲನೆ: ಬೆಂಗಳೂರಲ್ಲಿ ಮತ್ತೊಂದು ಭಯಾನಕ ಘಟನೆ...!
ಇದನ್ನೂ ಓದಿ: ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆಯನ್ನೇ ಎಳೆದೊಯ್ದ ಕಾರು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ